ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಾಯದ ನೆಲದಲ್ಲಿ ಅನುಕಂಪದ ಅಲೆ

ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ
Last Updated 25 ಏಪ್ರಿಲ್ 2013, 7:03 IST
ಅಕ್ಷರ ಗಾತ್ರ

ಗದಗ: ರೈತ ಹೋರಾಟಕ್ಕೆ ಹೆಸರಾದ ನರಗುಂದದಲ್ಲಿ ಈಗ ಅನುಕಂಪ ಅಲೆಯದ್ದೇ ಮಾತು. ಆಕಸ್ಮಿಕ ಗುಂಡೇಟಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾಲಿ ಶಾಸಕ ಸಿ.ಸಿ.ಪಾಟೀಲ  ಕುಟುಂಬದವರು ಅನುಕಂಪ ಅಲೆ ಸೃಷ್ಟಿಸಿ ಲಾಭ ಪಡೆದುಕೊಳ್ಳುವ ಲೆಕ್ಕಾ ಚಾರದಲ್ಲಿ ತೊಡಗಿದ್ದರೆ, ಇತ್ತ ರಾಜಕೀಯ ಜೀವನದ ಕೊನೆ ಚುನಾವಣೆ ಎದುರಿಸುತ್ತಿರುವ ಮಾಜಿ ಸಚಿವ ಬಿ.ಆರ್.ಯಾವಗಲ್ ಅವರನ್ನು ಗೆಲ್ಲಿಸಬೇಕು ಎಂದು ಅವರ ಅಭಿಮಾನಿಗಳು ಮತದಾರರ ಬಳಿ ಅನುಕಂಪ ಪಡೆಯಲು ಮುಂದಾಗಿದ್ದಾರೆ.

ಸತತವಾಗಿ ಎರಡು ಬಾರಿ ಆಯ್ಕೆಯಾಗಿರುವ ಶಾಸಕ ಸಿ.ಸಿ.ಪಾಟೀಲ ಬಿಜೆಪಿಯಿಂದ ಮೂರನೇ ಬಾರಿಗೆ ಕಣಕ್ಕಿಳಿದಿದ್ದಾರೆ. ಅವರಿಗೆ ಪ್ರಬಲ ಎದುರಾಳಿ ಆಗಿರುವ ಕಾಂಗ್ರೆಸ್‌ನ ಬಿ.ಆರ್. ಯಾವಗಲ್ ಗೆಲುವಿನ ಓಟಕ್ಕೆ ತಡೆಯೊಡ್ಡಲು ಹವಣಿಸುತ್ತಿದ್ದಾರೆ.

1983 ಮತ್ತು 1985ರ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಬಿ.ಆರ್.ಯಾವಗಲ್ ಜಯ ಸಾಧಿಸಿದರು. 1989ರಲ್ಲಿ ಸೋಲುಂಡ ಬಳಿಕ 1994 ಮತ್ತು 1999ರಲ್ಲಿ ಮತ್ತೆ ಯಾವಗಲ್ ಆಯ್ಕೆಯಾಗುವ ಮೂಲಕ ನೆಲೆ ಭದ್ರಪಡಿಸಿದರು.

2004ರ ಚುನಾವಣೆಯಲ್ಲಿ ಸಿ.ಸಿ.ಪಾಟೀಲ ಆಯ್ಕೆಯಾಗುವ ಮೂಲಕ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ ಕೀರ್ತಿ ತಂದು ಕೊಂಡರು. 2008ರ ಚುನಾವಣೆಯಲೂ ಗೆಲುವಿನ ಯಾತ್ರೆ ಮುಂದುವರೆಸಿದರು. ಈ ಬಾರಿ ಹ್ಯಾಟ್ರಿಕ್ ಸಾಧಿಸುತ್ತಾರೆ ಎಂಬ ಕಾತರ ಕಾರ್ಯಕರ್ತರಲ್ಲಿತ್ತು. ಆದರೆ ಆಕಸ್ಮಿಕ ಗುಂಡೇಟಿನಿಂದ ಆಸ್ಪತ್ರೆ ಸೇರಬೇಕಾಯಿತು.

ಕಳಸಾ-ಬಂಡೂರಿ ನಾಲಾ ಜೋಡಣೆಯಾಗಬೇಕು ಎಂಬುದು ಕ್ಷೇತ್ರ ಜನರ ಬಹುದಿನಗಳ ಬೇಡಿಕೆ. ಈ ಯೋಜನೆ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳಿಬ್ಬರಿಗೂ ಮೈನಸ್ ಪಾಯಿಂಟ್. `ಯಾವ ಸರ್ಕಾರ ಬಂದರೂ ಯೋಜನೆ ಪೂರ್ಣಗೊಳ್ಳಲಿಲ್ಲ' ಎಂಬ ಅಸಮಾ ಧಾನ ಒಂದೆಡೆಯಾದರೆ, `ಅಧಿಕಾರದಲ್ಲಿದ್ದರೂ ರೈತರ ಹಿತರಕ್ಷಣೆ ಮಾಡಲು ಬಿಜೆಪಿಗೆ ಸಾಧ್ಯವಾಗಲಿಲ್ಲ' ಎಂಬ ಅಭಿಪ್ರಾಯ ಮತ್ತೊಂದೆಡೆ.

ಸಿ.ಸಿ.ಪಾಟೀಲ ಪ್ರಚಾರದಲ್ಲಿ ತೊಡಗದಿದ್ದರೂ ಅವರ ಕುಟುಂಬದ ಸದಸ್ಯರು ತಂಡಗಳನ್ನು ರಚಿಸಿಕೊಂಡು ಕ್ಷೇತ್ರದಲ್ಲಿ ಪಾಟೀಲರು ಮಾಡಿದ ಅಭಿವೃದ್ಧಿ ಕಾರ್ಯಗಳ ಪಟ್ಟಿ ಹಿಡಿದು ಮತಯಾಚನೆಯಲ್ಲಿ ತೊಡಗಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಈಗಾಗಲೇ ಆಸ್ಪತ್ರೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಟೀಲ ಕ್ಷೇತ್ರದ ಜನತೆಯ ಮತಯಾಚನೆಯನ್ನೂ ಮಾಡಿದ್ದಾರೆ.

ಬಿಜೆಪಿ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಮತ್ತು ವೈಫಲ್ಯ ಮುಂದಿಟ್ಟುಕೊಂಡು ಕೊನೆ ಬಾರಿ ಗೆಲುವು ಸಾಧಿಸಲು ಯಾವಗಲ್ ಅವರು ಮತದಾರರ ಓಲೈಕೆಯಲ್ಲಿ ಮುಂದಾಗಿದ್ದಾರೆ. ಕೊನೆ ಬಾರಿ ಆರಿಸಿ ತರಬೇಕು ಎಂದು ಅವರ ಅಭಿಮಾನಿಗಳು ಸಹ ಬೆವರು ಹರಿಸುತ್ತಿದ್ದಾರೆ.

20 ತಿಂಗಳ ಅಧಿಕಾರವಧಿಯಲ್ಲಿ ಎಚ್. ಡಿ.ಕುಮಾರಸ್ವಾಮಿ ಕೈಗೊಂಡ ಜನಪರ ಸೇವೆ, ಗ್ರಾಮ ವಾಸ್ತವ್ಯ ಬಗ್ಗೆ ಮತದಾರರಿಗೆ ತಿಳಿಸಿ ಜೆಡಿಎಸ್ ಅಭ್ಯರ್ಥಿ ಪ್ರಕಾಶ ಕರಿ ಅವರು ತಮ್ಮದೇ ಕಾರ್ಯಪಡೆ ಕಟ್ಟಿಕೊಂಡು ಮತಯಾಚನೆ ಮಾಡುತ್ತಿದ್ದರೆ, ಶ್ರೀರಾಮುಲು ಅವರ ಸಾಧನೆಗಳನ್ನು ಜನರ ಮುಂದೆ ತೆರೆದಿಟ್ಟು ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಚ್.ಶಿವನಗೌಡ್ರ ಮತ ಬೇಟೆಯಲ್ಲಿ ತೊಡಗಿದ್ದರೆ. ಮಾಜಿ ಮತ್ತು ಹಾಲಿ ಶಾಸಕರ ಓಟಕ್ಕೆ ತೊಡರಗಾಲು ಹಾಕಲು ಕೆಜೆಪಿ ಅಭ್ಯರ್ಥಿ ಕುಬೇರ ಗೌಡ ಪರ್ವತಗೌಡರ, ರಾಣಿ ಚನ್ನಮ್ಮ ಪಕ್ಷದಿಂದ ಗುರುಸಿದ್ದಪ್ಪ ದೇಸಾಯಿ, ಲೋಕ ಜನಶಕ್ತಿಯ ಹೇಮಂತ ಕಡಿಯವರ ಸೇರಿದಂತೆ ನಾಲ್ವರು ಪಕ್ಷೇತರರು ಕಣದಲ್ಲಿದ್ದಾರೆ.

ಸಚಿವ ವರ್ತೂರ ಪರಕಾಶ ಅವರ ಸಹೋದರ ವಿ.ಆರ್.ರಮಾನಂದ, ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ಬಂಡಾಯ ಅಭ್ಯರ್ಥಿ ಯಾಗಿ ಕಣದಲ್ಲಿರುವ ಏಕೈಕ ಮಹಿಳೆ ಶಕುಂತಲಾ ಕೊಂಡಾಬಿಂಗಿ, ಸುರೇಶ ಮುಂಡರಗಿ, ಕೃಷ್ಣಗೌಡ ಪಾಟೀಲ ಅವರು ಮತದಾರರ ಓಲೈಕೆಗೆ ಮಂದಾಗಿದ್ದಾರೆ.

ಈ ಬಾರಿ ಮತದಾರರು ಹಾಲಿ ಶಾಸಕ ಸಿ.ಸಿ.ಪಾಟೀಲರ ಹ್ಯಾಟ್ರಿಕ್ ಸಾಧನೆಗೆ ಕೈಜೋಡಿಸುತ್ತಾರೋ, ರಾಜಕೀಯ ಭವಿಷ್ಯದ ಕೊನೆ ಮೆಟ್ಟಿಲು ಏರಲು ಮಾಜಿ ಶಾಸಕ ಬಿ.ಆರ್.ಯಾವಗಲ್‌ಗೆ ಅವಕಾಶ ಮಾಡಿಕೊಡುತ್ತಾರೋ ಎಂಬ ಕುತೂಹಲ ಮನೆ ಮಾಡಿದೆ.

ಕ್ಷೇತ್ರ ಇತಿಹಾಸ

ನರಗುಂದ ಎಂದಾಕ್ಷಣ ರೈತ ಬಂಡಾಯ ನೆನಪಿಗೆ ಬರುತ್ತದೆ. ರೈತರ ಭೂಮಿಗೆ ಮಲಪ್ರಭೆ ನೀರು ಬಿಡದೆ ಒತ್ತಾಯಪೂರ್ವಕವಾಗಿ ನೀರಾವರಿ ಕರ ವಸೂಲು ಮತ್ತು ಕರ ನೀಡದ ರೈತರ ಜಮೀನುಗಳನ್ನು ಮುಟ್ಟುಗೋಲು ಹಾಕಿಕೊಂಡಾಗ ರೈತ ಬಂಡಾಯಕ್ಕೆ ಕಾರಣವಾಯಿತು.

1957ರಿಂದ ಸತತ ಐದು ಬಾರಿ ಕಾಂಗ್ರೆಸ್‌ಗೆ ಅಧಿಕಾರ ನೀಡುತ್ತಿದ್ದ ಮತದಾರರು, ರೈತರ ಮೇಲೆ ಗುಂಡಿನ ದಾಳಿಗೆ ಕಾರಣವಾದ ಆಗಿನ ಕಾಂಗ್ರೆಸ್ ಸರ್ಕಾರ ಕಿತ್ತೊಗೆದು ಜನತಾ ಸರ್ಕಾರ ಅಧಿಕಾರಕ್ಕೆ ತರುವ ಮೂಲಕ ಬಂಡಾಯದ ನಾಡು ನರಗುಂದ ದೇಶದ ಗಮನ ಸೆಳೆಯಿತು.

12 ಚುನಾವಣೆಯಲ್ಲಿ ಮತದಾರರು ಏಳು ಬಾರಿ ಕಾಂಗ್ರೆಸ್, ಎರಡು ಬಾರಿ ಜನತಾ ಪಕ್ಷ ಮತ್ತು ಬಿಜೆಪಿ, ಒಂದು ಬಾರಿ ಜನತಾದಳ ಆಯ್ಕೆ ಮಾಡಿದ್ದಾರೆ.

ಕ್ಷೇತ್ರದ ವ್ಯಾಪ್ತಿ
ನರಗುಂದ ಕ್ಷೇತ್ರವು ನರಗುಂದ ತಾಲ್ಲೂಕು ಹಾಗೂ ರೋಣ ತಾಲ್ಲೂಕಿನ ಹೊಳೆ ಆಲೂರ ಹೋಬಳಿಯ 28 ಹಳ್ಳಿಗಳು, ನರೇಗಲ್ಲ ಹೋಬಳಿಯ 5 ಗ್ರಾಮಗಳು, ಬೆಟಗೇರಿ ಹೋಬಳಿಯ 27 ಹಳ್ಳಿಗಳನ್ನು ಒಳಗೊಂಡಿದೆ.

ಒಟ್ಟು ಮತದಾರರು 1,64,897
ಪುರುಷರು-84,595
ಮಹಿಳೆಯರು-80,302

ಕಣದಲ್ಲಿರುವ ಅಭ್ಯರ್ಥಿಗಳು

  • ಸಿ.ಸಿ.ಪಾಟೀಲ-ಬಿಜೆಪಿ
  • ಬಿ.ಆರ್.ಯಾವಗಲ್-ಕಾಂಗ್ರೆಸ್
  • ಪ್ರಕಾಶ ಕರಿ-ಜೆಡಿಎಸ್
  • ಪರ್ವತಗೌಡರ-ಕೆಜೆಪಿ
  • ಎಸ್.ಎಚ್.ಶಿವನಗೌಡರ-ಬಿಎಸ್‌ಆರ್ ಕಾಂಗ್ರೆಸ್
  • ಸುರೇಶ ಮಹಾರುದ್ರಪ್ಪ ಮುಂಡರಗಿ-ಪಕ್ಷೇತರ
  • ಶಕುಂತಲಾ ಯಮನಪ್ಪ ಕೊಂಡಾ ಬಿಂಗಿ-ಪಕ್ಷೇತರ
  • ವಿ.ಆರ್.ರಮಾನಂದ-ಪಕ್ಷೇತರ
  • ಹೇಮಂತ ಮಲ್ಲಪ್ಪ ಕಡಿಯವರ-ಲೋಕಜನಶಕ್ತಿ ಪಾರ್ಟಿ
  • ಗುರುಸಿದ್ದಪ್ಪ ಹೊನಕೇರಪ್ಪ ದೇಸಾಯಿ-ರಾಣಿ ಚೆನ್ನಮ್ಮ ಪಾರ್ಟಿ
  • ಕೃಷ್ಣಗೌಡ ರಂಗನಗೌಡ ಪಾಟೀಲ-ಪಕ್ಷೇತರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT