ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜಾರ ಸಮುದಾಯ ಮುಖ್ಯವಾಹಿನಿಗೆ ಬರಲಿ

Last Updated 15 ಫೆಬ್ರುವರಿ 2012, 5:40 IST
ಅಕ್ಷರ ಗಾತ್ರ

ನ್ಯಾಮತಿ: ರಾಜ್ಯದಲ್ಲಿರುವ ಬಂಜಾರ ಸಮುದಾಯ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಬೆಳೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಸಲಹೆ ನೀಡಿದರು.
ಸಮೀಪದ ಸೂರ ಗೊಂಡನಕೊಪ್ಪದಲ್ಲಿ ಮಂಗಳವಾರ  ಸತ್ಯ ಸೇವಾಭಾಯರ 273ನೇ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಂಜಾರ ಸಮುದಾಯದವರು ಶ್ರಮಜೀವಿಗಳಾಗಿದ್ದು, ಕಾಡಿನ ಜೊತೆಯಲ್ಲಿ ಸಂಪರ್ಕ ಹೊಂದಿದವರು, ಇಂತಹ ಜನಾಂಗವನ್ನು ಗುರುತಿಸಿ ಬೆಳೆಯಲು ಅವಕಾಶ ಮಾಡಿಕೊಟ್ಟವರು  ಮಾಜಿ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಅವರು. ಬಡತನ ಮತ್ತು ಆಸೆ ಅಮಿಷಗಳಿಗೆ ಬಲಿಯಾಗಿ ಬಂಜಾರ ಸಮುದಾಯದವರು ನಮ್ಮ ತಾಲ್ಲೂಕಿನಲ್ಲಿ ಮತಾಂತರವಾಗುತ್ತಿದ್ದರೂ, ತಾವು ಶಾಸಕರಾದ ನಂತರ ಮತಾಂತರ ಪಿಡುಗು ಇಲ್ಲದಂತೆ ಮಾಡಿರುವುದಾಗಿ ತಿಳಿಸಿದರು.

ಸಮುದಾಯದವರ ಮನವಿಯಂತೆ ಫೆ. 15ರಂದು ಸೇವಾಲಾಲ್ ಜಯಂತಿಗೆ ಸರ್ಕಾರಿ ರಜೆ ಘೋಷಿಸುವ ಬಗ್ಗೆ, ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಬಗ್ಗೆ ಹಾಗೂ ಕಳ್ಳಬಟ್ಟಿ ತಯಾರಿಕೆ ಬಗ್ಗೆ ಸುಳ್ಳು ಕೇಸು ಹಾಕಿರುವುದನ್ನು ಮುಖ್ಯಮಂತ್ರಿ ಅವರ ಜತೆ ಚರ್ಚಿಸುವ ಭರವಸೆ ನೀಡಿದರು. ಮುಂದಿನ ವರ್ಷವು ಸಹಾ ತಾವೇ ಅನ್ನಸಂತರ್ಪಣೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಬಸವರಾಜನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಸರ್ದಾರ ಸೇವಾಲಾಲ್ ಸ್ವಾಮೀಜಿ, ಬಾಲಕೃಷ್ಣ ಮಹಾರಾಜ್, ಜಗನು ಮಹಾರಾಜ್, ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಎಸ್.ವಿ. ರಾಮಚಂದ್ರ, ಟಿ. ರಾಮಾನಾಯ್ಕ, ಎಚ್. ಚೂಡನಾಯ್ಕ, ಶಿವರಾಮನಾಯ್ಕ, ಕೆ.ಬಿ. ಅಶೋಕಕುಮಾರ, ಶಾರದಾ ನಾಯ್ಕ, ಹಣ್ಣಿ ಉಬ್ಲಿಬಾಯಿ, ಮೀನಾಕ್ಷಿಬಾಯಿ, ಬಂಗಾರಿನಾಯ್ಕ, ಮಹಾರಾಷ್ಟ್ರದ ಕಿಶನ್ ರಾಠೋಡ್, ಎನ್. ಜಯದೇವನಾಯ್ಕ, ಪ್ರಬಾವತಿ, ಪ್ರೇಮಾಭಾಯಿ, ಪ್ರೇಮಾ, ಭೋಜಾನಾಯ್ಕ, ರೂಪ್ಲಾನಾಯ್ಕ, ಗೋಪಾಲನಾಯ್ಕ, ಗೋವಿಂದನಾಯ್ಕ, ಯಂಕ್ಯಾನಾಯ್ಕ, ಕುಬೇರನಾಯ್ಕ, ರಮೇಶನಾಯ್ಕ, ಅಣ್ಣಪ್ಪನಾಯ್ಕ, ವಿಜಯಪ್ಪ, ರಾಜುನಾಯ್ಕ, ಛಾಯಾಪತಿ ಮತ್ತಿತರರು ಉಪಸ್ಥಿತರಿದ್ದರು.

ಡಾ.ಸಣ್ಣರಾಮನಾಯ್ಕ ಪ್ರಾಸ್ತಾವಿಕ ಮಾತನಾಡಿದರು.
ರಮೇಶ ಸ್ವಾಗತಿಸಿದರು, ಗಣೇಶ ಕಾರ್ಯಕ್ರಮ ನಿರೂಪಿಸಿದರು.

ಎನ್. ಕೆಂಚಪ್ಪಗೆ `ಸೇವಾಲಾಲ್ ಕಂಠೀರವ~ ಕುಸ್ತಿ ಪ್ರಶಸ್ತಿ
ಸತ್ಯ ಸೇವಾಭಾಯ ಅವರ 273ನೇ ಜಯಂತಿ ಮಹೋತ್ಸವ ಸಲುವಾಗಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಮಂಗಳವಾರ ನಡೆಯಿತು.

ಚಿತ್ರದುರ್ಗದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಪಂದ್ಯಾವಳಿಗೆ ಚಾಲನೆ ನೀಡಿದರು. ಬಂಜಾರ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಬಸವರಾಜನಾಯ್ಕ, ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ, ಶಾಸಕ ಬಿ.ಕೆ. ಸಂಗಮೇಶ ಕುಸ್ತಿಯನ್ನು ವೀಕ್ಷಿಸಿದರು.

ರಾಜ್ಯದ ಪೈಲ್ವಾನರು ಸೇರಿದಂತೆ  ದೆಹಲಿ, ಹರಿಯಾಣ, ಮಹಾರಾಷ್ಟ್ರ, ಪಂಜಾಬ್ ರಾಜ್ಯದ ಪ್ರಮುಖ ಪೈಲ್ವಾನರು ಆಗಮಿಸಿದ್ದರು. ಸುಮಾರು 50 ಕುಸ್ತಿಗಳು ಸ್ಪರ್ಧೆಗಳು ನಡೆದವು ಎಂದು ಸೇವಾಲಾಲ್ ಕುಸ್ತಿ ಅಕಾಡೆಮಿ ಅಧ್ಯಕ್ಷ ಪೈಲ್ವಾನ್ ಸುರೇಶನಾಯ್ಕ ತಿಳಿಸಿದರು.

ಶಿವಮೊಗ್ಗ ಬೊಮ್ಮನಕಟ್ಟೆಯ ಎನ್. ಕೆಂಚಪ್ಪ ಅವರಿಗೆ `ಶ್ರೀ ಸೇವಾಲಾಲ್ ಕಂಠೀರವ~ ಪ್ರಶಸ್ತಿ, ಹಿತ್ಲಾ ಗ್ರಾಮದ ಆನಂದ ಅವರಿಗೆ `ಶ್ರೀ ಸೇವಾಲಾಲ್ ಕೇಸರಿ~ ಪ್ರಶಸ್ತಿ ಹಾಗೂ ಮಾಲೂರು ಮಿಲ್ಟ್ರಿ ಬಾಳು ಅವರಿಗೆ `ಶ್ರೀ ಸೇವಾಲಾಲ್ ಕುಮಾರ~ ಪ್ರಶಸ್ತಿಯನ್ನು ಪಡೆದರು. ತೀರ್ಪುಗಾರರಾಗಿ ರೇಖ್ಯಾನಾಯ್ಕ, ಶಿವಾನಂದ, ಶಿವಮೊಗ್ಗ ರವಿ ಆಗಮಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT