ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ ಅರಣ್ಯ ರಕ್ಷಿಸಿ

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬಂಡೀಪುರ ರಾಷ್ಟ್ರೀಯ ಉದ್ಯಾನ ಸಮೀಪದ (ಬಂಡೀಪುರ-ಮಧುಮಲೈ ರಸ್ತೆಯಲ್ಲಿ) ಮಂಗಲ ಗ್ರಾಮದ ಬಳಿ ಸುಮಾರು ಇಪ್ಪತ್ತು ಎಕರೆ ಪ್ರದೇಶದಲ್ಲಿ ಐವತ್ತು ಮನೆಗಳು ಹಾಗೂ ಇನ್ನೂರು ಪ್ರವಾಸಿ ಕಾಟೇಜ್‌ಗಳನ್ನು ನಿರ್ಮಿಸುವ ಪ್ರಯತ್ನಕ್ಕೆ ಪುಣೆ ಮೂಲದ ನಿರ್ಮಾಣ ಸಂಸ್ಥೆಯೊಂದು ಕೈಹಾಕಿದೆ ಎಂಬ ಸಂಗತಿ ಆಘಾತಕಾರಿ. ಅರಣ್ಯ ಪ್ರದೇಶದಲ್ಲಿ ಭೂಮಿ ಖರೀದಿಸಿ ಕಟ್ಟಡಗಳ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳುವವರೆಗಿನ ಬೆಳವಣಿಗೆಗಳು ರಾಜ್ಯ ಸರ್ಕಾರದ ಗಮನಕ್ಕೇ ಬಂದಿಲ್ಲವೇ? ರಾಜ್ಯ ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿಗಳ ಹಾಗೂ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮತಿಯನ್ನು ಪಡೆಯದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಟ್ಟಡಗಳನ್ನು ಕಟ್ಟಲು ಹೊರಟಿರುವುದನ್ನು ದುಃಸ್ಸಾಹಸ ಎಂದೇ ಹೇಳಬೇಕಾದೀತು. ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಮನೆಗಳು ಹಾಗೂ ಕಾಟೇಜ್‌ಗಳ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಂಡಿರುವ ಪ್ರದೇಶ ‘ಸೂಕ್ಷ್ಮ ಜೀವ ವೈವಿಧ್ಯ’ ವಲಯದ ವ್ಯಾಪ್ತಿಯಲ್ಲಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನ ಹುಲಿ ಸಂರಕ್ಷಣಾ ಯೋಜನಾ ಪ್ರದೇಶವೂ ಆಗಿರುವುದರಿಂದ ಇಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಮುಕ್ತ ಅವಕಾಶ ಇಲ್ಲ. ಅಷ್ಟೇ ಅಲ್ಲ ಈ ಪ್ರದೇಶ ಆನೆ, ಚಿರತೆ, ಹುಲಿ ಇತ್ಯಾದಿ ಪ್ರಾಣಿಗಳ ಓಡಾಟದ (ಕಾರಿಡಾರ್) ಹಾದಿ. ಇಲ್ಲಿ ಸಣ್ಣ, ಪುಟ್ಟ ಕಟ್ಟಡಗಳನ್ನು ಕಟ್ಟಿದರೂ ಅದರಿಂದ ಪ್ರಾಣಿಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಇಂತಹ ಪರಿಸರದಲ್ಲಿ ಪುಣೆ ಮೂಲದ ಸಂಸ್ಥೆಗೆ ಕಟ್ಟಡಗಳನ್ನು ನಿರ್ಮಿಸುವ ಧೈರ್ಯ ಬಂದದ್ದು ಹೇಗೆ?

ಸೂಕ್ಷ್ಮ ಜೀವ ವೈವಿಧ್ಯ ವಲಯದಲ್ಲಿ ಇಪ್ಪತ್ತು ಎಕರೆ ಭೂಮಿ ಖರೀದಿ ಮಾಡಿದ್ದರಿಂದ ಹಿಡಿದು ಯಾರ ಅನುಮತಿಯನ್ನೂ ಪಡೆಯದೆ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯವಾದ ಸಿದ್ಧತೆಗಳನ್ನೆಲ್ಲ ಮಾಡಿಕೊಂಡಿರುವುದನ್ನು ನೋಡಿದರೆ ಈ ಬೆಳವಣಿಗೆಗಳ ಹಿಂದೆ ಪ್ರಭಾವಿ ವ್ಯಕ್ತಿಗಳಿದ್ದಾರೆ ಎಂದೇ ಭಾವಿಸಬೇಕಾದೀತು. ರಾಜ್ಯ ಸರ್ಕಾರ ತಕ್ಷಣ ಈ ಪ್ರಯತ್ನವನ್ನು ತಡೆಯಬೇಕು. ರಾಜ್ಯದ ಅರಣ್ಯ ಪ್ರದೇಶಗಳು ಈಗಾಗಲೇ ಒತ್ತುವರಿಯಾಗಿವೆ. ಗಣಿಗಾರಿಕೆ, ಕೃಷಿ, ರಸ್ತೆ ನಿರ್ಮಾಣ, ಪ್ರವಾಸೋದ್ಯಮ ಅಭಿವೃದ್ಧಿ ಇತ್ಯಾದಿಗಳ ಹೆಸರಿನಲ್ಲಿ ಕಾಡು ನಾಶವಾಗುತ್ತಿದೆ. ಈ ಬೆಳವಣಿಗೆಗಳಿಂದ ವನ್ಯ ಜೀವಿಗಳ ಜೀವನಕ್ರಮ ಬದಲಾಗಿದೆ. ಕಾಡುಗಳಲ್ಲಿ ಆಹಾರ ಮತ್ತು ಕುಡಿಯುವ ನೀರಿನ ಕೊರತೆ ಹೆಚ್ಚಾಗಿದೆ. ಆನೆ, ಚಿರತೆ ಮತ್ತಿತರ ವನ್ಯಜೀವಿಗಳು ಜನವಸತಿ ಇರುವ ಊರುಗಳತ್ತ ನುಗ್ಗುತ್ತಿವೆ. ಬೆಳೆ ಹಾಳು ಮಾಡುತ್ತಿವೆ. ಜನರನ್ನೂ ಬಲಿ ತೆಗೆದುಕೊಳ್ಳುತ್ತಿವೆ. ಇದನ್ನು ನಿಯಂತ್ರಿಸಬೇಕಾದರೆ ಮೊದಲು ಅರಣ್ಯ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದ ರಕ್ಷಣೆ ಆಗಬೇಕು. ಪ್ರವಾಸೋದ್ಯಮದ ಹೆಸರಿನಲ್ಲಿ ಅರಣ್ಯ ಮತ್ತು ಪರಿಸರ ನಾಶ ಮಾಡುವ ಯೋಜನೆಗಳಿಗೆ ಅವಕಾಶಕೊಡಬಾರದು. ಮಂಗಲ ಗ್ರಾಮದ ಬಳಿ ಅನುಮತಿ ಪಡೆಯದೆ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT