ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಧುಗಳಿಗೂ ಕಾಯುವ ಶಿಕ್ಷೆ; ಕಾದು ಸುಸ್ತಾದ ಗಾಯಾಳುಗಳು

Last Updated 22 ಮೇ 2012, 19:30 IST
ಅಕ್ಷರ ಗಾತ್ರ

ಪೆನುಕೊಂಡ (ಅನಂತಪುರ ಜಿಲ್ಲೆ) ಹಂಪಿ ಎಕ್ಸ್‌ಪ್ರೆಸ್ ರೈಲು, ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಕೆಲವರು ಅತಿ ಗಣ್ಯರ ಭೇಟಿಯ ಭರಾಟೆಯಲ್ಲಿ ದೀರ್ಘಕಾಲ ಚಿಕಿತ್ಸೆಯೇ ಇಲ್ಲದೇ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಾಯಬೇಕಾಯಿತು. ಕಾದು ಸುಸ್ತಾದ ಗಾಯಾಳುಗಳನ್ನು ಗಣ್ಯರ ಭೇಟಿಯ ಬಳಿಕ ಸ್ಥಳಾಂತರಿಸಲಾಯಿತು!

ಸಣ್ಣ ಪುಟ್ಟ ಗಾಯಗಳಾದವರಿಗೆ ಪೆನುಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉತ್ತಮ ಚಿಕಿತ್ಸೆ ದೊರೆಯಿತು. ಆದರೆ, ಗಂಭೀರ ಗಾಯಗಳು, ಮೂಳೆ ಮುರಿತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಅಲ್ಲಿರಲಿಲ್ಲ. ಬೇರೆಡೆ ಚಿಕಿತ್ಸೆಗೆ ಕರೆದೊಯ್ಯಲೇಬೇಕಾಗಿತ್ತು. ಆದರೆ, ಆಂಧ್ರಪ್ರದೇಶ ಮುಖ್ಯಮಂತ್ರಿ ಕಿರಣ್‌ಕುಮಾರ್ ರೆಡ್ಡಿ ಸೇರಿದಂತೆ ಕೆಲ ಅತಿ ಗಣ್ಯರು ಆಸ್ಪತ್ರೆಗೆ ಭೇಟಿ ನೀಡುವವರೆಗೂ ಯಾರನ್ನೂ ಸ್ಥಳಾಂತರಿಸದಂತೆ ಜಿಲ್ಲಾಡಳಿತ ಆಸ್ಪತ್ರೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಇದರಿಂದಾಗಿ ಗಾಯಾಳುಗಳು, ಅವರ ಬಂಧುಗಳು ಗಂಟೆಗಳ ಕಾಲ ಸಂಕಟ ಅನುಭವಿಸಬೇಕಾಯಿತು.

`ಮೂಳೆ ಮುರಿತಕ್ಕೆ ಒಳಗಾದ ನಾಲ್ವರು ಮಹಿಳೆಯರು ಆಸ್ಪತ್ರೆಯಲ್ಲಿದ್ದಾರೆ. ಆದರೆ, ಇಲ್ಲಿ   `ಎಕ್ಸ್-ರೇ~ ಯಂತ್ರವೂ ಇಲ್ಲ. ಈ ಗಾಯಾಳುಗಳನ್ನು ಸಮೀಪದಲ್ಲಿರುವ ಉತ್ತಮ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಅವಕಾಶ ನೀಡುವಂತೆ ನಾವು ಕೋರಿದೆವು. ಬೆಳಿಗ್ಗೆ 11.30ರಿಂದಲೂ ಹಲವು ಬಾರಿ ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದೆವು. ಕಿರಣ್‌ಕುಮಾರ್ ರೆಡ್ಡಿ ಅವರು ಭೇಟಿ ನೀಡಿ, ವಾಪಸು ಹೋಗುವವರೆಗೂ ನಮ್ಮ ಮನವಿಯನ್ನು ಯಾರೂ ಕೇಳಲಿಲ್ಲ~ ಎಂದು ಸ್ಥಳೀಯ ಸರ್ಕಾರೇತರ ಸಂಸ್ಥೆ ಸ್ತ್ರೀ ಸಂಘರ್ಷಣ ಟ್ರಸ್ಟ್‌ನ ಸದಸ್ಯೆಯೊಬ್ಬರು ಬೇಸರ ವ್ಯಕ್ತಪಡಿಸಿದರು.

`ಮುಖ್ಯಮಂತ್ರಿಯವರು ಬಂದು ಮೃತ ದೇಹಗಳನ್ನು ನೋಡಲಿ. ಗಾಯಾಳುಗಳನ್ನು ಸ್ಥಳಾಂತರಿಸಲು ನಮಗೆ ಅವಕಾಶ ನೀಡಿ~ ಎಂದು ಮತ್ತೊಬ್ಬ ಸದಸ್ಯರು ವೈದ್ಯರ ಜೊತೆ ಮಾತುಕತೆಯಲ್ಲಿ ತೊಡಗಿದ್ದ ದೃಶ್ಯವೂ ಕಂಡು ಬಂತು.

ಕಾದು ಸುಸ್ತಾದರು: ಮೃತರು ಮತ್ತು ಗಾಯಾಳುಗಳ ಬಂಧುಗಳ ಕತೆಯೂ ಭಿನ್ನವಾಗಿರಲಿಲ್ಲ. ಮುಖ್ಯಮಂತ್ರಿಯ ಭೇಟಿಯವರೆಗೂ ಅವರಿಗೆ ಶವಗಳನ್ನು ನೋಡಲು ಅವಕಾಶ ದೊರೆಯಲಿಲ್ಲ.

`ಸುದ್ದಿ ವಾಹಿನಿಗಳಲ್ಲಿ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ನಾನು ಇಲ್ಲಿಗೆ ಬಂದಿದ್ದೇನೆ. ನನ್ನ ಸೋದರ ಸಂಬಂಧಿ ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅವರ ಮೊಬೈಲ್ ಕೂಡ `ಸ್ವಿಚ್ ಆಫ್~ ಆಗಿದೆ. ಅವರು ಆಸ್ಪತ್ರೆ ಒಳಗಡೆ ಇದ್ದಾರೆಯೇ ಎಂಬುದನ್ನು ತಿಳಿಯುವುದಕ್ಕೂ ಸಾಧ್ಯವಾಗಿಲ್ಲ~ ಎಂದು ಕೊಪ್ಪಳದಿಂದ ಬಂದಿದ್ದ ಕೆ.ಧರ್ಮಣ್ಣ ಎಂಬುವರು ಅಸಮಾಧಾನ ವ್ಯಕ್ತಪಡಿಸಿದರು.

ಆಸ್ಪತ್ರೆ ಪ್ರವೇಶಕ್ಕೆ ನಿರ್ಬಂಧ ಹೇರಿದ ಕುರಿತು ಅನಂತಪುರ ಜಿಲ್ಲಾಧಿಕಾರಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರನ್ನು ಪ್ರಶ್ನಿಸಿದಾಗ, `ಆಸ್ಪತ್ರೆಯ ಒಳಗಡೆ ಹೆಚ್ಚು ಸ್ಥಳಾವಕಾಶ ಇಲ್ಲ. ಅಲ್ಲಿ ನೂಕುನುಗ್ಗಲು ಉಂಟಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿತ್ತು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT