ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂತು ಬೆಂಗಳೂರು ಹಬ್ಬ

Last Updated 13 ಜನವರಿ 2011, 11:35 IST
ಅಕ್ಷರ ಗಾತ್ರ

ಸಂಕ್ರಾಂತಿಗೆ ಮೊದಲೇ ನಗರದಲ್ಲಿ ಇನ್ನೊಂದು ಹಬ್ಬ ಬಂದಿದೆ. ಇದು ‘ಬೆಂಗಳೂರು ಹಬ್ಬ’. ಮಕರ ಸಂಕ್ರಮಣದ ಜತೆಗೆ ಈ ಕಲಾ ಸಾಂಸ್ಕೃತಿಕ ಉತ್ಸವ ರಂಗವೇರಲಿದೆ.ಜನವರಿ 14 ರಿಂದ 29ರ ವರೆಗೆ ನಡೆಯುವ ‘ಬೆಂಗಳೂರು ಹಬ್ಬ’ದಲ್ಲಿ ಪಂಡಿತ್ ಶಿವಕುಮಾರ ಶರ್ಮ, ಗುರುಕಿರಣ್, ಕದ್ರಿ ಗೋಪಾಲನಾಥ್, ಡಾ. ಪದ್ಮಾ ಸುಬ್ರಹ್ಮಣ್ಯಂ ಮುಂತಾದ ಖ್ಯಾತನಾಮರು, ಸುಮಾರು 1000 ಕಲಾವಿದರು,  ಚಲನ ಚಿತ್ರ, ಸಂಗೀತ ದಿಗ್ಗಜರು ಕಾರ್ಯಕ್ರಮ ನೀಡುವರು. 

 ಇದು  8ನೇ ಬೆಂಗಳೂರು ಹಬ್ಬ, ಈ ವರ್ಷ ಒಂದು ತಿಂಗಳು ಮೊದಲೇ ಬಂದಿದೆ. ‘ಬೆಂಗಳೂರು ಹಬ್ಬ’ದ ಮೂಲಕ ಶ್ರೇಷ್ಠ ಸಂಗೀತ, ನೃತ್ಯ, ಸಿನಿಮಾ, ಚಿತ್ರ, ಕರಕೌಶಲ್ಯ, ಜಾನಪದ ಪ್ರಕಾರ ಮುಂತಾದವುಗಳನ್ನು ಜನರ ಮುಂದೆ ನಿವೇದಿಸುವ ಎಎಫ್‌ಎಫ್‌ಎ (ಆರ್ಟಿಸ್ಟ್ ಫೌಂಡೇಶನ್ ಫಾರ್ ದ ಆರ್ಟ್ಸ್) ಪ್ರಯತ್ನಕ್ಕೆ ಏರ್‌ಟೆಲ್ ಕೈಜೋಡಿಸಿದೆ.

‘ಹಬ್ಬ’ ಲಾಂಛನ ಮತ್ತು ಸ್ವಾಗತ ಗೀತೆಯ ಸಿ.ಡಿ. ಅನಾವರಣ ಬುಧವಾರ ನಡೆಯಿತು. ಎಎಫ್‌ಎಫ್‌ಎ ಸಂಘಟಕರಾದ ನಂದಿನಿ ಆಳ್ವ ಮತ್ತು ಪದ್ಮಿನಿ ರವಿ, ನಿರ್ದೇಶಕ ನಾಗಾಭರಣ ಪಾಲ್ಗೊಂಡಿದ್ದರು.ನಾಡಿನ ಸಂಸ್ಕೃತಿ ಪರಂಪರೆಗೆ ಸೇರಿದ ಎಲ್ಲವನ್ನೂ ಒಂದೇ ವೇದಿಕೆಯಡಿ ತರುವ ಪ್ರಯತ್ನವನ್ನು ‘ಹಬ್ಬ’ದ ಮೂಲಕ ಮಾಡಲಾಗಿದೆ. ಇದು ನಮ್ಮಿಬ್ಬರ 13 ವರ್ಷದ ಹೋರಾಟ, 8ನೇ ಹಬ್ಬ ಎನ್ನುತ್ತಾರೆ ನಂದಿನಿ ಮತ್ತು ಪದ್ಮಿನಿ. 
                                           
ಸಿನಿಮಾ, ಪ್ರದರ್ಶನ
ದೇವಯ್ಯ ಪಾರ್ಕ್, ಶಾಮಣ್ಣ ಪಾರ್ಕ್, ಜಯನಗರದ ಎಲ್‌ಐಸಿ ಪಾರ್ಕ್ ಮುಂತಾದ ಕಡೆ ಚಲನಚಿತ್ರ ಪ್ರದರ್ಶನ ಇರುತ್ತದೆ.ಸಿನಿಮಾಗಳ ಆಯ್ಕೆ ಅದರಲ್ಲಿ ಅಭಿನಯಿಸಿದ ತಾರೆಯರಿಗಿಂತ ವಿಷಯ ಆಧರಿತವಾಗಿರುತ್ತದೆ.ಅಪ್ಪಾರಾವ್ ಗ್ಯಾಲರಿ, ಟ್ಯಾಂಗ್ರಿನ್ ಗ್ಯಾಲರಿ ಸೇರಿ ಆರು ಪ್ರಮುಖ ಕಲಾ ಗ್ಯಾಲರಿಗಳಲ್ಲಿ ಕಲಾಕೃತಿ ಪ್ರದರ್ಶನ ನಡೆಯಲಿದೆ. ಯುಬಿ ಸಿಟಿ ಮುಂತಾದ ಹಲವೆಡೆ ಫ್ಯೂಷನ್, ಅಂತರರಾಷ್ಟ್ರೀಯ ಜಾಝ್ಾ ಮತ್ತಿತರ ಸಮಕಾಲೀನ ನೃತ್ಯ ಸಂಗೀತ ಉತ್ಸವ ಇರುತ್ತದೆ. ಜನವರಿ 17ರಿಂದ 23ರ ವರೆಗೆ ಚಿತ್ರಕಲಾ ಪರಿಷತ್‌ನಲ್ಲಿ ನಡೆಯುವ ಜನಪದ ಕಲಾ ಪ್ರಕಾರಗಳ ಪ್ರದರ್ಶನ ‘ಜನಪದ ಜಾತ್ರೆ’ ಹಾಗೂ ‘ಕರಕುಶಲ’ ಮೇಳದಲ್ಲಿ ರಾಜ್ಯದ ಜಾನಪದ ಅಷ್ಟೇ ಅಲ್ಲ, ದೇಶದ ಈಶಾನ್ಯ ರಾಜ್ಯಗಳ ಬುಡಕಟ್ಟು ಜನರ ಕಲಾಪ್ರದರ್ಶನ ನಡೆಯಲಿದೆ.

ಜನವರಿ 18 ರಿಂದ 21ವರೆಗೆ  ಸಂಜೆ 7ಕ್ಕೆ ಮಲ್ಲೇಶ್ವರದ ಸೇವಾ ಸದನದಲ್ಲಿ ನಾಟಕ, ಜನವರಿ 28 ರಂದು ಐಟಿ ಪಾರ್ಕ್‌ಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಜನವರಿ 29ರಂದು ಅರಮನೆ ಮೈದಾನ (ತ್ರಿಪುರ ವಾಸಿನಿ ದ್ವಾರ)ದಲ್ಲಿ ಸಮಾರೋಪದ ಅಂಗವಾಗಿ ನಡೆಯುವ ಮೆಗಾ ಶೊನಲ್ಲಿ ಬಾಲಿವುಡ್ ಗಾಯಕ ಕೈಲಾಶ್ ಖೇರ್ ಸೇರಿಖ್ಯಾತನಾಮರು ಪಾಲ್ಗೊಂಡು ಕಾರ್ಯಕ್ರಮ ನೀಡಲಿದ್ದಾರೆ. 

 ಮೊಬೈಲ್‌ನಲ್ಲಿ...
15 ದಿನಗಳ ಕಾಲ ಸಿಲಿಕಾನ್ ಸಿಟಿಯ ಜನ ದೃಶ್ಯ-ಶ್ರಾವ್ಯ ಆನಂದಿಸಲು ಏರ್‌ಟೆಲ್ ಈ ಸಲ ವಿಶೇಷ ವ್ಯವಸ್ಥೆಯನ್ನೇ ಮಾಡಿದೆ.‘ಹಬ್ಬ’ದ ದೃಶ್ಯಗಳು, ಪುಟ್ಟ ವೀಡಿಯೊಗಳು ಏರ್‌ಟೆಲ್ ಜಿಪಿಆರ್‌ಎಸ್ ಮೊಬೈಲ್‌ಗಳಲ್ಲಿ  ಲಭಿಸುತ್ತವೆ. ಇದರೊಂದಿಗೆ ನಿತ್ಯದ ಕಾರ್ಯಕ್ರಮಗಳ ಬಗ್ಗೆ ‘ಇವೆಂಟ್ ಅಲರ್ಟ್’ ಮೆಸೇಜ್‌ಗಳೂ ಗ್ರಾಹಕರನ್ನು ಸೇರುತ್ತವೆ.  ಬೆಂಗಳೂರಿನಲ್ಲಿ ಸುಮಾರು 40 ಲಕ್ಷ ಏರ್‌ಟೆಲ್ ಗ್ರಾಹಕರಿದ್ದಾರೆ. ಇವರೆಲ್ಲರಿಗೆ ಇದು ಹೊಸ ಅನುಭವವಾಗಲಿದೆ ಎಂದು ಏರ್‌ಟೆಲ್ ಕರ್ನಾಟಕ ವಿಭಾಗದ ಮುಖ್ಯ ಕಾರ್ಯನಿರ್ವಾಹಹ ಅಧಿಕಾರಿ  ವಿ. ವೆಂಕಟೇಶ್ ಸಂತಸದಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT