ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟ್ವಾಳ- 6.4 ಕೋಟಿ ಕಾಮಗಾರಿ ಪೂರ್ಣ

Last Updated 9 ಸೆಪ್ಟೆಂಬರ್ 2011, 9:35 IST
ಅಕ್ಷರ ಗಾತ್ರ

ಬಂಟ್ವಾಳ: ಬಂಟ್ವಾಳ ಪುರಸಭೆಯಲ್ಲಿ ಎರಡನೇ ಅವಧಿಗೆ ಪುರಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಒಂದು ವರ್ಷದ ಅಧಿಕಾರಾವಧಿಯಲ್ಲಿ ರೂ. 6.4 ಕೋಟಿಗೂ ಅಧಿಕ ವೆಚ್ಚದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಪುರಸಭೆ ಅಧ್ಯಕ್ಷ ದಿನೇಶ ಭಂಡಾರಿ ತಿಳಿಸಿದ್ದಾರೆ.

ಪುರಸಭೆಯಲ್ಲಿ ಬುಧವಾರ ಮಧ್ಯಾಹ್ನ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿವರ ನೀಡಿದರು.
ಪುರಸಭೆ ವ್ಯಾಪ್ತಿಯ ಬಂಟ್ವಾಳ, ಬಿ.ಸಿ.ರೋಡ್ ಮತ್ತು ಪಾಣೆಮಂಗಳೂರು ಪ್ರದೇಶದಲ್ಲಿ ಬಹುತೇಕ ರಸ್ತೆಗಳನ್ನು ಕಾಂಕ್ರೀಟೀಕರಣಗೊಳಿಸಲಾಗಿದೆ.

ಎಸ್‌ವಿಎಸ್ ಪ್ರೌಢಶಾಲೆ ಬಳಿ ನೂತನ ಸೇತುವೆ ನಿರ್ಮಾಣ ಸೇರಿದಂತೆ ವಿವಿಧ ಕಡೆ ದುರ್ಬಲಗೊಂಡಿದ್ದ ಸೇತುವೆ ಪುನರ್‌ನಿರ್ಮಿಸಲಾಗಿದೆ. ಬಂಟ್ವಾಳ ಪೇಟೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೊಟ್ರಮಣಗಂಡಿಯಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಹಾಗೂ ತಡೆಗೋಡೆ ಕಾಮಗಾರಿ ನಡೆದಿದೆ ಎಂದರು.

ಬಂಟ್ವಾಳ ಪುರಸಭೆಗೆ ಕಳಂಕ ತಂದಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ ನೀಗಿಸುವ ಸಲುವಾಗಿ ಸಜಿಪನಡು ಗ್ರಾಮದ ಕಂಚಿನಡ್ಕ ಎಂಬಲ್ಲಿ ಕಾದಿರಿಸಿದ್ದ ಒಟ್ಟು 8.55 ಎಕರೆ ಜಮೀನು ಮಂಜೂರಾಗಿದೆ. ಈಗಾಗಲೇ 64 ಲಕ್ಷ ರೂಪಾಯಿ ವೆಚ್ಚದಲ್ಲಿ ಆವರಣಗೋಡೆ ನಿರ್ಮಾಣ ಮತ್ತು ಎರೆಹುಳ ಗೊಬ್ಬರ ಘಟಕ ಹಾಗೂ ಲಿಚರ್ಡ್ ಫಿಟ್ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ ಕುಟುಂಬಕ್ಕೆ ಇದೇ ಪ್ರಥಮ ಬಾರಿಗೆ `ವಾಜಪೇಯಿ ಆರೋಗ್ಯ ವಿಮೆ~ ಜಾರಿಗೊಳಿಸಿದ್ದು, ಸ್ವಉದ್ಯೋಗ ತರಬೇತಿ, ಮನೆ ನಿರ್ಮಾಣ, ಉಚಿತ ವಿದ್ಯುತ್, ಅಡುಗೆ ಅನಿಲ ಮತ್ತು ನೀರು ಪೂರೈಕೆ, ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ, ಸಮುದಾಯ ಭವನ ನಿರ್ಮಾಣ, ವಾಹನ ಸಾಲ ನೀಡಲಾಗುತ್ತಿದೆ.

ಬಡ್ಡಕಟ್ಟೆಯಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ತರಕಾರಿ ಮತ್ತು ಮಾಂಸದ ಮಾರುಕಟ್ಟೆ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಬಿ.ಸಿ.ರೋಡ್‌ನಲ್ಲಿ ಪ್ರತ್ಯೇಕ ಬಸ್ ನಿಲ್ದಾಣ ನಿರ್ಮಿಸಲು ಮುಖ್ಯಮಂತ್ರಿ ಬಳಿ ರೂ. 10 ಕೋಟಿ ವಿಶೇಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಕಂಪ್ಯೂಟರೀಕೃತ ನೀರಿನ ಬಿಲ್ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ವಿವರಿಸಿದರು.

ಉಪಾಧ್ಯಕ್ಷೆ ಜಾನಕಿ ಗೋಪಾಲ, ಸ್ಥಾಯಿ ಸಮಿತಿ ಆಧ್ಯಕ್ಷೆ ವಸಂತಿ ಗಂಗಾಧರ್, ಬೂಡಾ ಅಧ್ಯಕ್ಷ ಎ.ಗೋವಿಂದ ಪ್ರಭು, ಮಾಜಿ ಉಪಾಧ್ಯಕ್ಷ ಮಹಮ್ಮದ್ ಇಕ್ಬಾಲ್ ಮತ್ತಿತರರಿದ್ದರು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT