ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಧನ ಭೀತಿಯಲ್ಲಿ ಬದನೆಹಾಳ್ ಗ್ರಾಮಸ್ಥರು

Last Updated 9 ಏಪ್ರಿಲ್ 2013, 5:57 IST
ಅಕ್ಷರ ಗಾತ್ರ

ಭದ್ರಾವತಿ: ನಾಲ್ಕು ದಶಕದಿಂದ ಜಮೀನು ನಂಬಿ ಬದುಕು ನಡೆಸಿರುವ ಜನರು ಒಂದೆಡೆ ಜಾಗ ಹೋಗುವ ಭೀತಿಯಲ್ಲಿದ್ದರೆ, ಮತ್ತೊಂದೆಡೆ ಪೊಲೀಸರ ಬಂಧನದ ಹೆದರಿಕೆಯಲ್ಲಿ ಬದುಕು ನಡೆಸುವ ಸ್ಥಿತಿ ಬೆಳ್ಳಿಗೆರೆ ವ್ಯಾಪ್ತಿಯ ಬದನೆಹಾಳ್ ಗ್ರಾಮಸ್ಥರದಾಗಿದೆ.

ಭಾನುವಾರ ಬಂಡಿಗುಡ್ಡ ಅರಣ್ಯ ಪ್ರದೇಶದ ಬೆಳ್ಳಿಗೆರೆ ಗ್ರಾಮ ವ್ಯಾಪ್ತಿಯ ಸರ್ವೇ ನಂ.35ರ ಅಸುಪಾಸಿನಲ್ಲಿ ಅರಣ್ಯ ಇಲಾಖೆ ತೆರವು ಕಾರ್ಯಕ್ಕೆ ಮುಂದಾದ ವೇಳೆ ನಡೆದ ಅಹಿತಕರ ಘಟನೆ ಪರಿಣಾಮ 61 ಮಂದಿ ಬಂಧನ ನಡೆದಿದೆ.

ಇದರಿಂದ ಕಂಗಾಲಾಗಿರುವ ಗ್ರಾಮಸ್ಥರು ಒಂದೆಡೆ ಭೂಮಿ ಚಿಂತೆ, ಮತ್ತೊಂದೆಡೆ ಮನೆಯಿಂದ ಜೈಲು ಸೇರಿರುವ ಗಂಡಸರ ಚಿಂತೆಯಲ್ಲಿ ದಿನ ನೂಕಿದರೆ, ಗ್ರಾಮದ ಬಹುತೇಕ ಪುರುಷರು ಬಂಧನ ಭೀತಿಯಲ್ಲಿ ಊರು ಬಿಟ್ಟಿದ್ದಾರೆ.

ಹೀಗಾಗಿ ಗ್ರಾಮದ ಮುಖ್ಯ ವೃತ್ತ ಹಾಗೂ ಜನ ಸೇರುವ ಸ್ಥಳ ಬಣಗುಡುತ್ತಿದೆ. ಅಪರಿಚಿತರು ದ್ವಿಚಕ್ರ ವಾಹನ ಅಥವಾ ಇನ್ಯಾವುದೇ ವಾಹನದಲ್ಲಿ ಗ್ರಾಮಕ್ಕೆ ಬಂದರೆ ಮನೆ ಕಿಟಕಿಯಿಂದ ಇಣುಕುವ ಮಹಿಳೆಯರು ಐದಾರು ನಿಮಿಷಗಳ ನಂತರ ಹೊರಬಂದು ಮಾತನಾಡಿಸುವ ಯತ್ನ ನಡೆಸಿದ್ದಾರೆ.

ಗ್ರಾಮದ ಹಿರಿಕರಾದ ಶಿವಯ್ಯ, ಮಾದಯ್ಯ, ಹಲಗಪ್ಪ ಬಂಡಿಗುಡ್ಡ ಮೈನ್ಸ್ ಕೆಲಸ ಮಾಡುತ್ತಿದ್ದ ದಿನದಿಂದ ಇಲ್ಲಿ ನೆಲೆ ಕಂಡವರು. ವೃತ್ತಿ ಜತೆಗೆ ಒಂದಿಷ್ಟು ಜಮೀನು ಸಾಗುವಳಿ ಮಾಡಿಕೊಂಡು ಬಂದ ಅವರು ಇಲ್ಲಿಯೇ ನೆಲೆ ನಿಂತರು. ಆದರೆ ಮೈನ್ಸ್ ಕೆಲಸ ಸ್ಥಗಿತವಾಗಿ ಹಲವು ದಶಕ ಉರುಳಿದೆ.

ಈಗ ಅಲ್ಲಿನ ಜನರ ಬದುಕು ನಡೆದಿರುವುದೇ ಜಮೀನು ಕೆಲಸದಿಂದ. ಸರ್ವೇ ನಂ. 35ರಲ್ಲಿನ 232ಎಕರೆ ಜಮೀನನ್ನು ಸುಮಾರು 117ಕುಟುಂಬ ಆಶ್ರಯಿಸಿದೆ. ಆದರೆ ಈಗ ಅದರ ತೆರವು ಕಾರ್ಯ ನಡೆದಿದೆ. ಆದರೆ ಕೆಲವರಿಗೆ ಸರ್ವೇ ನಂ. 7ರಲ್ಲಿ ಸಾಗುವಳಿ ಸಿಕ್ಕಿದ್ದು, ಅದನ್ನು ತೆರವು ಮಾಡಲು ಸಹ ಅರಣ್ಯ ಇಲಾಖೆ ಮುಂದಾಗಿದೆ ಎನ್ನುತ್ತಾರೆ ಮಹಿಳೆ ಕಮಲಾ.

ಮನೆಯ ಗಂಡು ಮಕ್ಕಳು ಜೈಲು ಸೇರಿದ್ದಾರೆ, ಇರುವುದು ನಾವೇ, ಹೈನುಗಾರಿಕೆ ಹಾಗೂ ಇನ್ನಿತರ ಚಟುವಟಿಕೆ ನಡೆಸಲು ಕಷ್ಟವಾಗಿದೆ. ಮತ್ತಷ್ಟು ಜನರ ಬಂಧನ ಮಾಡುತ್ತೇವೆ ಎಂಬ ಪೊಲೀಸರ ಹೇಳಿಕೆ ನಮ್ಮ ಚಿಂತೆ ಹೆಚ್ಚು ಮಾಡಿದೆ ಎನ್ನುತ್ತಾರೆ ಹಲಗಪ್ಪ.

40ವರ್ಷದಿಂದ ಜಮೀನು ಮಾಡಿದ್ದೇವೆ ಎಂದೂ ಯಾವತ್ತೂ ನೋಟಿಸ್ ನೀಡಿಲ್ಲ, ಬದಲಾಗಿ ಕೆಲವು ಅರಣ್ಯ ಇಲಾಖೆ ಸಿಬ್ಬಂದಿಗಳೇ ಕಾಡು ಒತ್ತುವರಿ ಮಾಡಿ ಜಮೀನು ಮಾಡಿದ್ದಾರೆ. ಇದನ್ನು ಕೇಳುವಂತಿಲ್ಲ, ಅನ್ಯಾಯವಾಗಿ ನಮ್ಮ ಹಕ್ಕು ಕಿತ್ತುಕೊಂಡು ಓಡಿಸುವ ಹುನ್ನಾರ ನಡೆದಿದೆ ಎಂದು ಕಿಡಿಕಾರುತ್ತಾರೆ ಹಿರಿಕ ಶಿವಯ್ಯ.

ಅರಣ್ಯ ಇಲಾಖೆ ಅಧಿಕಾರಿಗಳು ತಕರಾರು ಮಾಡುತ್ತಿರುವ ಜಾಗದಲ್ಲಿ ಗ್ರಾ.ಪಂ ಮನೆ ಮಾಡಿ ಹಕ್ಕುಪತ್ರ ನೀಡಿದೆ, ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಈಗ ಏಕಾಏಕಿ ಒಕ್ಕಲೆಬ್ಬಿಸುವ ಯತ್ನ ಏಕೆ ಎಂದು ಪ್ರಶ್ನಿಸುವ ಗ್ರಾಮದ ಮಂದಿ ಜೈಲಿನಲ್ಲಿರುವ ಜನರು ಬೇಗ ಹೊರಗೆ ಬರುವುದಕ್ಕೆ ನಮ್ಮ ಮೊದಲ ಆದ್ಯತೆ ಎನ್ನುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT