ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗೆಹರಿಯದ ವ್ಯಾಜ್ಯ: ರಸ್ತೆ ಮೇಲೆ ತ್ಯಾಜ್ಯ!

ತುಕ್ಕು ಹಿಡಿದ ಕಸ ಸಂಗ್ರಹ ತೊಟ್ಟಿಗಳು
Last Updated 14 ಏಪ್ರಿಲ್ 2014, 7:04 IST
ಅಕ್ಷರ ಗಾತ್ರ

ಗುಲ್ಬರ್ಗ: ಕಸ ಸಂಗ್ರಹಿಸಲು ನಗರದ ವಿವಿಧ ಬಡಾವಣೆಗಲ್ಲಿ ಇರಿಸಬೇಕಾಗಿದ್ದ ಕಂಟೇನರ್‌ಗಳು (ಕಸ ಸಂಗ್ರಹಿಸುವ ತೊಟ್ಟಿ) ತುಕ್ಕು ಹಿಡಿದಿದೆ. ಇದರಿಂದಾಗಿ ಸಾರ್ವಜನಿಕರು ರಸ್ತೆ ಮೇಲೆ ತ್ಯಾಜ್ಯ ಸುರಿಯುವಂತಾಗಿದೆ.

ಈ ಮೊದಲು ರಸ್ತೆಯ ಪಕ್ಕದಲ್ಲಿ ಇರಿಸಿದ್ದ ಕೆಲವು ತೊಟ್ಟಿಗಳಿಗೆ ತುಕ್ಕು ಹಿಡಿದಿದ್ದರೆ, ಇನ್ನು ಕೆಲವು ತೊಟ್ಟಿಗಳು ಪೌರ ಕಾರ್ಮಿಕರ ಬೆಂಕಿಗೆ ಬಲಿಯಾಗಿವೆ. ಹೀಗೆ ಹಾಳಾದ ತೊಟ್ಟಿಗಳನ್ನು ಸಾರ್ವಜನಿಕ ಉದ್ಯಾನದ ಆವರಣದಲ್ಲಿ ಇರಿಸುವ ಮೂಲಕ ಉದ್ಯಾನವನ್ನು ‘ಗುಜರಿ ಕೇಂದ್ರ’ವಾಗಿ ಪರಿವರ್ತಿಸಲಾಗಿದೆ!

ತೊಟ್ಟಿಗಳು ಗುಜರಿ ಸೇರಿದ ಬಳಿಕ ಪಾಲಿಕೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಇದರಿಂದಾಗಿ ಸಾರ್ವಜನಿಕರು ಕಸವನ್ನು ತಂದು ರಸ್ತೆಯ ಮೇಲೆ ಸುರಿಯುತ್ತಿದ್ದಾರೆ. ಹೀಗಾಗಿ, ಬಹುತೇಕ ಎಲ್ಲ ರಸ್ತೆಗಳ ಪಕ್ಕದಲ್ಲಿ ಕಸದ ರಾಶಿ ತುಂಬಿಕೊಂಡು ದುರ್ವಾಸನೆ ಬೀರುವಂತಾಗಿದೆ.

ಪಾಲಿಕೆ ಉದ್ಯಾನದಲ್ಲಿ ಕಸದ ತೊಟ್ಟಿಗಳನ್ನು ಇರಿಸಿದ್ದರಿಂದ ವಾಯುವಿಹಾರಿಗಳಿಗೆ ಸಾಕಷ್ಟು ಕಿರಿಕಿರಿ, ತೊಂದರೆ ಉಂಟಾಗಿದೆ. ಮಕ್ಕಳ ಆಟಕ್ಕೆ ತೊಟ್ಟಿಗಳು ಅಡ್ಡಿ ಉಂಟು ಮಾಡುತ್ತಿವೆ. ಹೀಗಾಗಿ, ವಾಯು ವಿಹಾರಿಗಳು ಪಾಲಿಕೆಯನ್ನು ಶಪಿಸುವಂತಾಗಿದೆ. ಇನ್ನೊಂದೆಡೆ ಕಸದ ತೊಟ್ಟಿಗಳಿಂದಾಗಿ ಉದ್ಯಾನದ ಸೌಂದರ್ಯವೂ ಹಾಳಾಗಿದೆ.

‘ಪಾಲಿಕೆ ಉದ್ಯಾನದ ಪಕ್ಕದಲ್ಲಿ ವೀರಶೈವ ಕಲ್ಯಾಣ ಮಂಟಪವಿದೆ. ಈಗ ಮದುವೆ ಹಂಗಾಮು. ಮದುವೆ, ಶುಭ ಸಮಾರಂಭಗಳು ಜರುಗುತ್ತಲೇ ಇರುತ್ತವೆ. ಹಾಳಾದ ಕಸದ ತೊಟ್ಟಿಗಳಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಹೀಗಾಗಿ, ಇವುಗಳನ್ನು ಸ್ಥಳಾಂತರಿಸಬೇಕು ಎಂದು ಸಾಕಷ್ಟು ಸಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ’ ಎಂದು ಕಲ್ಯಾಣ ಮಂಟಪದ ಉಸ್ತುವಾರಿ ನೋಡಿಕೊಳ್ಳುವ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಾರೆ.

ತೊಟ್ಟಿಗಳು ಹಾಳಾಗುವುದಕ್ಕೆ ಪಾಲಿಕೆ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಕಸ ಗುಡಿಸುವ ಕಾರ್ಮಿಕರು ಕಸವನ್ನು ಗುಡಿಸಿ, ತೊಟ್ಟಿಯಲ್ಲಿ ಹಾಕಿ ಬೆಂಕಿ ಹಚ್ಚುತ್ತಾರೆ. ಇದರಿಂದಾಗಿ ಬೆಂಕಿಯಲ್ಲಿ ಕರಗದ ಕೆಲ ವಸ್ತುಗಳು ಹೆಚ್ಚು ಸಮಯ ಉರಿಯುವುದರಿಂದ ತೊಟ್ಟಿಗಳು ಬಿಸಿ ಹೆಚ್ಚಾಗಿ ಬಿರುಕು ಬಿಡುತ್ತವೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT