ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ ವನ್ಯಧಾಮದ ಬಳಿ ರೆಸಾರ್ಟ್ - ವಿರೋಧ

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಂಡೀಪುರ ವನ್ಯಧಾಮದ ಬಳಿ ರೆಸಾರ್ಟ್ ಒಂದು ತಲೆ ಎತ್ತುವ ಹವಣಿಕೆಯಲ್ಲಿದ್ದು ಪರಿಸರ ಮತ್ತು ವನ್ಯಜೀವಿ ಪ್ರಿಯರಲ್ಲಿ ಆತಂಕ ಮೂಡಿಸಿದೆ. ವನ್ಯಧಾಮದಿಂದ ಕೇವಲ 700 ಮೀಟರ್ ದೂರದಲ್ಲಿ ಈ ರೆಸಾರ್ಟ್ ನಿರ್ಮಾಣವಾಗಲಿದ್ದು, ಅರಣ್ಯ ಕಾನೂನನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಬಂಡೀಪುರದಿಂದ ಮಧುಮಲೈ ಮಾರ್ಗದಲ್ಲಿರುವ ಮಂಗಳ ಎಂಬ ಹಳ್ಳಿಯಲ್ಲಿ 19.13 ಎಕರೆ ಪ್ರದೇಶದಲ್ಲಿ ಈ ರೆಸಾರ್ಟ್ ನಿರ್ಮಾಣವಾಗಲಿದ್ದು ಇದಕ್ಕೆ ‘ಎನ್‌ಎಸ್‌ಬಿ ವೈಲ್ಡ್ ಹಂಟ್’ ಎಂದು ಹೆಸರಿಡಲಾಗಿದೆ. ಇದು ಸೂಕ್ಷ್ಮ ಪರಿಸರ ಹೊಂದಿರುವ ಪ್ರದೇಶಲ್ಲೇ ಆರಂಭವಾಗಲಿದೆ. ಇದರಿಂದ ಆನೆ, ಹುಲಿ ಮತ್ತಿತರ ಪ್ರಾಣಿಗಳ ಮುಕ್ತ ಸಂಚಾರಕ್ಕೆ ತೊಂದರೆಯಾಗಲಿದೆ ಎಂದು ಹೇಳಲಾಗುತ್ತಿದೆ.

50 ಮನೆಗಳು ಮತ್ತು 200 ಪುಟ್ಟ ಮನೆಗಳು ಈ ರೆಸಾರ್ಟ್‌ನಲ್ಲಿ ನಿರ್ಮಾಣವಾಗಲಿದ್ದು, ಇದು ಪರಿಸರ ಸಂರಕ್ಷಣಾ ಕಾಯ್ದೆ 1986ರ ಉಲ್ಲಂಘನೆ ಆಗಲಿದೆ ಎಂದು ತಿಳಿದುಬಂದಿದೆ.

ಈ ರೆಸಾರ್ಟ್ ತಲೆ ಎತ್ತಲಿರುವ ಜಾಗ ಪ್ರಾಣಿಗಳು ವಲಸೆ ಹೋಗಲು ಬಳಸುತ್ತಿರುವ ಮಾರ್ಗದ ಮಧ್ಯದಲ್ಲೇ ಇದೆ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ. ಇಂಥ ಪ್ರದೇಶಗಳಲ್ಲಿ ಯಾವುದೇ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳುವಾಗ ರಾಜ್ಯ ವನ್ಯಜೀವಿ ಮಂಡಳಿ, ರಾಷ್ಟ್ರೀಯ ವನ್ಯಜೀವಿ ಮಂಡಳಿ, ಪರಿಸರ ಮತ್ತು ಅರಣ್ಯ ಸಚಿವಾಲಯದ ಅನುಮತಿ ಪಡೆಯಬೇಕು. ಆದರೆ ಈ ಪ್ರಕರಣದಲ್ಲಿ ಪುಣೆ ಮೂಲದ ಕಂಪೆನಿಯು ಯಾವುದೇ ಅಗತ್ಯ ಅನುಮತಿ ಪಡೆಯದೆ ರೆಸಾರ್ಟ್ ನಿರ್ಮಾಣ ಕಾರ್ಯ ಆರಂಭಿಸಿದೆ.

ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ಸಿಂಗ್ ಅವರು ರೆಸಾರ್ಟ್ ತಲೆ ಎತ್ತಲಿರುವ ಪ್ರದೇಶ ವನ್ಯಮೃಗಗಳು ಸಂಚಾರಕ್ಕೆ ಬಳಸುವ ಮಾರ್ಗದಲ್ಲೇ ಇದೆ ಎಂಬುದನ್ನು ಖಚಿತಪಡಿಸಿದ್ದಾರೆ. ‘ಈ ಪ್ರದೇಶ ಮಾನವ ಮತ್ತು ವನ್ಯ ಜೀವಿಗಳ ನಡುವಿನ ಸಂಘರ್ಷಕ್ಕೆ ಹೆಸರಾದ ಪ್ರದೇಶ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT