ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್‌ಗೆ ಸ್ಪಂದಿಸದ ಜನತೆ

Last Updated 7 ಅಕ್ಟೋಬರ್ 2012, 7:40 IST
ಅಕ್ಷರ ಗಾತ್ರ

ಶಹಾಪುರ: ಕಾವೇರಿ ನೀರು ಬಿಡುಗಡೆಯಲ್ಲಿ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ರಾಜ್ಯವಾಪಿ ಬಂದ್‌ಕರೆಗೆ ಶಹಾಪುರ ತಾಲ್ಲೂಕಿನಲ್ಲಿ ನೀರಸ ಪ್ರತಿಕ್ರಿಯೆ ಬಂದಿದೆ. ರಸ್ತೆ ಸಂಚಾರಕ್ಕೆ ಯಾವುದೇ ಅಡ್ಡಿ ಆತಂಕ ಬರಲಿಲ್ಲ.
 
ಕೆಲ ಅಂಗಡಿ ಮುಂಗಟ್ಟು ಬಂದ್ ಆಗಿದ್ದನ್ನು ಹೊರತುಪಡಿಸಿ ಉಳಿದಂತೆ ಸಾಮಾನ್ಯವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದರಿಂದ ಶಾಲೆ- ಕಾಲೇಜುಗಳು ಬೀಗ ತೆರೆದಿರಲಿಲ್ಲ.

ಸರ್ಕಾರಿ ಕಚೇರಿಗಳು ದೈನಂದಿನ ಕೆಲಸದಂತೆ ಕಾರ್ಯನಿರ್ವಹಿಸಿದವು. ಕೋರ್ಟ್ ಕಲಾಪಗಳು ಎಂದಿನಂತೆ ಸಾಗಿದವು. ಬಂದ್‌ಗೆ ಯಾರು ಸ್ಪಂದಿಸದೆ ಮೌನಕ್ಕೆ ಶರಣಾಗಿದ್ದರು.

ಕಾಂಗ್ರೆಸ್ ಪಕ್ಷದ ನಾಯಕರು, ಬಿಜೆಪಿ ಪಕ್ಷದ ಮುಖಂಡರು ಬೀದಿಗಿಳಿದು ಹೋರಾಟಕ್ಕೆ ಬೆಂಬಲಿಸದೆ ಬಂದ್‌ನಿಂದ ದೂರ ಉಳಿದರು. ನಮಗೆ ಯಾವುದೇ ಮಾಹಿತಿಯನ್ನು ಉನ್ನತ ನಾಯಕರು ಕಳುಹಿಸಿಲ್ಲ. ಅದರಿಂದ ನಾವು ದೂರ ಉಳಿದಿದ್ದೇವೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದರು.

ಕಾವೇರಿ ಎಂದರೆ ಕರ್ನಾಟಕ ಎಂದು ಭಾವಿಸಿದಂತೆ ಕೆಲ ರಾಜಕೀಯ ಮುಖಂಡರು ಭಾವಿಸಿದ್ದಾರೆ. ಹೈದರಬಾದ ಕರ್ನಾಟಕ ವಿಶೇಷ ಕಾಯ್ದೆ ತಿದ್ದುಪಡಿಗೆ ಹೋರಾಟ ನಡೆಸಿದಾಗ ಇಲ್ಲವೆ ಕೃಷ್ಣಾ ನದಿ ಮಾತ್ರದ ಸಮಸ್ಯೆ ಉಂಟಾದಾಗ ಅದೇ ಹಳೆ ಮೈಸೂರು ಹಾಗೂ ಬೆಂಗಳೂರಿನ ನಾಗರಿಕರು ತುಟಿ ಬಿಚ್ಚದೆ ಮೌನಕ್ಕೆ ಜಾರಿದ್ದರು. 

ತೊಂದರೆ ಅನುಭವಿಸುತ್ತಿರುವ ಹೈದರಬಾದ ಕರ್ನಾಟಕದ  ಜನತೆಯ ನೋವಿಗೆ ಧ್ವನಿಯಾಗಲಿ ಇಲ್ಲವೆ ಸಹಾನುಭೂತಿಯಾಗಲಿ ವ್ಯಕ್ತಪಡಿಸದೆ ಜಾಣ ಕಿವುಡರಂತೆ ವರ್ತಿಸಿದ್ದರು ನಾವು ಕೂಡಾ ಯಾವ ಕಾರಣಕ್ಕೆ ಹೋರಾಟಕ್ಕೆ ಬೆಂಬಲಿಸಿ ಬಂದ್‌ನಲ್ಲಿ ಭಾಗವಹಿಸಬೇಕು ಎಂದು ಪ್ರಶ್ನಿಸುತ್ತಾರೆ ಕಿರಾಣಿ ಅಂಗಡಿಯ ಮಾಲಿಕರೊಬ್ಬರು.

ತೊಗರಿ, ಶೇಂಗಾ, ಹತ್ತಿ ಬೆಳೆಗೆ ಸೂಕ್ತ ಧಾರಣಿ ನೀಡುವಂತೆ ಹೈದರಬಾದ ಕರ್ನಾಟಕ ರೈತರು ಹೋರಾಟ ನಡೆಸಿದಾಗ ಕಿಂಚತ್ತು ಕಾಳಜಿಯನ್ನು ವ್ಯಕ್ತಪಡಿಸಿದ ರಾಜಕೀಯ ಮುಖಂಡರು ಬಂದ್‌ಗೆ ಬೆಂಬಲಿಸುವಂತೆ ಕರೆ ನೀಡುವ ಮೊದಲು ನೈತಿಕತೆಯನ್ನು ಉಳಿಸಿಕೊಳ್ಳಿ.

ಹವಾನಿಂತ್ರಣ ಕೊಠಡಿಯಲ್ಲಿ ಕುಳಿತು ಕಾಫಿ ಹಾಗೂ ಕಬ್ಬಿಗೆ ಬೆಂಬಲ ಬೆಲೆ ನೀಡಿ ಎಂದು ಒತ್ತಾಯಿಸುವರು ಅದೇ ತೊಗರಿಗೆ  ಸೂಕ್ತ ಧಾರಣಿ ನೀಡುವಂತೆ ಒತ್ತಾಯಿಸುವುದಿಲ್ಲ. ನಾವು ಬೆವರು ಸುರಿಸಿ ದುಡಿಯವ ರೈತರು ಎಂಬುವುದು ಅವರಿಗೆ ಗೊತ್ತಿಲ್ಲವೇ ? ನಮ್ಮ ಸಮಸ್ಯೆಗಳಿಗೆ ಸ್ಪಂದಿಸದವರಿಗೆ ನಾವೇಕೆ ಅಷ್ಟೊಂದು ಕಾಳಜಿ ವ್ಯಕ್ತಪಡಿಸಬೇಕು ಎಂಬ ಆಕ್ರೋಶವನ್ನು ರೈತ ಮಲ್ಲಪ್ಪ ವ್ಯಕ್ತಪಡಿಸುತ್ತಾರೆ.

ಪ್ರತಿಭಟನೆ: ತಾಲ್ಲೂಕು ಕನ್ನಡ ಸೇನೆ ಹಾಗೂ ವಿವಿಧ ರಾಜಕೀಯ ಮುಖಂಡರ ನೇತೃತ್ವದಲ್ಲಿ ಶನಿವಾರ ಪಟ್ಟಣದಲ್ಲಿ ಕರ್ನಾಟಕ ಬಂದ್‌ಗೆ ಬೆಂಬಲಿಸಿ ಪ್ರತಿಭಟನೆ ನಡೆಸಿದರು. ಕೇಂದ್ರ ಯುಪಿಎ ಸರ್ಕಾರ ಕರ್ನಾಟಕ ಜನತೆ ಪಾಲಿಗೆ ಅದರಲ್ಲಿ ಕಾವೇರಿ ವಿಷಯದಲ್ಲಿ ಮರಣ ಶಾಸನವಾಗಿ ಮಾರ್ಪಟಿದೆ. ರಾಜಕೀಯ ಇಚ್ಚಾಶಕ್ತಿಯ ಕೊರತೆ ಹಾಗೂ ರಾಜ್ಯದ ನಾಯಕರ ಸಾಂಘಿ ಕ ಹೋರಾಟದ ವಿಫಲತೆಯಿಂದ ರೈತರು ಹೈರಾಣಗೊಳ್ಳುತ್ತಿದ್ದಾರೆ.

ರಾಜ್ಯದ ಸದ್ಯ ಕಾವೇರಿ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಅಂಕಿ ಅಂಶಗಳ ಮೂಲಕ ವಸ್ತುಸ್ಥಿತಿಯನ್ನು ಮಂಡಿಸುವಲ್ಲಿ ರಾಜ್ಯದ ಎಲ್ಲಾ ನಾಯಕರು ಮುಗ್ಗರಿಸಿದ್ದಾರೆ. ನುರಿತ ಕಾನೂನು ತಜ್ಞರ ಸಲಹೆಗೂ ಸರಿಯಾಗಿ ಸ್ಪಂದಿಸದೆ ಇರುವುದು ಇಂತಹ ಪ್ರಳಯಕಾರಿ ಸಮಸ್ಯೆಯನ್ನು ನಾವು ಎದುರು ಹಾಕಿಕೊಳ್ಳಬೇಕಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ ಪ್ರತಿಭಟನಾಕಾರರು ಹೇಳಿದರು.

ಪ್ರತಿಭಟನೆಯಲ್ಲಿ ಕನ್ನಡ ಸೇನೆಯ ಅಧ್ಯಕ್ಷ ಮಲ್ಲಿಕಾರ್ಜುನ ನಗನೂರ, ವಿರೇಶ ಅಂಗಡಿ, ದೇವು ಮೌನೇಶ ಸುರಪುರಕರ್, ವಿಜಯ ಚಿಗರಿ, ರಮೇಶ ನಗನೂರ,ಗಿರೀಶ ಕುಲಕರ್ಣಿ, ರಾಕೇಶ ಮದ್ರಿಕಿ, ಹಣಮಂತ ಸಗರ, ಮೋಹನರಡ್ಡಿ ರಸ್ತಾಪೂರ, ಅಯ್ಯಪ್ಪ ನಾಶಿ ಹಾಗೂ ಜೆಡಿಎಸ್ ಮುಖಂಡ ಶರಣಪ್ಪ ಸಲಾದಪೂರ, ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಆರ್‌ಚನ್ನಬಸು ವನದುರ್ಗ, ಬಿಜೆಪಿ ಮುಖಂಡರಾದ ಡಾ.ಚಂದ್ರಶೇಖರ ಸುಬೇದಾರ,

ಗಿರೆಪ್ಪಗೌಡ ಬಾಣತಿಹಾಳ, ನೀಲಕಂಠ ಬಡಿಗೇರ, ರಾಜುಗೌಡ ಉಕ್ಕನಾಳ, ಗುರುರಾಜ ಕಾಮಾ, ಗುರು ಮದ್ದಿನ, ಸುಧೀರ ಚಿಂಚೋಳಿ, ಸುನೀಲ ಮಾನು, ರಕ್ಷಣಾ ವೇದಿಕೆ ಮುಖಂಡರಾದ ವೆಂಕಟೇಶ ಬೊನೇರ, ಭೀಮರಾಯ ಕಾಂಗ್ರೆಸ್ ಸದಾಶಿವ ಮುಧೋಳ, ವೆಂಕಣ್ಣ ಮೇಟಿ, ಬಸವರಾಜ ಹೊತಪೇಟ, ವಾಸದೇವ ಕಟ್ಟಿಮನಿ, ಮಲ್ಲಯ್ಯ ಇಟಗಿ, ಸೋಫಿಸಾಬ ಕನ್ಯಾಕೊಳ್ಳುರ, ವೆಂಕಟೇಶ ತುಳೇರ ಮತ್ತಿತರರು ಭಾಗವಹಿಸಿದ್ದರು.

ಲೇವಡಿ
ಶಹಾಪುರ:
ಕನ್ನಡ ನೆಲ, ಜಲಕ್ಕೆ ಕುತ್ತು ಬಂದಾಗ ಹೋರಾಟ ಹಾದಿಯನ್ನು ತುಳಿಯುತ್ತೆವೆ ಎಂದು ವೇದಿಕೆಯ ಮೇಲೆ ಜಂಭಕೊಚ್ಚಿಕೊಳ್ಳುವ ಕನ್ನಡ ಸಾಹಿತ್ಯ ಪರಿಷತ್ ಮಾತ್ರ ಕರ್ನಾಟಕ ಬಂದ್‌ಗೆ ಸ್ಪಂದಿಸದೆ ದೂರ ಉಳಿದುಕೊಂಡಿತು. `

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಲ್ಲ ಅದು ಕಾಂಗ್ರೆಸ್ ಪರಿಷತ್ ಆಗಿ ಮಾರ್ಪಟ್ಟಿದೆ~ ಎಂದು ಕಲ್ಯಾಣ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಂಬರೇಶ ಬಿಲ್ಲವ ಲೇವಡಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT