ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜೆತನಕ್ಕೆ ಹೊಸ ಭರವಸೆ ಬಾಡಿಗೆ ತಾಯ್ತನ

Last Updated 4 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ತಾಯ್ತನ ಒಂದು ಅಪರೂಪದ ಅನುಭೂತಿ. ಸಕಲ ಜೀವರಾಶಿಗಳಲ್ಲೂ ಜಾಗೃತವಾಗಿರುವ ಉತ್ಕೃಷ್ಟ ಬಯಕೆಯದು. ಭಾರತದಂತಹ ಸಾಂಪ್ರದಾಯಿಕ ರಾಷ್ಟ್ರಗಳಲ್ಲಿ ತಾಯ್ತನ ಕೇವಲ ಒಂದು ಬಯಕೆಯಾಗಿ ಉಳಿದಿಲ್ಲ. ಸಾಮಾಜಿಕ ಭಾವನಾತ್ಮಕ ಹಾಗೂ ಮಾನಸಿಕ ಸ್ಥಿತ್ಯಂತರದ ಮಾನದಂಡವೂ ಆಗಿದೆ.

ಅಂತೆಯೇ ತಾಯಿಯಾಗುವ ಹಾಗೂ ತಂದೆಯಾಗುವ ಪ್ರಕೃತಿ ಸಹಜ ಬಯಕೆಯನ್ನು ಈಡೇರಿಸುವುದರೊಂದಿಗೆ ದಂಪತಿಗೆ ಸಾಮಾಜಿಕ ಮನ್ನಣೆ, ಭಾವನಾತ್ಮಕ ಉತ್ತೇಜನ ಹಾಗೂ ಮನೋಸ್ಥೈರ್ಯವನ್ನು ನೀಡಲು ವೈದ್ಯಕೀಯ ಕ್ಷೇತ್ರವೂ ಆಸಕ್ತಿ ವಹಿಸುತ್ತ ಬಂದಿದೆ. ಇನ್ನೇನು ತಾಯ್ತನ ತನ್ನ ಪಾಲಿಗೆ ಇಲ್ಲದೇ ಹೋಯಿತು ಎನ್ನುವ ಹಂತ ತಲುಪಿದ ಮಹಿಳೆಯರಿಗೆ ನೆರವಾಗುವ ಪರ್ಯಾಯ ವ್ಯವಸ್ಥೆಯೊಂದರ ಪ್ರಯತ್ನವೇ ‘ಬಾಡಿಗೆ ತಾಯಿ’ ಎಂಬ ಪರಿಕಲ್ಪನೆ.

ಆರೋಗ್ಯ ಸಂಸ್ಥೆಗಳ ಅಧ್ಯಯನಗಳ ಪ್ರಕಾರ ಪ್ರತಿ ಆರು ದಂಪತಿಯಲ್ಲಿ ಒಬ್ಬರಿಗೆ ಗರ್ಭಧಾರಣೆಯ ತೊಂದರೆ ಇರುತ್ತದೆ. ವೀರ್ಯಗಳಲ್ಲಿನ ತೊಂದರೆ, ವೀರ್ಯಗಳ ಅಂಗವಿಕಲ್ಪ, ಮಹಿಳೆಯರಲ್ಲಿ ಗರ್ಭನಾಳ ಮುಚ್ಚಿಕೊಂಡಿರುವುದು, ಗರ್ಭಕ್ಕೆ ಸೋಂಕು ತಗಲಿರುವುದು, ಗರ್ಭದ ಅಂಗವಿಕಲ್ಪ... ಹೀಗೆ ಮುಂತಾದ ಕಾರಣಗಳಿಂದ ಈ ಸಮಸ್ಯೆ ಉಂಟಾಗಬಹದು. ತನ್ನದೇ ಗರ್ಭದಲ್ಲಿ ಶಿಶುವನ್ನು ಪೋಷಿಸಲು ಹೆಣ್ಣು ಅಶಕ್ತಳೆಂದು ಖಚಿತವಾದ ನಂತರ ಬಾಡಿಗೆ ತಾಯಿಯ ಕೃಪೆಯಿಂದ ಅವಳು ತನ್ನದೇ ವಂಶದ ಕುಡಿಯನ್ನು ಪಡೆದುಕೊಳ್ಳುವ ಪ್ರಕ್ರಿಯೆಯೇ ‘ಬಾಡಿಗೆ ತಾಯ್ತನ’

ಏನಿದು ಬಾಡಿಗೆ ತಾಯ್ತನ?
ಇಲ್ಲಿ ಒಬ್ಬ ಆರೋಗ್ಯಕರ ಮಹಿಳೆ ಇನ್ನೊಬ್ಬ ಅಶಕ್ತ ಗರ್ಭದ ಮಹಿಳೆಗಾಗಿ ಅವಳ ಭ್ರೂಣವನ್ನು ತನ್ನ ಗರ್ಭದಲ್ಲಿ ಒಂಬತ್ತು ತಿಂಗಳ ಕಾಲ ಪೋಷಿಸುತ್ತಾಳೆ. ಅಂದರೆ ಒಂಬತ್ತು ತಿಂಗಳ ಅವಧಿಗೆ ತನ್ನ ಗರ್ಭವನ್ನು ದಾನ ಮಾಡುತ್ತಾಳೆ.  ರಕ್ತದಾನ ಯಾರದೊ ಜೀವ ಉಳಿಸುವ ಸಂಜೀವಿನಿಯಾದರೆ, ಗರ್ಭದಾನ ಮಕ್ಕಳ ಭಾಗ್ಯವಿಲ್ಲದ ಮಹಿಳೆಯರಿಗೆ ನವ ಜೀವನ ನೀಡುತ್ತದೆ.

ಈ ವ್ಯವಸ್ಥೆಗೆ ಒಳಪಡುವ ಮುನ್ನ ಎರಡೂ ಕಡೆಯ ದಂಪತಿ ಪರಸ್ಪರ ಚಿಂತಿಸಿ-ಸಮಾಲೋಚನೆ ನಡೆಸಬೇಕಾಗುತ್ತದೆ. ಅದಕ್ಕೆ ಮನೆಯ ಎಲ್ಲ ಸದಸ್ಯರ ಅಂಗೀಕಾರವೂ ಬೇಕು. ಅದರಲ್ಲೂ ಬಾಡಿಗೆ ತಾಯಿಯಾಗಲಿರುವ ಮಹಿಳೆಗೆ ಮನೆಯ ಸದಸ್ಯರ, ಮುಖ್ಯವಾಗಿ ಪತಿಯ ಬೆಂಬಲ ಅಗತ್ಯ. ಇಲ್ಲವಾದರೆ ಪತಿಯ ಹಾಗೂ ಮನೆಯ ಇತರ ಸದಸ್ಯರ ತಿರಸ್ಕಾರದ ಪ್ರತಿಕೂಲ ಪರಿಣಾಮ ಹುಟ್ಟುವ ಮಗುವಿನ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಯ ಮೇಲೆ ಉಂಟಾಗುತ್ತದೆ. ಬಾಡಿಗೆ ಗರ್ಭ ನೀಡಲಿರುವ ಮಹಿಳೆಗೆ ತಾನು ಅದರ ಅಸಲಿ ತಾಯಿಯಲ್ಲ ಎಂಬ ತಿರಸ್ಕಾರವಾಗಲಿ, ಬೇಜವಾಬ್ದಾರಿಯಾಗಲೀ ಇರಕೂಡದು. ಬದಲಿಗೆ ತನ್ನ ಗರ್ಭದಲ್ಲಿರುವ ಆ ಒಂಬತ್ತು ತಿಂಗಳು ತಾನು ಅದರ ನಿಜವಾದ ತಾಯಿ ಎಂಬ ಪ್ರೀತಿ, ಮಮತೆ ಇರಬೇಕು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆಗೂ ಮುನ್ನ ತಜ್ಞ ವೈದ್ಯರು ಎರಡೂ ಕಡೆಯ ದಂಪತಿಗೆ ಕೌನ್ಸೆಲಿಂಗ್ ಮೂಲಕ ಮಾರ್ಗದರ್ಶನ ನೀಡುತ್ತಾರೆ.

ಬಾಡಿಗೆ ಗರ್ಭದ ಧನ್ಯತೆ...
“ಮದುವೆಯಾಗಿ ಸುಮಾರು 10 ವರ್ಷಗಳ ಕಾಲ ಮಕ್ಕಳ ಭಾಗ್ಯಕ್ಕಾಗಿ ಬಡಿದಾಡಿದೆ. ಅನೇಕ ಬಗೆಯ ಚಿಕಿತ್ಸೆಗೆ ಒಳಗಾದೆ. ದೇವರು-ದಿಂಡರು, ಹರಕೆ... ಯಾವುದೂ ಫಲಿಸಲಿಲ್ಲ. ಕೃತಕ ವೀರ್ಯಧಾರಣೆ (ಐಯುಐ) ಚಿಕಿತ್ಸೆಯೂ ವಿಫಲವಾದಾಗ ನಾನು ತಾಯ್ತನದ ಆಸೆಯನ್ನೇ ಕೈಬಿಟ್ಟೆ. ಯಾವುದೇ ಕೌಟುಂಬಿಕ ಕಾರ್ಯಕ್ರಮಗಳಿಗೆ ಹೋದರೂ ಜನ ನನ್ನನ್ನು ‘ಮಕ್ಕಳಾಗದವಳು’ ಎಂದು ಗುರುತಿಸಿದಾಗ ಬಹಳ ನೋವಾಗುತ್ತಿತ್ತು. ಒಂದು ಬಾರಿ ‘ಸುಧಾ’ ವಾರಪತ್ರಿಕೆಯಲ್ಲಿ ಬಾಡಿಗೆ ತಾಯ್ತನದ ಬಗ್ಗೆ ಲೇಖನ ಓದಿದೆ. ಆ ಬಗ್ಗೆ ನನ್ನ ತಾಯಿ ಹಾಗೂ ಚಿಕ್ಕಮ್ಮನೊಂದಿಗೆ ಚರ್ಚಿಸಿದೆ. ನನಗೆ ಬಾಡಿಗೆ ಗರ್ಭ ನೀಡಲು ನನ್ನ ಚಿಕ್ಕಮ್ಮನೇ ಮುಂದೆ ಬಂದುದು ನನ್ನ ಅದೃಷ್ಟ. ಬೆಂಗಳೂರಿನ ಅಸಿಸ್ಟೆಡ್ ಕಾನ್ಸೆಪ್ಷನ್ ಸೆಂಟರ್‌ಗೆ ಭೇಟಿ ನೀಡಿದೆವು. ಅಂತೂ ನಾನು ಜನ್ಮ ಕೊಡದೆಯೂ ನನ್ನದೇ ಕೂಸಿಗೆ ತಾಯಿಯಾಗುತ್ತಿದ್ದೇನೆ’. ತಮ್ಮ ಬದುಕಿನ ವಿಲಕ್ಷಣ ಸ್ಥಿತಿಕ್ಷಣದಲ್ಲಿ ಮಂಜಿನಂತೆ ಕರಗಿ ಹೋದುದನ್ನು ನೆನೆದು ನೋವು ಮಿಶ್ರಿತ ಸಂತಸದಿಂದ ಹೇಳಿಕೊಂಡರು ಹಾಸನದ ಸುಧಾ.

ಬಾಡಿಗೆ ಗರ್ಭ ನೀಡಲು ಮುಂದೆ ಬಂದ ಅವರ ಚಿಕ್ಕಮ್ಮ ಹಾಸನದ ವೇದವತಿಗೆ ನರ್ಸಿಂಗ್ ಹಾಗೂ ಪದವಿಯಲ್ಲಿ ಓದುತ್ತಿರುವ ಇಬ್ಬರು ಗಂಡು ಮಕ್ಕಳಿದ್ದಾರೆ.

ಅವರ ಮಕ್ಕಳ ಹಾಗೂ ಪತಿಯ ಒಪ್ಪಿಗೆ ಹಾಗೂ ಸಹಕಾರವೂ ಇದೆ. ಆದರೂ ಸಮಾಜದ ಬಗ್ಗೆ ಒಂದಿಷ್ಟು ಭಯ. ಹೀಗಾಗಿ ಒಂದು ವರ್ಷ ಅವರು ಹಾಸನದಿಂದ ಬೆಂಗಳೂರಿಗೇ ಬಂದು ನೆಲೆಸಿದ್ದಾರೆ.

“ಮದುವೆಯಾದ 12 ವರ್ಷ ‘ಬಂಜೆ’ ಎನ್ನುವ ಅಸಹನೀಯ ಅಪವಾದ ಹೊರಬೇಕಾಯಿತು. ಒಳ್ಳೆಯ ಗಂಡ, ಉತ್ತಮ ಕೆಲಸ ಎಲ್ಲ ಇದ್ದರೂ ನೆಮ್ಮದಿಯೇ ಇರಲಿಲ್ಲ. ಆದರೆ ಪತ್ರಿಕೆಯೊಂದರಲ್ಲಿ ಬಂದ ವರದಿ ಓದಿ ಬೆಂಗಳೂರಿನ ಆಸ್ಪತ್ರೆಗೆ ಧಾವಿಸಿದೆ. ಬಾಡಿಗೆ ತಾಯಿಯ ಹುಡುಕಾಟ ತುಸು ತಡವಾಯಿತು. ಆದರೆ ಮುದ್ದಾದ ಹೆಣ್ಣು ಮಗುವಿಗೆ ನಾನೀಗ ತಾಯಿ. ಈಗ ಎಲ್ಲರೆದುರು ನಾನೂ ಹೆಮ್ಮೆಯಿಂದ ಓಡಾಡುತ್ತೇನೆ” ಎಂದರು ಕುಮಟಾದ ಮಾಲಿನಿ.  ಇನ್ನು ಮೈಸೂರಿನ ಶುಭಾ ಅವರದು ಬೇರೆಯೇ ಕಥೆ. ಅವರಿಗೆ ಮೂರು ವರ್ಷದ ಒಂದು ಗಂಡು ಮಗು ಇದೆ. ಅದಕ್ಕೆ ಹೃದಯಸಂಬಂಧೀ ಕಾಯಿಲೆ. ಆದರೆ ದುಬಾರಿ ಚಿಕಿತ್ಸೆಗೆ ಹೆದರಿ ದಂಪತಿ ಕಂಗಾಲು. ಅದೇ ಸಮಯಕ್ಕೆ ಅವರ ದೂರದ ಸಂಬಂಧಿಯೊಬ್ಬರು ಬಾಡಿಗೆ ಗರ್ಭದ ಯೋಜನೆ ಹೇಳಿದರು. ತನ್ನ ಗರ್ಭದಿಂದ ಅವರಿಗೂ ಒಂದು ಮಗುವಾಗುತ್ತದೆ. ಇತ್ತ ಅವರು ನೀಡುವ ಹಣದಿಂದ ತನ್ನ ಮಗುವಿನ ಚಿಕಿತ್ಸೆಯೂ ಆಗುತ್ತದೆ ಎಂಬ ಆಲೋಚನೆ ಶುಭಾ ಅವರಿಗೆ ಹಿತವೆನಿಸಿತು.

ಕಾನೂನು ಏನು ಹೇಳುತ್ತದೆ?
ಭಾರತದಲ್ಲಿ ಈ ವ್ಯವಸ್ಥೆಗೆ ಇನ್ನೂ ವ್ಯವಸ್ಥಿತವಾದ ಕಾನೂನು ಇಲ್ಲ. ಆದಾಗ್ಯೂ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ನಿರ್ದೇಶನಗಳಿವೆ. ಮಗುವಿಗೆ ಜೈವಿಕ ತಾಯಿಯ ದೇಶದ ಪೌರತ್ವವೇ ಸಿಗುತ್ತದೆ. ಮಗು ಅದೇ ತಾಯಿಯ ಧರ್ಮಕ್ಕೆ ಒಳಪಡುತ್ತದೆ. ಅಂತೆಯೇ ಆಸ್ತಿಯ ವಿಚಾರದಲ್ಲಿಯೂ ಮಗು ಜೈವಿಕ ತಾಯಿಯ ಆಸ್ತಿಯ ಹಕ್ಕು ಮಾತ್ರ ಪಡೆಯುತ್ತದೆ. ಬಾಡಿಗೆ ತಾಯಿಯ ಆಸ್ತಿಯಲ್ಲಿ ಯಾವ ಕಾರಣಕ್ಕೂ ಪಾಲು ಇರುವುದಿಲ್ಲ.

ಒಂದು ವೇಳೆ ಇಂತಹ ಗರ್ಭದಿಂದ ಅವಳಿ ಮಕ್ಕಳಾದರೆ ಜೈವಿಕ ತಂದೆ-ತಾಯಿ ಎರಡೂ ಮಕ್ಕಳನ್ನು ಪಡೆಯಬೇಕಾಗುತ್ತದೆ. ವೈದ್ಯಕೀಯ ಪರೀಕ್ಷೆಯ ನಂತರವೂ ಕೈಮೀರಿ ಮಗು ಅಂಕವಿಕಲ ಅಥವಾ ಬುದ್ಧಿಮಾಂದ್ಯ ಹುಟ್ಟಿದಾಗಲೂ ಅಂತಹ ಮಗುವನ್ನು ಸ್ವೀಕರಿಸಬೇಕಾದುದು ಜೈವಿಕ ಪಾಲಕರ ಕರ್ತವ್ಯ. ಇತ್ತೀಚೆಗೆ ‘ಬಾಡಿಗೆ ತಾಯ್ತನ’ದ ಪರಿಕಲ್ಪನೆ ಸಾಕಷ್ಟು ಜನಜನಿತವಾಗಿದೆ. 

 ಖಾಸಗಿ  ಟಿವಿ ಚಾನೆಲ್‌ನ ‘ಜೋಗುಳ’ ಧಾರಾವಾಹಿಯಿಂದ ಗ್ರಾಮಾಂತರ ಪ್ರದೇಶಗಳಲ್ಲೂ ಇದು ಪರಿಚಿತವಾಗಿದೆ. ಆದರೂ ಈ ವ್ಯವಸ್ಥೆಯ ಬಗ್ಗೆ ಜನರಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಬಾಡಿಗೆ ತಾಯಿಯಾಗುವುದರಿಂದ ಆರೋಗ್ಯದಲ್ಲಿ ಏನಾದರೂ ತೊಂದರೆ ಉಂಟಾಗಬಹುದು ಅಥವಾ ಸಮಾಜ ತನ್ನನ್ನು ಸಂಶಯದಿಂದ ನೋಡಬಹುದು ಎಂಬ ಗ್ರಹಿಕೆ ತಪ್ಪು. ಅದೇ ರೀತಿ ತಾನು ಬಾಡಿಗೆ ಗರ್ಭದಿಂದ ಮಗುವನ್ನು ಪಡೆದರೆ ಸಮಾಜ ಆ ಮಗುವನ್ನು ತನ್ನದೆಂದು ಒಪ್ಪಿಕೊಳ್ಳುತ್ತದೊ ಇಲ್ಲವೊ ಎಂಬ ಆತಂಕವೂ ಸರಿಯಲ್ಲ.

ಗರ್ಭದಾನ ಹಾಗೂ ಬಾಡಿಗೆ ಗರ್ಭದಿಂದ ಮಗುವನ್ನು ಪಡೆಯುವ ಪ್ರಕ್ರಿಯೆ ಸುರಕ್ಷಿತವೆಂದು ವೈದ್ಯಕೀಯವಾಗಿ ದೃಢಪಟ್ಟಿದೆ. ಸಾಮಾಜಿಕ ಅಂಗೀಕಾರವೂ ಅದಕ್ಕಿದೆ. ಕಾನೂನು ದೃಷ್ಟಿಯಲ್ಲಿಯೂ ಇದು ಸಿಂಧುವಾಗಿದೆ. ಬಾಡಿಗೆ ಗರ್ಭ ನೀಡುವುದರಿಂದ ಮಹಿಳೆಯ ಆರೋಗ್ಯದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮವಿಲ್ಲ. 18 ವರ್ಷ ಮೇಲ್ಪಟ್ಟ ಯಾವುದೇ ಆರೋಗ್ಯವಂತ ಮಹಿಳೆ ಗರ್ಭದಾನ ಮಾಡಬಹುದು.

ಹಾಗೆಂದು ಬಾಡಿಗೆ ತಾಯ್ತನವನ್ನು ಹಣ ಗಳಿಕೆಯ ಮಾರ್ಗವಾಗಿ ನೋಡುವುದು ಅನೈತಿಕವಾದುದು. ಆದರೆ ಪರೋಪಕಾರ ಮನೋಭಾವದಿಂದ ಬಾಡಿಗೆ ತಾಯಿಯಾಗುವುದು   ಅಪರಾಧವಲ್ಲ, ಪಾಪವೂ ಅಲ್ಲ. ಒಬ್ಬ ಅಸಮರ್ಥ ಮಹಿಳೆಗೆ ತಾಯಿಯಾಗುವ ಭಾಗ್ಯ ಕಲ್ಪಿಸಿಕೊಡುವ ಧನ್ಯತೆ ಅದರಲ್ಲಿದೆ.

(ಲೇಖನದಲ್ಲಿ ಪ್ರಸ್ತಾಪಿಸಲಾಗಿರುವ ತಾಯಂದಿರ ಹೆಸರುಗಳನ್ನು ಬದಲಾಯಿಸಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT