ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ ಪೂರ್ವಭಾವಿ ಸಭೆ: ಡಿಸೇಲ್-ಪೆಟ್ರೋಲ್ ದರ ಇಳಿಕೆಗೆ ಮನವಿ

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನೆರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ದರ ದುಬಾರಿಯಾಗಿದ್ದು, ಅದನ್ನು ಇಳಿಸುವ ತೀರ್ಮಾನ ತೆಗೆದುಕೊಳ್ಳಿ~ ಎಂದು ಲಾರಿ, ಬಸ್ ಮತ್ತು ಮ್ಯಾಕ್ಸಿಕ್ಯಾಬ್ ಮಾಲೀಕರ ಸಂಘಗಳು ರಾಜ್ಯ ಸರ್ಕಾರವನ್ನು ಆಗ್ರಹಪಡಿಸಿವೆ.

ವಿಧಾನಸೌಧದಲ್ಲಿ ಮಂಗಳವಾರ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ನೇತೃತ್ವದಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಲಾರಿ, ಬಸ್ ಮಾಲೀಕರು ಈ ಬೇಡಿಕೆಯನ್ನು ಮುಂದಿಟ್ಟರು.

`ನೆರೆಯ ಆಂಧಪ್ರದೇಶ ಸೇರಿದಂತೆ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಪ್ರತಿ ಲೀಟರ್ ಡೀಸೆಲ್‌ಗೆ ರೂ 1.80 ಜಾಸ್ತಿ ಇದೆ. ಇದರಿಂದ ರಾಜ್ಯಕ್ಕೆ ಡೀಸೆಲ್ ಮಾರಾಟದಿಂದ ಬರುತ್ತಿದ್ದ ತೆರಿಗೆಯೂ ಕೈತಪ್ಪಿದ್ದು, ಬಹುತೇಕ ಎಲ್ಲ ಲಾರಿ, ಬಸ್ ಮಾಲೀಕರು ಪ್ರತಿನಿತ್ಯ 40 ಸಾವಿರ ಲೀಟರ್ ಡೀಸೆಲ್ ಅನ್ನು ನೆರೆ ರಾಜ್ಯಗಳಿಂದಲೇ ತುಂಬಿಸಿಕೊಂಡು ಬರುತ್ತಿದ್ದಾರೆ. ಇದನ್ನು ತಪ್ಪಿಸಬೇಕಾದರೆ ರಾಜ್ಯದಲ್ಲೂ ನೆರೆ ರಾಜ್ಯದಲ್ಲಿರುವಷ್ಟೇ ದರ ನಿಗದಿಪಡಿಸಬೇಕು~ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಒತ್ತಾಯಿಸಿದರು.

`ರಸ್ತೆ ಬಳಕೆ ಶುಲ್ಕ ದುಬಾರಿಯಾಗಿದೆ. ಅದನ್ನೂ ಕಡಿಮೆ ಮಾಡಬೇಕು~ ಎಂದು ಆಗ್ರಹಪಡಿಸಿದರು.
ಖಾಸಗಿ ಬಸ್ ಮಾಲೀಕರ ಸಂಘದ ಪ್ರತಿನಿಧಿಗಳು ಕೂಡ ಸಭೆಯಲ್ಲಿ ಭಾಗವಹಿಸಿ, ಈ ಸಲ ಹೆಚ್ಚಿನ ತೆರಿಗೆ ವಿಧಿಸುವುದು ಬೇಡ ಎನ್ನುವ ಮನವಿ ಮಾಡಿದ್ದಾರೆ. ಪ್ರಯಾಣ ದರ ಇಳಿಸುವ ಮೂಲಕ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳ ಜತೆ ದರ ಸಮರಕ್ಕೆ ಇಳಿದಿದೆ. ಇದರಿಂದ ಭಾರಿ ನಷ್ಟ ಆಗಿದೆ ಎಂದು ಬಸ್ ಮಾಲೀಕರು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಮಾತನಾಡಿ, ಖಾಸಗಿ ಬಸ್ ಮಾಲೀಕರಿಗೆ ತೊಂದರೆ ಕೊಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಎಲ್ಲಿ ಉತ್ತಮ ಸೇವೆ ಸಿಗುತ್ತದೊ ಅಲ್ಲಿಗೆ ಜನ ಹೋದರೆ ಅದನ್ನು ತಡೆಯಲು ಬರುವುದಿಲ್ಲ. ಬಸ್ ಮಾಲೀಕರ ಹಿತದೃಷ್ಟಿಯಿಂದ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದರು.

`ಅಬಕಾರಿ, ವಾಣಿಜ್ಯ, ಸಾರಿಗೆ, ಮುದ್ರಾಂಕ ಶುಲ್ಕ ಮತ್ತು ನೋಂದಣಿಗೆ ಸಂಬಂಧಿಸಿದಂತೆ ಬಜೆಟ್‌ಪೂರ್ವ ಸಭೆಗಳನ್ನು ವಿವಿಧ ಸಂಘಟನೆಗಳ ಮುಖಂಡರ ಜತೆ ನಡೆಸಿದ್ದು, ಇದಕ್ಕೂ ಆಯಾ ಇಲಾಖೆಯ ಸಚಿವರಿಗೂ ಸಂಬಂಧ ಇಲ್ಲ. ಕೈಗಾರಿಕೆಗಳಿಗೆ ಸಂಬಂಧಿಸಿದಂತೆಯೂ ಮಾತುಕತೆ ನಡೆಸಿಲ್ಲ. ಇಲಾಖೆಗಳ ಅಧಿಕಾರಿಗಳ ಸಭೆ ಸಂದರ್ಭದಲ್ಲಿ ಆಯಾ ಸಚಿವರಿಗೂ ಆಹ್ವಾನಿಸಿದ್ದು, ಎಲ್ಲರೂ ಭಾಗವಹಿಸಿದ್ದಾರೆ.
 
ಸಾರಿಗೆ ಸಚಿವ ಅಶೋಕ ಕೂಡ ಭಾಗವಹಿಸಿದ್ದರು. ಲಾರಿ ಮತ್ತು ಬಸ್ ಮಾಲೀಕರ ಸಂಘಗಳ ಜತೆ ಮಾತುಕತೆ ಸಂದರ್ಭದಲ್ಲಿ ಹಾಜರಾಗಲು ಸಾಧ್ಯ ಇಲ್ಲ ಎಂದು ಪೂರ್ವಾನುಮತಿ ಪಡೆದುಕೊಂಡೇ ಅಶೋಕ ಅವರು ಚಿತ್ರದುರ್ಗಕ್ಕೆ ಹೋಗಿದ್ದಾರೆ. ಎಲ್ಲ ಸಚಿವರ ಸಮ್ಮುಖದಲ್ಲೇ ಸಭೆಗಳನ್ನು ನಡೆಸಲಾಗುತ್ತಿದೆ~ ಎಂದು ಪ್ರಶ್ನೆಯೊಂದಕ್ಕೆ ಗೌಡರು ಉತ್ತರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT