ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೆಕ್ಸ್ ಹಾವಳಿಗೆ ನಲುಗಿದ ನಗರ

Last Updated 28 ಮೇ 2012, 7:50 IST
ಅಕ್ಷರ ಗಾತ್ರ

ಮಂಡ್ಯ: ನಗರದ ಎಲ್ಲೆಡೆ ಈಗ `ಫ್ಲೆಕ್ಸ್~ಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಒಂದೆಡೆ ನಗರದ ಸೌಂದರ್ಯ ಹಾಳಾಗುತ್ತಿದ್ದರೆ, ಇನ್ನೊಂದೆಡೆ ನಗರಸಭೆಗೆ ಬರಬೇಕಿದ್ದ ಆದಾಯಕ್ಕೂ ಕತ್ತರಿ ಬೀಳುತ್ತಿದೆ.

ನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ `ಫ್ಲೆಕ್ಸ್~ಗಳು ರಾರಾಜಿಸುತ್ತಿವೆ. ನೂರಾರು ಸಂಖ್ಯೆಗಳಲ್ಲಿ ಅವುಗಳನ್ನು ಕಟ್ಟಲಾಗಿದೆ.

ರಾಜಕೀಯ ನಾಯಕರ ಹುಟ್ಟುಹಬ್ಬ, ರಾಜಕೀಯ ಸಮಾವೇಶ, ಪದಾಧಿಕಾರಿ ನೇಮಕವಾದರೆ ಸಾಕು ನಗರದ ಹತ್ತಾರು ಕಡೆಗಳಲ್ಲಿ ಆಳೆತ್ತರದ `ಫ್ಲೆಕ್ಸ್~ಗಳು ರಾರಾಜಿಸತೊಡಗುತ್ತವೆ. ಇತ್ತೀಚಿನ ದಿನಗಳಲ್ಲಿ ಇದು ಸಭೆ, ಸಮಾರಂಭಗಳಿಗೂ ವಿಸ್ತರಿಸಿಕೊಂಡಿದೆ.

ರಾಜಕೀಯ ನಾಯಕರ ಹಿಂಬಾಲಕರಲ್ಲಿ ಫ್ಲೆಕ್ಸ್ ಕಟ್ಟಲು ಪೈಪೋಟಿಯೇ ಏರ್ಪಟ್ಟಿದೆ. ಒಬ್ಬರು ಒಂದು ಕಟ್ಟಿದರೆ, ಇನ್ನೊಬ್ಬರು ಅವರಿಗಿಂತ ಹೆಚ್ಚು ಕಟ್ಟುತ್ತಾರೆ. ನಾಯಕರು ಮೆಚ್ಚಿಸುವ ಮಾರ್ಗಗಳಲ್ಲಿ ಇದನ್ನು ಒಂದು ಎಂದುಕೊಂಡಿರುವ ಪರಿಣಾಮ ಫ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದೆ.

ಫ್ಲೆಕ್ಸ್ ಕ್ಷೇತ್ರದಲ್ಲಿ ಆದ ತಂತ್ರಜ್ಞಾನ ಬೆಳವಣಿಗೆಯಿಂದ ಕಡಿಮೆ ಬೆಲೆಗೆ ದೊರೆಯುತ್ತಿವೆ. ಹೀಗಾಗಿ ಬಹುತೇಕರು ಅವುಗಳ ಮೊರೆ ಹೋಗುತ್ತಿದ್ದಾರೆ.

ರಾಜಕೀಯ ಪಕ್ಷಗಳಿಗೆ ಸೀಮಿತವಾಗಿದ್ದ ಫ್ಲೆಕ್ಸ್ ಕಟ್ಟುವ ರೋಗ ಇತ್ತೀಚಿನ ದಿನಗಳಲ್ಲಿ ಸಂಘ-ಸಂಸ್ಥೆಗಳಿಗೂ ಹರಡಿಕೊಂಡಿದೆ. ಶಿಕ್ಷಣ ಸಂಸ್ಥೆಗಳೂ ಪೈಪೋಟಿ ನಡೆಸುತ್ತಿರುವುದು ದುರ್ದೈವದ ಸಂಗತಿ.

ವಿದ್ಯುತ್ ಕಂಬಗಳೇ ಆಧಾರ:
ಬಹುತೇಕ ಕಡೆಗಳಲ್ಲಿ ಫ್ಲೆಕ್ಸ್‌ಗಳನ್ನು ವಿದ್ಯುತ್ ಕಂಬಗಳಿಗೆ ಕಟ್ಟಲಾಗುತ್ತಿದೆ. ವಿದ್ಯುತ್ ಕಂಬಗಳಿಗೆ ಯಾವುದೇ ವಸ್ತುಗಳನ್ನು ಕಟ್ಟುವಂತಿಲ್ಲ. ಆದರೂ ಇಲ್ಲಿ ಅವುಗಳೇ ಆಧಾರ. ಸೆಸ್ಕ್ ಅಧಿಕಾರಿಗಳು ಇದನ್ನು ನೋಡಿಯೂ ನೋಡದಂತೆ ಇದ್ದಾರೆ.

ಫುಟ್‌ಪಾತ್‌ಗಳಿಗೆ ಅಡ್ಡಿ: ಪ್ರಮುಖ ರಸ್ತೆಗಳಲ್ಲಿ ಕಟ್ಟುವ ಫ್ಲೆಕ್ಸ್‌ಗಳು ಪಾದಚಾರಿಗಳಿಗೆ ಅಡ್ಡಿಯಾಗುವಂತೆ ಫುಟ್‌ಪಾತ್‌ನಲ್ಲಿ ಕಟ್ಟಲಾಗುತ್ತದೆ. ರಸ್ತೆ ಬದಿ ಇರವ ವಿದ್ಯುತ್ ಕಂಬ ಹಾಗೂ ಗೋಡೆಗೆ ಮಧ್ಯೆ ಕಟ್ಟುವುದರಿಂದ ತಿರುಗಾಡಲು ತೊಂದರೆಯಾಗುತ್ತದೆ. ಹೀಗಾಗಿ ಪಾದಚಾರಿಗಳು ರಸ್ತೆಯ ಮೇಲೆ ತಿರುಗಾಡುವುದೇ ಅನಿವಾರ್ಯವಾಗಿದೆ.

ನಗರದ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಕಟ್ಟಬೇಕಾದರೆ ನಗರಸಭೆಯ ಅನುಮತಿಯನ್ನು ಪಡೆಯಬೇಕಾಗುತ್ತದೆ. ಇಲ್ಲಿ ಅನುಮತಿಯನ್ನೂ ಪಡೆಯಲಾಗುತ್ತದೆ. ಆದರೆ ಕಾಟಾಚಾರಕ್ಕೆ ಅನುಮತಿ ಕೋರಲಾಗುತ್ತದೆ.

ನಗರದಲ್ಲಿ ಒಂದು ಸಂಘಟನೆ ವತಿಯಿಂದ ಮೂರು ಫ್ಲೆಕ್ಸ್‌ಗಳನ್ನು ಕಟ್ಟಲು ಅನುಮತಿ ಪಡೆಯಲಾಗುತ್ತದೆ. ಆದರೆ ವಾಸ್ತವವಾಗಿ ಹತ್ತಕ್ಕೂ ಹೆಚ್ಚು ಫ್ಲೆಕ್ಸ್‌ಗಳನ್ನು ಕಟ್ಟಲಾಗುತ್ತದೆ.

ಇನ್ನು ಕೆಲವರು ಅನುಮತಿ ಪಡೆಯುವ ಗೋಜಿಗೆ ಹೋಗುವುದೇ ಇಲ್ಲ. ಹೀಗಾಗಿ ನಗರದಲ್ಲಿ ನೋಡಿದೆಲ್ಲೆಡೆ ಅವು ಕಾಣ ಸಿಗುತ್ತವೆ.

`ಬಹುತೇಕರು ಅನುಮತಿ ಪಡೆದ ದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಟ್ಟುತ್ತಾರೆ. ಆಗಾಗ ನಮ್ಮ ಸಿಬ್ಬಂದಿ ಅಂತಹವುಗಳನ್ನು ತೆಗೆದು ಹಾಕುತ್ತಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್ಟುನಿಟ್ಟುಗೊಳಿಸಲಾಗುವುದು~ ಎನ್ನುತ್ತಾರೆ ಪಾಲಿಕೆ ಆಯುಕ್ತ ಎಸ್. ಪ್ರಕಾಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT