ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದಳಿಕೆಯ ಬನದವ್ವ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಶಾಸನಗಳ ನೆಲೆವೀಡು. ಪ್ರಾಚೀನತೆಯ ವೈಭವ ಸಾರುವ ದೇವಾಲಯಗಳಿಗೆ ಏನೂ ಇಲ್ಲಿ ಕೊರತೆಯಿಲ್ಲ. ಇದಕ್ಕೆ ಸಾಕ್ಷಿಯಂತಿದೆ `ಬಂದಳಿಕೆ~ ಗ್ರಾಮ. ಅಮ್ಮನ ಮಡಿಲಲ್ಲಿ ಮಲಗಿರುವ ಮಗುವಿನಂತೆ ಬಂದಳಿಕೆ ಶಾಂತವಾಗಿ ಪ್ರಕೃತಿಯೊಂದಿಗೆ ಸಮ್ಮಿಳಿತವಾಗಿದೆ.

ಬಂದಳಿಕೆ ಅಥವಾ ಬಂದನಿಕೆ ಎಂದು ಶಾಸನಗಳಲ್ಲಿ ಉಲ್ಲೇಖಿಸಲಾದ ಈ ಸ್ಥಳ ಅಂದು ಜೈನ ಧರ್ಮ ಹಾಗೂ ಕಾಳಮುಖ ಶೈವ ಪಂಥದ ಪ್ರಮುಖ ಕೇಂದ್ರವಾಗಿತ್ತು. ಇದರ ಮೂಲ ಹೆಸರು `ನಾಗರಖಂಡ~. `ಬನವಾಸಿ ಧರಣಿಯ ಮುಖದಂತಿದ್ದರೆ, ನಾಗರಖಂಡವು ಅದರ ತಿಲಕದಂತಿರುವುದು~ ಎಂದು ಶಾಸನಗಳಲ್ಲಿ ವರ್ಣಿಸಲಾಗಿದೆ.

ಇದು 7ನೇ ಶತಮಾನದವರೆಗೆ ರಾಷ್ಟ್ರಕೂಟ, ಕಲ್ಯಾಣದ ಚಾಲುಕ್ಯರು, ಕಳಚೂರ್ಯ, ಹೊಯ್ಸಳ, ಸೇವುಣ ಮತ್ತು ವಿಜಯನಗರ ಅರಸರ ಆಡಳಿತ ಅವಧಿಯಲ್ಲಿ ಪ್ರಮುಖ ನಗರವಾಗಿತ್ತು.

ಈಗ ಇದು ಬನಶಂಕರಿ ದೇವಿಯ ದೇವಸ್ಥಾನದಿಂದ ಪ್ರಸಿದ್ಧಿಯಾಗಿದೆ. ವನದವ್ವ, ಬನದವ್ವ, ವನಶಂಕರಿ, ಬನದಮ್ಮ ಹೀಗೆ ನಾನಾ ಹೆಸರುಗಳೂ ಈ ದೇವಿಗಿವೆ. ಶಿವಳ್ಳಿ ಶಾಸನದಲ್ಲಿ ಉಲ್ಲೇಖವಿರುವ ಮಹೇಶ್ವರಿ ಕ್ಷೇತ್ರ ಇದೇ ಎಂಬುದರ ಬಗ್ಗೆ ಅನೇಕ ಇತಿಹಾಸಕಾರರಲ್ಲಿ ಜಿಜ್ಞಾಸೆಗಳಿವೆ. ಕಾರಣ ಬನಶಂಕರಿ ದೇವಿಯ ಈಗಿನ ವಿಗ್ರಹ ಮತ್ತು 6ನೇ ಶತಮಾನದಲ್ಲಿನ ಮಹೇಶ್ವರಿ ದೇವಿಯ ವಿಗ್ರಹಗಳಿಗೆ ಸಾಮ್ಯತೆಗಳಿವೆ.

ಹಸಿರು ವನರಾಶಿ ನಡುವಿನ ಬಂದಳಿಕೆಯಲ್ಲಿ ಪ್ರತಿ ವರ್ಷ ಬನದ ಹುಣ್ಣಿಮೆಗೆ (ಈ ಬಾರಿ ಜನವರಿ 8 ಮತ್ತು 9) ದೇವಿಯ ಜಾತ್ರೆ ನಡೆಯುತ್ತದೆ. ಸುತ್ತಮುತ್ತಲ ಹಳ್ಳಿಗರ ಸುಗ್ಗಿಯ ಸಡಗರಕ್ಕೆ ಈ ಉತ್ಸವ ಹುಮ್ಮಸ್ಸು ತುಂಬುತ್ತದೆ.

ಬನಶಂಕರಿ ಕುರಿತು ಹಲವು ಪುರಾಣ ಕಥೆಗಳು ಪ್ರಚಲಿತದಲ್ಲಿವೆ. ಒಮ್ಮೆ ದೇವಲೋಕದ ಶಿವನ ಒಡ್ಡೋಲಗದಲ್ಲಿ ದೇವತೆಗಳೆಲ್ಲ ಸಭೆ ಸೇರಿ ಭೂಲೋಕವನ್ನು ಉದ್ಧರಿಸಲು ಚಿಂತನ ನಡೆಸುತ್ತಾರೆ. ಆಗ ಶಿವನು ತನ್ನ ನೆಚ್ಚಿನ ಅನುಯಾಯಿ ಪ್ರಭುದೇವನನ್ನು ಮತ್ತು ಪಾರ್ವತಿಯು ಮಾಯಾದೇವಿಯನ್ನು ಭೂ ಲೋಕಕ್ಕೆ ಕಳುಹಿಸಲು ನಿರ್ಧರಿಸುತ್ತಾರೆ.

ಮಾಯಾದೇವಿ ಬನವಾಸಿಯ ರಾಜನ ಮಗಳಾಗಿ ಜನಿಸಿ ನಾಟ್ಯ, ಸಂಗೀತದಲ್ಲಿ ಪ್ರಾವೀಣ್ಯತೆ ಪಡೆಯುತ್ತಾಳೆ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಪ್ರಭುದೇವ ಮದ್ದಳೆ ವಾದನದಲ್ಲಿ ಪ್ರವೀಣ. ಅವನ ಮೇಲೆ ಮಾಯಾದೇವಿ ಮನಸ್ಸಾಗುತ್ತದೆ. ತನ್ನನ್ನು ವಿವಾಹವಾಗುವಂತೆ ಬೇಡುತ್ತಾಳೆ.

ಆತ ಇದಕ್ಕೆ ಒಪ್ಪದೆ ಅವಳ ಕಣ್ಣು ತಪ್ಪಿಸಿ ಯೋಗಿಯಾಗಿ ಧ್ಯಾನದಲ್ಲಿ ಮಗ್ನನಾಗುತ್ತಾನೆ. ಇತ್ತ ಮಾಯಾದೇವಿಯು ಪ್ರಭುದೇವರನ್ನು ಅರಸಿ, ನಿರಾಶಳಾಗಿ ಬಂದಳಿಕೆಗೆ ಬಂದು ನೆಲೆಸುತ್ತಾಳೆ. ಅದೇ ಇಂದಿನ ಬಂದಳಿಕೆ ಎಂದು ಸ್ಥಳ ಪುರಾಣ ಹೇಳುತ್ತದೆ.

ಬನಶಂಕರಿ ಬಡವರ ಕಷ್ಟಗಳನ್ನು ಬಗೆಹರಿಸುವಳೆಂಬ ನಂಬಿಕೆ ಜನರಲ್ಲಿದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ವಿಶೇಷ ಪೂಜೆ, ಅಮಾವಾಸ್ಯೆಯಂದು ದಾಸೋಹ ನಡೆಯುತ್ತದೆ.

ಬನಶಂಕರಿ ದೇವಾಲಯದ ಜೊತೆಗೆ ತ್ರಿಮೂರ್ತಿ ನಾರಾಯಣ ದೇವಾಲಯ, ಸೋಮೇಶ್ವರ ದೇವಾಲಯ ಹಾಗೂ ಶಾಂತಿನಾಥ ಬಸದಿಗಳು ವಾಸ್ತುಶಿಲ್ಪದ ಪ್ರತಿಬಿಂಬದಂತೆ ಇಲ್ಲಿ ಮೈವೆತ್ತಿವೆ.

ಬಂದಳಿಕೆ ಹಲವು ಧರ್ಮಗಳಿಗೆ ಆಶ್ರಯವಾಗಿತ್ತು ಎಂಬುದಕ್ಕೆ ಇಲ್ಲಿರುವ ಜೈನ ಬಸದಿ ಸಾಕ್ಷಿಯಾಗಿ ನಿಲ್ಲುತ್ತದೆ. ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿತವಾಗಿರುವ ಈ ಜೈನ ಬಸದಿಗೆ ಜಕ್ಕಿಯಬ್ಬೆ ದೇಣಿಗೆ ನೀಡಿರುವುದು ಶಾಸನಗಳಿಂದ ತಿಳಿಯುತ್ತದೆ.

ತ್ರಿಮೂರ್ತಿ ನಾರಾಯಣ ದೇವಾಲಯ ತ್ರಿಕೂಟಾಚಲ ಮಂದಿರವಾಗಿದ್ದು, ಕಲ್ಯಾಣಿ ಚಾಲುಕ್ಯರ ಕಾಲಕ್ಕೆ ಸೇರಿದ್ದಾಗಿದೆ. ಆನೆಕಾಲು ಸೋಮಯ್ಯ ಮತ್ತು ಬೆಪ್ಪೇಶ್ವರ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಸೋಮೇಶ್ವರ ದೇವಾಲಯವನ್ನು 1274 ರಲ್ಲಿ ಬೊಪ್ಪಸೆಟ್ಟಿ ಎಂಬುವವರು ನಿರ್ಮಿಸಿದರು.

ಇತಿಹಾಸದಲ್ಲಿ ಸಾಕಷ್ಟು ವೈಭವವನ್ನು ಹೊಂದಿರುವ ಕ್ಷೇತ್ರ ಇಂದು ಬರಿಯ ಸ್ಥಳವಾಗಿ ಉಳಿದಿದೆ.

ಹೀಗೆ ಹೋಗಿ: ಶಿಕಾರಿಪುರದಿಂದ 30 ಕಿ.ಮೀ ದೂರದಲ್ಲಿರುವ ಬಂದಳಿಕೆಗೆ ಶಿರಾಳಕೊಪ್ಪದಿಂದ ಬಿಳಕಿ ಮಾರ್ಗವಾಗಿ ಅಥವಾ ತೊಗರ್ಸಿ-ಕೌಲಿ ಮಾರ್ಗವಾಗಿ ಹೋಗಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT