ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೆಕ್ಸ್‌ಗೆ ಇನ್ನೂ ಅಂಗಡಿಕಾರರ ಅನುಮತಿ ಕಡ್ಡಾಯ

ನಗರಸಭೆಗೆ ಚಾಟಿ ಬೀಸಿದ ಪ್ರಾದೇಶಿಕ ಆಯುಕ್ತ
Last Updated 4 ಡಿಸೆಂಬರ್ 2013, 8:58 IST
ಅಕ್ಷರ ಗಾತ್ರ

ಗಂಗಾವತಿ: ನಗರದಲ್ಲಿ ಮಿತಿ ಮೀರಿದ್ದ ಪ್ಲೇಕ್ಸ್‌ಗಳ ಹಾವಳಿಯಿಂದ ಕಂಗೆಟ್ಟಿದ್ದ ಕೆಲ ವರ್ತಕರು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದರ ಪರಿಣಾಮ, ಆರ್‌ಸಿ ಆಮ್ಲನ್‌ ಆದಿತ್ಯ ಬಿಸ್ವಾಸ್‌ ನಗಸಭೆಯ ಪೌರಾಯುಕ್ತರಿಗೆ ಚಾಟಿ ಬೀಸಿ, ಫ್ಲೆಕ್ಸ್‌ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶ ರವಾನಿಸಿದ್ದಾರೆ. 

ಫ್ಲೆಕ್ಸ್‌ ಹಾವಳಿಯಿಂದ ರೋಸಿ ಹೋಗಿದ್ದ ಗಣೇಶ ವೃತ್ತ, ಗಣೇಶ ವೃತ್ತ ಹಾಗೂ ದುರ್ಗಮ್ಮ ದೇವಸ್ಥಾನ ಬಳಿಯ ಕೆಲ ವರ್ತಕರು ಡಾ. ಶ್ರೀಧರ ಆಚಾರ್ಯ ಎಂಬುವವರ ನೇತೃತ್ವದಲ್ಲಿ ಪ್ರಾದೇಶಿಕ ಆಯುಕ್ತರಿಗೆ ಈ ಕುರಿತು ನ.23ರಂದು ದೂರು ಸಲ್ಲಿಸಿದ್ದರು.

ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಪ್ರಾದೇಶಿಕ ಆಯುಕ್ತ ಬಿಸ್ವಾಸ್‌, ಫ್ಲೆಕ್ಸ್‌ ನಿಯಂತ್ರಣದ ಬಗ್ಗೆ ಕಠೀಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್‌ರ ಮೂಲಕ ನಗರಸಭೆಯ ಪೌರಾಯುಕ್ತ ಎನ್‌.ಎಚ್‌. ಕುಮ್ಮಣ್ಣನವರ್‌ಗೆ ನ.27ರಂದು ಪತ್ರದ ಮೂಲಕ ಆದೇಶ ನೀಡಿದ್ದಾರೆ.

ಅನುಮತಿ ಕಡ್ಡಾಯ: ಸಾರ್ವಜನಿಕ ಸ್ಥಳ, ಸರ್ಕಾರಿ ಕಚೇರಿ, ವ್ಯಾಪಾರ ವಹಿವಾಟಿನ ಸ್ಥಳಗಳಲ್ಲಿ ಇನ್ನು ಮುಂದೆ ಫ್ಲೆಕ್ಸ್ ಹಾಕುವಂತಿಲ್ಲ. ಫ್ಲೆಕ್ಸ್‌ ಹಾಕಬೇಕಿದ್ದರೆ ಆಯಾ ಅಂಗಡಿಕಾರರ, ಮಾಲಿಕರ ಅನುಮತಿ ಪತ್ರ ಕಡ್ಡಾಯ. ’ವ್ಯಾಪಾರಿಗಳ ಅನುಮತಿ ಪಡೆದ ಬಳಿಕವಷ್ಟೆ ನಗರಸಭೆ ಅನುಮತಿ ನೀಡಬೇಕು’ ಎಂದು ಬಿಸ್ವಾಸ್‌ ಸೂಚಿಸಿದ್ದಾರೆ.

’ಪರಿಸರಕ್ಕೆ ಹಾನಿ ತಂದೊಡ್ಡಬಲ್ಲ ಪ್ಲಾಸ್ಟಿಕ್‌ ಬಳಕೆ ನಿಯಂತ್ರಣಕ್ಕೆ ಪ್ರಥಮ ಆದ್ಯತೆ’ ನೀಡಿ ಫ್ಲೆಕ್ಸ್‌ ಮತ್ತು ಬ್ಯಾನರ್‌ಗಳಿಂದ ಸಾರ್ವಜನಿಕರು ಮತ್ತು ವರ್ತಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾದಲ್ಲಿ ತಕ್ಷಣ ಫ್ಲೆಕ್ಸ್‌ ತೆರವಿಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.

ನೋಟಿಸ್‌ ಜಾರಿ: ಪ್ರಾದೇಶಿಕ ಆಯುಕ್ತರ ಆದೇಶವನ್ನು ಗಂಭೀರವಾಗಿ ಪರಿಗಣಿಸಿ ನಗರಸಭೆ ನ.30ರಂದು ನಗರದ ಫ್ಲೆಕ್ಸ್‌ ಮತ್ತು ಬ್ಯಾನರ್ ಮುದ್ರಣ ಮಾಡುವ ಪ್ರಿಂಟಿಂಗ್‌ ಪ್ರೆಸ್‌ ಮತ್ತು ಫ್ಲೆಕ್ಸ್‌ ಕಟ್ಟುವ ಮ್ಯಾದರರಿಗೆ ನೋಟೀಸ್‌ ನೀಡಿ, ’ಸೂಚಿತ ಅಂಶ ಪಾಲಿಸದಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

’ಫ್ಲೆಕ್ಸ್ ಹಾವಳಿಯಿಂದಾಗಿ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ನಗರಸಭೆ, ಜಿಲ್ಲಾಧಿಕಾರಿ, ನಗರಸಭೆಗೆ 20ಕ್ಕೂ ಹೆಚ್ಚು ದೂರು ನೀಡಲಾಗಿತ್ತು. ಪರಿಣಾಮ ಬೀರಿರಲಿಲ್ಲ. ಈಗ ಪ್ರಾದೇಶಿಕ ಆಯುಕ್ತರ ಆದೇಶ ಭರವಸೆ ಮೂಡಿಸಿದೆ’ ಎಂದು ದೂರುದಾರ ಡಾ. ಶ್ರೀಧರ ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT