ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದಿಶ್, ಖಯಾಲ್, ಆಲಾಪ್‌ಗಳ ಮೋಡಿ

Last Updated 15 ಜನವರಿ 2013, 19:59 IST
ಅಕ್ಷರ ಗಾತ್ರ

ಕರ್ನಾಟಕ ಶಾಸ್ತ್ರೀಯ ಸಂಗೀತವಷ್ಟೇ ವಿಜೃಂಭಿಸುತ್ತಿದ್ದ ನಗರದಲ್ಲಿ ಹಿಂದೂಸ್ತಾನಿ ಸಂಗೀತ ಗಟ್ಟಿಯಾಗಿ ನೆಲೆಯೂರಲು ಉತ್ತರ ಕರ್ನಾಟಕದಿಂದ ಇಲ್ಲಿಗೆ ಬಂದ ಕೆಲ ಕಲಾವಿದರ ಕೊಡುಗೆ ಮಹತ್ವವಾದುದು. ಅದರಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ರವೀಂದ್ರ ಸೊರಗಾಂವಿಯವರ ಪಾತ್ರವೂ ಇದೆ. ಅಲ್ಲದೆ ಹಿಂದೂಸ್ತಾನಿ ಗಾಯಕರು ಸಿನಿಮಾ ಸಂಗೀತಕ್ಕೆ ಸಲ್ಲರು ಎಂಬ ಮಾತನ್ನೂ ಹುಸಿಗೊಳಿಸಿ `ಪುಟ್ಟಕ್ಕನ ಹೈವೆ' ಚಲನಚಿತ್ರದ ಹಿನ್ನೆಲೆ ಗಾಯನಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಗುರುಗಳ ಮಾರ್ಗದರ್ಶನದ ಜೊತೆಗೆ ಅವಿರತ ಪರಿಶ್ರಮದ ಫಲವಾಗಿ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು `ಇಂಡಿಯನ್ ಮ್ಯೂಸಿಕ್ ಅಸೋಸಿಯೇಷನ್' ಎಂಬ ಸಂಸ್ಥೆಯನ್ನೂ ಹುಟ್ಟು ಹಾಕಿದ್ದಾರೆ.

ಅಜ್ಜ ಶ್ರೀಕೃಷ್ಣ ಪಾರಿಜಾತ ಕಲಾಕೇಸರಿ ದಿ. ಮುರಿಗೆಪ್ಪ ಸೊರಗಾಂವಿಯವರ ಕಲೆ ಮೊಮ್ಮಗನಿಗೆ ಬಳುವಳಿಯಾಗಿ ಬಂದಿದೆ. ಹಾಗಾಗಿ ಅವರ ಸ್ಮರಣೆಯಲ್ಲಿ ಸಂಸ್ಥೆಯ ವಾರ್ಷಿಕೋತ್ಸವವನ್ನು ನಡೆಸಿಕೊಂಡು ಬಂದಿರುವುದಲ್ಲದೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಿಗೆ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದಾರೆ. ಕಳೆದ ವಾರ ಎರಡು ದಿನಗಳ ಕಾಲ ನಡೆದ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ `ಪರಂಪರೆ ಯುವ ಸಂಗೀತೋತ್ಸವ ಹಾಗೂ ಸುಗಮ ಸಂಗೀತ' ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಮೊದಲ ದಿನ ನಡೆದ ಕಾರ್ಯಕ್ರಮದಲ್ಲಿ ಪಂ. ಬಾಲಚಂದ್ರ ನಾಕೋಡ್ ಹಾಗೂ ಸ್ಮಿತಾ ಬೆಳ್ಳೂರ್ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತಪಡಿಸಿದರು. ಮೊದಲಿಗೆ ಸ್ಮಿತಾ ಬೆಳ್ಳೂರ್ `ಶ್ರೀ' ರಾಗದಿಂದ ಗಾಯನವನ್ನು ಆರಂಭಿಸಿ ಕಾರ್ಯಕ್ರಮಕ್ಕೆ ಉತ್ತಮ ಚಾಲನೆ ನೀಡಿದರು. ಧೃತ್‌ತೀನ್ ತಾಳದಲ್ಲಿ `ಸುಂದರ ಸುಭಗ ವದನ ಶ್ಯಾಮ್' ಹಾಗೂ `ತೇರಿ ಹೋಟನ ಸಾಥ್' ಎಂಬ ಬಂದಿಶ್‌ಗಳನ್ನು ಸುಂದರ ಗಾಯನದಿಂದ ಸಮೃದ್ಧಗೊಳಿಸಿದರು. ಆಲಾಪ್‌ಗಳ ಗಾಯನದಲ್ಲಿ ಮಂದ್ರ ಹಾಗೂ ತಾರ ಸಪ್ತಕಗಳನ್ನು ಹಾಡುವಾಗ ಹಸನ್ಮುಖಿಯಾಗಿ ಹಾಡಿದ ರೀತಿ ಮೆಚ್ಚುವಂತಿತ್ತು. ನಂತರ `ರಂಗಿ ಸಾರೆ ಗುಲಾಬಿ' ಎಂಬ ಗೀತೆಯೊಂದನ್ನು ಸಹ ಹಾಡಿದರು. ಲವಲವಿಕೆಯಿಂದ ಕೂಡಿದ್ದ ಗಾಯನ ಶೈಲಿ ಶ್ರೋತೃಗಳ ಮನ ಗೆಲ್ಲುವಲ್ಲಿ ಸಫಲವಾಯಿತು. ತಬಲಾದಲ್ಲಿ ನಿಸಾರ್ ಅಹ್ಮದ್ ಹಾಗೂ ಹಾರ್ಮೋನಿಯಂನಲ್ಲಿ ಸತೀಶ್ ಕೊಳ್ಳಿಯವರ ಸಾಥಿ ಸಮರ್ಪಕವಾಗಿತ್ತು. ಮಂದ್ರ ಹಾಗೂ ತಾರ ಸಪ್ತಕಗಳ ಗಾಯಯನದಲ್ಲಿಯೂ ಹಸನ್ಮುಖಿಯಾಗಿ ಹಾಡಿದ ರೀತಿ ಮೆಚ್ಚುವಂತಿತ್ತು.

ನಂತರ ಬಾಲಚಂದ್ರ ನಾಕೋಡರು ಸಂಗೀತ ಕಾರ್ಯಕ್ರಮವನ್ನು ಮುಂದುವರಿಸಿದರು. ರಾಗ `ಭಾಗೇಶ್ರೀ ಅಂಗದ ಚಂದ್ರಕೌಂಸ' ಆರಿಸಿಕೊಂಡು ಅದಕ್ಕೆ ತಂದೆ ಪಂ. ಅರ್ಜುನ್ ಸಾ ನಾಕೋಡರು ರಚಿಸಿದ `ಚಲೋ ಉಟಾವೋ ಗಿರಿಧಾರಿ' ಎಂಬ ಬಂದಿಶನ್ನು ವಿಲಂಬಿತ್ ತೀನ್ ತಾಳದಲ್ಲಿ ಹಾಡಿದರು. ರಾಗದ ಕೊನೆಯಲ್ಲಿ ಧೃತ್ ತೀನ್ ತಾಳದಲ್ಲಿ `ವಾರಿ ವಾರಿಜ' ಎಂಬ ಖಯಾಲ್ ಹಾಡಿದರು. ಕೊನೆಯಲ್ಲಿ `ಪ್ರಭುಕಿ ಗುನಗಾವೋ' ಎಂಬ ಠುಮ್ರಿಯ ಗಾಯನದೊಂದಿಗೆ ಕಾರ್ಯಕ್ರಮವನ್ನು ಅಂತ್ಯಗೊಳಿಸಿದರು. ತಬಲಾದಲ್ಲಿ ರಾಜೇಂದ್ರ ನಾಕೋಡ್ ಹಾಗೂ ಹಾರ್ಮೋನಿಯಂನಲ್ಲಿ ಸತೀಶ್ ಕೊಳ್ಳಿಯವರ ಸಾಥ್ ಉತ್ತಮವಾಗಿತ್ತು. ತಾನ್‌ಪುರದಲ್ಲಿ ಮಧುಸೂದನ್ ನಾಕೋಡ್ ಹಾಗೂ ಬಸವರಾಜ್ ಮುಗಳಖೋಡ್ ಸಹಕರಿಸಿದರು.

ಎರಡನೆಯ ದಿನದ ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಹಾಗೂ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಯುವ ಗಾಯಕ-ಗಾಯಕಿಯರು, ಸಂಗೀತಾಸ್ತರಿಗೆ ವೇದಿಕೆ ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಂ. ರವೀಂದ್ರ ಸೊರಗಾಂವಿ, ವಿಜಯ್ ಹಾವನೂರ್, ಮಾಲಿನಿ ಕೇಶವಪ್ರಸಾದ್, ವೀಣಾ ಮೂರ್ತಿ, ಮಂಜುನಾಥ ನಾಯ್ಕ, ಶಿಲ್ಪಶ್ರೀ, ಹೊಂಬೇಗೌಡ ಎಚ್, ಡಾ. ವೇಮಗಲ್ ನಾರಾಯಣಸ್ವಾಮಿ, ದಿವಾಕರ ಕಶ್ಯಪ್, ಬಸವರಾಜ ಮುಗಳಖೊಡ್, ಇಂಚರ ಎಸ್, ಪ್ರವೀಣ್ ಕುಮಾರ್, ಮೈತ್ರಿ, ಮೇಘಾ ಸೊರಗಾಂವಿ (ಭರತನಾಟ್ಯ, ಗಾಯನ) ಹಾಗೂ ಹರ್ಷಿತಾ ಜಿ. (ಭರತನಾಟ್ಯ) ಪಾಲ್ಗೊಂಡಿದ್ದರು. ವಾದ್ಯದಲ್ಲಿ ಪರಶುರಾಮ್-ಕೀ ಬೋರ್ಡ್, ವಿಕಾಸ್ ನರೇಗಲ್-ತಬಲಾ, ಅಭಿ-ರಿದಂ ಪ್ಯಾಡ್, ಗಣೇಶ್ ಭಟ್ಟ- ಕೊಳಲು ವಾದನದಲ್ಲಿ ಸಹಕಾರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT