ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟರು ಉದ್ಯಮಶೀಲರು: ಸಿಎಂ ಶ್ಲಾಘನೆ

Last Updated 6 ಸೆಪ್ಟೆಂಬರ್ 2011, 6:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ~ನಿಮ್ಮ ಹುಡುಗ ಇಂತಹ ತಪ್ಪು ಮಾಡಿದ್ದಾನೆ ಎಂದು ನಿಮ್ಮನ್ನು ಯಾರೂ ಕೇಳದಂತೆ ಕೆಲಸ ಮಾಡುತ್ತೇನೆ~ ಇದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಮ್ಮ ತವರು ಅವಿಭಜಿತ ದಕ್ಷಿಣ ಕನ್ನಡ ಮೂಲದ ಬಂಟ ಸಮುದಾಯದವರಿಗೆ ನೀಡಿದ ಅಭಯ.

ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ವತಿಯಿಂದ ಸೋಮವಾರ ನಗರದ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಬಂಟ ಸಮುದಾಯದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. 

ಅನಿರೀಕ್ಷಿತ ಮತ್ತು ಅನಿವಾರ್ಯವಾಗಿ ಎಂಬಂತೆ ಸಂದಿಗ್ಧ ಕಾಲದಲ್ಲಿ ರಾಜ್ಯದ ಮುಖ್ಯಮಂತ್ರಿ ಆಗುವ ಅವಕಾಶ ದೊರೆತಿದೆ. ಇದನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಇನ್ನು ರಾಜ್ಯದ ಸಮಗ್ರ ಏಳಿಗೆಗೆ ಶ್ರಮಿಸುವೆ ಅದಕ್ಕೆ ತಮ್ಮೆಲ್ಲರ ಬೆಂಬಲ ಬಯಸುವುದಾಗಿ ಹೇಳಿದರು.

ಕರಾವಳಿಯಲ್ಲಿ ಅಳಿಯ ಸಂತಾನ ಹಾಗೂ ಮಕ್ಕಳ ಕಟ್ಟು ಹೊರತುಪಡಿಸಿ ಗೌಡರು ಹಾಗೂ ಬಂಟ ಸಮುದಾಯದವರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಆಚಾರ-ವಿಚಾರ, ಸಂಪ್ರದಾಯಗಳಲ್ಲಿ ಇಬ್ಬರ ನಡುವೆ ಸಾಮ್ಯವಿದ್ದು, ಬಂಟರ ಒಕ್ಕಲಾಗಿ ಅವರ ಆಶ್ರಯದಲ್ಲೇ ಗೌಡರು ಬೆಳೆದಿದ್ದಾರೆ ಎಂದರು.

ಬಂಟರು ಮೂಲತಃ ಉದ್ಯಮಶೀಲರಾಗಿದ್ದು, ಮುಂಬೈ ಮಹಾನಗರ ಸೇರಿದಂತೆ ಬೆಂಗಳೂರು, ಹುಬ್ಬಳ್ಳಿಯ ಬೆಳವಣಿಗೆಯಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ. ಭಾಷೆಯ ವಿಶೇಷ ಸೆಳೆತ ನಮ್ಮನ್ನು ಒಗ್ಗೂಡಿಸಿದ್ದು, ಮನೆಯ ಮಗ ದೂರದ ಊರಿಗೆ ಹೋದಾಗ ಅಲ್ಲಿನ ಸಂಬಂಧಿಕರ ಮನೆಗೆ ತೆರಳಿ ಆಶೀರ್ವಾದ ಪಡೆದ ಅನುಭವ ಇಲ್ಲಿ ತಮಗೆ ಉಂಟಾಗಿದೆ ಎಂದರು.

ಕರಾವಳಿಯಿಂದ ಹೊರಗೆ ಶಿಕ್ಷಣ ಹಾಗೂ ಆರೋಗ್ಯ ಸೇವೆ ಕಲ್ಪಿಸಿ ಜನ ಏಳಿಗೆಗೆ ಶ್ರಮಿಸುತ್ತಿರುವ ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಉದ್ಯಮಿ ಆರ್.ಎನ್.ಶೆಟ್ಟಿ ಕಾರ್ಯ ಸ್ಮರಣೀಯ ಎಂದು ಹೇಳಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಸದಾನಂದಗೌಡ ಅವರನ್ನು ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಕಾರ್ಯಾಧ್ಯಕ್ಷ ಸತೀಶ್ಚಂದ್ರಶೆಟ್ಟಿ  ಸನ್ಮಾನಿಸಿದರು. ನಂತರ ಎಸ್‌ಡಿಎಂ ಶಿಕ್ಷಣ ಸಂಸ್ಥೆ, ಹವ್ಯಕ ಬ್ರಾಹ್ಮಣರ ಸಂಘ, ಕಾರ್ಪೊರೇಷನ್ ಬ್ಯಾಂಕ್, ಮಲ್ನಾಡ್ ಒಕ್ಕಲಿಗ-ಗೌಡರ ಸಂಘ, ಬೇಂದ್ರೆ ನಗರ ಸಾರಿಗೆ, ಮದ್ಯ ಮಾರಾಟಗಾರರ ಸಂಘ, ಅಖಿಲ ಭಾರತ ಮಾಧ್ವ ಮಹಾಮಂಡಳ, ಹೋಟೆಲ್ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಬಂಟರ ಸಂಘದ ಉಪಾಧ್ಯಕ್ಷ ಮಹೇಶ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿವರಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಶಾಸಕ ಚಂದ್ರಕಾಂತ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮೇಯರ್ ಪೂರ್ಣಾ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದತ್ತಾಡೋರ್ಲೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಅಶೋಕ ಕಾಟವೆ ಹಾಗೂ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT