ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದಿದೆ ಬಿಎಫ್‌ಸಿ

Last Updated 28 ಜುಲೈ 2013, 19:59 IST
ಅಕ್ಷರ ಗಾತ್ರ

ರಾಷ್ಟ್ರೀಯ ಫುಟ್‌ಬಾಲ್ ವಲಯದಲ್ಲಿ ಕಳೆದ ಒಂದು ವಾರದ ಈಚೆಗೆ ಬೆಂಗಳೂರಿನ ಹೆಸರು ಬಹಳಷ್ಟು ಕೇಳಿ ಬರುತ್ತಿದೆ. ಫುಟ್‌ಬಾಲ್‌ನಲ್ಲಿ ಎತ್ತರದ ಚಟುವಟಿಕೆಗೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯೊಂದರಿಂದಾಗಿ ದೇಶದಾದ್ಯಂತ ಫುಟ್‌ಬಾಲ್ ಪ್ರಿಯರು ಬೆಂಗಳೂರಿನತ್ತ ನೋಡುತ್ತಿದ್ದಾರೆ. ದೇಶದ ಪ್ರಮುಖ ಉದ್ದಿಮೆ ಸಂಸ್ಥೆ ಜಿಂದಾಲ್ ಗುಂಪಿನವರು ಇದೀಗ ಚಾಲ್ತಿಗೆ ತಂದಿರುವ `ಬೆಂಗಳೂರು ಫುಟ್‌ಬಾಲ್ ಕ್ಲಬ್' ರಾಷ್ಟ್ರೀಯ ಲೀಗ್‌ನಲ್ಲಿ ಮಹತ್ತರ ಸಾಮರ್ಥ್ಯ ತೋರುವ ಹೆಬ್ಬಯಕೆಯನ್ನು ಘೋಷಿಸಿದೆ.

ಬೆಂಗಳೂರಿನಲ್ಲಿ ಫುಟ್‌ಬಾಲ್‌ಗೆ ಸಂಬಂಧಿಸಿದಂತೆ ಅದ್ಭುತವಾದ ಪರಂಪರೆ ಇದೆ. ಸುಮಾರು ಎಪ್ಪತ್ತು ವರ್ಷಗಳ ಹಿಂದೆಯೇ ಇಲ್ಲಿ ಪ್ರಮುಖ ಟೂರ್ನಿಗಳು ನಡೆದಿದ್ದವು, ಲೀಗ್ ಚಟುವಟಿಕೆಗಳೂ ಆರಂಭವಾಗಿದ್ದವು. ಆ ಕಾಲದಲ್ಲಿಯೇ ಬೆಂಗಳೂರಿನ ಅತಿರಥ ಮಹಾರಥ ಆಟಗಾರರು ಕೋಲ್ಕತ್ತಾದಂತಹ ಕಡೆ ಹೋಗಿ ಅಲ್ಲಿನ ಪ್ರಮುಖ ಕ್ಲಬ್‌ಗಳಲ್ಲಿ ಆಡಿದ್ದಾರೆ.

ಇವತ್ತಿಗೂ ಸ್ಥಳೀಯ ಲೀಗ್ ಪಂದ್ಯಗಳನ್ನು ವೀಕ್ಷಿಸಲು ಅಶೋಕ ನಗರದಲ್ಲಿರುವ ಜಿಲ್ಲಾ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸಾವಿರಾರು ಮಂದಿ ಟಿಕೆಟು ಖರೀದಿಸುವುದನ್ನು ನೋಡಬಹುದು. ಅಷ್ಟರಮಟ್ಟಿಗೆ ಈ ನಗರದಲ್ಲಿ ಫುಟ್‌ಬಾಲ್ ಸಾಕಷ್ಟು ಜನಪ್ರಿಯವೇ. ಆದರೆ `ಕ್ಲಬ್ ಫುಟ್‌ಬಾಲ್' ಮಾತ್ರ ಇಲ್ಲಿ ಕೋಲ್ಕತ್ತಾ ಅಥವಾ ಗೋವಾದ `ವೈಭವ' ಕಾಣಲಾಗಿಲ್ಲ.

ಹಿಂದೆ ಸೀಸರ್ಸ್ ಕಪ್, ಫೆಡರೇಷನ್ ಕಪ್, ಎನ್‌ಎಫ್‌ಎಲ್ ನಡೆ ದಿದ್ದಾಗ ಇಲ್ಲಿನ ಐಟಿಐ, ಹಿಂದೂಸ್ತಾನ್ ಏರೋನಾಟಿಕ್ಸ್ ತಂಡಗಳು ಗಮನ ಸೆಳೆದಿದ್ದವು. ಏಳು ದಶಕಗಳ ಹಿಂದೆಯೇ ಈ ನಗರದ ತಂಡವೊಂದು ಮುಂಬೈನಲ್ಲಿ ನಡೆದಿದ್ದ ಆಗಿನ ಪ್ರತಿಷ್ಠಿತ ರೋವರ್ಸ್ ಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತ್ತು. ಎಪ್ಪತ್ತರ ದಶಕದಲ್ಲಿ ಐಟಿಐ ಫೆಡರೇಷನ್ ಕಪ್ ಗೆದ್ದಿತ್ತು. ಆದರೆ ಈಚೆಗಿನ ವರ್ಷಗಳಲ್ಲಿ ಇಲ್ಲಿ ಏರೋನಾಟಿಕ್ಸ್, ಐಟಿಐ ತಂಡಗಳೆಲ್ಲಾ ಕಳೆಗುಂದಿವೆ.

ಶಿಕ್ಷಣ, ವಿಜ್ಞಾನ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಈ ನಗರ ದೇಶದಲ್ಲಿಯೇ ಪ್ರಸಿದ್ಧಿ ಪಡೆದಿದ್ದರೂ, ಫುಟ್‌ಬಾಲ್‌ಗೆ ಸಂಬಂಧಿಸಿದಂತೆ ಕೋಲ್ಕತ್ತಾ, ಪಣಜಿ, ಹೈದರಾಬಾದ್, ಮುಂಬೈ ನಗರಗಳಿಗಿಂತ ಹಿಂದೆ ಬಿದ್ದಿರುವುದಂತೂ ಎದ್ದು ತೋರುತ್ತಿದೆ.

ಈ ನಗರದಲ್ಲಿರುವ ಹತ್ತಾರು ಫುಟ್‌ಬಾಲ್ ಮೈದಾನಗಳಲ್ಲಿ ಒಂದಿಲ್ಲಾ ಒಂದು ಫುಟ್‌ಬಾಲ್ ಟೂರ್ನಿಗಳು ಸಾಮಾನ್ಯ. ರಾಷ್ಟ್ರೀಯ ತಂಡದಲ್ಲಿ ಈ ನಗರದಿಂದ ಒಬ್ಬರಾದರೂ ಇರುತ್ತಾರೆ. ಹತ್ತಕ್ಕೂ ಹೆಚ್ಚು ಒಲಿಂಪಿಯನ್‌ಗಳ ತವರು ಇದು. ಆದರೆ ರಾಷ್ಟ್ರೀಯ ಮಟ್ಟದ ಕ್ಲಬ್ ಚಾಂಪಿಯನ್‌ಷಿಪ್‌ಗಳಲ್ಲಿ ಗೋವಾ, ಪಶ್ಚಿಮ ಬಂಗಾಳದ ತಂಡಗಳಷ್ಟು ಎತ್ತರದಲ್ಲಿ ಬೆಂಗಳೂರಿನ ತಂಡ ಇಲ್ಲವೇ ಇಲ್ಲ. ಇದೀಗ ಅಂತಹದ್ದೊಂದು ತಂಡ `ಬಿಎಫ್‌ಸಿ' ಗರಿ ಬಿಚ್ಚಿದೆ.

ಪ್ರತಿಷ್ಠಿತ ಐ ಲೀಗ್‌ನ ಪ್ರಸಕ್ತ ಮಾದರಿ 2007ರಲ್ಲಿ ಆರಂಭಗೊಂಡಿತು. ಇದರಲ್ಲಿ 14 ತಂಡಗಳಿವೆ. ಈವರೆಗೆ ಚರ್ಚಿಲ್ ಬ್ರದರ್ಸ್, ಡೆಂಪೊ ಮತ್ತು ಸಲಗಾಂವಕರ್ ಪ್ರಶಸ್ತಿ ಗೆದ್ದಿವೆ. ಪ್ರತಿ ವರ್ಷ ಅಕ್ಟೋಬರ್‌ನಿಂದ ಮೇ ತಿಂಗಳವರೆಗೆ ನಡೆಯುವ ಈ ಲೀಗ್‌ನಲ್ಲಿ ಪ್ರತಿ ತಂಡ 26 ಪಂದ್ಯಗಳನ್ನು ಆಡಲಿವೆ. ಒಟ್ಟು 182 ಪಂದ್ಯಗಳು ನಡೆಯಲಿವೆ.

ಹಿಂದಿನ ಐ ಲೀಗ್ ಸಂಘಟನಾ ಸಮಿತಿಯ ಮುಖ್ಯಸ್ಥರಾಗಿದ್ದ ಸಜ್ಜನ್ ಜಿಂದಾಲ್ ಅವರಿಗೆ ಲೀಗ್‌ನ ಜನಪ್ರಿಯತೆ ಅರಿವಿಗೆ ಬಂದಿದೆ. ಪ್ರಬಲ ಕ್ಲಬ್ ಕಟ್ಟುವ ಕನಸು ಕಂಡಿದ್ದಾರೆ. ಅದು `ಬೆಂಗಳೂರು ಫುಟ್‌ಬಾಲ್ ಕ್ಲಬ್' ಸ್ವರೂಪ ಪಡೆದುಕೊಂಡಿದೆ. ಯೂರೊಪ್‌ನ ಪ್ರತಿಷ್ಠಿತ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ನ ಮಾಜಿ ಆಟಗಾರ ಆ್ಯಶ್ಲೆ ವೆಸ್ಟ್‌ವುಡ್ ಈ ತಂಡದ ಮುಖ್ಯ ಕೋಚ್ ಆಗಿರುವುದೊಂದು ವಿಶೇಷ. 

ಬೆಂಗಳೂರಿನಲ್ಲಿ ಫುಟ್‌ಬಾಲ್ ಕ್ಲಬ್‌ಗಳ ಏಳುಬೀಳುಗಳು ಸಾಮಾನ್ಯ. ಅರ್ಧ ಶತಮಾನದ ಹಿಂದೆ ಅತ್ಯಂತ ಬಲಿಷ್ಠ ಕ್ಲಬ್ ಆಗಿದ್ದ ಬೆಂಗಳೂರು ಮುಸ್ಲಿಮ್ಸ ಇವತ್ತು ಸಂಪೂರ್ಣ ಮೂಲೆಗುಂಪಾಗಿದೆ. ರಾಷ್ಟ್ರೀಯ ಲೀಗ್‌ನಲ್ಲಿ ದೊಡ್ಡ ಸುದ್ದಿ ಮಾಡಿದ್ದ ಐಟಿಐ, ಏರೋನಾಟಿಕ್ಸ್‌ಗಳೂ ಇವತ್ತು ಎತ್ತರದಲ್ಲಿಲ್ಲ. ರಾಷ್ಟ್ರೀಯ ಮಟ್ಟದಲ್ಲಿಯೂ ಇದೇ ಪರಿಸ್ಥಿತಿ. ಹಿಂದೆ ಎದ್ದು ಕಾಣುತ್ತಿದ್ದ ಎಫ್‌ಸಿ ಕೊಚ್ಚಿನ್, ಜೆಸಿಟಿ ಫಗ್ವಾರ, ಮುಂಬೈನ ಮಹೇಂದ್ರ ಕ್ಲಬ್‌ಗಳು ಈಗ ಸುದ್ದಿಯಲ್ಲಿಯೇ ಇಲ್ಲ. ಇಂತಹ ವೈಫಲ್ಯದ ಪಾಠ ಗೊತ್ತಿರುವ `ಬಿಎಫ್‌ಸಿ' ತಾವು ಎಡವದೆ ಹೆಜ್ಜೆ ಇಡುವ ಎಚ್ಚರಿಕೆ ವಹಿಸಬಹುದು.

ಬೆಂಗಳೂರಿನಲ್ಲಿ ಫುಟ್‌ಬಾಲ್‌ಗೆ ಶತಮಾನದ ಪರಂಪರೆ ಇದೆ. ಇದೀಗ ಇಲ್ಲಿ ನೂರಕ್ಕೂ ಹೆಚ್ಚು ಕ್ಲಬ್‌ಗಳಿವೆ. ಎಪ್ಪತ್ತರ ದಶಕದ ಆರಂಭದಲ್ಲಿ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಮುತುವರ್ಜಿಯಿಂದಾಗಿ ನಗರದ ಹೃದಯಭಾಗದಲ್ಲಿರುವ ಅಶೋಕನಗರದಲ್ಲಿ ಫುಟ್‌ಬಾಲ್ ಚಟುವಟಿಕೆಗಾಗಿಯೆ ಸರ್ಕಾರ ವಿಶಾಲ ಜಾಗವನ್ನು ಮಂಜೂರು ಮಾಡಿತ್ತು. ಅಲ್ಲಿಯೇ ಫುಟ್‌ಬಾಲ್ ಕ್ರೀಡಾಂಗಣ ನಿರ್ಮಾಣಗೊಂಡು ಮೂರು ದಶಕಗಳು ಉರುಳಿವೆ. ಇದೇ ಕ್ರೀಡಾಂಗಣದಲ್ಲಿ ಫುಟ್‌ಬಾಲ್ ಅಕಾಡೆಮಿ ಸ್ಥಾಪನೆಗೆ `ಫಿಫಾ' ಧನಸಹಾಯ ನೀಡಿದೆ. ಇಲ್ಲಿ ಉತ್ತಮವಾದ ಕೃತಕಹಾಸು ಇದೆ.

ಈ ಎಲ್ಲಾ ಮೂಲ ಸೌಕರ್ಯಗಳನ್ನು ಬಳಸಿಕೊಳ್ಳಲು `ಜೆಎಸ್‌ಡಬ್ಲ್ಯು' ಸಂಸ್ಥೆಯ `ಬೆಂಗಳೂರು ಫುಟ್‌ಬಾಲ್ ಕ್ಲಬ್'ಗೆ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಅನುಮತಿ ನೀಡಿದೆ. ಹೀಗಾಗಿ ಈ ಕ್ರೀಡಾಂಗಣವನ್ನು `ಜೆಎಸ್‌ಡಬ್ಲ್ಯು' ಸಂಸ್ಥೆಯವರು `ನಮ್ಮ ಮನೆ' ಎಂದು ಘೋಷಿಸಿದೆ. ಈ ಮನೆಯನ್ನೇ ಕೇಂದ್ರವಾಗಿಟ್ಟುಕೊಂಡು ನಗರದಲ್ಲಿ ಫುಟ್‌ಬಾಲ್ ಚಟುವಟಿಕೆಗೆ ಹೊಸ ಆಯಾಮ ನೀಡುವುದಾಗಿ ಅದು ತನ್ನ ಆಶಯ ವ್ಯಕ್ತ ಪಡಿಸಿದೆ.

ಜತೆಗೆ ಜಿಂದಾಲ್ ಗುಂಪಿನವರು ನೂರು ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ಇಲ್ಲಿ ವಿನಿಯೋಗಿಸಿ ಕ್ರೀಡಾಂಗಣದ ನವೀಕರಣ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ  ಅಂತಹ ಒಪ್ಪಂದ ನಡೆದರೆ  ರಾಜ್ಯ ಫುಟ್‌ಬಾಲ್ ಸಂಸ್ಥೆ ಆ ಪ್ರಕ್ರಿಯೆ ಬಗ್ಗೆ ಪಾರದರ್ಶಕವಾಗಿರ ಬೇಕಾದ ಅಗತ್ಯ ಇದೆ. ಅದೇನೇ ಇದ್ದರೂ, ಕ್ಲಬ್ ಫುಟ್‌ಬಾಲ್ ಚಟುವಟಿಕೆಗೆ ಸಂಬಂಧಿಸಿದಂತೆ `ಬಿಎಫ್‌ಸಿ' ಬೆಂಗಳೂರಿಗೆ ಹೊಸ ರಂಗು ತರಲಿರುವುದಂತೂ ನಿಜ.            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT