ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದರು ಇಲಾಖೆ ಕಾಮಗಾರಿ ವಿಳಂಬ: ಊರೆಲ್ಲ ದುರ್ವಾಸನೆ

Last Updated 14 ಏಪ್ರಿಲ್ 2011, 7:05 IST
ಅಕ್ಷರ ಗಾತ್ರ

ಉಡುಪಿ: ಇಕ್ಕಟ್ಟಾದ ರಸ್ತೆಗಳು, ಪಾದಚಾರಿ ಮಾರ್ಗಕ್ಕೂ ಮುಂಚಾಚಿದ ಅಂಗಡಿಗಳು, ಮೂಗಿಗೆ ಅಡರುವ ಮೀನಿನ ವಾಸನೆ, ಕೆಲವೊಮ್ಮೆ ದುರ್ವಾಸನೆ ಬೀರುವ ಒಣಮೀನು, ಮೀನೆಣ್ಣೆ ಕಾರ್ಖಾನೆ, ಸೆಕೆ, ವಿಪರೀತ ಸೊಳ್ಳೆಗಳು, ಅಲ್ಲಲ್ಲಿ ಮುರಿದ ಬೋಟು, ತೂಗುಬಿಟ್ಟ ನೈಲಾನ್ ಮೀನುಬಲೆ, ಮಂಜುಗಡ್ಡೆ ಸಾಗಿಸುವ ವಾಹನಗಳು, ವಾಹನದಲ್ಲಿ ಸಾಗಾಟ ಮಾಡುವಾಗ ಹಾದಿಯಲ್ಲಿ ಬಿದ್ದಿರುವ ಚೂರುಪಾರು ಹಸಿಮೀನು, ಅದಕ್ಕೆ ಮುಗಿಬೀಳುವ ಕಾಗೆಗಳ ಕಿರುಚಾಟ, ಅವುಗಳನ್ನು ಓಡಿಸಿ ಅದಕ್ಕೆ ಬಾಯಿ ಹಾಕುವ ಬೀದಿ ನಾಯಿಗಳು, ಗಜಿಬಿಜಿ ವಾಹನಗಳ ಓಡಾಟದ ನಡುವೆ ವಾಹನಗಳ ಬಿರುಸಿನ ಓಟಾಟ...

ಇದು ಮಲ್ಪೆಯ ಕಿರು ಚಿತ್ರಣ. ಮಲ್ಪೆಯಲ್ಲಿ ಅಸಮರ್ಪಕ ತ್ಯಾಜ್ಯ ವಿಲೇವಾರಿಯಿಂದಾಗಿ ಮಲೇರಿಯ, ಸೊಳ್ಳೆಗಳಿಂದ ಬರುವ ಕಾಯಿಲೆಗಳು ಸಾಮಾನ್ಯ. ಎಲ್ಲಿ ಮಲೇರಿಯ ಕಾಣದಿದ್ದರೂ ಮಲ್ಪೆಯಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ತ್ಯಾಜ್ಯ ವಿಲೇವಾರಿ ಕೂಡ ಅಲ್ಲಿ ಸುಸೂತ್ರವಲ್ಲ.

ಮಲ್ಪೆಯಿಂದ ಪಡುಕೆರೆಗೆ ಸಾಗುವ ಬಂದರು ರಸ್ತೆಯಲ್ಲಿ ಹೊಸ ಕಿರುಸೇತುವೆ ನಿರ್ಮಿಸಲು ಬಂದರು ಮತ್ತು ಮೀನುಗಾರಿಕಾ ಇಲಾಖೆಯವರು ದುರ್ಬಲವಾಗಿದ್ದ ಹಳೆಯ ಸೇತುವೆ ತೆಗೆದು ಹಾಕಿದ್ದರು. ಹೊಸ ಸೇತುವೆ ನಿರ್ಮಾಣಕ್ಕೆ ಅಲ್ಲಿ ಅಗೆದು ಹಾಕಿದ್ದಾರೆ. ಹೀಗಾಗಿ ಆ ಮಾರ್ಗವಾಗಿ ಸಾಗುವ ಚರಂಡಿ ಕಟ್ಟಿಕೊಂಡು ಊರೆಲ್ಲ ದುರ್ನಾತ ಬೀರುತ್ತಿದೆ. ಒಂದು ತಿಂಗಳಾದರೂ ಕಾಮಗಾರಿ ಮತ್ತೆ ಮುಂದುವರಿಸಲಿಲ್ಲ.

ಸೇತುವೆ ರೂ 20 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು ಒಂಬತ್ತು ಮೀಟರ್ ಉದ್ದ ಹಾಗೂ ಏಳು ಮೀಟರ್ ಅಗಲ ಇರುತ್ತದೆ. ‘ಇಲ್ಲಿ ಸೇತುವೆ ನಿರ್ಮಾಣ ಮಾಡಲು ಕಾಮಗಾರಿ ಆರಂಭಿಸಿದ್ದೇ ಮಾ.26ರಿಂದ. ಮೂರು ತಿಂಗಳು ಕಾಲಾವಕಾಶವಿದೆ. ಅಲ್ಲದೇ ಸೇತುವೆ ಜಾಗ ಹೊರತುಪಡಿಸಿ ಅಲ್ಲಿ ಹರಿಯುವ ಕೊಚ್ಚೆ ನೀರಿನ ಚರಂಡಿ ನಗರಸಭೆಗೆ ಸೇರಿದ್ದು. ಅವರು ಅದನ್ನು ಸ್ವಚ್ಛಗೊಳಿಸಿಕೊಟ್ಟರೆ ಸೇತುವೆ ಕಾಮಗಾರಿ ಬೇಗನೆ ಮಾಡಲು ಸಾಧ್ಯ ಎಂದು ಬಂದರು ಇಲಾಖೆಯವರ ನುಡಿ.

ಪಾಚಿಗಟ್ಟಿದ ತ್ಯಾಜ್ಯ-ಅನಾರೋಗ್ಯ: ಸೇತುವೆ ನಿರ್ಮಾಣಕ್ಕಾಗಿ ಅಗೆದಿಟ್ಟ ಪ್ರದೇಶದಿಂದಾಗಿ ಚರಂಡಿ ನೀರು ಸರಾಗವಾಗಿ ಹೋಗಲು ಸಾಧ್ಯವಾಗದೇ ತ್ಯಾಜ್ಯ ನೀರು ಕಿ.ಮೀ.ಗಳಷ್ಟು ದೂರವೂ ಪಾಚಿಗಟ್ಟಿದೆ. ನೀರು ನಿಂತ ಪ್ರದೇಶದ ಪರಿಸರದಲ್ಲಿ ಕೆಲವರು ಈಗ ಮಲೇರಿಯ ರೋಗಕ್ಕೂ ತುತ್ತಾಗಿದ್ದಾರೆ ಎನ್ನಲಾಗುತ್ತಿದೆ.

‘ಮೊದಲೇ ಇಲ್ಲಿ ಸೊಳ್ಳೆ ಕಾಟವಿದೆ. ಈಗಂತೂ ನೀರು ನಿಂತಿದೆ. ಈ ಹಿಂದೆ ನೀರು ಹರಿಯುವಾಗಲ್ಲೂ ಶೇ 50ರಷ್ಟು ಇದ್ದ ಮಲೇರಿಯ ಈಗ ನೂರರಷ್ಟು ಆಗಿದೆ. ಇಲ್ಲಿ ಬೇಗನೇ ಸೇತುವೆ ಆಗದೇ ಹೀಗೆಯೇ ಮುಂದುವರಿದರೆ ನಾವು ಆರೋಗ್ಯದಿಂದ ಇರುವುದಾದರೂ ಹೇಗೆ?’ ಎಂದು ಸ್ಥಳೀಯ ನಿವಾಸಿ ದಿನಕರ ಸುವರ್ಣ ಆತಂಕ ವ್ಯಕ್ತಪಡಿಸಿದರು.
ಈ ಮಾರ್ಗ ಸಾಕಷ್ಟು ಜನಸಂಚಾರವಿರುವ ರಸ್ತೆ, ಶಾಲಾ ಕಾಲೇಜಿಗೆ ವಿದ್ಯಾರ್ಥಿಗಳು ಹೋಗುವ ಮುಖ್ಯ ರಸ್ತೆಯೂ ಹೌದು. ಅಕ್ಕಪಕ್ಕದಲ್ಲಿರುವ ವ್ಯಾಪಾರಸ್ಥರಿಗೂ ಈ ದುರ್ವಾಸನೆಯಿಂದಾಗಿ ತೊಂದರೆಯಾಗುತ್ತಿದೆ.

ಪರಿಸರದಲ್ಲಿ ಬೀದಿದೀಪದ ವ್ಯವಸ್ಥೆ ಇಲ್ಲ. ಹೀಗಾಗಿ ಅನೇಕ ಜನರು ಬಿದ್ದು ಆಘಾತಕ್ಕೊಳಗಾಗಿದ್ದಾರೆ. ಇಂತಹ ತೊಂದರೆ ಸರಿಪಡಿಸಲು ತಕ್ಷಣ ಸೇತುವೆ ನಿರ್ಮಾಣಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

‘ಇಲ್ಲಿ ಬೀದಿ ಲೈಟ್ ಹಾಕ್ಲಿಲ್ಲ. ರಾತ್ರಿಹೊತ್ತಲ್ಲಿ ಇಲ್ಲಿಂದ ಹಾದು ಹೋಗುವಾಗ ಕೆಲವರು ಚರಂಡಿಗೆ ಬಿದ್ದು ಗಾಯಗೊಂಡಿದ್ದಾರೆ. ರಾತ್ರಿವೇಳೆ ಇಲ್ಲಿ ಬೀದಿದೀಪವಿಲ್ಲದ ಕಾರಣ ಬೀದಿನಾಯಿಗಳು ಅಟ್ಟಿಸಿಕೊಂಡು ಬರುವುದು ಇದೆ.’ ಎಂದು ಸ್ಥಳೀಯ ನಿವಾಸಿ ವಿನೋದ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT