ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್‌ಗೆ ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ

Last Updated 7 ಅಕ್ಟೋಬರ್ 2012, 9:45 IST
ಅಕ್ಷರ ಗಾತ್ರ

ರಸ್ತೆ ತಡೆಯಿಂದ ಸಂಚಾರಕ್ಕೆ ಅಡ್ಡಿ, ರಾಣೆಬೆನ್ನೂರಿನಲ್ಲಿ ಶಾಸಕರಿಗೆ ದಿಗ್ಬಂಧನ
ಹಾವೇರಿ:
ಕೇಂದ್ರದ ಸೂಚನೆ ಮೇರೆಗೆ ರಾಜ್ಯದ ಜನರ ಹಿತವನ್ನು ಬಲಿಕೊಟ್ಟು ತಮಿಳುನಾಡಿಗೆ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಜಿಲ್ಲೆಯಲ್ಲಿ ಬಹುತೇಕ ಯಶಸ್ವಿಯಾಯಿತು.


ಜಿಲ್ಲೆಯ ಹಾವೇರಿ, ರಾಣೆಬೆನ್ನೂರ, ಹಿರೇಕೇರೂರ, ಶಿಗ್ಗಾವಿ ತಾಲ್ಲೂಕುಗಳಲ್ಲಿ ಬಂದ್ ಯಶಸ್ವಿಯಾಗಿದ್ದರೆ, ಹಾನಗಲ್, ಬ್ಯಾಡಗಿ ಹಾಗೂ ಸವಣೂರು ತಾಲ್ಲೂಕುಗಳಲ್ಲಿ ಭಾಗಶಃ ಯಶಸ್ವಿಯಾಗಿದೆ.

ಬಂದ ಹಿನ್ನೆಲೆಯಲ್ಲಿ ಕರವೇ, ಜಯಕರ್ನಾಟಕ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು, ಅಲ್ಲಲ್ಲಿ ರಸ್ತೆ ತಡೆ, ಟಯರ್‌ಗಳಿಗೆ ಬೆಂಕಿ ಹಂಚಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. ಆದರೆ, ಎಲ್ಲಿಯೂ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.
ಬಂದ್‌ಗೆ ಬೆಂಬಲಿಸಿ ಹಾವೇರಿ ನಗರ ಸೇರಿದಂತೆ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಣೆಯಿಂದ ಮುಚ್ಚಿದ್ದವು. ಅಲ್ಲಲ್ಲಿ ಅರ್ಧ ತೆಗೆದ ಅಂಗಡಿಗಳನ್ನು ಪ್ರತಿಭಟನಕಾರರು ವಾಹನಗಳ ಮೂಲಕ ತೆರಳಿ ಒತ್ತಾಯ ಪೂರ್ವಕವಾಗಿ ಮುಚ್ಚಿಸಿದರು. ಹಾನಗಲ್, ಬ್ಯಾಡಗಿ ತಾಲ್ಲೂಕಿನಲ್ಲಿ ಮಾತ್ರ ಎಂದಿನಂತೆ ವ್ಯಾಪಾರ ವಹಿವಾಟು ನಡದಿತ್ತು.

ಜಿಲ್ಲೆಯ ಎಲ್ಲ ಶಾಲೆ, ಕಾಲೇಜುಗಳಿಗೆ ಜಿಲ್ಲಾಡಳಿತವೇ ರಜೆ ಘೋಷಿಸಿತ್ತು. ಹೊಟೇಲ್‌ಗಳು, ಪೆಟ್ರೋಲ್ ಬಂಕ್‌ಗಳು, ಬ್ಯಾಂಕ್‌ಗಳು, ಚಿತ್ರ ಮಂದಿರಗಳು ಸಂಜೆವರೆಗೆ ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದವು. ಕೆಲವಡೆ ಗ್ರಾಮೀಣ ಸಾರಿಗೆ ಹೊರತು ಪಡಿಸಿದರೆ ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಬಿಕೋ ಎನ್ನುವ ರಸ್ತೆಗಳು: ವಾಹನಗಳ ಸಂಚಾರ ಅಷ್ಟಾಗಿ ಇಲ್ಲದ್ದರಿಂದ ನಗರದ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಖಾಸಗಿ ವಾಹನಗಳ ಓಡಾಡ ಎಂದಿನಂತೆ ಇದ್ದರೂ, ಅವುಗಳಲ್ಲಿ ಪ್ರಯಾಣಿಸಲು ಜನರು ಇರಲಿಲ್ಲ. ಹೀಗಾಗಿ ಸಂಜೆವರೆಗೆ ನಿಲ್ದಾಣದಲ್ಲಿಯೇ ನಿಂತು ಕಾಲ ಕಳೆಯಬೇಕಾಯಿತು. ಹಾವೇರಿ, ರಾಣೆಬೆನ್ನೂರ ನಗರಗಳಲ್ಲಿ ಬೆಳಗಿನಿಂದಲೇ ಬಸ್‌ಗಳ ಓಡಾಟ ಸ್ಥಗಿತಗೊಂಡಿದ್ದರಿಂದ ನಿಲ್ದಾಣದಲ್ಲಿ ಬಸ್‌ಗಳು ವಿಶ್ರಾಂತಿ ಪಡೆದವು.

ಬೆಳಿಗ್ಗೆ ಸೇವೆಗೆ ಹಾಜರಾದ ಸಾರಿಗೆ ಇಲಾಖೆ ನೌಕರರು ಕೂಡಾ ಬಸ್‌ನಲ್ಲಿಯೇ ಕುಳಿತು ಕಾಲಹರಣ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು. ದೂರದ ಊರುಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ಬಸ್‌ಗಳಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಸರ್ಕಾರದ ವಿರುದ್ಧ ಆಕ್ರೋಶ: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ರಾಜ್ಯ ಸರ್ಕಾರ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕನ್ನಡ ಪರ ಸಂಘಟನೆಗಳು, ರಾಜ್ಯದ ಜನರ ಹಿತ ಕಾಪಾಡುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಜಿಲ್ಲಾ ಅಧ್ಯಕ್ಷ ರಮೇಶ ಆನವಟ್ಟಿ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ನಗರದ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ಕೆಲಹೊತ್ತು ರಸ್ತೆತಡೆ ನಡೆಸಿ, ಟಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವುದಕ್ಕೆ ವಿರೋಧಿಸಿ ಕನ್ನಡ ಸಂಘಟನೆಗಳಿಗೆ ಬೆಂಬಲ ವ್ಯಕ್ತಪಡಿಸಿದ ಜಿಲ್ಲಾ ವಕೀಲರ ಸಂಘವು ಕಲಾಪದಿಂದ ದೂರ ಉಳಿಯಿತು. ಸಂಘದ ಅಧ್ಯಕ್ಷ ವಿ.ಎಫ್. ಕಟ್ಟೇಗೌಡರ ನೇತೃತ್ವದಲ್ಲಿ ವಕೀಲರು ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿದರು.

ಜನಜೀವನ ಯಥಾಸ್ಥಿತಿ

ಹಾನಗಲ್: ಕಾವೇರಿ ವಿಷಯವಾಗಿ ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಪಟ್ಟಣದಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ. ಜನಜೀವನ ಯಥಾಸ್ಥಿತಿಯಲ್ಲಿದ್ದು, ವ್ಯಾಪಾರ ವಹಿವಾಟು ಎಂದಿನಂತೆ ಇತ್ತು.
ಬಂದ್ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಶಾಲೆ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ಆದರೆ ಅಂಗಡಿ-ಮುಂಗಟ್ಟು, ಸರಕಾರಿ ಕಚೇರಿ, ಬ್ಯಾಂಕ್‌ಗಳು ಕಾರ್ಯ ನಿರತವಾಗಿದ್ದವು. ಬಸ್ ಸೇರಿದಂತೆ ಸಾರಿಗೆ ವಾಹನಗಳು ಸಂಚರಿಸಿದವು. ಜನಸಂಚಾರದಲ್ಲಿ ವ್ಯತ್ಯಾಸ ಕಂಡು ಬರಲಿಲ್ಲ. ತಾಲ್ಲೂಕಿನ ಬಮ್ಮನಹಳ್ಳಿ ಮತ್ತು ಅಕ್ಕಿಆಲೂರಿನಲ್ಲಿ ಬಸ್ ಸಂಚಾರಕ್ಕೆ ಕನ್ನಡ ಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಕಾರಣ ಕೆಲಕಾಲ ಸಂಚಾರ ಸ್ಥಗಿತಗೊಳಿಸಲಾಯಿತು. ಬಮ್ಮನಹಳ್ಳಿಯಲ್ಲಿ ನಡೆಯುವ ವಾರದ ಸಂತೆಗೆ ಕರವೇ ಕಾರ್ಯಕರ್ತರು ತಡೆಯೊಡ್ಡಿದರು.

ಬಂದ್ ನೀರಸವಾಗಿದ್ದರೂ ಅಲ್ಲಲ್ಲಿ ಪ್ರತಿಭಟನೆ, ರಸ್ತೆ ತಡೆ ಮತ್ತು ಕಾವೇರಿ ನೀರು ಬಿಡದಂತೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ರಾಮು ಯಳ್ಳೂರ, ಕೃಷ್ಣ ಬೆಟಗೇರಿ, ಶ್ರೀಕಾಂತ ಕೊಂಚಿಗೇರಿ, ಸಾಧಿಕ ನಾಯಕ, ನೌಶಾದ ಹರ್ಕುಣಿ, ಸಮೀರಅಲಿ ಬಾಳೂರ, ಶಿವು ಹುಡೇದವರ, ಮಂಜು ಲಮಾಣಿ, ಶಿವು ಹನುಮಣ್ಣನವರ, ಮಂಜು ಯಳ್ಳೂರ, ಗೋಪಾಲ ಕುರಿ, ಬಸವರಾಜ ಓಲೇಕಾರ, ಸುಲೇಮಾನ ಮೀಠಾಯಿಗಾರ ಪಾಲ್ಗೊಂಡಿದ್ದರು.

ಕಲಾಪದಿಂದ ದೂರ: ಕೋರ್ಟ್ ಕಲಾಪದಿಂದ ಒಂದು ದಿನ ದೂರ ಉಳಿಯುವ ಮೂಲಕ ಹಾನಗಲ್ ವಕೀಲರ ಸಂಘದಿಂದ ಬಂದ್‌ಗೆ ಬೆಂಬಲ ಸೂಚಿಸಲಾಯಿತು.  ಸಂಘದ ಅಧ್ಯಕ್ಷ ರವಿ ವಡೆಯರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ವಕೀಲರಾದ ಎಂ.ಕೆ. ಬಾಬಜಿ, ಎಸ್.ಆರ್.ಪಾಟೀಲ, ಬಿ.ಎಸ್. ಅಕ್ಕಿವಳ್ಳಿ, ಕೆ.ಬಿ. ದೊಡ್ಡಮನಿ, ಎನ್.ಎಂ. ಕೊಪ್ಪದ, ಕೆ.ಜಿ. ಸವದತ್ತಿ, ರಂಗನಾಥ ಅಕ್ಕಿವಳ್ಳಿ, ಎಸ್ .ಎಸ್. ಪೀರಜಾದೆ, ರವಿರಾಜ ಹಾದಿಮನಿ, ಸಂತೋಷ ಪವಾರ, ರವಿ ಕಲಾಲ, ರಮೇಶ ತಳವಾರ, ಶ್ರೀನಾಥ ಕಾಮನಹಳ್ಳಿ, ಎನ್.ಎ. ಬೈಚವಳ್ಳಿ, ಮಾರುತಿ ಪೇಟಕರ ಪಾಲ್ಗೊಂಡಿದ್ದರು.

ಸಂತೆಗೆ ಅಡ್ಡಿ: ತಾಲ್ಲೂಕಿನ ಬಮ್ಮನಹಳ್ಳಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿಸಿ, ಸಾರಿಗೆ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರಿಂದ ರಾಜ್ಯ ಬಂದ್ ಯಶಸ್ವಿಯಾಯಿತು.

ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಮಲ್ಲಮ್ಮನವರ ನೇತೃತ್ವದಲ್ಲಿ ಕಾರ್ಯಕರ್ತರು ಬಸ್ ಸಂಚಾರ ತಡೆದರು. ಎಲ್ಲ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಶನಿವಾರ ವಾರದ ಸಂತೆಗೆ ಬಂದಿದ್ದ ವ್ಯಾಪಾರಸ್ಥರು ಬಂದ್ ಹಿನ್ನೆಲೆಯಲ್ಲಿ ಕಂಗಾಲಾಗಿದ್ದರು. ವ್ಯಾಪಾರಿಗಳ ಮನವಿ ಮೇರೆಗೆ ಮಧ್ಯಾಹ್ನದ ನಂತರ ಸಂತೆ ನಡೆಯಿತು.


ಕರವೇ ಮುಖಂಡರಾದ ಯಲ್ಲಪ್ಪ ಓಲೇಕಾರ, ಬಸಲಿಂಗಯ್ಯ ಕಂಬಾಳಿಮಠ, ಎಸ್.ಬಿ. ಗಾಣಿಗೇರ, ಕುಮಾರ ಧಾರವಾಡ, ರಾಜು ಮಲ್ಲಮ್ಮನವರ, ವಿಜಯಕುಮಾರ ಬೈಲವಾಳ, ಹನುಮಂತ ಕುರಿಯವರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ವಹಿವಾಟು ಸ್ಥಗಿತ
ಅಕ್ಕಿಆಲೂರ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆಯನ್ನು ವಿರೋಧಿಸಿ ಕನ್ನಡಪರ ಒಕ್ಕೂಟ ಕರೆ ನೀಡಿದ್ದ `ಕರ್ನಾಟಕ ಬಂದ್~ಗೆ ಅಕ್ಕಿಆಲೂರಿನಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯಿತು. ಬೆಳಿಗ್ಗೆಯಿಂದ ಸಂಜೆಯವರೆಗೆ ವ್ಯಾಪಾರ- ವಹಿವಾಟು ಸ್ಥಗಿತಗೊಳಿಸಿ ಕಾವೇರಿ ಕೂಗಿಗೆ ಧ್ವನಿಗೂಡಿಸಲಾಯಿತು.

ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಬಿ.ಜೆ.ಪಿ. ಕಾರ್ಯಕರ್ತರು ಅಂಗಡಿಗಳನ್ನು ಮುಚ್ಚುವಂತೆ ವ್ಯಾಪಾರಸ್ಥರಿಗೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿ ವ್ಯಾಪಾರ ಸ್ಥಗಿತಗೊಳಿಸಲಾಯಿತು. ಸ್ಥಳೀಯ ಬಸ್ ನಿಲ್ದಾಣದ ಬಳಿ ಹಾದು ಹೋಗಿರುವ ಶಿರಸಿ -ಮೊಣಕಾಲ್ಮೂರು ರಾಜ್ಯ ಹೆದ್ದಾರಿ ತಡೆ ನಡೆಸಿ ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ಘೋಷಣೆ ಕೂಗಿದರು. ನಂತರ ಉಪ ತಹಶೀಲ್ದಾರ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಜಿ.ಪಂ. ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ತಾ.ಪಂ. ಸದಸ್ಯ ಸುಭಾಸ ಓಲೇಕಾರ, ಜಿ.ಪಂ. ಮಾಜಿ ಸದಸ್ಯ ಕೃಷ್ಣ ಈಳಗೇರ, ಗ್ರಾ.ಪಂ. ಅಧ್ಯಕ್ಷ ಕುಮಾರ ಧಾರವಾಡ, ಉಪಾಧ್ಯಕ್ಷೆ ಕಲಾವತಿ ತೇರದಾಳ, ಮಾಜಿ ಅಧ್ಯಕ್ಷ ಷಣ್ಮುಖಪ್ಪ ಮುಚ್ಚಂಡಿ, ಧುರೀಣರಾದ ರವಿ ಬೆಲ್ಲದ, ರಾಜಣ್ಣ ಅಂಕಸಖಾನಿ, ಬಿ.ವೈ.ಸೂರಕೊಂಡರ, ರವಿ ಕಲಾಲ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಚಂದ್ರಗೌಡ ಪಾಟೀಲ, ರತ್ನವ್ವ ಸವಣೂರ, ಗೌರಮ್ಮ ಮ್ಯಾದಾರ, ಫಕ್ಕೀರಗೌಡ ಪಾಟೀಲ, ಹರೀಶ ಸುಲಾಖೆ, ವೆಂಕಟೇಶ ಬೊಂಗಾಳೆ, ಕೃಷ್ಣಪ್ಪ ಆಲದಕಟ್ಟಿ, ಚಂದ್ರಕಾಂತ ಕೂಬಿಹಾಳ, ಪ್ರದೀಪ ಶೇಷಗಿರಿ, ಬಡವಪ್ಪ ಆನವಟ್ಟಿ, ರಾಜಶೇಖರ ಪರೇಗೊಂಡರ, ವಿಶ್ವನಾಥ ಭಿಕ್ಷಾವರ್ತಿಮಠ ಭಾಗವಹಿಸಿದ್ದರು.
ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬಂದ್‌ನಿಂದಾಗಿ ಜನಜೀವನ ಎಂದಿನಂತೆ ಕಂಡು ಬರಲಿಲ್ಲ. ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಿದರೂ ಜನಜಂಗುಳಿ ಕಾಣಸಿಗಲಿಲ್ಲ.

ಭಾಗಶಃ ಬೆಂಬಲ
ಬ್ಯಾಡಗಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಪಟ್ಟಣದಲ್ಲಿ ಭಾಗಶಃ ಬೆಂಬಲ ವ್ಯಕ್ತವಾಯಿತು.
ಪ್ರತಿಭಟನೆ ಸಂದರ್ಭದಲ್ಲಿ ಮಾತ್ರ ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ಸ್ಥಗಿತಗೊಳಿಸಿ ಬೆಂಬಲಿಸಿದರು. ಬ್ಯಾಂಕ್, ಅಂಚೆ ಕಚೇರಿ ಹಾಗೂ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಗ್ರಾಮೀಣ ಸಾರಿಗೆ ಸಂಚಾರ ಹೊರತುಪಡಿಸಿ ಉಳಿದಂತೆ ಬಸ್ ಓಡಾಟ ಇರಲಿಲ್ಲ. ಮ್ಯಾಕ್ಸಿಕ್ಯಾಬ್‌ಗಳು ಓಡಾಡಿದ್ದವು. ಶಾಲಾ ಕಾಲೇಜುಗಳು ಮುಚ್ಚಿದ್ದವು.

ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕರವೇ ಕಾರ್ಯಕರ್ತರು ಆರಂಭಿಸಿದ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿತು. ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಪುರಸಭಾ ಸದಸ್ಯ ಮುರಿಗೆಪ್ಪ ಶೆಟ್ಟರ, ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಪೂಜಾರ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಾಲತೇಶ ಅರಳಿಮಟ್ಟಿ, ಡಾ. ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ಮಂಜುನಾಥ ಶಿರವಾಡಕರ, ಎಸ್‌ಎಫ್‌ಐ ಅಧ್ಯಕ್ಷ ಮುಂಜುನಾಥ ಪೂಜಾರ, ಮುಖಂಡರಾದ ಪರಶುರಾಮ ಉಜ್ಜನಿಕೊಪ್ಪ, ಬಸವರಾಜ ಬಸಾಪುರ, ಮಂಜುನಾಥ ಕುಮ್ಮೂರ, ಪರಮೇಶ ಹಿರೇಮಠ, ವೀರೇಶ, ಕೃಷ್ಣ ಕರ್ಚಡ, ಈರಣ್ಣ ಬಳ್ಳಾರಿ, ಜಯಪ್ಪ ಹುಣಸಿಮರದ ಪಾಲ್ಗೊಂಡಿದ್ದರು.

ವಹಿವಾಟು ಮಾಮೂಲು
ಸವಣೂರು: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಪಟ್ಟಣದಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜನಜೀವನದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರಲಿಲ್ಲ. ಅಂಗಡಿ ಮುಂಗಟ್ಟುಗಳು, ದಿನನಿತ್ಯದ ಚಟುವಟಿಕೆಗಳು ನಿರಾತಂಕವಾಗಿದ್ದವು. ಸರ್ಕಾರಿ ಕಚೇರಿಗಳು, ಬ್ಯಾಂಕ್ ವಹಿವಾಟು ಮಾಮೂಲಿನಂತಿತ್ತು.
ಮನವಿ: ಕಾವೇರಿ ಜಲದ ಅಸಮರ್ಪಕ ಹಂಚಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ತಾಲ್ಲೂಕಿನ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಕಸಾಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಸರಕಾರಕ್ಕೆ ಮನವಿ ಸಲ್ಲಿಸಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಶಾಂತಗಿರಿ, ಕರವೇ ಮುಖಂಡ ಪರಶುರಾಮ ಈಳಗೇರ, ಡಿಎಸ್‌ಎಸ್‌ನ ಶ್ರಿಕಾಂತ ಲಕ್ಷ್ಮೇಶ್ವರ, ಲಕ್ಷ್ಮಣ ಕನವಳ್ಳಿ, ಜೆಡಿಎಸ್‌ನ ಪ್ರಕಾಶ ಬಾರ್ಕಿ ಹಾಗೂ ಪ್ರಭು ಅರಗೋಳ, ಡಾ.ಬಿ.ಪಿ.ತೋಟದ, ವೀರೇಂದ್ರ, ಎಸ್.ಡಿ. ದೇವಗಪ್ಪನವರ, ಬಸವರಾಜ ಕುಂದಗೋಳ, ಎಸ್.ಎನ್. ಕಳಸೂರ, ಅಶೋಕ ಮನ್ನಂಗಿ, ಮಲ್ಲೇಶ ಯರಗುಪ್ಪಿ, ಫಕ್ಕೀರಪ್ಪ ಐಹೊಳೆ, ಮರ್ಧನಸಾಬ, ಎನ್.ಎನ್. ಬಸನಾಳ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಂದ್ ಸಂಪೂರ್ಣ
ಶಿಗ್ಗಾವಿ: ಕಾವೇರಿ ನದಿ ನೀರನ್ನು ತಮಿಳು ನಾಡಿಗೆ ಬಿಡುವುದನ್ನು ವಿರೋಧಿಸಿ. ವಿವಿಧ ಕನ್ನಡಪರ ಒಕ್ಕೂಟಗಳು ನೀಡಿರುವ ಬಂದ್ ಕರೆಗೆ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಸವಣೂರ ಕ್ರಾಸ್‌ನಿಂದ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳು ಸಂಪೂರ್ಣ ಬಂದ್‌ಗ್ದ್ದಿದವು. ಅಲ್ಲದೆ ಪಟ್ಟಣದ ಅಂಗಡಿ ಮುಗ್ಗಟ್ಟು ಬಂದ್ ಮಾಡಿದ್ದವು. ಹೋಟೆಲ್, ಕಿರಾಣಿ ವ್ಯಾಪಾರಸ್ಥರು ಕನ್ನಡಪರ ಸಂಘಟನೆಗಳ ಪ್ರತಿಭಟನೆಗೆ ಬೆಂಬಲಿಸಿದರು. ಹಳೆ ಹಾಗೂ ಹೊಸ ಬಸ್ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುವಂತಿದ್ದವು.

ಕರವೇ ಮುಖಂಡರಾದ ಮಂಜುನಾಥ ಓಲೇಕಾರ, ಸಂತೋಷ ಪಾಟೀಲ, ಪರಶುರಾಮ ಕಳಸದ, ನಂದೀಶ ನಂದನವರ, ಲಕ್ಷ್ಮಣ ಕಳ್ಳಿಮನಿ, ಆಶೋಕ ರಾಮನಗೌಡ್ರ, ವೀರಭದ್ರಪ್ಪ ಕಾಮನಹಳ್ಳಿ, ಮಾನಪ್ಪ ಬಡಿಗೇರ, ಪ್ರಭು ಲಮಾಣಿ, ಕಾಜೇಸಾಬ ನದಾಫ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬೈಕ್ ರ‌್ಯಾಲಿ
ಹಿರೇಕೆರೂರ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವುದನ್ನು ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಶನಿವಾರ ಪಟ್ಟಣದಲ್ಲಿ ಸಂಪೂರ್ಣ ಯಶಸ್ವಿಯಾಯಿತು. ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದರು. ತೆರದಿದ್ದ ಕೆಲವು ಅಂಗಡಿಗಳನ್ನು ಬಂದ್ ಮಾಡಿಸಿದ ಪ್ರತಿಭಟನಾಕಾರರು ಬಳಿಕ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ದಲಿತ ಸಂಘರ್ಷ ಸಮಿತಿ, ನವಕರ್ನಾಟಕ ನಿರ್ಮಾಣ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು, ಬಿಎಸ್‌ಆರ್ ಕಾಂಗ್ರೆಸ್, ರೈತ ಸಂಘಟನೆಗಳ ನೂರಾರು ಕಾರ್ಯಕರ್ತರು  ಬಂದ್ ಬೆಂಬಲಿಸಿ ಪ್ರತಿಭಟನೆ ಮತ್ತು ಬೈಕ್ ರ‌್ಯಾಲಿ ನಡೆಸಿದರು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಕರಬಸಯ್ಯ ಬಸರೀಹಳ್ಳಿಮಠ, ತಾಲ್ಲೂಕು ಘಟಕದ ಅಧ್ಯಕ್ಷ ಗಿರೀಶ ಬಾರ್ಕಿ, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸತೀಶ ತಂಬಾಕದ, ರೈತ ಸಂಘದ ಅಧ್ಯಕ್ಷ ರಾಜಶೇಖರ ದೂದೀಹಳ್ಳಿ, ನವ ಕರ್ನಾಟಕ ನಿರ್ಮಾಣ ವೇದಿಕೆಯ ಪುಟ್ಟೇಶ ಗೊರವರ, ಜಿ.ಎನ್.ಕಮ್ಮಾರ, ಮಹೇಂದ್ರ ಬಡಳ್ಳಿ, ಪ್ರಶಾಂತ ತಿರಕಪ್ಪನವರ, ಮುನ್ನಾ ನದಾಫ್, ಎಸ್.ಪಿ.ಗೌಡರ, ಅಶೋಕ ಹಳ್ಳಿಯವರ, ಮುಜೀಬ್ ಬಳಿಗಾರ, ಚಂದ್ರಪ್ಪ ಅನ್ವೇರಿ, ಬಸವರಾಜ ಚಿಂದಿ, ಅರವಿಂದ ಬಳಿಗಾರ, ಬಸವರಾಜ ಪೂಜಾರ, ಹರೀಶ ಕಲಾಲ, ಸಿದ್ದು ತಂಬಾಕದ, ಸಮೀರ್ ರಾಣೇಬೆನ್ನೂರ, ನಯಾಜ್ ಬಾಳಂಬೀಡ, ಪರಶುರಾಮ ಚನ್ನಳ್ಳಿ, ಮಾಲತೇಶ ತಿರಕಪ್ಪನವರ, ಪ್ರವೀಣ ಮುಗಳೀಹಳ್ಳಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
2ನೇ ಬಂದ್: ಹಿರೇಕೆರೂರ ಪಟ್ಟಣವು 8 ದಿನಗಳಲ್ಲಿ 2 ಯಶಸ್ವಿ ಬಂದ್‌ಗಳಿಗೆ ಸಾಕ್ಷಿಯಾಯಿತು. ಕಳೆದ ಶುಕ್ರವಾರ ವಿದ್ಯುತ್ ಅವ್ಯವಸ್ಥೆ ಖಂಡಿಸಿ ರೈತ ಸಂಘ ಕರೆ ನೀಡಿದ್ದ ಹಿರೇಕೆರೂರ ಬಂದ್ ಭಾರಿ ಯಶಸ್ಸು ಕಂಡಿತ್ತು. ಎರಡು ಬಂದ್‌ನಿಂದ ನಿತ್ಯದ ವ್ಯಾಪಾರದ ಮೂಲಕವೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ವರ್ತಕರಿಗೆ, ಕಾರ್ಮಿಕರಿಗೆ ತೀವ್ರ ತೊಂದರೆಯಾಯಿತು.

ನೀರಸ ಪ್ರತಿಕ್ರಿಯೆ
ಗುತ್ತಲ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ನಡೆಸಿದ ಕರ್ನಾಟಕ ಬಂದ್‌ಗೆ ಗ್ರಾಮದಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟುಗಳು ನಿರಾತಂಕವಾಗಿ ವ್ಯಾಪಾರ ವಹಿವಾಟು ನಡೆಸಿದವು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಚಿತ್ರ ಮಂದಿರ ಪ್ರದರ್ಶನ ರದ್ದುಗೊಳಿಸಿತ್ತು. ಬಸ್ ಮಾಮೂಲಿನಂತೆ ಸಂಚರಿಸಿದವು.

ಶಾಸಕರಿಗೆ ದಿಗ್ಬಂಧನ
ರಾಣೆಬೆನ್ನೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕನ್ನಡ ಒಕ್ಕೂಟವು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬಂದ್ ಇದ್ದರೂ ಕೃಷಿ ಇಲಾಖೆ ಕಚೇರಿಯಲ್ಲಿ ಶಾಸಕ ಜಿ. ಶಿವಣ್ಣ ಪಲಾನುಭವಿ ರೈತರಿಗೆ ಚೆಕ್ ವಿತರಣೆ ಮಾಡುತ್ತಿದ್ದರು. ಇದನ್ನು ರೈತ ಸಂಘಟನೆಗಳು ವಿರೋಧಿಸಿ ಕಚೇರಿಗೆ ಮುತ್ತಿಗೆ ಹಾಕಿ ಶಾಸಕರನ್ನು ಕೆಲ ಕಾಲ ದಿಗ್ಬಂಧನದಲ್ಲಿ ಇಟ್ಟಿದ್ದರು. ನಂತರ ಕಾರ್ಯಕ್ರಮ ಮೊಟಕುಗೊಳಿಸಲಾಯಿತು.

ಬಸ್ ನಿಲ್ದಾಣದ ಎದುರು ನಡೆದ ಪ್ರತಿಭಟನೆಯಲ್ಲಿ ಚಿತ್ರ ನಿರ್ಮಾಪಕರಾದ ಎಸ್. ಶಿವಕುಮಾರ, ನಿರ್ಮಾಪಕಿ ನಾಗರತ್ನ, ಸಂತೋಷ, ಕೃಷ್ಣಮೂರ್ತಿ ಗುಂಗೇರ, ಸೂರಜ ಭಾಗವಹಿಸಿದ್ದರು

ಕರವೇಯ ನಿತ್ಯಾನಂದ ಕುಂದಾಪುರ, ಸಿದ್ಧಾರೂಢ ಗುರುಂ, ಜೆಡಿಎಸ್‌ನ ಪಕ್ಷದ ಸಿ.ಸಿ ಸಣ್ಣಗೌಡ್ರ, ಕೆಎಂಪಿ ನಾಗರಾಜ ಪವಾರ, ಕರ್ನಾಟಕ ಸಂಘದ ಸಂಜೀವ ಶಿರಹಟ್ಟಿ, ಶ್ರೀನಿವಾಸ ಎಕಬೋಟೆ, ರೈತ ಸಂಘದ ರವೀಂದ್ರಗೌಡ ಪಾಟೀಲ, ಬಸವರಾಜ ಕಡೂರ, ಮಳ್ಳಪ್ಪ ಮೇಳಮಾಳಗಿ, ಸಮರ ಸೇನೆಯ ಲಲಿತಾ ಪಾಟಿಲ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT