ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್: ಕೃಷಿ ವಿವಿ, ಸಕ್ಕರೆ ಕಾರ್ಖಾನೆ ಪುನಶ್ಚೇತನ ಸುದ್ದಿಯೇ ಇಲ್ಲ!

Last Updated 25 ಫೆಬ್ರುವರಿ 2011, 7:20 IST
ಅಕ್ಷರ ಗಾತ್ರ

ಉಡುಪಿ: ಕಳೆದ ಬಾರಿ ರಾಜ್ಯ ಬಜೆಟ್‌ನಲ್ಲಿ ಒಂದಿಷ್ಟಾದರೂ ‘ಉಡುಪಿ’ ಜಿಲ್ಲೆಯ ಪ್ರಸ್ತಾಪವಾಗಿತ್ತು. ಕಾರಣ ಉಡುಪಿ ನಗರಸಭೆ ಅಮೃತಮಹೋತ್ಸವದ ಪ್ರಯುಕ್ತ ರೂ.25 ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿಯೇ ಘೊಷಣೆ ಮಾಡಿದ್ದರು. ಆದರೆ ಈ ಬಾರಿ ಉಡುಪಿ ಜಿಲ್ಲೆ ಬಜೆಟ್‌ನಲ್ಲಿ ಅಷ್ಟಾಗಿ ಸದ್ದು ಮಾಡಲೇ ಇಲ್ಲ. ಸಂಭ್ರಮಿಸುವ ಯಾವುದೇ ಭಾರಿ ಯೋಜನೆ ಉಡುಪಿಗೆ ಬಂದಿಲ್ಲ.

‘ನಿಮ್ಮ ಜಿಲ್ಲೆಗೆ ಕೊಡುವುದನ್ನೆಲ್ಲ ಕೊಟ್ಟಾಗಿದೆ. ಮೊದಲು ನಮಗೆ ಓಟು ಬರಲಿ’ ಎಂದು ಮುಖ್ಯಮಂತ್ರಿಗಳು ಜಿ.ಪಂ. ಚುನಾವಣಾ ಪ್ರಚಾರದ ಸಂದರ್ಭ ಬಹಿರಂಗವಾಗಿಯೇ ಹೇಳಿದ್ದರು. ಬಹುಶಃ ಅದನ್ನೇ ಪಾಲಿಸಿರಬೇಕು ಎಂಬುದು ಜನರ ದೂರು.

ಮರವಂತೆಯಲ್ಲಿ ಕೇರಳ ಮಾದರಿಯಲ್ಲಿ ರೂ 40 ಕೋಟಿ ವೆಚ್ಚದಲ್ಲಿ ಹೊರ ಬಂದರು ನಿರ್ಮಾಣದ ಸುದ್ದಿ ಹೊರತುಪಡಿಸಿದರೆ ಇನ್ಯಾವುದೇ ಯೋಜನೆಯಲ್ಲಿ ಉಡುಪಿ ಜಿಲ್ಲೆ ನೇರವಾಗಿ ಪ್ರಸ್ತಾಪವಾಗಲಿಲ್ಲ. ಎಲ್ಲರೂ ಬಹಳ ನಿರೀಕ್ಷೆ ಮಾಡಿದ್ದ ಕೃಷಿ ಬಜೆಟ್ ಜಿಲ್ಲೆಯಲ್ಲಿ ಅಷ್ಟಾಗಿ ಸಂಭ್ರ–ಮವನ್ನೇನೂ ಮೂಡಿಸಲಿಲ್ಲ.

ಜನಸಾಮಾನ್ಯರೂ, ಜಿಲ್ಲಾ ಕೃಷಿಕ ಸಂಘ, ಭಾರತೀಯ ಕಿಸಾನ್ ಸಂಘ ಸೇರಿದಂತೆ ಎಲ್ಲರೂ ಬ್ರಹ್ಮಾವರದಲ್ಲಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕೃಷಿ ಬಜೆಟ್‌ನಲ್ಲಿ ಖಂಡಿತವಾಗಿಯೂ ಕೊಡುಗೆ ಸಿಗಲಿದೆ ಎಂದೇ ಭಾವಿಸಿದ್ದರು. ಬ್ರಹ್ಮಾವರದಲ್ಲಿ ಆರಂಭಿಸಲು ಉದ್ದೇಶಿಸಿರುವ ಕೃಷಿ ವಿವಿಗೆ ಏನಾದರೂ ಉತ್ತೇಜನ ದೊರಕಲಿದೆ ಎನ್ನುವ ಹಂಬಲದಲ್ಲಿದ್ದರು. ಆದರೆ ಇವೆಲ್ಲ ಬಜೆಟ್‌ನಲ್ಲಿ ಪ್ರಸ್ತಾಪವಾಗಲೇ ಇಲ್ಲ. ಈ ಬಗ್ಗೆ ಹಲವರು ನಿರಾಸೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಮೀನುಗಾರರಿಗೆ ಒಂದಿಷ್ಟು ಖುಷಿ ವಿಚಾರ ದೊರಕಿದೆ. ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟು, ಚೆಕ್‌ಡ್ಯಾಂ ನಿರ್ಮಾಣ ಹಾಗೂ ಕಾಲು ಸಂಕ ನಿರ್ಮಾಣಕ್ಕೆ ಒಂದಿಷ್ಟು ಹೆಚ್ಚಿನ ಆದ್ಯತೆ ದೊರಕಿದೆ. ಆದರೆ ಈ ಹಣ ಕೂಡ ಕೇವಲ ಉಡುಪಿ ಜಿಲ್ಲೆಗೆ ಸೀಮಿತವಲ್ಲ. ಕರಾವಳಿ ಜಿಲ್ಲೆಗಳೆಲ್ಲ ಸೇರಿ ಕಿಂಡಿ ಅಣೆಕಟ್ಟೆಗೆ 30 ಕೋಟಿ ಹಾಗೂ ಕಾಲು ಸಂಕ ನಿರ್ಮಾಣಕ್ಕೆ 15 ಕೋಟಿ ನಿಗದಿ ಮಾಡಲಾಗಿದೆ.

ಇದೇ ಮೊದಲಬಾರಿಗೆ ಪ್ರಾಯೋಗಿಕವಾಗಿ ಉಡುಪಿ ಮತ್ತು ದ.ಕ.ಜಿಲ್ಲೆಗಳನ್ನು ಸೇರಿಸಿಕೊಂಡು ಆ ಭಾಗದಲ್ಲಿ ವಿದ್ಯುತ್ ಸೋರಿಕೆ ತಡೆಗಟ್ಟಲು ಹಾಗೂ ಕಾರ್ಯಕ್ಷಮತೆ ಹೆಚ್ಚಿಸಲು ರೈತರ ಪಂಪ್‌ಸೆಟ್‌ಗಳ ಹಳೆ ಮೀಟರ್ ತೆಗೆದು ಹೊಸ ಮೀಟರ್ ಪ್ರಾಯೋಗಿಕವಾಗಿ ಅಳವಡಿಸುವ ಯೋಜನೆ ಸ್ವಾಗತಾರ್ಹ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ. ಮೊದಲ ಬಾರಿಗೆ ಕೃಷಿ ಬಜೆಟ್ ಮಂಡಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ನಿರೀಕ್ಷೆ ಭಾರಿ ಇತ್ತು. ಅದನ್ನೊಂದು ಸವಾಲಾಗಿ ಸ್ವೀಕರಿಸಿ ಮುಖ್ಯಮಂತ್ರಿಗಳು ಬಜೆಟ್ ಮಂಡಿಸಿದರು. ನಾವು ಕೂಡ ಮುಖ್ಯಮಂತ್ರಿಗಳಿಗೆ ಮನವಿಯೊಂದನ್ನು ಸಲ್ಲಿಸಿ ಕರಾವಳಿ ಭಾಗದಲ್ಲಿ ಆಗಬೇಕಾದ ಅಭಿವೃದ್ಧಿ ಪ್ರಸ್ತಾವ ಇಟ್ಟಿದ್ದೆವು. ಅವುಗಳಲ್ಲಿ ಎಲ್ಲವೂ ಸಾಕಾರಗೊಳ್ಳಲಿಲ್ಲ. ಒಟ್ಟಾರೆ ನಮ್ಮ ನಿರೀಕ್ಷೆಯ ಮಟ್ಟವನ್ನು ಕೃಷಿ ಬಜೆಟ್ ಮುಟ್ಟಲಿಲ್ಲ ಎನ್ನುವುದು ಈ ಭಾಗದ ರೈತ ಮುಖಂಡರ ಅನಿಸಿಕೆ.

ಕಳೆದ ಬಾರಿ ಬಜೆಟ್‌ನಲ್ಲಿ ಪ್ರಮುಖ ಅಂಶವಾಗಿ ಗಮನ ಸೆಳೆದಿದ್ದ ಕೊಡೇರಿ ಮೀನುಗಾರಿಕಾ ಬಂದರು ಅಭಿವೃದ್ಧಿ, ಕರಾವಳಿ ಮೀನುಗಾರರಿಗೆ ನೀಡುತ್ತಿರುವ ಮಾರಾಟ ತೆರಿಗೆ ರಹಿತ ಡೀಸೆಲ್ ಪ್ರಮಾಣವನ್ನು 85 ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಈ ಬಾರಿ ಡೀಸೆಲ್ ಸಬ್ಸಿಡಿಯನ್ನು 1 ಲಕ್ಷ ಕಿಲೋ ಲೀಟರ್‌ಗೆ ಹೆಚ್ಚಿಸಲಾಗಿದೆ. ಮೀನುಗಾರರಿಗೆ ಅಗತ್ಯವಾದ ಒಂದಿಷ್ಟು ಯೋಜನೆಗಳು ಬಂದಿರುವ ಮೂಲಕ ಮೀನುಗಾರರು ಖುಷಿಯಾಗುವಂತಾಗಿದೆ.

ಆದರೆ ಜಿಲ್ಲೆಯಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ಅಷ್ಟಾಗಿ ಯಾವುದೇ ಅನುದಾನದ ಪ್ರಸ್ತಾಪವಾಗಿಲ್ಲ. ಆದಾಗ್ಯೂ ಪಡುಬಿದ್ರಿ-ಕಾರ್ಕಳ ರಸ್ತೆ ಅಭಿವೃದ್ಧಿ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಪ್ರವಾಸೋದ್ಯಮದ ಅಭಿವೃದ್ಧಿ ಬಗ್ಗೆ ವಿಶೇಷವಾಗಿ ಯಾವುದೇ ಪ್ರಸ್ತಾಪ ಮಾಡಲಿಲ್ಲ. ಮರವಂತೆ, ಮಲ್ಪೆ, ಸೇಂಟ್‌ಮೇರಿಸ್ ದ್ವೀಪ ಅಭಿವೃದ್ಧಿಪಡಿಸಲಾಗಿದೆ ಎನ್ನುವ ಮಾತನ್ನು ಮಾತ್ರ ಪುನರು–ಚ್ಛರಿಸಿದ್ದಾರೆ. ಆದರೆ ಕಡಲ್ಕೊರೆತ ಸಮಸ್ಯೆ ಬಗ್ಗೆ ಪ್ರಸ್ತಾಪ ಮಾಡಲಾಯಿತು.

ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಬಗ್ಗೆ ಯಾವುದೇ ಪ್ರಸ್ತಾಪ ಆಗಲಿಲ್ಲ. ಈಗಾಗಲೇ ದೂಳೆಬ್ಬಿಸಿ ಸ್ಥಳೀಯರು ಉಸಿರಾಡಲು ತೊಂದರೆಯಾಗುತ್ತಿರುವ ಯುಪಿಸಿಎಲ್‌ನಿಂದ 600 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಲಿದೆ ಎಂಬ ಅಂಶವನ್ನು ಮುಖ್ಯಮಂತ್ರಿಗಳು ಪ್ರಸ್ತಾಪಿಸಿದರು. ದುರಂತವೆಂದರೆ ಈ ಭಾಗದಲ್ಲಿ ಸಾರ್ವಜನಿಕರು ಈ ಯೋಜನೆಯನ್ನು ಸ್ಥಗಿತಗೊಳಿಸಿ ಎಂದು ಆಗ್ರಹಿಸುತ್ತಿದ್ದಾರೆ.

‘ಉಡುಪಿ ಜಿಲ್ಲೆ ಹೇಗಿದ್ದರೂ ಈಗ ಬಿಜೆಪಿ ಭದ್ರಕೋಟೆಯಾಗಿದೆ. ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿವರೆಗೂ ಕಮಲ ಅರಳಿದೆ. ಹೀಗಾಗಿ ಈ ಭಾಗಕ್ಕೆ ಅಷ್ಟಾಗಿ ಅನುದಾನ ನೀಡುವ ಅಗತ್ಯ ಬಿಜೆಪಿ ಸರ್ಕಾರಕ್ಕೆ ಕಂಡು ಬರುತ್ತಿಲ್ಲ. ಸದ್ಯಕ್ಕಂತೂ ಈ ಭಾಗದಲ್ಲಿ ಯಾವುದೇ ಚುನಾವಣೆಯಂತೂ ಇಲ್ಲವಲ್ಲ. ಹೀಗಾಗಿ ಬಜೆಟ್‌ನಲ್ಲಿ ಈ ಭಾಗಕ್ಕೆ ಕೊಡುಗೆ ಕೂಡ ಅಷ್ಟಾಗಿ ಇಲ್ಲ’ ಎಂದು ಜನಸಾಮಾನ್ಯರು ಲೇವಡಿ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT