ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದಿದೆ ಗಾಡ್ಸ್ ಬನ್ಸಿ!

Last Updated 19 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ವಿದೇಶೀ ಸಂಗೀತ ವಾದ್ಯಗಳು ನಮ್ಮದಾಗುವ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿದೆ `ಗಾಡ್ಸ್ ಬನ್ಸಿ~. ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಇದನ್ನು ಹಾಲೆಂಡ್‌ನಿಂದ ಹೊತ್ತು ತಂದಿದ್ದಾರೆ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅದಕ್ಕೆ ಕಲಿಸಿದ್ದಾರೆ, ಆ ಮೂಲಕ ಮತ್ತೊಂದು ವಿದೇಶಿ ವಾದ್ಯವನ್ನು ಕನ್ನಡೀಕರಣಗೊಳಿಸಿದ್ದಾರೆ.

ಹೊಸ ವಾದ್ಯ `ಗಾಡ್ಸ್ ಬನ್ಸಿ~ಯನ್ನು ಸಾರ್ವಜನಿಕರಿಗೆ ಪರಿಚಯಿಸಲೆಂದೇ ಅವರು ಪ್ರೆಸ್ ಕ್ಲಬ್ ಆವರಣಕ್ಕೆ ಬಂದಿದ್ದರು. ಎಂಟಡಿ ಎತ್ತರದ, ಕೊಳಲಿಗಿಂತ ಭಿನ್ನವಾದ ಹೊಸ ವಾದ್ಯವನ್ನು ಹೇಗೆ ನುಡಿಸುತ್ತಾರೆ ಎಂಬ ಪ್ರಶ್ನೆಗಳಿಗೆ ಪಾತ್ಯಕ್ಷಿಕೆ ಮೂಲಕವೇ ಅವರು ಉತ್ತರ ನೀಡಿದರು.

`ಹಾಲೆಂಡ್ ಗೆಳೆಯ ನೆಡ್ ಕೊಟ್ಟ ಉಡುಗೊರೆ ಇದು. ಕಳೆದ ಜನವರಿಯಲ್ಲಿ ಭಾರತಕ್ಕೆ ತಂದೆ. ಆ ಮಧ್ಯೆ ಮೂರು ತಿಂಗಳು ಅಮೆರಿಕಾ ಹೋಗಿದ್ದರಿಂದ ಅಭ್ಯಾಸ ಸ್ವಲ್ಪ ನಿಧಾನವಾಯಿತು. ಆ ಬಳಿಕ ಸತತ ಎರಡೂವರೆ ತಿಂಗಳು ದಿನಕ್ಕೆ ಮೂರರಿಂದ ನಾಲ್ಕು ಗಂಟೆ ಈ ಹೊಸ ವಾದ್ಯದ ಕಲಿಕೆಗೆ ಮೀಸಲಿಟ್ಟೆ.
 
ಭಾರತಕ್ಕೆ ಈ ವಾದ್ಯ ಇನ್ನೂ ಹೊಸದಾದ್ದರಿಂದ ಯಾರ ಬಳಿಯೂ ಕೇಳಿ ಕಲಿಯುವ ಅವಕಾಶ ಇರಲಿಲ್ಲ. ಶಾಸ್ತ್ರೀಯ ಪ್ರಕಾರದ ಅಷ್ಟೂ ಸಂಗತಿಗಳನ್ನು ಈ ವಾದ್ಯದಲ್ಲಿ ನುಡಿಸಲು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯಾದೆ~.

`ಇದನ್ನು ನುಡಿಸಲು ಕೊಳಲಿಗಿಂತ ಮೂರು ಪಟ್ಟು ಹೆಚ್ಚು ಶ್ವಾಸ ಬೇಕು. ವಾದ್ಯ ಎಂಟು ಅಡಿ ಎತ್ತರವಿರುವುದರಿಂದ ಕೈಯಲ್ಲಿ ಹಿಡಿಯುವುದು ಅಸಾಧ್ಯ. ಸತತ ನಾಲ್ಕು ಗಂಟೆ ಕೊಳಲು ಹಿಡಿದು ನಿಂತು ಊದಿ ಅಭ್ಯಾಸವಿರುವುದರಿಂದ ನಿಲ್ಲುವುದು ಕಷ್ಟವಾಗದು. ಇದು 12 ಕೆ.ಜಿ ತೂಕವಿದ್ದು ಕೊಳಲಿನಂತೆ ಇಲ್ಲೂ 6 ರಂಧ್ರಗಳಿವೆ.

ಆದರೆ ಅವೆಲ್ಲಾ ವಾದ್ಯದ ಕೆಳಭಾಗದಲ್ಲಿವೆ. ಕೈಗೆಟಕುವ ಜಾಗದಲ್ಲಿ ಕೀಗಳಿವೆ. ಅವನ್ನು ಅದುಮಿದಾಗ ರಂಧ್ರ ಮುಚ್ಚಿ ಸ್ವರ ಹೊರಡಿಸುತ್ತವೆ. ಮೌತ್‌ಪೀಸ್ ಸಮೀಪದಲ್ಲೇ ಮೈಕ್ ಅಳವಡಿಸಿರುವುದು ಇದರ ಮತ್ತೊಂದು ವಿಶೇಷ.~

`ಊದಲು ಕೊಳಲು ಸುಲಭವಾದರೂ ಇದರಲ್ಲಿ ಬರುವ ಟೋನ್ ವಿಭಿನ್ನ. ಕೊಳಲಿಗಿಂತ ಎರಡು ಸಪ್ತಕ ಕೆಳಗೆ ಇದ್ದರೂ ಮಂದ್ರಸ್ಥಾಯಿಯಲ್ಲಿ ನುಡಿಸಲು ಇದು ಖುಷಿ ನೀಡುತ್ತದೆ. ಒಮ್ಮೆ ಕೀ ಒತ್ತಿದಾಕ್ಷಣ ರಂಧ್ರ ಪೂರ್ತಿಯಾಗಿ ಮುಚ್ಚಿಕೊಳ್ಳುವುದರಿಂದ ಗಮಕ ನುಡಿಸಲು ಸಾಕಷ್ಟು ಪರಿಣತಿ ಬೇಕಾಗುತ್ತದೆ.~

`ಗಾತ್ರದಲ್ಲಿ ದೊಡ್ಡದಾಗಿರುವ ಕಾರಣಕ್ಕೋ ಏನೋ ಇದನ್ನು ಬಳಸುವವರ ಸಂಖ್ಯೆ ಕಡಿಮೆ.  ವಿದೇಶದಲ್ಲಿ ಇದಕ್ಕಿರುವ ಹೆಸರು ಕಾಂಟ್ರಾಬಾಸ್ (contrabass).  ನಾನು ದೇವರ ಕೊಳಲು ಎಂಬರ್ಥದಲ್ಲಿ `ಗಾಡ್ಸ್ ಬನ್ಸಿ~ ಎಂದು ಹೆಸರಿಟ್ಟೆ. ಗೆಳೆಯರು ಗೋಡ್ಖಿಂಡಿ ಬದಲಿಗೆ ನನ್ನನ್ನು `ಗಾಡ್ಸ್~ ಎಂದೂ ಕರೆಯುತ್ತಾರೆ. ಹೀಗಾಗಿ ಈ ಹೆಸರು ಹೆಚ್ಚು ಸೂಕ್ತವೆನಿಸಿತು.~

`ಆರು ತಿಂಗಳ ಹಿಂದೆ ಕೊಂಡಿದ್ದರೂ ಇದು ಭಾರತಕ್ಕೆ ಹೊಸದು ಎಂದು ತಿಳಿದಿದ್ದು ಕಳೆದ ತಿಂಗಳು ಕಲಾಂ ಅವರೊಂದಿಗಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗಿದ್ದಾಗ. ಈ ವಾದ್ಯವನ್ನು ಭಾರತದಲ್ಲಿ ಯಾರೂ ಬಳಸಿಲ್ಲ ಎಂಬ ವಿಷಯ ಅಲ್ಲಿ ತಿಳಿಯಿತು, ಅದೇ ಕಾರಣಕ್ಕೆ ಸಂಗೀತ ಪ್ರಿಯರಿಗೆ ಹೊಸ ವಾದ್ಯವನ್ನು ಪರಿಚಯಿಸಲೆಂದು ಈ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ~ ಎಂದರು.

ವಾದ್ಯದ ಕೊಡುಗೆ ಏನಿರಬೇಕೆಂಬುದು ನುಡಿಸುವವನಿಗೆ ಗೊತ್ತಿದ್ದರೆ ಅದನ್ನು ಹೊರತರುವುದು ಕಷ್ಟವಲ್ಲ ಎಂದು ಹೇಳುವ ಗೋಡ್ಖಿಂಡಿ, ಪಿಟೀಲು, ಸ್ಯಾಕ್ಸೋಫೋನ್, ಮ್ಯಾಂಡೊಲಿನ್‌ಗಳ ಸಾಲಿನಲ್ಲಿ ಮತ್ತೊಂದು ಹೊಸ ವಾದ್ಯವನ್ನು ಪರಿಚಯಿಸಿದ್ದಾರೆ. ಹೊಸದಾಗಿ ಕೊಳ್ಳುವುದಾದರೆ ಇದರ ಬೆಲೆ ಇಪ್ಪತ್ತು ಸಾವಿರ ಯುಎಸ್ ಡಾಲರ್!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT