ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಧಿಸಿದ ಮಾತ್ರಕ್ಕೆ ಅಪರಾಧಿಅಲ್ಲ

Last Updated 3 ಫೆಬ್ರುವರಿ 2011, 18:05 IST
ಅಕ್ಷರ ಗಾತ್ರ


ಚೆನ್ನೈ (ಪಿಟಿಐ): ‘ಬಂಧಿಸಿದ ಮಾತ್ರಕ್ಕೆ ಅಪರಾಧಿಯಲ್ಲ’ ಎಂಬ ಸ್ಪಷ್ಟ ನಿಲುವು ತಳೆಯುವ ಮೂಲಕ ಡಿಎಂಕೆ, ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಅವರಿಗೆ ಸಂಪೂರ್ಣ ಬೆಂಬಲ  ವ್ಯಕ್ತಪಡಿಸಿದೆ.

ರಾಜಾ ಮತ್ತು ಇತರ ಇಬ್ಬರು ಮಾಜಿ ಅಧಿಕಾರಿಗಳನ್ನು ಸಿಬಿಐ ಬುಧವಾರ ಬಂಧಿಸಿರುವ ಹಿನ್ನೆಲೆಯಲ್ಲಿ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಹೊಂದಿರುವ ಡಿಎಂಕೆಯ ಸಾಮಾನ್ಯ ಮಂಡಳಿ ಗುರುವಾರ ಸಭೆ ಸೇರಿ ವಿವರವಾದ ಚರ್ಚೆ ನಡೆಸಿತು.

ಮೂರು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ ನಂತರ ಪಕ್ಷದ ವಕ್ತಾರ ಟಿ.ಕೆ.ಎಸ್. ಈಳಂಗೋವನ್ ಸುದ್ದಿಗಾರರ ಜತೆ ಮಾತನಾಡಿ, ‘ರಾಜಾ ಪಕ್ಷದ ಹೈಕಮಾಂಡ್‌ಗೆ ರಾಜೀನಾಮೆ ಪತ್ರ ಕಳುಹಿಸಿಲ್ಲ’ ಎಂದು ತಿಳಿಸಿದರು.

ಪಕ್ಷದ ಪ್ರಚಾರ ಕಾರ್ಯದರ್ಶಿ ಹುದ್ದೆಗೆ ರಾಜಾ ಅವರು ರಾಜೀನಾಮೆ ನೀಡಿದ್ದಾರೆ ಎಂಬ ವದಂತಿ ಹರಡಿದ್ದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ರಾಜಾ ಅವರನ್ನು ಸಿಬಿಐ ಬಂಧಿಸಿದಾಕ್ಷಣ ಅವರು ತಪ್ಪಿತಸ್ಥರು ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಸಭೆ ಅಭಿಪ್ರಾಯಪಟ್ಟಿತು ಎಂದು ತಿಳಿಸಿದರು.

ಸಂಸತ್ತಿನಲ್ಲಿ ಮಂಡಿಸಿರುವ ಸಿಎಜಿ ವರದಿಯೊಂದೇ ರಾಜಾ ವಿರುದ್ಧದ ಸಾಕ್ಷಿ ಎಂದು ತಿಳಿಸಿರುವ ಅವರು, ಎನ್‌ಡಿಎ ಅಧಿಕಾರಾವಧಿಯಲ್ಲೂ ಟೆಲಿಕಾಂ ಇಲಾಖೆಯ ಬಗ್ಗೆ ಸಿಎಜಿ ಇದೇ ರೀತಿ ವರದಿ ಸಲ್ಲಿಸಿತ್ತು, ಆದರೆ ಆಗ ಯಾರೂ ಈ ಬಗ್ಗೆ ಧ್ವನಿ ಎತ್ತಿರಲಿಲ್ಲ ಎಂದು ಈಳಂಗೋವನ್ ಹೇಳಿದರು.

ರಾಜಾ ಅವರ ಪ್ರಕರಣವು ಮೇನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಅಡ್ಡಿಯಾಗಬಹುದೇ ಎಂದು ಕೇಳಿದಾಗ, ‘ರಾಜ್ಯ ಸರ್ಕಾರದ ಸಾಧನೆ ಮತ್ತು ಕಲ್ಯಾಣ ಕಾರ್ಯಕ್ರಮಗಳ ಆಧಾರದ ಮೇಲೆ ನಾವು ಚುನಾವಣೆ ಎದುರಿಸುತ್ತೇವೆ. ರಾಜಾ ಅವರು ನಿರಪರಾಧಿಯಾಗಿ ಹೊರಬರುತ್ತಾರೆ ಎಂಬ ವಿಶ್ವಾಸ ನಮಗಿದೆ’ ಎಂದು ಹೇಳಿದರು.

ರಾಜಾ ಅವರು ತಪ್ಪಿತಸ್ಥರು ಎಂದು ಸಾಬಿತಾದರೆ ಪಕ್ಷ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಪಕ್ಷದ ಅಧ್ಯಕ್ಷ ಕರುಣಾನಿಧಿ ನೀಡಿರುವ ಹೇಳಿಕೆಯನ್ನು ಈಳಂಗೋವನ್ ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.
ಪಕ್ಷದ ಸಾಮಾನ್ಯ ಮಂಡಳಿಯ ಅಧ್ಕಕ್ಷತೆ ವಹಿಸಿದ್ದ ಕರುಣಾನಿಧಿ ಅವರು ಹೊರಗೆ ಕಾಯುತ್ತಿದ್ದ ಮಾಧ್ಯಮದ ಪ್ರತಿನಿಧಿಗಳಿಗೆ ಸಿಗಲಿಲ್ಲ. 

ಸಭೆಯಲ್ಲಿ ಕರುಣಾನಿಧಿ ಅವರ ಪುತ್ರ ಕೇಂದ್ರ ಸಚಿವ ಅಳಗಿರಿ, ಉಪಮುಖ್ಯಮಂತ್ರಿ ಎಂ. ಕೆ. ಸ್ಟ್ಯಾಲಿನ್, ಪುತ್ರಿ, ಸಂಸದೆ ಕನಿಮೋಳಿ ಮತ್ತು ಇತರರು ಪಾಲ್ಗೊಂಡಿದ್ದರು.

ಖಂಡನೆ: 2ಜಿ ಹಗರಣವನ್ನು ವಿವಿಧ ಸಂಸ್ಥೆಗಳ ಮೂಲಕ ಪಾರದರ್ಶಕವಾಗಿ ವಿಚಾರಣೆಗೆ ಒಳಪಡಿಸಲಾಗಿದ್ದರೂ ವಿರೋಧ ಪಕ್ಷಗಳು ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಕಲಾಪಕ್ಕೆ ಅಡ್ಡಿ ಉಂಟು ಮಾಡಿ ಪ್ರಜಾಪ್ರಭುತ್ವಕ್ಕೆ ವಿರೋಧವಾಗಿ ನಡೆದುಕೊಂಡಿರುವುದು ಖಂಡನೀಯ ಎಂದು ಸಭೆಯಲ್ಲಿ ಅಂಗೀಕರಿಸಲಾಗಿರುವ ರಾಜಕೀಯ ನಿರ್ಣಯದಲ್ಲಿ ತಿಳಿಸಲಾಗಿದೆ.

2ಜಿ ಹಗರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಪಕ್ಷಪಾತ ನಿಲುವು ತಾಳಿ ಡಿಎಂಕೆ ಮತ್ತು ಅದರ ಮುಖಂಡರ ವಿರುದ್ಧ ವರದಿಗಳನ್ನು ಪ್ರಕಟಿಸಿದ ಮಾಧ್ಯಮಗಳ ಬಗ್ಗೆ ಸಭೆಯಲ್ಲಿ ವ್ಯಾಪಕವಾಗಿ ಟೀಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT