ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡುಕೋರರ ತೆಕ್ಕೆಗೆ ಸರಿಯುತ್ತಿರುವ ಗಡಾಫಿ ನೆಲೆಗಳು

Last Updated 29 ಮಾರ್ಚ್ 2011, 19:00 IST
ಅಕ್ಷರ ಗಾತ್ರ

ಟ್ರಿಪೋಲಿ/ ವಾಷಿಂಗ್ಟನ್ (ಪಿಟಿಐ, ಎಎಫ್‌ಪಿ): ಅಧ್ಯಕ್ಷ ಗಡಾಫಿ ಅವರ ವಿರುದ್ಧ ಬಂಡೆದ್ದಿರುವ ನಾಗರಿಕರು ಮಂಗಳವಾರ ಸಿರ್ಟೆ ನಗರವನ್ನು ಸಮೀಪಿಸಿದ್ದಾರೆ. ಇದರಿಂದಾಗಿ ಅಲ್ಲಿನ ನಾಗರಿಕರು ಮತ್ತು ಸರ್ಕಾರದ ವಿರುದ್ಧದ ಸಂಘರ್ಷ ಈಗ ಅಂತಿಮ ಹಣಾಹಣಿ ತಲುಪಿದಂತಾಗಿದೆ.

ಸಿರ್ಟೆ ನಗರಕ್ಕೆ ಹೊಂದಿಕೊಂಡಿರುವ ಕರಾವಳಿ ನಗರಗಳಾದ ಟ್ರಿಪೋಲಿ ಮತ್ತು ಬೆಂಗಜಿಗಳು ಕೂಡಾ ನಿಧಾನವಾಗಿ ಬಂಡುಕೋರರ ಹಿಡಿತಕ್ಕೆ ಸರಿಯುವ ಸಾಧ್ಯತೆಗಳು ದಟ್ಟವಾಗಿವೆ. ಗಡಾಫಿ ಹಿಡಿತದಲ್ಲಿರುವ ಸಿರ್ಟೆ ಮೇಲೆ ನ್ಯಾಟೊ ಪಡೆಗಳು ಸೋಮವಾರ ರಾತ್ರಿಯಿಡೀ ವಾಯುದಾಳಿ ನಡೆಸಿದವು. ಅಂತೆಯೇ ನೆರೆಯ ಅಜ್ದಬಿಯಾ, ಬ್ರೆಗಾ ಮತ್ತು ರಾಸ್ ಲನೂಫ್ ನಗರಗಳನ್ನೂ ಈಗ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಅವು ಯಶಸ್ವಿಯಾಗಿವೆ. ಈ ನಗರಗಳಲ್ಲಿ ಬಂಡುಕೋರರಿಗೆ ಗಡಾಫಿ ಬೆಂಬಲಿಗರಿಂದ ಯಾವುದೇ ಪ್ರತಿರೋಧ ಎದುರಾಗಿಲ್ಲ ಎಂದು ಹೇಳಲಾಗಿದೆ.

ಮಿಸ್ರತಾ ನಗರದಲ್ಲಿ ಗಡಾಫಿ ಬೆಂಬಲಿಗರು ಮತ್ತು ಬಂಡುಕೋರರ ನಡುವಿನ ಬೀದಿ ಕಾಳಗ ಮಂಗಳವಾರವೂ ಮುಂದುವರಿದಿತ್ತು. ನಗರದ ಮಧ್ಯ ಭಾಗದಲ್ಲಿ ಉಭಯ ಬಣಗಳೂ ಭಾರಿ ಶಸ್ತ್ರಾಸ್ತ್ರ ಸಜ್ಜಿತವಾಗಿ ಪರಸ್ಪರ ಕಾಳಗದಲ್ಲಿ ತೊಡಗಿದ್ದವು. ಟ್ರಿಪೋಲಿ ನಗರದ ಮೇಲೆ ಫ್ರಾನ್ಸ್ ವಾಯುಪಡೆಯ 20 ಜೆಟ್ ಯುದ್ಧ ವಿಮಾನಗಳು ಭಾರಿ ಪ್ರಮಾಣದ ವಾಯು ದಾಳಿ ಮತ್ತು ಬೇಹುಗಾರಿಕೆ ಗಸ್ತು ನಡೆಸಿವೆ.

ಲಂಡನ್‌ನಲ್ಲಿ ಚರ್ಚೆ 
35 ದೇಶಗಳ ಪ್ರತಿನಿಧಿಗಳ ಅಂತರ ರಾಷ್ಟ್ರೀಯ ಮಟ್ಟದ ಸಭೆಯೊಂದು ಬುಧವಾರ ಇಲ್ಲಿ ಆರಂಭವಾಗಲಿದ್ದು, ಲಿಬಿಯಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಕುರಿತಂತೆ ಮಹತ್ವದ ಚರ್ಚೆ ನಡೆಯಲಿದೆ. ಸಭೆಗೆ ಅರಬ್ ಒಕ್ಕೂಟದ ಪ್ರತಿನಿಧಿಗಳನ್ನೂ ಆಹ್ವಾನಿಸಲಾಗಿದೆ.

ನ್ಯಾಟೊ ಹಿಡಿತಕ್ಕೆ
ಬ್ರುಸೆಲ್ಸ್ (ಎಎಫ್‌ಪಿ):
ಲಿಬಿಯಾ ಮೇಲೆ ನ್ಯಾಟೊ ಪಡೆಗಳು ಸಂಪೂರ್ಣ ಹಿಡಿತ ಸಾಧಿಸಲು ಇನ್ನೆರಡು ದಿನಗಳು ಸಾಕು ಎಂದು ನ್ಯಾಟೊದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಟೊ ವಕ್ತಾರ ಒವಾನ ಲುಂಗೆಸ್ಕು, ಮಾರ್ಚ್ 19ರಿಂದ ಅಮೆರಿಕ ನೇತೃತ್ವದಲ್ಲಿ ನಡೆಯುತ್ತಿರುವ ದಾಳಿಯಲ್ಲಿ ಲಿಬಿಯಾದ ನಾಗರಿಕರನ್ನು ರಕ್ಷಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಷ್ಯ ಅಸಮಾಧಾನ
ಮಾಸ್ಕೊ (ಪಿಟಿಐ):
ಲಿಬಿಯಾದ ಮೇಲೆ ನ್ಯಾಟೊ ಪಡೆಗಳು ನಡೆಸುತ್ತಿರುವ ದಾಳಿಯನ್ನು ರಷ್ಯ ತೀವ್ರವಾಗಿ ಖಂಡಿಸಿದೆ.

ಮುಅಮ್ಮರ್ ಗಡಾಫಿ ಅವರ ವಿರುದ್ಧ ಬಂಡೆದ್ದಿರುವ ನಾಗರಿಕರಿಗೆ ಪಶ್ಚಿಮದ ದೇಶಗಳು ಸಹಾಯ ಹಸ್ತ ಚಾಚುವ ಮೂಲಕ ಅಲ್ಲಿನ ಆಂತರಿಕ ವಿಷಯಗಳಲ್ಲಿ ಮೂಗು ತೂರಿಸಿವೆ ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿವೆ ಎಂದು ಅದು ಪುನರುಚ್ಚರಿಸಿದೆ. ‘ಯಾವುದೇ ಒಂದು ದೇಶದ ಆಂತರಿಕ ಸಂಘರ್ಷದಲ್ಲಿ ಅನ್ಯ ದೇಶಗಳು ಮೂಗು ತೂರಿಸಬಾರದೆಂಬುದು ವಿಶ್ವಸಂಸ್ಥೆಯ ನಿಯಮ. ಆದರೆ ಈಗ ಲಿಬಿಯಾದ ಮೇಲೆ ನಡೆಯುತ್ತಿರುವ ಪಶ್ಚಿಮ ರಾಷ್ಟ್ರಗಳ ದಾಳಿಯನ್ನು ನೋಡಿದರೆ ಈ ನಿಯಮ ಲೆಕ್ಕಕ್ಕೇ ಇಲ್ಲದಂತಾಗಿದೆ’ ಎಂದು ರಷ್ಯದ ವಿದೇಶಾಂಗ ಸಚಿವ ಸೆರ್ಗಿಯಾ ಲವ್ರೊವ್ ಮತ್ತೆ ಟೀಕಿಸಿದ್ದಾರೆ.

ಕದನ ವಿರಾಮ
ವಿಶ್ವಸಂಸ್ಥೆ (ಪಿಟಿಐ):
ಲಿಬಿಯಾದಲ್ಲಿ ಸದ್ಯಕ್ಕೆ ಕದನ ವಿರಾಮದ ಯಾವುದೇ ಲಕ್ಷಣಗಳಿಲ್ಲ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಬಾನ್ ಕಿ ಮೂನ್ ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ಲಿಬಿಯಾದಲ್ಲಿ ಮಾನವ ಹಕ್ಕುಗಳನ್ನು ಸಂರಕ್ಷಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ ಎಂದು ಭರವಸೆ ನೀಡಿದ್ದಾರೆ.

ದಾಳಿ: ಒಬಾಮ ಸಮರ್ಥನೆ
ವಾಷಿಂಗ್ಟನ್ (ಪಿಟಿಐ):
ಲಿಬಿಯಾ ಮೇಲಿನ ಸೇನಾ ದಾಳಿಯನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಲಿಬಿಯಾ ಕುರಿತಂತೆ ಅಮೆರಿಕದ ನೀತಿಗಳ ಸಂಬಂಧ ಸೋಮವಾರ ರಾಷ್ಟ್ರವನ್ನುದ್ದೇಶಿಸಿ ಇದೇ ಮೊದಲ ಬಾರಿಗೆ ಮಾತನಾಡಿದ ಅವರು, ಉತ್ತರ ಆಫ್ರಿಕಾದಲ್ಲಿನ ನಾಗರಿಕರ ಹತ್ಯೆಯನ್ನು ತಡೆಯಲೆಂದೇ ಅಮೆರಿಕ ಅಲ್ಲಿ ಮಧ್ಯ ಪ್ರವೇಶಿಸಬೇಕಾದ ಅನಿವಾರ್ಯ ಸ್ಥಿತಿ ಉಂಟಾಯಿತು ಎಂದು ಹೇಳಿದ್ದಾರೆ.

ಸೇನಾ ದಾಳಿಯ ಹೊರತಾಗಿಯೇ ನಮ್ಮ ಕಾರ್ಯಾಚರಣೆ ನಡೆಸಲು ಬಹುವಾಗಿ ಚಿಂತಿಸಲಾಯಿತು. ಆದರೂ ಈಗಿನ ನಮ್ಮ ಕಾರ್ಯಾಚರಣೆಯನ್ನು ವಿಶಾಲ ದೃಷ್ಟಿಕೋನದಿಂದ ಕೈಗೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT