ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

Last Updated 7 ಅಕ್ಟೋಬರ್ 2012, 9:35 IST
ಅಕ್ಷರ ಗಾತ್ರ

ಕಾರವಾರ: ಕಾವೇರಿ ಜಲವಿವಾದಕ್ಕೆ ಸಂಬಂಧಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರೆನೀಡಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಹಳಿಯಾಳ ಹಾಗೂ ಯಲ್ಲಾಪುರ ತಾಲ್ಲೂಕುಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರೆಯೆ ವ್ಯಕ್ತವಾಗಿದ್ದ ಬಸ್ ಮತ್ತು ಆಟೋ ಸಂಚವಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು.

ಶಿರಸಿ, ಸಿದ್ದಾಪುರ, ಭಟ್ಕಳ, ಹೊನ್ನಾರವ, ಕುಮಟಾ, ಅಂಕೋಲಾ, ಕಾರವಾರ ಮತ್ತು ಮುಂಡಗೋಡದಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರ ಮತ್ತು ಪಟ್ಟಣಗಳಲ್ಲಿ ಜನಜೀವನ ಎಂದಿನಂತೆ ನಡೆಯಿತು. ಬಸ್ ಸಂಚಾರ ಮಾತ್ರ ಭಾಗಶಃ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಸ್ವಲ್ಪ ತೊಂದರೆಯಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕಾರವಾರದಲ್ಲಿ ಬೆಳಿಗ್ಗೆ 10ರ ವರೆಗೆ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಮಧ್ಯಾಹ್ನದ ಹೊತ್ತಿಗೆ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು.

ಹಳಿಯಾಳದಲ್ಲಿ ಮೆರವಣಿಗೆ
ಹಳಿಯಾಳ:
ತಾಲ್ಲೂಕಿನಲ್ಲಿ ಜಯ ಕರ್ನಾಟಕ ಸಂಘಟನೆ ಬಂದ್ ನೇತೃತ್ವ ವಹಿಸಿತ್ತು. ಬೆಳಿಗ್ಗೆಯಿಂದಲೇ ಅಂಗಡಿಗಳು ಸಂಪೂರ್ಣವಾಗಿ ಬಂದಾಗಿದ್ದವು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕುಗಳ ಕಾರ್ಯಕ್ಕೆ ಅಡ್ಡಿಯಾಗಲಿಲ್ಲ. ನ್ಯಾಯಾಲಯ ಕಲಾಪಗಳು ಎಂದಿನಂತೆ ನಡೆಯಿತು.

ಜಯಕರ್ನಾಟಕ ಸಂಘದ ಸದಸ್ಯರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ವಿಲಾಸ ಕಣಗಲಿ, ಶಿವಕುಮಾರ ಹುಲಕೊಪ್ಪ, ಶಿರಾಜ ಮುನವಳ್ಳಿ, ಪುಂಡಲೀಕ ಹುಲಕೊಪ್ಪ, ಬಸವರಾಜ ಚಲವಾದಿ, ಮಂಜುನಾಥ ಕಿತ್ತೂರ, ಉಮೇಶಗೌಡ ಹಟ್ಟಿಹೊಳಿ, ಸಂಜೀವ ಗೌಡ, ರಾಜು ಗೌಡ, ರುದ್ರಪ್ಪಾ ಮಲ್ಲಕ್ಕಿ, ಪ್ರಕಾಶ  ಕುಕಡೊಳ್ಳಿ,  ಸುರೇಶ ಚಲವಾದಿ, ವಿಕಾಶ ಶೆಟ್ಟಿ ಮತ್ತಿತರರು ಇದ್ದರು.

ವಿಧಾನ ಪರಿಷತ್ ಸದಸ್ಯರಿಂದ ಬೆಂಬಲ:
ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿ ಬೆಂಬಲ ಸೂಚಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಷ ಕೋರ್ವೆಕರ, ಮುಖಂಡರಾದ ಸಂಜೀತ ಗಿರಿ, ನಾರಾಯಣ ಬೆಳಗಾಂವಕರ, ಶಿವಪುತ್ರಪ್ಪಾ ನುಚ್ಚಂಬ್ಲಿ, ಸಂತೋಷ ಹುಂಡೇಕರ, ಮಹೇಶ ಮಿಂಡೋಳಕರ, ಸಿಕಂದರ್, ವಿನಯ ಗಿಂಡೆ ಉಪಸ್ಥಿತರಿದ್ದರು.

ಭಟ್ಕಳದಲ್ಲಿ ರಸ್ತೆ ತಡೆ
ಭಟ್ಕಳ:
ಜೈ ಭುವನೇಶ್ವರಿ ಕನ್ನಡ ಸಂಘ, ಜಯಕರ್ನಾಟಕ ಸಂಘ ಮತ್ತಿತರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ರಸ್ತೆತಡೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ಕೃಷ್ಣನಾಯ್ಕ, ಶ್ರೀಧರನಾಯ್ಕ, ಗೋವಿಂದ ನಾಯ್ಕ, ದಿನೇಶನಾಯ್ಕ, ದೀಪಕ ನಾಯ್ಕ, ಸಚಿನ್ ಮಹಾಲೆ, ವೆಂಕಟೇಶ ದೇವಾಡಿಗ, ಯೋಗೇಶ ಮೊಗೇರ್, ಸುಧಾಕರ ನಾಯ್ಕ, ಪಾಂಡುನಾಯ್ಕ ಮುಂತಾದವರು ಪಾಲ್ಗೊಂಡಿದ್ದರು.

ಬಂದ್ ಹಿನ್ನೆಲೆಯಲ್ಲಿ ಬಸ್ ಹಾಗೂ ಆಟೋಗಳ ಓಡಾಟ ಸ್ಥಗಿತಗೊಂಡಿತ್ತು. ಅಂಗಡಿಗಳು ತೆರೆದುಕೊಂಡಿದ್ದವು.
ವಹಿವಾಟು ಸ್ಥಗಿತ

ಯಲ್ಲಾಪುರ: 
ಪಟ್ಟಣದಲ್ಲಿ ಬೆಳಿಗ್ಗೆಯಿಂದ ಕೆಲವು ಅಂಗಡಿಗಳು ತೆರೆದಿದ್ದರೂ ಕೊನೆಗೆ ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿ ವಹಿವಾಟು ಸ್ಥಗಿತಗೊಳಿಸಿದರು. 

  ಕನ್ನಡಪರ ಸಂಘಟನೆಗಳೊಂದಿಗೆ ದಲಿತ, ಅಲ್ಪಸಂಖ್ಯಾತ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿದ್ದವು. ದೇವಿ ಮೈದಾನದಿಂದ ಮೆರವಣಿಗೆ ನಡೆಸಿದ ಕರವೇ ಕಾರ್ಯಕರ್ತರು ಪ್ರಧಾನಿ ಮನಮೋಹನಸಿಂಗ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪ್ರತಿಕೃತಿ ದಹಿಸಿದರು.

ಅಂಕೋಲಾ-ಹುಬ್ಬಳ್ಳಿ ರೈಲ್ವೆ ಕ್ರಿಯಾ ಸಮಿತಿ ಸಂಚಾಲಕ ಮಹಾರುದ್ರಪ್ಪ ನೆಲ್ಲಿಗಣಿ, ತಾಮೀರ ಬ್ಯಾಂಕ್ ಅಧ್ಯಕ್ಷ ಮಹಮ್ಮದ್ ಗೌಸ್, ಕರವೇ ಉಪಾಧ್ಯಕ್ಷ ಸುಧೀರ ಕೊಡ್ಕಣಿ, ಕರವೇ ಅಧ್ಯಕ್ಷ ಸಂತೋಷ ನಾಯ್ಕ, ಉಪಾಧ್ಯಕ್ಷ ಸೋಮೇಶ್ವರ ನಾಯ್ಕ, ಪ್ರಮುಖರಾದ ಪ್ರಕಾಶ ಕಟ್ಟಿಮನಿ, ಮಾರುತಿ ಬೋವಿವಡ್ಡರ್, ಸಂತೋಷ ನಾಟೆಕರ್, ಪ್ರತಾಪ ನಾಯ್ಕ, ಮಾರುತಿ ಜೋಗಿ, ಸಂಜೀವ ಜಾಧವ, ಸುರೇಶ,  ಶಫಿ ಮಹಮ್ಮದ್ ಶೇಖ್, ಅಶೋಕ

ಕೊರವರ, ಕೆಡಿಎಚ್‌ಎಎಸ್ ಜಿಲ್ಲಾ ಘಟಕದ ಅಧ್ಯಕ್ಷ ದ್ಯಾಮಣ್ಣ ಬೋವಿವಡ್ಡರ್, ಕಾರ್ಯದರ್ಶಿ ಉಮೇಶ ಶಿರಾಲಿ, ಸವಿತಾ ಸಮಾಜದ ರಘು.ಕೆ.ಮಹಾಲೆ ಪಾಲ್ಗೊಂಡಿದ್ದರು. ಪತ್ರಿಕಾ ವರದಿಗಾರರ ಸಂಘ, ಭಗತ್‌ಸಿಂಗ್ ಆಟೋ ಚಾಲಕ-ಮಾಲೀಕರ ಸಂಘ, ಕರ್ನಾಟಕ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಂಘ, ಗೂಡ್ಸ್ ರಿಕ್ಷಾ ಯೂನಿಯನ್,  ಜೆಡಿಎಸ್ ಬೆಂಬಲ ಸೂಚಿಸಿದವು.

ಹೊನ್ನಾವರದಲ್ಲಿ ನೀರಸ
ಹೊನ್ನಾವರ:
ಬಂದ್‌ಗೆ ಇಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಗ್ರಾಮೀಣ ಭಾಗದ ಓಡಾಟ ರದ್ದುಗೊಳಿಸಿದ್ದರಿಂದ ಪ್ರಯಾಣಿಕರು ಪರದಾಡಿದರು.

ಕರವೇ ಕಾರ್ಯಕರ್ತರು ಪಟ್ಟಣದಲ್ಲಿ ಬೈಕ್ ರ‌್ಯಾಲಿ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು. ಉದಯರಾಜ ಮೇಸ್ತ, ಸುಧಾಕರ ಹೊನ್ನಾವರ, ಸತ್ಯಾ ಜಾವಗಲ್, ಶೇಖರ ಒಗ್ಗರ್, ಆನಂದ ಅಂಬಿಗ, ಮಾರುತಿ ಸಂಕೊಳ್ಳಿ ಮತ್ತಿತರರು ಭಾಗವಹಿಸಿದ್ದರು.

ಸಂಚಾರ ವ್ಯತ್ಯಯ
ಮುಂಡಗೋಡ:
ಬಂದ್‌ಗೆ ತಾಲ್ಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ತಕ್ತವಾಗಿದ್ದು ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರದಲ್ಲಿ ಸ್ವಲ್ಪ ವ್ಯತ್ಯಯ ಆಗಿತ್ತು. ಹೋರಾಟಕ್ಕೆ ಬೆಂಬಲ ಸೂಚಿಸಿ ವಕೀಲರ ಸಂಘದವರು ಕೋರ್ಟ್ ಕಲಾಪದಿಂದ ದೂರ ಉಳಿದರು.  ಸಂಘದ ಅಧ್ಯಕ್ಷ ಗುಡ್ಡಪ್ಪ ಕಾತೂರ, ಸಿ.ಎಸ್.ಗಾಣಿಗೇರ, ಕೆ.ಎನ್.ಹೆಗಡೆ, ಸಲೀಂ ನಂದಿಕಟ್ಟಿ, ಆರ್.ಎನ್.ಹೆಗಡೆ ಉಪಸ್ಥಿತರಿದ್ದರು.

ಕರವೇ ಧರಣಿ
ಅಂಕೋಲಾ:
ಬಂದ್‌ಗೆ ತಾಲ್ಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು  ಜನಜೀವನ ಎಂದಿನಂತೆ ಸಾಗಿತ್ತು. ವಾರದ ಸಂತೆ,  ಶಾಲೆ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ವಿದ್ಯಾರ್ಥಿಗಳ ಹಾಜರಾತಿ  ಕಡಿಮೆ ಇತ್ತು.  ಬಸ್ ಸಂಚಾರ ಅಬಾಧಿತವಾಗಿತ್ತು. ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ತಹಸೀಲ್ದಾರ ಕಚೇರಿ ಎದುರು ಧರಣಿ ನಡೆಸಿದರು. 

 ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ  ಮಂಜುನಾಥ ನಾಯ್ಕ, ಉಪಾಧ್ಯಕ್ಷ ಭಾಸ್ಕರ ನಾರ್ವೇಕರ, ತಾಲ್ಲೂಕು ಘಟಕದ ಅಧ್ಯಕ್ಷ ಉದಯ ನಾಯ್ಕ, ಸಂಘಟನಾ ಕಾರ್ಯದರ್ಶಿ ರಂಜನ್ ನಾಯ್ಕ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಗಾಂವಕರ, ವಕೀಲರ ಸಂಘದ ಅಧ್ಯಕ್ಷ ಉಮೇಶ ನಾಯ್ಕ  ಉಪಸ್ಥಿತರಿದ್ದರು. 

ಮಿಶ್ರ ಪ್ರತಿಕ್ರಿಯೆ
ಸಿದ್ದಾಪುರ:
ಬಂದ್‌ಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಪಟ್ಟಣದಲ್ಲಿ ಅರ್ಧಕ್ಕಿಂತ ಹೆಚ್ಚಿನ ಅಂಗಡಿಗಳು ಮುಚ್ಚಿದ್ದವು. ಕೆಲವು ಅಂಗಡಿಗಳು ಎಂದಿನಂತೆ ವ್ಯಾಪಾರ-ವಹಿವಾಟು ನಡೆಸಿದವು. ಶಾಲಾ ಕಾಲೇಜುಗಳು ತೆರೆದಿದ್ದವು.  ಸಾರಿಗೆ ಬಸ್ ಸಂಚಾರ ಕಡಿಮೆಯಾಗಿತ್ತು.

ಉತ್ತಮ ಬೆಂಬಲ
ದಾಂಡೇಲಿ:
ದಾಂಡೇಲಿಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು. ವರ್ತಕರು ಬೆಂಬಲ ಸೂಚಿಸಿದರು. ಬ್ಯಾಂಕ್, ಎಲ್‌ಐಸಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳು ಸ್ಥಗಿತಗೊಂಡವು. ಬಸ್ ಸಂಚಾರ ಇರಲಿಲ್ಲ. ಜಯಕರ್ನಾಟಕ ಸಂಘಟನೆಯವರು ಮೆರವಣಿಗೆ ನಡೆಸಿದರು. 

  ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಸುದರ್ಶನ, ಅವಿನಾಶ ನಾಯಕ, ನಗರಸಭಾ ಅಧ್ಯಕ್ಷ ಗೋವಿಂದ ಮೇಲಗಿರಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಶೋಕ ಪಾಟೀಲ,  ಕಾಂಗ್ರೆಸ್ ಮುಖಂಡ ಎಸ್.ಎಸ್.ಪೂಜಾರ, ರೋಟರಿ ಅಧ್ಯಕ್ಷ ಸೋಮಕುಮಾರ  ಎಸ್, ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ರಿಯಾಜ್ ಶೇಖ್, ಹಿರಿಯ  ಸದಸ್ಯ ಆದಂ ದೇಸೂರ, ಸಾಳುಂಕೆ, ರವಿಸುತಾರ, ಡಿ.ಎಸ್.ಎಸ್.ನ ಗುರುನಾಥ ಮಠಪತಿ,

ಜೆಡಿಎಸ್ ಯುವ ಘಟಕದ ಅಧ್ಯಕ್ಷ ಟಿ.ಎಸ್.ಬಾಲಮಣಿ, ಗ್ರೀನ್ ಅಂಬ್ರೆಲ್ಲಾ ಇಕೋಕ್ಲಬ್ ಅಧ್ಯಕ್ಷ ರೋಶನ್ ಭಾವಾಜಿ, ಕಾರ್ಯದರ್ಶಿ ರಾಹುಲ್ ಭಾವಾಜಿ, ಎಸ್.ಎಸ್.ಕುರ್ಡೇಕರ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎನ್.ವಾಸರೆ, ಕಾಳಿದಾಸ ನಾಯ್ಡು, ಪ್ರೆಸ್ ಕ್ಲಬ್‌ನ ಅಧ್ಯಕ್ಷ ಕೃಷ್ಣಾ ಪಾಟೀಲ, ಕರವೇ ಅಧ್ಯಕ್ಷ ಉದಯ ಶೆಟ್ಟಿ,  ಕಾಂಗ್ರೆಸ್ ಮುಖಂಡ ಕೀರ್ತಿಗಾಂವಕರ, ಮೋಹನ ಹಲವಾಯಿ  ಉಪಸ್ಥಿತರಿದ್ದರು.

ಶಿರಸಿಯಲ್ಲೂ ನೀರಸ
ಶಿರಸಿ:
ಬಂದ್‌ಗೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್ ಸಂಚಾರ ಸಹಜವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT