ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಹೂಡಿಕೆಗೆ ಆಹ್ವಾನ

Last Updated 4 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಛತ್ತೀಸ್‌ಗಡದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಲು ರಾಜ್ಯದ ಉದ್ಯಮಿಗಳನ್ನು ಛತ್ತೀಸ್‌ಗಡ ಮುಖ್ಯಮಂತ್ರಿ ರಮಣ ಸಿಂಗ್ ಆಹ್ವಾನಿಸಿದರು.

ನವೆಂಬರ್ ಮೊದಲ ವಾರದಲ್ಲಿ ಛತ್ತೀಸ್‌ಗಡದ ನಯಾ ರಾಯ್‌ಪುರದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್) ಅಂಗವಾಗಿ ನಗರದಲ್ಲಿ ಗುರುವಾರ ರೋಡ್ ಶೋ ನಡೆಸಿ ಅವರು ಉದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಿದರು.

`ಬೆಂಗಳೂರು ಮಾಹಿತಿ ತಂತ್ರಜ್ಞಾನದಂತಹ ಪ್ರಮುಖ ಕ್ಷೇತ್ರದಲ್ಲಿ ಮಾನವಶಕ್ತಿ ಹಾಗೂ ಪರಿಣತಿಯ ಬೃಹತ್ ಪ್ರತಿಭೆಯನ್ನು ಹೊಂದಿದೆ. ಜೈವಿಕ ತಂತ್ರಜ್ಞಾ ಕ್ಷೇತ್ರದಲ್ಲಿ ಮಂಚೂಣಿಯಲ್ಲಿದೆ~.

`ಈ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ರಾಜ್ಯ ಉತ್ಸುಕವಾಗಿದೆ. ಬಂಡವಾಳ ಹೂಡಿಕೆ ಮಾಡುವ ಕಂಪೆನಿಗಳಿಗೆ ಅಗತ್ಯವಾದ ಮೂಲಸೌಲಭ್ಯ ಒದಗಿಸಲಾಗುವುದು. ಇಲ್ಲಿನ ಉದ್ಯಮಿಗಳು ಬಂಡವಾಳ ಹೂಡಿಕೆಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ~ ಎಂದು ರಮಣ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.
`ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.

ರಾಜ್ಯ ಹೆಚ್ಚುವರಿ ವಿದ್ಯುತ್ ಸೌಲಭ್ಯವನ್ನು ಹೊಂದಿದೆ. ದೇಶದ ಶೇ 19ರಷ್ಟು ಕಲ್ಲಿದ್ದಲು ನಿಕ್ಷೇಪಗಳು ಇಲ್ಲಿವೆ. ಹೀಗಾಗಿ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇಲ್ಲ. ದೇಶದಲ್ಲಿ 90 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಿದ್ದು, ಛತ್ತೀಸ್‌ಗಡದಿಂದ 30 ಸಾವಿರ ಮೆಗಾವಾಟ್ ವಿದ್ಯುತ್ ಪೂರೈಕೆಯಾಗಲಿದೆ~ ಎಂದು ಅವರು ಮಾಹಿತಿ ನೀಡಿದರು.

`ಹೂಡಿಕೆದಾರರು ಆಟೋಮೊಬೈಲ್, ಎಂಜಿನಿಯರಿಂಗ್, ನಗರ ಮೂಲಸೌಕರ್ಯ, ಕಿರು ಅರಣ್ಯ ಉತ್ಪನ್ನ, ಕೃಷಿ ಮತ್ತು ಆಹಾರ ಸಂಸ್ಕರಣೆ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡಬಹುದು. ಹೂಡಿಕೆದಾರರಿಗೆ ಆಕರ್ಷಕ ಸಹಾಯಧನವನ್ನು ನೀಡಲಾಗುವುದು.

ಅಧಿಕ ಪ್ರಮಾಣದಲ್ಲಿ ಹೂಡಿಕೆಯನ್ನು ಆಕರ್ಷಿಸಲು ರಾಜ್ಯದಲ್ಲಿ ಹೂಡಿಕೆ ಉತ್ತೇಜನಾ ಮಂಡಳಿಯನ್ನು ರಚಿಸಲಾಗಿದೆ. ಅಲ್ಲದೆ ಹೂಡಿಕೆ ಪ್ರಸ್ತಾಪಗಳಿಗೆ ಏಕಗವಾಕ್ಷಿ ಪರವಾನಗಿ ನೀಡಲಾಗುವುದು~ ಎಂದು ಅವರು ತಿಳಿಸಿದರು.

ಛತ್ತೀಸ್‌ಗಡ ಕೈಗಾರಿಕಾ ಸಚಿವ ರಾಜೇಶ್ ಮುನಾಟ್, ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬದ್ರಿದಾರ್ ದಿವಾನ್, ಮುಖ್ಯ ಕಾರ್ಯದರ್ಶಿ ಸುನೀಲ್ ಕುಮಾರ್ ಉಪಸ್ಥಿತರಿದ್ದರು. ಟಿಸಿಎಸ್, ಇನ್ಫೋಸಿಸ್, ಆಕ್ಸೆಂಚರ್, ಜಿಎಂಆರ್, ವಿಪ್ರೊ, ಐಬಿಎಂ, ಒರಾಕಲ್, ನೊವೆಲ್ ಸೇರಿದಂತೆ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಉನ್ನತ ಅಧಿಕಾರಿಗಳ ಜತೆಗೆ ರಮಣ್ ಸಿಂಗ್ ಸಮಾಲೋಚನೆ ನಡೆಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT