ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂತು ಅಡಿಕೆ ಹಾಳೆಯ ಹೊಸ ಯಂತ್ರ

Last Updated 9 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಸಾಹಿತ್ಯ ಸಮ್ಮೇಳನವಾಗಲೀ, ಬೀಗರೂಟವಾಗಲೀ ಅಲ್ಲಿ ಅಡಿಕೆ ಹಾಳೆ ತಟ್ಟೆ, ದೊನ್ನೆಗಳದ್ದೇ ಕಾರುಬಾರು. ಊಟದ ನಂತರ ಬಿಸಾಡಿದರೂ ಮಣ್ಣಲ್ಲಿ ಮಣ್ಣಾಗಿ ಬೆರೆತು ಗೊಬ್ಬರವಾಗಿ ಭೂಮಿಯ ಫಲವತ್ತತೆಗೆ ಕಾಣವಾಗುವ ಅಡಿಕೆ ಹಾಳೆಯ ಪರಿಕರಗಳು ನಿಜಕ್ಕೂ ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತು.
 
ಪ್ಲಾಸ್ಟಿಕ್‌ನ ಅವಾಂತರ ನಿಧಾನವಾಗಿ ಜನರ ಅರಿವಿಗೆ ಬಂದಿದ್ದರಿಂದ ದಿನದಿಂದ ದಿನಕ್ಕೆ ಇದರ ಬೇಡಿಕೆ ಏರುತ್ತಲೇ ಇದೆ. ಹೀಗೆ ದಶಕಕ್ಕೂ ಹೆಚ್ಚು ಕಾಲದಿಂದ ಅಡಿಕೆ ಹಾಳೆಯ ಪರಿಕರಗಳನ್ನು ತಯಾರಿಸಲು ಯಂತ್ರ, ತರಬೇತಿ ಹಾಗೂ ಮಾರ್ಗದರ್ಶನ ನೀಡುತ್ತಾ ಬಂದಿರುವ ಕುಂದೇಶ್ವರ ಸಂಘಟನೆ ಇದೀಗ ಕಡಿಮೆ ವಿದ್ಯುತ್ ಬಳಕೆಯ ಹಾಗೂ ಹೆಚ್ಚು ಕಾರ್ಯಕ್ಷಮತೆಯ ಯಂತ್ರಗಳನ್ನು ಅಭಿವೃದ್ಧಿಪಡಿಸಿದೆ.

 ಈ ಹಿಂದೆ ಇದ್ದ 1.5 ಅಶ್ವಶಕ್ತಿಯ ಯಂತ್ರವನ್ನು 0.5 ಅಶ್ವಶಕ್ತಿಗೆ ಇಳಿಸಲಾಗಿದೆ. ಇದರಿಂದ ಈ ಹಿಂದೆ ಬಳಕೆಯಾಗುತ್ತಿದ್ದ ಪ್ರತಿ ಗಂಟೆಗೆ 5 ಯೂನಿಟ್ ವಿದ್ಯುತ್ ಬದಲಾಗಿ ಈಗ ಕೇವಲ 2 ಯೂನಿಟ್ ವಿದ್ಯುತ್ ಮಾತ್ರ ಖರ್ಚಾಗಲಿದೆ. ಅಡಿಕೆ ಹಾಳೆಯ ತಟ್ಟೆಯನ್ನು ಅಚ್ಚು ಮಾಡಲು ಬೇಕಾದ ಡೈ ಈಗ ಕೇವಲ ಮೇಲೆ ಹೋಗಲು ಮಾತ್ರ ವಿದ್ಯುತ್ ಬೇಡುತ್ತದೆ. ಆದರೆ ಕೆಳಗೆ ಬರಲು ವಿದ್ಯುತ್ ಬೇಡದೆ ಸಹಜವಾಗಿ ಬರಲಿದೆ.
 
ಹೀಗಿದ್ದರೂ ಈ ಹಿಂದಿನ ಯಂತ್ರಕ್ಕೆ ಹೋಲಿಸಿದಲ್ಲಿ ಶೇ 40ಕ್ಕೂ ಅಧಿಕ ತಟ್ಟೆ ತಯಾರಾಗಲಿದೆ. ಈಗ ಹೊಸ ಯಂತ್ರದ ಮೂಲಕ ಪ್ರತಿ ಗಂಟೆಗೆ 110 ತಟ್ಟೆಗಳನ್ನು ತಯಾರಿಸಬಹುದು. ಜತೆಗೆ ಕೈಗಳ ಬದಲಾಗಿ ಕಾಲಿನಲ್ಲಿ ಪೆಡಲ್ ಮಾಡುವ ಮೂಲಕ ಬಳಕೆದಾರರಿಗೆ ಹೆಚ್ಚು ಶ್ರಮ ಆಗದಂತೆ ಅಭಿವೃದ್ಧಿಪಡಿಸಲಾಗಿದೆ. 

 `ಈ ಕಿರು ಉದ್ಯಮವು ಈಗಾಗಲೇ ಕರ್ನಾಟಕದ ಹಲವು ಭಾಗಗಳ ಯುವ ಜನತೆಯ ಕೈ ಹಿಡಿದಿದೆ. ಆಸಕ್ತರಿಗೆ ನೆರವು ನೀಡಲು ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಗ್ರಾಮೀಣ ಬ್ಯಾಂಕುಗಳು ಶೇ 100ರಷ್ಟು ಸಾಲ ನೀಡುತ್ತಿವೆ. ಜತೆಗೆ ಸರ್ಕಾರ ಶೇ 45ರಷ್ಟು ಸಬ್ಸಿಡಿ ನೀಡುತ್ತಿದೆ. ಸ್ತ್ರೀ ಶಕ್ತಿ, ಕಾವೇರಿ ಸೇವಾ ಸಂಘ ಹಾಗೂ ಓಂಶಕ್ತಿ ಸಂಘದ ಸದಸ್ಯರು, ಮಂಗಳೂರಿನ ಬೀಡಿ ಕಾರ್ಮಿಕರಿಗೂ ತರಬೇತಿ ನೀಡಲಾಗಿದೆ.

ಅಡಿಕೆ ತೋಟ ಇರುವವರು, ಇಲ್ಲದವರೂ ಸಹ ಈ ಕಿರು ಉದ್ಯಮವನ್ನು ಆರಂಭಿಸಬಹುದು. ಮಲೆನಾಡು ಪ್ರದೇಶದವರಲ್ಲದ ಹಾಗೂ ಪಟ್ಟಣ ಪ್ರದೇಶದಲ್ಲಿ ಈ ಕಿರು ಉದ್ಯಮವನ್ನು ಆರಂಭಿಸುವವರಿಗೆ ಅಡಿಕೆ ಹಾಳೆ ಪೂರೈಕೆಯನ್ನು ಕುಂದೇಶ್ವರ ಸಂಘಟನೆ ಮಾಡುತ್ತಿದೆ. ತಯಾರಾದ ತಟ್ಟೆಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ.
 
ತಯಾರಿಸಿದವರೇ ತಟ್ಟೆಗಳನ್ನು ಮಾರುಕಟ್ಟೆ ಮಾಡಬಹುದು ಅಥವಾ ನಮ್ಮ ಸಂಸ್ಥೆಯೇ ತಟ್ಟೆಗಳನ್ನು ಖರೀದಿಸಲಿದೆ~ ಎಂದು ಕುಂದೇಶ್ವರ ಸಂಘಟನೆಯ ನರಸಿಂಹ ಶೆಟ್ಟಿ ಹೇಳುತ್ತಾರೆ.

 ಅಡಿಕೆ ಹಾಳೆ ತಟ್ಟೆ ತಯಾರಿಗೆ 10ಗಿ10 ಸ್ಥಳಾವಕಾಶ ಸಾಕು. ಯಂತ್ರದಲ್ಲಿ ಯಾವುದೇ ಬಗೆಯ ಮೋಟಾರು ಅಳವಡಿಸಿರುವುದಿಲ್ಲ. ಆದರೆ ಅಡಿಕೆ ಹಾಳೆಯಲ್ಲಿನ ತೇವಾಂಶವನ್ನು ಹೊರತೆಗೆಯಲು ಒಂದು ಹೀಟರ್ ಇರುತ್ತದೆ. ಇದಕ್ಕೆ ಮನೆ ಬಳಕೆಯ ಸಾಧಾರಣ ವಿದ್ಯುತ್ ಸಾಕು. ಜತೆಗೆ ಇದು ಗೃಹ ಕೈಗಾರಿಕೆಯಾದ್ದರಿಂದ ಯಾವುದೇ ರೀತಿಯ ಪರವಾನಗಿ (ಎರಡಕ್ಕಿಂತ ಹೆಚ್ಚು ಯಂತ್ರಗಳನ್ನು ಅಳವಡಿಸಿಕೊಂಡಲ್ಲಿ ಅದು ವಾಣಿಜ್ಯ ವ್ಯವಹಾರವಾಗುವುದರಿಂದ ಅಗತ್ಯ ಪರವಾನಗಿಯ ಅಗತ್ಯವಿದೆ) ಬೇಕಿಲ್ಲ.

ಈ ಯಂತ್ರಕ್ಕೆ ಅಳವಡಿಸುವ ವಿವಿಧ ಮಾದರಿಯ ಡೈಗಳನ್ನು ಬಳಸಿ ಅಡಿಕೆ ಹಾಳೆಯಿಂದ 24 ಬಗೆಬಗೆಯ ಪರಿಕರಗಳನ್ನು ತಯಾರಿಸಬಹುದಾಗಿದೆ. ಪುಟ್ಟ ದೊನ್ನೆಯಿಂದ ಹಿಡಿದು 12 ಇಂಚಿನಷ್ಟು ದೊಡ್ಡ ತಟ್ಟೆಯವರೆಗೂ ತಯಾರಿಸಬಹುದು. ಒಂದು ಅಡಿಕೆ ಹಾಳೆಯಿಂದ ಅತಿ ಹೆಚ್ಚು ಪರಿಕರಗಳ ತಯಾರಿಕೆಯ ಮೂಲಕ ಕಚ್ಚಾ ಸಾಮಗ್ರಿಯ ಸಮರ್ಪಕ ಉಪಯೋಗ ಪಡೆಯಬಹುದಾಗಿದೆ.

ಒಂದು ಯಂತ್ರದಿಂದ ದಿನಕ್ಕೆ ಎಂಟು ಗಂಟೆ ಕೆಲಸ ಮಾಡಿದರೆ ಪ್ರತಿ ತಿಂಗಳು 15-17 ಸಾವಿರ ರೂಪಾಯಿ ಹಣ ಗಳಿಸಬಹುದಾಗಿದೆ. ಯಂತ್ರದ ಬಳಕೆ ಬಹಳ ಸರಳ ಹಾಗೂ ಸುರಕ್ಷಿತವಾ. ಹೀಗಾಗಿ ಇದರ ಬಳಕೆ ಸುಲಭವಾಗಿದೆ. ಜತೆಗೆ ದೃಷ್ಟಿಹೀನರಿಗೂ ಈ ಯಂತ್ರದ ತರಬೇತಿ ನೀಡುವ ಮೂಲಕ ಅವರೂ ಸ್ವಂತ ಕಾಲಿನ ಮೇಲೆ ನಿಲ್ಲುವಂತಾಗಿದೆ. 

ಸದ್ಯದ ಪರಿಸ್ಥಿತಿಯಲ್ಲಿ ವರ್ಷಕ್ಕೆ 10-15 ಲಕ್ಷ ಅಡಿಕೆ ಹಾಳೆ ತಟ್ಟೆಗಳಿಗೆ ಬೇಡಿಕೆ ಇದೆ. ಆದರೆ 2ರಿಂದ 3 ಲಕ್ಷ ತಟ್ಟೆಗಳು ಮಾತ್ರ ತಯಾರಾಗುತ್ತಿವೆ. ಹೀಗಾಗಿ ಬೇಡಿಕೆಯನ್ನು ನೀಗಿಸುವ ಜತೆ ಸ್ವಂತ ಉದ್ದಿಮೆಯ ಕನಸು ಕಾಣುವ ಸಾಮಾನ್ಯ ವರ್ಗ, ಗ್ರಾಮೀಣ ಹಾಗೂ ದುರ್ಬಲ ವರ್ಗ, ಸ್ವಸಹಾಯ ಗುಂಪುಗಳು, ಅಂಗವಿಕಲರು, ವ್ಯಕ್ತಿಗತ ಉದ್ಯಮಶೀಲರು ಇದರ ಪ್ರಯೋಜನ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗೆ: 99006 89793

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT