ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೆಯಿಂದ ಬಯಲಿಗೆ...

Last Updated 10 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನಾವು ಇಲ್ಲಿ ನಾಟಕದ ಪಾಠಗಳನ್ನಷ್ಟೇ ಕಲಿಯುವುದಿಲ್ಲ. ಆದಿಮದ ನೆಲವನ್ನು ಪ್ರತಿ ಹುಣ್ಣಿಮೆ ಹಾಡಿಗೂ ಸಗಣಿಯಿಂದ ಸಾರಿಸುತ್ತೇವೆ. ಅಡುಗೆಗೆಂದು ಬೆಟ್ಟ-ಗುಡ್ಡ ಅಲೆದು ಸೌದೆ ಒಡೆದು ತರುತ್ತೇವೆ. ಅಡುಗೆ ಮಾಡುತ್ತೇವೆ. ಕಸ ಹೊಡೆಯುತ್ತೇವೆ. ನಮ್ಮ ಎಲ್ಲ ಕೆಲಸಗಳನ್ನೂ ನಾವೇ ಮಾಡಿಕೊಳ್ಳುತ್ತೇವೆ. ಕಚೇರಿ ನಿರ್ವಹಿಸುತ್ತೇವೆ. ಬಂದವರನ್ನು ಉಪಚರಿಸುತ್ತೇವೆ. ಜಗಳವಾಡುತ್ತೇವೆ. ಮತ್ತೆ ಒಂದಾಗುತ್ತೇವೆ.
ನಮಗೆ ಇದು ಮನೆಯೂ ಹೌದು. ನಾಟಕ ಶಾಲೆಯೂ ಹೌದು. ಇದು ನಮ್ಮ ಮನೆಯಾಗಿರುವುದರಿಂದ ನಮ್ಮದೇ ಜವಾಬ್ದಾರಿ. ನಮ್ಮದೇ ಶಾಲೆಯಾಗಿರುವುದರಿಂದ ನಮ್ಮದೇ ದಾರಿಯಲ್ಲಿ ನಡೆದಿದೆ ಕಲಿಕೆ.

-ಕೋಲಾರದ ತೇರಳ್ಳಿ ಬೆಟ್ಟದ ಮೇಲಿರುವ ಆದಿಮ ಲಿವಿಂಗ್ ಸ್ಕೂಲ್‌ನ ಯುವಕ-ಯುವತಿಯರು ಭಾವುಕರಾಗಿ ಹೇಳುವ ಮಾತುಗಳಿವು.
ಜೀವನವೊಂದು ನಾಟಕ ರಂಗ ಎಂಬ ಶೇಕ್ಸ್‌ಪಿಯರ್‌ನ ಮಾತನ್ನು ಅಕ್ಷರಶಃ ಅವರು ಬದುಕುತ್ತಿದ್ದಾರೆ.

ಇಲ್ಲಿ ರಂಗಭೂಮಿಯ ಪಠ್ಯಕ್ರಮದ ಯಾವುದೇ `ಶೈಕ್ಷಣಿಕ ಶಿಸ್ತು' ಇಲ್ಲ. ಅಲ್ಲಿ ಸುಸಜ್ಜಿತ ತರಗತಿಗಳಿಲ್ಲ. ಟೈಂ ಟೇಬಲ್ ಇಲ್ಲ. ಸಮವಸ್ತ್ರಗಳಿಲ್ಲ. ಫೀಸಿನ ಗೊಡವೆ ಇಲ್ಲ. ಪಠ್ಯಕ್ರಮವಂತೂ ಇಲ್ಲವೇ ಇಲ್ಲ. ಆದರೆ ರಂಗಭೂಮಿಯೊಳಗೆ ಬದುಕಿದೆ. ಬದುಕಿನಲ್ಲಿ ರಂಗಭೂಮಿ ಇದೆ ಎಂಬ ಒಂದೇ ವಾಕ್ಯದ ಪಠ್ಯ ಹಲವು ರೂಪಗಳಲ್ಲಿ ಅವರನ್ನು ಆವರಿಸಿದೆ. ಆ ಬಗ್ಗೆ ಅವರಲ್ಲಿ ಸ್ಪಷ್ಟ ನಿಲುವೂ ಇದೆ.

ಇವರಲ್ಲಿ ಬಹುತೇಕರು, ರಾಜ್ಯದ ಹಲವು ಜಿಲ್ಲೆಗಳ ಕುಗ್ರಾಮಗಳಲ್ಲಿನ ತಳಸಮುದಾಯಗಳ, ಬಡತನವನ್ನು ಕಂಡು ಉಂಡ ಕುಟುಂಬಗಳ ಮಕ್ಕಳು. ಅರ್ಧಕ್ಕೇ ಶಾಲೆ, ಕಾಲೇಜು ಬಿಟ್ಟವರು. `ಅದೇನು ನಾಟಕ ಆಡ್ತಿಯೋ' ಎಂಬ ಮನೆಯವರ ಮೂದಲಿಕೆ, ವಿರೋಧದ ನಡುವೆ ಕೋಲಾರದ ಆದಿಮದ ಬಂಡೆಗಳ ನಡುವಿನ ಚಿಗುರುಗಳ ಜೊತೆಗೆ ರಂಗಭೂಮಿಯಲ್ಲಿ ಚಿಗುರುತ್ತಿರುವವರು. ಪ್ರತಿಷ್ಠಿತ ಕುಟುಂಬದ ಯಾವುದೇ ಹಿನ್ನೆಲೆ ಇಲ್ಲದ ಇವರೆಲ್ಲರಿಗೂ ಆದಿಮ ಲಿವಿಂಗ್ ಸ್ಕೂಲ್ ವಾಸದ ಮನೆಯೂ ಹೌದು. ನಾಟಕ ಪಾಠ ಕಲಿಸುವ ಶಾಲೆಯೂ ಹೌದು!

ಚಿಂತಾಮಣಿ ತಾಲ್ಲೂಕಿನ ನಾರಮಾಕನಹಳ್ಳಿಯ ಚಲಪತಿ, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಿರಸೂರಿನ ಮಹಾಂತೇಶ್, ನೆಲಮಂಗಲದ ಕಾಚನಹಳ್ಳಿಯ ಕೆ.ಪಿ.ಲಕ್ಷ್ಮಣ್, ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಒಳಬಳ್ಳಾರಿಯ ಚಿದಂಬರ ಪೂಜಾರಿ, ಆದಿಮದ ಪಕ್ಕದ ಶಿವಗಂಗೆ ಬೆಟ್ಟದ ಮಾದೇವಿ, ರಾಯಚೂರಿನಿಂದ 5 ಕಿಮೀ ದೂರದ ಆಶಾಪುರ್ ಗ್ರಾಮದ ಡಿಂಗ್ರಿ ನರೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಕನಸವಾಡಿ ಗ್ರಾಮದ ಎಂ.ಲತಾ, ಹಾಸನದ ಸಕಲೇಶಪುರ ತಾಲ್ಲೂಕಿನ ಬಾಳುಪೇಟೆಯ ನೆವಿಲ್, ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಬ್ಯಾಲಾಳು ಗ್ರಾಮದ ದುರ್ಗಮ್ಮ, ತೇರಳ್ಳಿಯ ಬಿ.ಸಿ.ಅರುಣ, ಬಂಗಾರಪೇಟೆ ತಾಲ್ಲೂಕಿನ ಬೇತಮಂಗಲದ ಯುವಕ ಜಿ.ಎಂ.ನಾರಾಯಣಸ್ವಾಮಿ, ಕೋಲಾರ ತಾಲ್ಲೂಕಿನ ಕೋಟಿಗಾನಹಳ್ಳಿಯ ಅಂಜಲಿ, ಆರ್.ದುರ್ಗಾ, ಆರ್. ಗಂಗಾಧರ, ಆರ್.ಗೋಪಿ, ಮೋಹಿತ್, ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲ್ಲೂಕುಕಿನ ಸಾಮಂದಿಪುರದ ಬಿ.ಶೃತಿ.....

ಇವರೆಲ್ಲ 17-22ರ ಹರೆಯದ ಮಹಾನ್ ಕನಸುಗಾರರು. ಹಳ್ಳಿಗಳಲ್ಲಿ ಹೊಲದ ಕೊಯ್ಲಾದ ನಂತರ ಇರುವೆ, ಹಕ್ಕಿ, ಪರದೇಶಿಗಳಿಗೆ ಬಿಟ್ಟುಬಿಡುವ ಪರಿಗಿಲಿ ತೆನೆಗಳಂತೆ. ಯಾರ ಕಣ್ಣಿಗೂ ಬೀಳದೆ, ಯಾವ ಅವಕಾಶಗಳೂ ಇಲ್ಲದೆ ನಿರ್ಲಕ್ಷ್ಯಕ್ಕೆ ಈಡಾಗಿದ್ದವರು. ಈಗ ಅವರೇ ಹೊಸ ಬಿತ್ತನೆ ಬೀಜಗಳಾಗಿದ್ದಾರೆ. ಹೊಸ ಬೆಳೆಯ ಹರಿಕಾರರೂ ಆಗಿದ್ದಾರೆ.

ಕೂಲಿ, ಲಾರಿ ಡ್ರೈವರ್, ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿ ಜೀವನ ನಡೆಸುವ ಮನೆಮಂದಿಯ ಮಾತು ಮೀರಿ, ಶಾಲೆ-ಕಾಲೇಜು ಚೌಕಟ್ಟುಗಳನ್ನು ಮೀರಿ, ಉದ್ಯೋಗ-ಸಂಬಳ ತರುವ ಸುಖೀ ಜೀವನದ ಕನಸುಗಳನ್ನು ಪಕ್ಕಕ್ಕಿಟ್ಟು `ರಂಗಭೂಮಿಯಲ್ಲೇ ನಮ್ಮ ಬದುಕಿದೆ' ಎಂದು ನಂಬಿ ನಡೆದವರು.  

ಅವರ ಬಡತನ ಮತ್ತು ಹುಡುಕಾಟದ ಹಂಬಲವೇ ಅವರಲ್ಲಿ ಅದಮ್ಯ ಉತ್ಸಾಹವನ್ನು ಹುಟ್ಟುಹಾಕಿದೆ. ಆದಿಮ ಲಿವಿಂಗ್ ಸ್ಕೂಲ್‌ನ ಸಹಪಾಠಿಗಳ ಜೀವನವೇ ಒಂದು ನಾಟಕದಂತಿದೆ.

ಈ ನಾಟಕದ ನಿರ್ದೇಶಕ ಸ್ಥಾನದಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಇದ್ದಾರೆ. ಇವರೆಲ್ಲರಿಗೂ ರಾಮಯ್ಯ ಎಂದರೆ ನಾಟಕದಂತೆಯೇ ಒಂದು ಕಾಣಿಸದ, ಕೇಳಿಸದ, ಅರ್ಥವಾಗದ ಪರಮಾಣು. ಅಷ್ಟೇ ಅಲ್ಲ. ಸದಾ ಸೆಳೆಯುವ, ಕಂಡರೂ ಅರ್ಥವಾಗದ ಕೌತುಕದ ಬೃಹತ್ ಜಗತ್ತು. ಅಲ್ಲಿ ಬೋಧನೆ, ಸಿಟ್ಟು, ಬೈಗುಳ, ಪ್ರೀತಿ, ವಾತ್ಸಲ್ಯ ಕಣ್ಣೀರು ಎಲ್ಲವೂ ಇದೆ.

ನಾಟಕ ಆಡುವುದನ್ನು ಕಲಿಯವುದಷ್ಟೇ ಇವರ ಕೆಲಸವಾಗಿಲ್ಲ. ಆದಿಮ ಲಿವಿಂಗ್ ಟೈಂಸ್ ಪತ್ರಿಕೆಯ ಚಂದಾದಾರರಿಗೆ ಪತ್ರ ಬರೆಯುವುದು, ಆದಿಮದ ಗ್ರಂಥಾಲಯ ನಿರ್ವಹಣೆ, ಕಚೇರಿ ನಿರ್ವಹಣೆ, ಕಡತಗಳ ನಿರ್ವಹಣೆ, ಸ್ಟೇಷನರಿ ನಿರ್ವಹಣೆ, ಥಿಯೇಟರ್ ಚಟುವಟಿಕೆಯಷ್ಟೇ ಇಂಥ ಅನೇಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ.

ಅತೃಪ್ತಿಯ ಬೆನ್ನೇರಿ....
`ನಿಮಗೆ ನಾಟಕ ಆಡಲು ಬರೋದಿಲ್ಲ. ನೀವು ಚೆನ್ನಾಗಿ ನಾಟಕ ಮಾಡಲಿಲ್ಲ' ಎಂಬ ರಾಮಯ್ಯನವರ ಅತೃಪ್ತಿ, ಬೈಗುಳಗಳನ್ನೇ ಸುಪ್ರಭಾತವೆಂದುಕೊಂಡಿರುವ ಯುವಕ-ಯುವತಿಯರು ಬರಪೀಡಿತ ಕೋಲಾರದಿಂದ ಕೊಲಂಬಿಯಾವರೆಗೆ ಒಂದು ಸುತ್ತು ಹೋಗಿ ಬಂದಿದ್ದಾರೆ ಎಂಬುದು ವಿಶೇಷ. ಎರಡನೇ ಸುತ್ತಿನಲ್ಲಿ ಕೋಲಾರದಿಂದ ದೆಹಲಿ ಪ್ರವಾಸವೂ ಆಗಿದೆ. ರಂಗಭೂಮಿ ಕ್ಷೇತ್ರದಲ್ಲಿ ಕೋಲಾರ ಮತ್ತು ಆದಿಮ ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಗಮನ ಸೆಳೆಯುವಂತಾಗಿದ್ದರೆ ಏಕಲವ್ಯನೇ ಕಾರಣ!

2011ರಲ್ಲಿ ಹಿಂದಿಯ ಕುಲದೀಪ್ ಕುನಾಲ್ ಅವರ `ಏಕಲವ್ಯ ಉವಾಚ್' ನಾಟಕವನ್ನು ಕನ್ನಡಕ್ಕೆ ಅನುವಾದಿಸಿ ಸತ್ಯವ್ರತರಾವತ್ ಅವರ ನಿರ್ದೇಶನದಲ್ಲಿ ಹೊರತರಲು ನಿರ್ಧರಿಸಿದಾಗ, ಏಕಲವ್ಯ ಏಕಕಾಲಕ್ಕೆ ತಮ್ಮನ್ನೂ, ಆದಿಮವನ್ನೂ ಈ ಪರಿಯಲ್ಲಿ ಆವರಿಸಿಕೊಳ್ಳುತ್ತಾನೆ ಎಂದು ರಾಮಯ್ಯನವರಿಗಾಗಲೀ, ಈ ಯುವ ಕಲಾವಿದರಿಗಾಗಲೀ ಗೊತ್ತಿರಲಿಲ್ಲ.

ನಡೆದ ಹಾದಿ....
ಈಗ, ಈ ಕಲಾವಿದರ ತಂಡದಲ್ಲಿ `ಏಕಲವ್ಯ ಉವಾಚ' ನಾಟಕವನ್ನು 2011ರಲ್ಲಿ ಕೊಲಂಬಿಯಾದಲ್ಲಿ ನಡೆದ ಅಂತರರಾಷ್ಟ್ರೀಯ ನಾಟಕೋತ್ಸವದ ಪ್ರಯುಕ್ತ ಬೊಗಾಟೋ ಮತ್ತು ಪಾಸ್ಟೋದಲ್ಲಿ ಅಭಿನಯಿಸಿ ಬಂದವರಿದ್ದಾರೆ. ಬಿಹಾರದ ಬೆಗು ಸೆರಾಯ್ ಅಂತರರಾಷ್ಟ್ರೀಯ ನಾಟಕೋತ್ಸವದಲ್ಲೂ ಪ್ರದರ್ಶಿಸಿದ್ದಾರೆ. ಅದೇ ನಾಟಕದ ಪರಿಷ್ಕೃತ ರೂಪ `ಮತ್ತೆ ಏಕಲವ್ಯ' ನಾಟಕವನ್ನು ದೆಹಲಿವರೆಗೂ ತೋರಿಸಿ ಪ್ರಶಸ್ತಿಗಳನ್ನು ಬಾಚಿಕೊಂಡು ಬಂದಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿಯಬೇಕು ಎಂಬ ಆಸೆ ಈಡೇರುವ ಮುನ್ನವೇ ಅದೇ ಶಾಲೆಯಲ್ಲಿ ನಾಟಕ ಪ್ರದರ್ಶಿಸಿ ಬಂದಿರುವುದು ಅವರ ಹೆಗ್ಗಳಿಕೆಯೂ ಹೌದು.

ಬಸ್ ಸೌಕರ್ಯ ಹೆಚ್ಚಿಗಿಲ್ಲದ ಕೋಟಿಗಾನಹಳ್ಳಿಯ ಅಂಜಲಿ ಆದಿಮದಲ್ಲಿ ಐದು ವರ್ಷದಿಂದ ನೆಲೆಸಿರುವ ಕಲಾವಿದೆ. ರಾಮಯ್ಯನವರ ಕಾಗೆಕಣ್ಣು ಇರುವೆ ಬಲ ನಾಟಕದ ಮೂಲಕ ನಟನೆಗೆ ಇಳಿದ ಆಕೆಗೆ ಕೊಲಂಬಿಯಾ ಪ್ರವಾಸ ಹೊಸ ಜಗತ್ತನ್ನು ತೋರಿಸಿತು.

ಆದಿಮ ಇಲ್ಲದೇ ಹೋಗಿದ್ದರೆ ಅಷ್ಟು ದೂರ ಹೋಗಲು ಸಾಧ್ಯವೇ ಇರಲಿಲ್ಲ. ಹಳ್ಳಿಯಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಾ ಕೂಲಿ ಕೆಲಸ ಮಾಡ್ತಿದ್ದೆ. ಮನೆ ಕೆಲಸ, ಹೊರಗೆ ಕೆಲಸ ಅಷ್ಟೇ ಗೊತ್ತಿತ್ತು. ಈಗ ಸನ್ನಿವೇಶ ಹಾಗಿಲ್ಲ. ಸಂಸ್ಥೆಯ ನಿರ್ವಹಣೆ ಕಲಿತಿರುವೆ. ಹುಣ್ಣಿಮೆ ಹಾಡು ನಿರ್ವಹಣೆ ಹೇಗೆಂಬುದೇ ಪ್ರಶ್ನೆಯಾಗಿತ್ತು. ಈಗ ಯಾರು ಇರಲಿ, ಇಲ್ಲದಿರಲಿ ನಾನು ಕೆಲಸ ಮಾಡಬಲ್ಲೆ ಎಂಬ ಭರವಸೆ ಇದೆ. ಪ್ರತಿಯೊಂದನ್ನೂ ಆದಿಮ ಕಲಿಸಿದೆ.

ಮಗಳಿಗೆ ಮದುವೆ ಮಾಡಿಬಿಟ್ಟರೆ ಸಾಕು ಎನ್ನುತ್ತಿದ್ದ ತಂದೆತಾಯಿಯನ್ನು ಬೈದು ರಾಮಯ್ಯ ಆದಿಮಕ್ಕೆ ಕರೆತಂದರು. ಇದು ಅಂಜಲಿ ಸ್ಮರಣೆ.

ಈ ಯುವಕ-ಯುವತಿಯರನ್ನು ಮಾತಿಗೆಳೆದರೆ ಅಂಥವೇ ಸ್ಮರಣೆಗಳು ದೃಶ್ಯಗಳಾಗಿ ಮೂಡುತ್ತವೆ. ಕಾಗೆಕಣ್ಣು ಇರುವೆ ಬಲ, ನೀರ ದೀಪಗಳ ದಿಬ್ಬಣ, ನಾಯಿತಿಪ್ಪ, ಏಕಲವ್ಯ ಉವಾಚ, ಮತ್ತೆ ಏಕಲವ್ಯ, ಲೆಟ್ ಪಾಲಿಥ್ರೈವ್... ನಾಟಕಗಳು ಬರೀ ನಾಟಕಗಳಾಗಿಲ್ಲ. ಅವು ಅವರಿಗೆ ಪ್ರಮುಖ ಪಠ್ಯಗಳೂ ಆಗಿವೆ. ಅದೇ ರೀತಿ ರಾಮಯ್ಯ ಇವರಿಗೆಲ್ಲ ಮೊದಲು ಬರೀ ಹೆಸರು. ಆರಂಭದಲ್ಲಿ ಸಿಟ್ಟಿನ ಪ್ರತಿರೂಪ. ಈಗ ರಂಗಪಠ್ಯವೇ ಇಲ್ಲದೆ ನಾಟಕ ಹೇಳಿಕೊಡುವ ಅನನ್ಯ ಮೇಷ್ಟ್ರು. ಎಲ್ಲ ತಿಳಿವಳಿಕೆಗಳನ್ನೂ ತಲೆಕೆಳಗು ಮಾಡುವ ವ್ಯಕ್ತಿತ್ವ ವಿಕಸನ ತರಬೇತುದಾರ!

ನೀನಾಸಂನಲ್ಲಿ ಕಲಿತು ಬಂದಿರುವ ನೆಲಮಂಗಲದ ಲಕ್ಷ್ಮಣ್, ರಾಯಚೂರಿನ ಮಹಾಂತೇಶ್‌ಗೆ ಆದಿಮ ರಂಗಪ್ರಜ್ಞೆಯನ್ನು ಹೊಸ ಗಗನಕ್ಕೆ ವಿಸ್ತರಿಸಿದೆ. ಕಲಿಕೆಯ ಶಿಸ್ತಿನ ಸಾಂಪ್ರದಾಯಿಕ ನಿಲುವುಗಳ ಮಿತಿಯನ್ನು ಅರಿಯುವಂತೆ ಮಾಡಿದೆ. ನಾಟಕ ಅಭ್ಯಾಸ ಮಾಡುವುದೆಂದರೆ ಜಗತ್ತಿನಿಂದ ದೂರ ಸರಿದು ಮಾಡುವ ತಾಲೀಮು ಎಂದು ನಂಬಿದ್ದವರಿಗೆ ಅದು ಜೀವನದ ಜೊತೆಜೊತೆಗೇ ಸಾಗಬೇಕಾದ ಕಲಿಕೆ ಎಂದು ಅರ್ಥವಾಗಿದೆ.

ಇವರೆಲ್ಲರಿಗೂ ಆದಿಮ ಹೊಸ ಕನಸೊಂದನ್ನು ಕಟ್ಟಿಕೊಡುತ್ತಿದೆ. ಬಡತನ ಇರೋ ಅಂಥದ್ದೇ. ಅದನ್ನು ಮೀರಿ ರಂಗಭೂಮಿ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕು ಎಂಬ ಮಹತ್ವಾಕಾಂಕ್ಷೆಯನ್ನೂ ಮೂಡಿಸಿದೆ. ಆ ಹಾದಿಯಲ್ಲಿ `ಮತ್ತೆ ಏಕಲವ್ಯ' ಅವರ ಕೈ ಹಿಡಿದಿದ್ದಾನೆ.
(ವಿಶ್ವರಂಗಭೂಮಿ ದಿನದ ಪ್ರಯುಕ್ತ ಮಾ.28ರಂದು ಬೆಂಗಳೂರಿನ ರಂಗಶಂಕರದಲ್ಲಿ ಆದಿಮದ ಈ ಯುವ ಕಲಾವಿದರು `ಲೆಟ್ ಪಾಲಿಥ್ರೈವ್ ಯಾನೆ ಯಾರೇ ಕೂಗಾಡಲಿ' ಹಾಗೂ 29ರಂದು `ಮತ್ತೆ ಏಕಲವ್ಯ' ನಾಟಕವನ್ನು ಪ್ರದರ್ಶಿಸಲಿದ್ದಾರೆ.) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT