ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ ಬಳಿ ಆದಿ ಮಾನವರ ಚಿತ್ರ ಚಿತ್ತಾರ

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ಕ್ರಿಸ್ತಶಕೆ ಆರಂಭಕ್ಕಿಂತ ಒಂದೆರಡು ಸಾವಿರ ವರ್ಷಗಳ ಹಿಂದಿನ ಅವಧಿಯೇ `ನವ ಶಿಲಾಯುಗ~ (neo-lithc).ಆ ಕಾಲದ ಚಿತ್ರ ಚಿತ್ತಾರಗಳನ್ನು ನಮ್ಮ ರಾಜ್ಯದ ನೂರಕ್ಕೂ ಹೆಚ್ಚು ಕಡೆ ಕಾಣಬಹುದು.

ಇವು ಆದಿಮಾನವರ (ಆದಿಮ) ಅಭಿವ್ಯಕ್ತಿಯ ಚಿತ್ರಗಳು. ರಾಯಚೂರು, ಬಳ್ಳಾರಿ, ವಿಜಾಪುರ, ಯಾದಗಿರಿ, ಚಿತ್ರದುರ್ಗ ಜಿಲ್ಲೆಗಳ ವಿವಿಧ ಕಡೆಗಳಲ್ಲಿವೆ. ಗುಹೆಗಳ ಒಳಗೆ ಅಲ್ಲದೆ ತೆರೆದ ಬಯಲಿನಲ್ಲೂ ಈ ಚಿತ್ರಕಲೆಗಳಿವೆ. ಇವನ್ನು ನೋಡಲು ಕೆಲ ಕಡೆ ಹಲವಾರು ಮೈಲಿ ಗುಡ್ಡಗಳನ್ನು ಹತ್ತಿ ಇಳಿಯಬೇಕು.

ಇನ್ನೊಂದಿಷ್ಟು ಕಡೆ ಸುಲಭವಾಗಿ ತಲುಪಬಹುದು. ಅಪರೂಪಕ್ಕೆ ಕೆಲವು ಚಿತ್ರಗಳಿರುವ ಸ್ಥಳದ ಸುತ್ತ ಜೇನುಗೂಡುಗಳಿವೆ.ಗ್ರಾನೈಟ್ ಕಲ್ಲುಗಣಿಗಾರಿಕೆಯ ನಡುವೆಯೂ ಹಲವೆಡೆ ಹೊಸ ಶಿಲಾಶ್ರಯ ಚಿತ್ರಗಳು ಬೆಳಕಿಗೆ ಬರುತ್ತಿವೆ. ಆಧುನಿಕೋತ್ತರ ಕಾಲದ ದೃಶ್ಯಕಲೆಗಳ ಬೆಳವಣಿಗೆಯ ಜತೆಜತೆಗೇ ಇತಿಹಾಸ ಪೂರ್ವ ಕಾಲದ ಚಿತ್ರಗಳು ನಮ್ಮಲ್ಲಿ ಇರುವುದು ನಿಜವಾಗಿಯೂ ಹೆಮ್ಮೆಪಡುವ ಸಂಗತಿ.

ಕೋಲಾರ ಜಿಲ್ಲೆಯ ಟೇಕಲ್ ಬೆಟ್ಟ ಸಾಲುಗಳಲ್ಲಿ ಬಿಳಿಯ ಬಣ್ಣದ ರೇಖಾ ಚಿತ್ರಗಳನ್ನು ಬಿಟ್ಟರೆ ಕೆಂಗಾವಿ (ಕೆಂಪು- ಕಾವಿ) ಬಣ್ಣದ ಚಿತ್ರಗಳೇ ಇಲ್ಲ ಎಂದು ನಂಬಲಾಗಿತ್ತು. ಆದರೆ ಅದೇ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಘಟ್ಟಮಾದಮಂಗಲದಲ್ಲಿ ನವ ಶಿಲಾಯುಗದ (ಅಂದರೆ ಕ್ರಿಸ್ತಪೂರ್ವ ಸುಮಾರು 2300-1800 ವರ್ಷಗಳ ನಡುವೆ) ಆದಿಮ ಚಿತ್ರಕಲೆ 2009ರ ಅಂತ್ಯದಲ್ಲಿಯೇ ನನ್ನ ಹುಡುಕಾಟದ ಸಂದರ್ಭದಲ್ಲಿ ಕಣ್ಣಿಗೆ ಬಿದ್ದಿತ್ತು.

ಅಚ್ಚರಿಯಿಂದ ಅಲ್ಲಿ ಅನೇಕ ತಿಂಗಳು ಅಧ್ಯಯನ ನಡೆಸಿದಾಗ ಹೊಸ ಹೊಸ ವಿಷಯ ಬೆಳಕಿಗೆ ಬಂದವು. ನಾನು ಕಂಡುಕೊಂಡ ಪ್ರಕಾರ, ಇಡೀ ಬೆಟ್ಟವೇ ಹೊಸ ಶಿಲಾಯುಗದ ಸಂದರ್ಭದಲ್ಲಿ ಚಟುವಟಿಕೆಯ ಕೇಂದ್ರವಾಗಿರಬಹುದು.

ಹತ್ತಿರದ ಟೇಕಲ್‌ನ ಸಾಂಕೇತಿಕ ರೇಖಾಚಿತ್ರಗಳಿಗೆ ಪೂರಕವಾದರೂ ಘಟ್ಟಮಾದಮಂಗಲದ್ದು ವಿಭಿನ್ನ ರೀತಿಯ ಸಾಂಕೇತಿಕ ರೇಖಾ ರೂಪಗಳು. ಕೆಂಗಾವಿ ಬಣ್ಣದ ಈ ವಿಶಿಷ್ಟ ಚಿತ್ರಗಳು ಅಲಂಕಾರಿಕವಾಗಿಯೂ ಇವೆ.

ಈ ಚಿತ್ರ ನೆಲೆಯ ಬಳಿ ಹಲವಾರು ಭಾರೀ ಜೇನುಗೂಡುಗಳಿವೆ. ಇಂಥ ಕಡೆಯೂ ಆದಿಮ ಚಿತ್ರ ನೆಲೆಗಳು ಇರಬಲ್ಲವು ಎಂದು ಎಲ್ಲೋ ಓದಿದ್ದ ನೆನಪು. ಈ ಅಂಶವನ್ನು ಸಮರ್ಥಿಸುವ ಅಪರೂಪದ ಚಿತ್ರ ನೆಲೆ ಇದು.

ಯಾದಗಿರಿ ಜಿಲ್ಲೆಯ ಎತ್ತರದ ಗುಡ್ಡದಲ್ಲಿ ಸಹ ಚಿತ್ರಗಳಿರುವ ಬೃಹತ್ ಬಂಡೆಗಳನ್ನು ರಕ್ಷಿಸುವಂತೆ ಇಲ್ಲೂ ಮೇಲ್ಭಾಗದಲ್ಲಿ ಜೇನುಗಳು ಗೂಡುಕಟ್ಟಿವೆ. ಇದು ಗಾಬರಿಗೊಳ್ಳುವ ವಿಷಯವಾದರೂ ನೋಡಲು ಹೋಗುವವರು ಸೂಕ್ತ ಮುನ್ನೆಚ್ಚರಿಕೆ ವಹಿಸಿದರೆ ಅಪಾಯವೇನೂ ಆಗದು. ಆದರೆ ಲ್ಲಿಗೆ ಹೋಗುವ ದಾರಿ ಕಡಿದು ಮತ್ತು ಕಿರಿದು. ಹೀಗಾಗಿ ಏನಾದರೂ ಜೇನ್ನೋಣಗಳೆದ್ದರೆ ಬೇಗ ಓಡುವುದು ಕಷ್ಟ.

ಘಟ್ಟಮಾದಮಂಗಲದ ಶಿಲಾ ಆಶ್ರಯ ಹೊಸ ಶಿಲಾಯುಗದ ಹಲವು ವಿಶೇಷಗಳಿಂದಾಗಿ ಅಧ್ಯಯನ ಯೋಗ್ಯವಾಗಿದೆ. ಶಿಲಾಶ್ರಯವನ್ನು ಸೂಕ್ತ ರೀತಿಯಲ್ಲಿ ಹೊಂದಿಸಿಕೊಂಡಿರುವ ತೆರೆದ ಬೆಟ್ಟ, ಗ್ರಾನೈಟ್ ಬಂಡೆ, ಅದರ ಮೇಲ್ಮೈಯಲ್ಲಿ ಕೆಂಪು ಕೆಂಗಾವಿ ಬಣ್ಣದ ರೇಖಾಚಿತ್ರಗಳು ಮತ್ತು ಅವುಗಳ ಸಾಂಕೇತಿಕತೆ, ಬೆಟ್ಟದ ಬುಡದಲ್ಲಿ ನೀರಿನ ಆಶ್ರಯ, ಈ ಸ್ಥಳವನ್ನು ಆ ಕಾಲದ ಮಾನವರು ಯಾವ ಉದ್ದೇಶಕ್ಕಾಗಿ ಬಳಸುತ್ತಿದ್ದರು ಎಂಬುದು ಕುತೂಹಲ ಕೆರಳಿಸುವ ವಿಷಯ.

ಏಕೆಂದರೆ ಅಲ್ಲೆಲ್ಲಾ ಹರಡಿದಂತೆ ಕಲ್ಲುಗಳು ಬಿದ್ದಿವೆ. ಶಿಲಾಶ್ರಯಕ್ಕೆ ಹತ್ತಿರವಾಗಿಯೇ ನಿಲುವು ಗಲ್ಲುಗಳಂತೆ ಕಾಣುವ 8-10 ಅಡಿಯ ಎರಡು ಕಲ್ಲುಗಳಿವೆ. ಒಂದೆಡೆ ಪ್ರವೇಶ ದ್ವಾರದಂತೆ ಭಾಸವಾಗುವ ಎರಡು ಕಡಿದಾದ ಬಂಡೆಗಳ ನಡುವೆ ನಡೆದಾಡಲು ಅನುವಾಗುವಂತೆ ಕಲ್ಲುಗಳನ್ನು ಒರಟಾಗಿಯೇ ಹೊಂದಿಸಲಾಗಿದೆ.
 
ಶಿಲಾಶ್ರಯದ ಬಳಿಯ ಬೆಟ್ಟದ ಸಹಜ ಇಳಿಜಾರು ಬಂಡೆಯ ಮೇಲೆ ಸೂಕ್ಷ್ಮವಾಗಿ ನೋಡಿದರೆ ಸಣ್ಣ ಸಣ್ಣ ಕುಳಿಗಳು ಕಾಣುತ್ತವೆ. ಬಹುಶಃ ಶಬ್ದದ ಮೂಲಕ ಸಾಂಕೇತಿಕವಾಗಿ ಸೂಚನೆ ನೀಡಲು ಇವನ್ನು ಬಳಸುತ್ತಿರಬಹುದು. ಈ ಎಲ್ಲ ಅಂಶಗಳ ಬಗ್ಗೆ ಪುರಾತತ್ವ ಸಂಶೋಧಕರು ಅಧ್ಯಯನ ನಡೆಸಬಹುದು.

ಇಲ್ಲಿಂದ ಕೇವಲ 1 ಕಿಮಿ ಒಳಗೆ ಕಂಗುಂದಿ ಬಳಿ ಶಿಲೆಗಳ ಮೇಲೆ ಚಿತ್ರಗಳಿವೆ. ಕೋಲಾರ - ಬೇತಮಂಗಲ ರಸ್ತೆಯ ಹನುಕುಂದ ಪಟ್ಟಣದ ಬಳಿ ಹಲವಾರು ಇತಿಹಾಸ ಪೂರ್ವ ಶಿಲಾ ಆಶ್ರಯಗಳಿವೆ. ಘಟ್ಟಮಾದಮಂಗಲದ ಬಳಿಯ ಪಾರಂಡಪಲ್ಲಿ ಕೂಡ ನವಶಿಲಾಯುಗದ ನೆಲೆಯೇ ಆಗಿದೆ. ಕೋಲಾರ ಬೆಟ್ಟಗಳ ತೇರು ಹಳ್ಳಿಯಲ್ಲಿ ಹಲವು ಆಕರ್ಷಕ ಶಿಲಾಶ್ರಯಗಳಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT