ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಆಕರ್ಷಣೆ: 2ನೇ ಸ್ಥಾನದಲ್ಲಿ ರಾಜ್ಯ

Last Updated 7 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೆಲ ಪ್ರತಿಕೂಲ ವಿದ್ಯಮಾನಗಳ ಹೊರತಾಗಿಯೂ ಕರ್ನಾಟಕ ರಾಜ್ಯವು ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಸದ್ಯಕ್ಕೆ ದೇಶದಲ್ಲಿ 2ನೇ ಸ್ಥಾನದಲ್ಲಿ ಇದ್ದರೂ, ಶೀಘ್ರದಲ್ಲಿಯೇ ಮೊದಲ ಸ್ಥಾನಕ್ಕೆ ಏರಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘವು (ಅಸೋಚಾಂ) ಆಶಾವಾದ ವ್ಯಕ್ತಪಡಿಸಿದೆ.

ಸದ್ಯಕ್ಕೆ ಗುಜರಾತ್ ರಾಜ್ಯವು ಬಂಡವಾಳ ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿದ್ದರೂ, ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಾದ ಪೂರಕ ವಾತಾವರಣದಿಂದಾಗಿ ರಾಜ್ಯವು ಕೆಲವೇ ಕೆಲ ವರ್ಷಗಳಲ್ಲಿ ಗುಜರಾತ್ ಅನ್ನು ಹಿಂದೆ ಹಾಕಲಿದೆ ಎಂದು ‘ಅಸೋಚಾಂ’ನ ದಕ್ಷಿಣ ವಲಯ ಘಟಕದ ಅಧ್ಯಕ್ಷ ಜೆ. ಕ್ರಾಸ್ತ  ಅವರು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಂಡವಾಳ ಹೂಡಿಕೆ ಯೋಜನೆಗಳು ಕಾರ್ಯಗತಗೊಳ್ಳುವಲ್ಲಿ ರಾಜ್ಯವು ಶೇ 50.5ರಷ್ಟು ವೃದ್ಧಿ ದಾಖಲಿಸಿದೆ. 2009ರ ಡಿಸೆಂಬರ್‌ನಲ್ಲಿನ ` 6.4 ಲಕ್ಷ ಕೋಟಿಗಳಿಗೆ ಹೋಲಿಸಿದರೆ, 2010ರ ಡಿಸೆಂಬರ್ ಅಂತ್ಯದ ಹೊತ್ತಿಗೆ  ಒಟ್ಟು ` 9 ಲಕ್ಷ ಕೋಟಿಗಳಷ್ಟು ಮೊತ್ತದ 1528 ಯೋಜನೆಗಳು ಕಾರ್ಯಗತಗೊಳ್ಳುವ ಹಂತದಲ್ಲಿ ಇವೆ ಎಂದು ‘ಕರ್ನಾಟಕ: ಭವಿಷ್ಯದ ಆರ್ಥಿಕ ಬೆಳವಣಿಗೆಯ ಸಿದ್ಧತೆ’ ವರದಿಯಲ್ಲಿ ತಿಳಿಸಲಾಗಿದೆ.

ಗಮನಾರ್ಹ ಸಾಧನೆ: ತಯಾರಿಕೆ, ಗಣಿಗಾರಿಕೆ, ವಿದ್ಯುತ್, ಸೇವೆಗಳು, ನೀರಾವರಿ ಮತ್ತು ರಿಯಲ್ ಎಸ್ಟೇಟ್‌ನಂತರಹ ಆರು ಪ್ರಮುಖ ವಲಯಗಳಲ್ಲಿ  ರಾಜ್ಯವು ಕಳೆದ ವರ್ಷ ಗಮನಾರ್ಹ ಬೆಳವಣಿಗೆ ಸಾಧಿಸಿದೆ. ಒಟ್ಟು 227 ಯೋಜನೆಗಳು ಈ ಅವಧಿಯಲ್ಲಿ ಕಾರ್ಯಗತಗೊಂಡಿವೆ. 2010ರ ಮಾರ್ಚ್ ಅಂತ್ಯದ ಹೊತ್ತಿಗೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ದೇಶದಾದ್ಯಂತ ಹೂಡಿಕೆಯಾದ ಒಟ್ಟು ` 105 ಲಕ್ಷ ಕೋಟಿಗಳಲ್ಲಿ  ಕರ್ನಾಟಕವು ಶೇ 7ರಷ್ಟು (`7.4 ಲಕ್ಷ ಕೋಟಿ) ಬಂಡವಾಳ ಬಾಚಿಕೊಂಡಿದೆ.

ವಿದ್ಯುತ್ ಸಮಸ್ಯೆ: ರಾಜ್ಯದಲ್ಲಿ ಕೈಗಾರೀಕರಣವು ಇನ್ನಷ್ಟು ದಾಪುಗಾಲು ಹಾಕಲು ವಿದ್ಯುತ್ ಅಭಾವವು ದೊಡ್ಡ ಅಡಚಣೆಯಾಗಿ ಪರಿಣಮಿಸಿದೆ. ರಾಜ್ಯಕ್ಕೆ ದಾಭೋಲ್ ನೈಸರ್ಗಿಕ ಅನಿಲ ಪೂರೈಕೆಯು ಶೀಘ್ರದಲ್ಲಿಯೇ  ಆರಂಭಗೊಳ್ಳಲಿದ್ದು ಆಗ ವಿದ್ಯುತ್ ಸಮಸ್ಯೆ ಗಮನಾರ್ಹವಾಗಿ ನಿವಾರಣೆಯಾಗಲಿದೆ. ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದ ಫಲವಾಗಿ ರಾಜ್ಯದಲ್ಲಿನ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಕೈಗಾರಿಕೆಗಳು ಅಸ್ತಿತ್ವಕ್ಕೆ ಬರಲಿವೆ. ಇದರಿಂದ ಬೆಂಗಳೂರಿನ ಮೇಲಿನ ಒತ್ತಡವೂ ಕಡಿಮೆಯಾಗಲಿದ್ದು, ರಾಜ್ಯದ ಒಟ್ಟಾರೆ ಕೈಗಾರಿಕಾ ಚಿತ್ರಣ ಸಮಗ್ರವಾಗಿ ಬದಲಾಗಲಿದೆ. ಭವಿಷ್ಯದಲ್ಲಿ ಗುಜರಾತ್ ಬದಲಿಗೆ ಕರ್ನಾಟಕವು ಬಂಡವಾಳ ಹೂಡಿಕೆಯ ಪ್ರಮುಖ ತಾಣವಾಗಿ ಗಮನ ಸೆಳೆಯಲಿದೆ ಎಂದೂ ಕ್ರಾಸ್ತ ಹೇಳಿದರು. ‘ಅಸೋಚಾಂ’ನ ದಕ್ಷಿಣ ವಲಯದ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ರವೀಂದ್ರ   ಸಣ್ಣಾರೆಡ್ಡಿ, ಒ. ಎಸ್. ತ್ಯಾಗಿ  ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT