ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: ಜಾ ಟ್ರಾಪ್ ಬಳಸಿ ಹುಲಿ ಹತ್ಯೆ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಲ್ಕೆರೆ ವಲಯದಲ್ಲಿ ಗಂಡು ಹುಲಿಯೊಂದು `ಜಾ ಟ್ರಾಪ್~ಗೆ ಸಿಲುಕಿ ಮೃತಪಟ್ಟಿದೆ. ಈ ಪ್ರಕರಣವನ್ನು ಮುಚ್ಚಿಹಾಕಲು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೇ ಮುಂದಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ಕಲ್ಕೆರೆ ವಲಯದಲ್ಲಿ ಡಿ. 30ರಂದು 9 ರಿಂದ 10 ವರ್ಷದ ಗಂಡು ಹುಲಿ ಅಸು ನೀಗಿತ್ತು. ಈ ಹುಲಿಯು ಹಸಿವಿನಿಂದ ನರಳಿ ಮೃತಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

ಆದರೆ, ಡಿ. 31ರಂದು ಮತ್ತೊಂದು ಗಂಡು ಹುಲಿ ಅದೇ ವಲಯದಲ್ಲಿ ಬೇಟೆಗಾರರು ಅಳವಡಿಸಿದ್ದ `ಜಾ ಟ್ರಾಪ್~ಗೆ ಸಿಲುಕಿ ಅಸುನೀಗಿದೆ. ಹಿರಿಯ ಅಧಿಕಾರಿಗಳು ಗೌಪ್ಯವಾಗಿ ಸ್ಥಳಕ್ಕೆ ಭೇಟಿ ನೀಡಿ ಮೃತಪಟ್ಟ ಹುಲಿ ಮತ್ತು `ಜಾ ಟ್ರಾಪ್~ ಅಳವಡಿಸಿದ್ದ ಸ್ಥಳದ ಛಾಯಾಚಿತ್ರ ತೆಗೆದಿದ್ದಾರೆ. ಬಳಿಕ ಹುಲಿಯನ್ನು ಹೂತು ಹಾಕಿದ್ದಾರೆ ಎನ್ನಲಾಗಿದೆ.

ಹುಲಿಯ ಶವಪರೀಕ್ಷೆ ವೇಳೆ ಸ್ವಯಂ ಸೇವಾ ಸಂಸ್ಥೆಗಳ ಇಬ್ಬರು ಪ್ರತಿನಿಧಿಗಳು ಹಾಜರಿರಬೇಕು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನಿಯಮಾವಳಿ ರೂಪಿಸಿದೆ. ಇದರನ್ವಯ ಬಾಯಿಹುಣ್ಣಿನಿಂದ ಅಸು ನೀಗಿದ್ದ ಹುಲಿಯ ಮರಣೋತ್ತರ ಪರೀಕ್ಷೆಗೆ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳನ್ನು ಕರೆದೊಯ್ಯಲಾಗಿದೆ. ಆದರೆ, `ಜಾ ಟ್ರಾಪ್~ಗೆ ಸಿಕ್ಕಿಕೊಂಡ ಹುಲಿಯ ಸಾವಿನ ಬಗ್ಗೆ ಅಧಿಕಾರಿಗಳು ಗೌಪ್ಯತೆ ಕಾಪಾಡಿಕೊಂಡ್ದ್ದಿದಾರೆ ಎಂದು ಅರಣ್ಯ ಇಲಾಖೆಯ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ರಾಜ್ಯದಲ್ಲಿ 3 ವರ್ಷದಿಂದಲೂ `ಜಾ ಟ್ರಾಪ್~ ಬಳಸಿ ಕಾಡು ಪ್ರಾಣಿ ಹತ್ಯೆ ಮಾಡಿರುವ ಪ್ರಕರಣ ವರದಿಯಾಗಿರಲಿಲ್ಲ. ಈ ಉಪಕರಣ ಬಳಸಿ ಹುಲಿ ಹತ್ಯೆ ಮಾಡಿರುವ ಪ್ರಕರಣ ಬಯಲಾದರೆ ಹುಲಿ ಸಂರಕ್ಷಣೆಯಲ್ಲಿ ಎಡವಿರುವುದು ಸಾಬೀತಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಪ್ರಕರಣ ಮುಚ್ಚಿ ಹಾಕಲು ಹಿರಿಯ ಅಧಿಕಾರಿಗಳು ಯತ್ನಿಸುತ್ತಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.

ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹುಲಿಯ ಮೂಳೆ ಮತ್ತು ಚರ್ಮಕ್ಕೆ ಭಾರೀ ಬೇಡಿಕೆಯಿದೆ. `ಜಾ ಟ್ರಾಪ್~ ಬಳಸಿ ಕಾಡುಪ್ರಾಣಿಗಳನ್ನು ಬೇಟೆಯಾಡುವ ವಿಧಾನ ಉತ್ತರ ಭಾರತದಲ್ಲಿ ಪ್ರಚಲಿತದಲ್ಲಿದೆ. ಮಧ್ಯಪ್ರದೇಶದ ಬುಡಕಟ್ಟು ಜನಾಂಗದವರು ಈ ವಿಧಾನ ಅನುಸರಿಸಿ ಬೇಟೆಯಾಡುವುದರಲ್ಲಿ ನಿಸ್ಸೀಮರು.

2002ರಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಮಧ್ಯಪ್ರದೇಶದ ಬೇಟೆಗಾರರಿಂದ `ಜಾ ಟ್ರಾಪ್~ ವಶಪಡಿಸಿಕೊಳ್ಳಲಾಗಿತ್ತು. ಇದು ದಕ್ಷಿಣ ಭಾರತದಲ್ಲಿ ಬೆಳಕಿಗೆ ಬಂದ ಮೊದಲ ಪ್ರಕರಣವಾಗಿತ್ತು. 2008ರಲ್ಲಿಯೂ ನಾಗರಹೊಳೆಯ ವೀರನಹೊಸಹಳ್ಳಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಇಬ್ಬರು ಬೇಟೆಗಾರರನ್ನು ಬಂಧಿಸಿ `ಜಾ ಟ್ರಾಪ್~ ವಶಪಡಿಸಿಕೊಂಡಿದ್ದರು.

`ಈಗ ಬಂಡೀಪುರದಲ್ಲೂ ಈ ಬೇಟೆಗಾರರು ಕಾಣಿಸಿಕೊಂಡಿರುವುದು ಆತಂಕ ಸೃಷ್ಟಿಸಿದೆ. `ಜಾ ಟ್ರಾಪ್~ನಿಂದ ಅಸು ನೀಗಿರುವ ಹುಲಿಯ ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದರೆ ಸತ್ಯಾಂಶ ಬಯಲಿಗೆ ಬರಲಿದೆ~ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವನ್ಯಜೀವಿ ತಜ್ಞರೊಬ್ಬರು ತಿಳಿಸಿದರು.

ಹತ್ಯೆ ನಡೆದಿಲ್ಲ: `ಕಲ್ಕೆರೆ ವಲಯದಲ್ಲಿ ಬಾಯಿಹುಣ್ಣಿನಿಂದ ಗಂಡು ಹುಲಿಯೊಂದು ಮೃತಪಟ್ಟಿತ್ತು. ಅದರ ಮರಣೋತ್ತರ ಪರೀಕ್ಷೆ ನಡೆಸಿ ಸುಟ್ಟು ಹಾಕಲಾಗಿದೆ. ಆದರೆ, ಅದೇ ವಲಯದಲ್ಲಿ `ಜಾ ಟ್ರಾಪ್~ ಬಳಸಿ ಹುಲಿಯ ಹತ್ಯೆ ನಡೆದಿಲ್ಲ~ ಎಂದು ಬಂಡೀಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ. ಹನುಮಂತಪ್ಪ ಅವರು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.

ಏನಿದು `ಜಾ ಟ್ರಾಪ್~...?
ಉತ್ತರ ಭಾರತದಲ್ಲಿ ಕಾಡು ಪ್ರಾಣಿ ಬೇಟೆಯಾಡಲು ಹೆಚ್ಚಾಗಿ ಬಳಸುವ ತಂತ್ರ. ಇದಕ್ಕೆ ವರ್ತುಲಾಕಾರದ ಒಂದು ಹಾಗೂ ಅರ್ಧಚಂದ್ರಾಕಾರದ ಎರಡು ಉಕ್ಕಿನದಂಟು ಪಟ್ಟಿಗಳಿರುವ ಕಬ್ಬಿಣದ ಉರುಳು ಬಳಸಲಾಗುತ್ತದೆ.

ಮೇಲಿರುವ ಅರ್ಧಚಂದ್ರಾಕಾರದ ಸರಳು ಅಗಲಿಸಿ ಚಿಕ್ಕ ಕೊಂಡಿಯ ಸಹಾಯದಿಂದ ಸೂಕ್ಷ್ಮವಾಗಿ ಹಿಡಿದಿಡಲಾಗಿರುತ್ತದೆ. ಈ ಕೊಂಡಿಯನ್ನು ಸಣ್ಣದೊಂದು ತಂತಿಯ ಸಹಾಯದಿಂದ ಕೆಳಭಾಗದಲ್ಲಿರುವ ವರ್ತುಲಾಕಾರದ ಸರಳಿಗೆ ಕಟ್ಟಲಾಗುತ್ತದೆ.

ಕಬ್ಬಿಣದ ಸರಪಳಿಯ ಸಹಾಯದಿಂದ ಇಂತಹ ನಾಲ್ಕಾರು ಉರುಳುಗಳನ್ನು ನೆಲಕ್ಕೆ ಗಟ್ಟಿಯಾಗಿ ಕಟ್ಟಲಾಗುತ್ತದೆ. ಈ ಉಪಕರಣವನ್ನು ಪ್ರಾಣಿಗಳು ಓಡಾಡುವ ಜಾಗದಲ್ಲಿ ಇಡಲಾಗುತ್ತದೆ. ಅದರ ಮೇಲೆ ಎಲೆ, ಕಡ್ಡಿಗಳನ್ನು ಮುಚ್ಚಲಾಗುತ್ತದೆ. ಯಾವುದೇ, ಕಾಡುಪ್ರಾಣಿ ಈ ಉರುಳಿನ ಮಧ್ಯದಲ್ಲಿ ಕಾಲಿಟ್ಟ ಕ್ಷಣದಲ್ಲೇ ಕಟ್ಟಿಕೊಂಡಿರುವ ಕೊಂಡಿ ಬಿಚ್ಚಿಕೊಳ್ಳುತ್ತದೆ.

ಜತೆಗೆ, ಮೇಲಿನ ಅರ್ಧ ಚಂದ್ರಾಕಾರದ ಸರಳುಗಳು ಪ್ರಾಣಿಯ ಕಾಲಿನ ಸಮೇತ ಬಲವಾಗಿ ಮುಚ್ಚಿಕೊಳ್ಳುತ್ತವೆ. ಉರುಳನ್ನು ಸರಳುಗಳಿಂದ ಬಿಗಿಯಾಗಿ ಕಟ್ಟಿರುವ ಪರಿಣಾಮ ಅದರಿಂದ ತಪ್ಪಿಸಿಕೊಂಡು ಸಿಕ್ಕಿಕೊಂಡಿರುವ ಪ್ರಾಣಿ ಮುಂದೆ ಹೋಗಲು ಸಾಧ್ಯವಾಗುವುದಿಲ್ಲ. ಆಗ ಬೇಟೆಗಾರರು ಬಂದೂಕು ಅಥವಾ ಆಯುಧಗಳಿಂದ ಹೊಡೆದು ಅದನ್ನು ಸಾಯಿಸುತ್ತಾರೆ. ಕೆಲವೊಮ್ಮೆ ಗಾಯಗೊಂಡ ಪ್ರಾಣಿ ನೋವು ಹಾಗೂ ಹಸಿವಿನಿಂದಲೂ ಅಸು ನೀಗುವ ಸಾಧ್ಯತೆ ಉಂಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT