ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜಾರ್‌ನ ಸಾಮಾಜಿಕ ಸಂದೇಶ

Last Updated 20 ಡಿಸೆಂಬರ್ 2010, 14:00 IST
ಅಕ್ಷರ ಗಾತ್ರ

ಅಂದು ಆ ಮೈದಾನದಲ್ಲಿ ಸಂತೆಯ ಕಳೆ ಕಟ್ಟಿತ್ತು. ಷಾಮಿಯಾನದ ಅಡಿಯಲ್ಲಿ ವಿರಾಜಮಾನವಾದ ಅಂಗಡಿಗಳು, ಕಣ್ಮನ ಸೆಳೆಯುವ ಅಲಂಕಾರಿಕ ವಸ್ತುಗಳು, ವಿವಿಧ ಬಗೆಯ ಸ್ವಾದಿಷ್ಟ ತಿಂಡಿ ತಿನಿಸುಗಳು, ಯಾವುದನ್ನು ಕೊಳ್ಳುವುದು ಯಾವುದನ್ನು ಬಿಡುವುದು ಎಂಬ ಗೊಂದಲದಲ್ಲಿ ಎಲ್ಲವನ್ನೂ ಕೊಳ್ಳುವ ಜನರು, ಎಲ್ಲಕ್ಕಿಂತ ಹೆಚ್ಚಾಗಿ ತಾವೇ ತಯಾರಿಸಿದ ವಿವಿಧ ಬಗೆಯ ಉತ್ಪನ್ನಗಳನ್ನು ಮಾರಾಟ ಮಾಡಲು ಉತ್ಸಾಹದಿಂದ ನಿಂತ ಅಂಗವಿಕಲರು.

ಇದು ಲಿಂಗರಾಜಪುರ ಮುಖ್ಯರಸ್ತೆಯ ಕಾರ್ಪೊರೇಷನ್ ಮೈದಾನದಲ್ಲಿ ನಡೆದ ‘ಯುನೈಟೆಡ್ ಚಾರಿಟೀಸ್ ಕ್ರಿಸ್ಮಸ್ ಬಜಾರ್ 2010’ರಲ್ಲಿ ಕಂಡುಬಂದ ವಿಶೇಷ.

ಮೂವತ್ತು ವರ್ಷಗಳಿಂದ ಈ ಬಜಾರ್ ನಡೆಯುತ್ತಿರುವುದರಿಂದ ಇದರಲ್ಲಿ ಭಾಗವಹಿಸುವ ಬಹುತೇಕ ಸಂಘ ಸಂಸ್ಥೆಗಳು ಮತ್ತು ಗ್ರಾಹಕರು ಪರಸ್ಪರ ಪರಿಚಿತರೇ. ಹೀಗಾಗಿ ಇಲ್ಲಿ ವ್ಯಾಪಾರ ವಹಿವಾಟಿನ ವಾತಾವರಣದ ಬದಲು ಆತ್ಮೀಯತೆ ಕಳೆಕಟ್ಟಿತ್ತು.

ಉಡುಪುಗಳು, ಕ್ರಿಸ್‌ಮಸ್ ಅಲಂಕಾರಿಕ ವಸ್ತುಗಳು, ಆಟಿಕೆಗಳು, ಗೊಂಬೆಗಳತ್ತ ದೃಷ್ಟಿ ನೆಟ್ಟಿದ್ದ ಮಕ್ಕಳಿಗೆ ಅವುಗಳನ್ನು ಕೊಳ್ಳುವವರೆಗೂ  ಸಮಾಧಾನವಿರಲಿಲ್ಲ. ಎಪಿಡಿ ತೋಟಗಾರಿಕಾ ಸಂಸ್ಥೆಯ ವಿಕಲಾಂಗ ಸದಸ್ಯರು ಬೆಳೆಸಿದ ಅಪರೂಪದ ವೈವಿಧ್ಯಮಯ ಹೂ ಗಿಡಗಳು, ಕ್ರಿಸ್ಮಸ್ ಟ್ರೀಗಳ ಲೋಕದಲ್ಲಿ ಸಸ್ಯ ಪ್ರೇಮಿಗಳು ಇನ್ನೊಂದು ಮತ್ತೊಂದು ಸುತ್ತು ಹಾಕುತ್ತಲೇ ಇದ್ದರು. ಧಾರ್ಮಿಕ ಹಾಗೂ ಸಾಮಾಜಿಕ ಸಂದೇಶಗಳನ್ನು ಸಾರುವ ಪುಸ್ತಕ ಹಾಗೂ ಸೀಡಿಗಳು ಧಾರ್ಮಿಕಾಸಕ್ತರನ್ನು ಸೆಳೆಯುತ್ತಿದ್ದವು. ಮಣ್ಣು ಮತ್ತು ಲೋಹದಿಂದ ತಯಾರಿಸಿದ ದೇವರ ಹಾಗೂ ವಿವಿಧ ಶೈಲಿಯ ವಿಗ್ರಹಗಳು ಸಹ ಕೊಳ್ಳುವವರನ್ನು ಆಕರ್ಷಿಸಿದವು. ಸುಮಾರು 72 ಸ್ವಯಂಸೇವಾ ಸಂಸ್ಥೆ ಹಾಗೂ ಸಹಕಾರಿ ಸಂಘಗಳು, ಟ್ರಸ್ಟ್‌ಗಳು ತಾವು ತಯಾರಿಸಿದ ಬಗೆಬಗೆಯ ಉತ್ಪನ್ನಗಳನ್ನು ಮಾರಾಟ ಮಾಡಿದರೆ, ಕರುಣಾ ಪ್ರಾಣಿದಯಾ ಸಂಘ ಲಾಟರಿ ಮೂಲಕ ವಿಕಲಾಂಗರ ಕಲ್ಯಾಣಕ್ಕೆ ನಿಧಿ ಸಂಗ್ರಹಿಸುವ ಕಾರ್ಯದಲ್ಲಿ ನಿರತವಾಗಿತ್ತು.

ಬಜಾರ್‌ನಲ್ಲಿ ಮಹಿಳಾ ಸಂಘ ಸಂಸ್ಥೆ ಹಾಗೂ ಅಂಗವಿಕಲರಿಗಾಗಿ ಇರುವ ಸಂಸ್ಥೆಗಳದ್ದೇ ಹೆಚ್ಚಿನ ಪಾಲು. ಪೇಪರ್ ಬ್ಯಾಗ್, ಆಟಿಕೆ, ಕರಕುಶಲ ವಸ್ತುಗಳು ಹೀಗೆ ವಿಕಲಾಂಗರು ತಾವೇ ತಯಾರಿಸಿದ ವಿವಿಧ ವಸ್ತುಗಳನ್ನು ಮಾರಾಟ ಮಾಡಲು ಸ್ವತಃ ಉತ್ಸುಕರಾಗಿದ್ದರು. ಜೀವನದಲ್ಲಿ ಜಿಗುಪ್ಸೆ ಹೊಂದಿದವರಿಗೆ, ದುಶ್ಚಟಗಳಿಗೆ ಬಲಿಯಾದವರಿಗೆ ಟ್ರಕ್ಕಿಂಗ್, ರಾಕ್ ಕ್ಲೈಂಬಿಂಗ್ ಮುಂತಾದ ಸಾಹಸಗಳ ಮೂಲಕ ಮನಪರಿವರ್ತಿಸುವ ಫಿಶರಿ ಟ್ರಸ್ಟ್‌ನ ಕೌನ್ಸೆಲಿಂಗ್ ಕೂಡ ಇದರ ವೈಶಿಷ್ಟ್ಯವಾಗಿತ್ತು. ಉತ್ತಮ ಸಾಮಾಜಿಕ ಆಶಯದೊಂದಿಗೆ ವರ್ಷಕ್ಕೊಮ್ಮೆ ಬರುವ ಹಬ್ಬದಂತೆ ಈ ಬಜಾರ್ ಕೂಡ ನಮಗೆ ಹಬ್ಬವೇ ಎಂದು ಹಲವು ಕಾಯಂ ಗ್ರಾಹಕರು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT