ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬಜೆಟ್ ಮಂಡನೆಗೆ ಬಿಎಸ್‌ವೈ ಗಡುವು ಅಡ್ಡಿಯಾಗದು'

Last Updated 27 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: `ಸರ್ಕಾರ ಉರುಳಿಸುವುದಾಗಿ ಯಾರೇ ಡೆಡ್‌ಲೈನ್ ನೀಡಿದರೂ, ಅದು ಪೇಪರ್‌ನ ಹೆಡ್‌ಲೈನ್ ಆಗಲಿದೆಯೇ ವಿನಃ ಸರ್ಕಾರದ ಡೆಡ್‌ಲೈನ್ ಅಲ್ಲ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಗುರುವಾರ ಇಲ್ಲಿ ಲೇವಡಿ ಮಾಡಿದರು.

ಬಿಜೆಪಿಯ ಬೆಂಗಳೂರು ನಗರ ಘಟಕ ಇಲ್ಲಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ `ವಿಶೇಷ ಸಾಮಾನ್ಯ ಸಭೆ' ಉದ್ಘಾಟಿಸಿ ಅವರು ಮಾತನಾಡಿದರು.ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ನೇರ ವಾಗ್ಧಾಳಿ ನಡೆಸಿದ ಅವರು, `ಯಡಿಯೂರಪ್ಪ ಏನೇ ಡೆಡ್‌ಲೈನ್ ನೀಡಿದರೂ ಸರ್ಕಾರ ಬೀಳುವುದಿಲ್ಲ. ಪಕ್ಷಕ್ಕೆ ಕಾರ್ಯಕರ್ತರ ಬೆಂಬಲ ಇದ್ದು, ಶೆಟ್ಟರ್ ನೇತೃತ್ವದ ಸರ್ಕಾರ ಅವಧಿ ಪೂರ್ಣಗೊಳಿಸಲಿದೆ. ಬಜೆಟ್ ಮಂಡನೆಗೆ ಯಾರ ಡೆಡ್‌ಲೈನೂ ಅಡ್ಡಿಯಾಗುವುದಿಲ್ಲ' ಎಂದು ತಿರುಗೇಟು ನೀಡಿದರು.

`ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ಮಂಡಿಸಿದಲ್ಲಿ ಜೆಡಿಎಸ್ ಬೆಂಬಲ ನೀಡಲಿದೆ ಎಂದು ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರು ಹೇಳಿಕೆ ನೀಡಿದ್ದಾರೆ. ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದರೂ, ಸರ್ಕಾರ ಬೀಳಿಸಲು ಸಾಧ್ಯವಿಲ್ಲ. ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಬಜೆಟ್ ಮಂಡಿಸುವ ಶಕ್ತಿ ಸರ್ಕಾರಕ್ಕಿದೆ. ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದವರು ಮಾಡುತ್ತಿರುವ ಕುತಂತ್ರ ಇದು' ಎಂದು ಟೀಕಿಸಿದರು.

ತಮ್ಮ ಸ್ವಯಂಕೃತ ಅಪರಾಧದಿಂದಾಗಿ ಸಿಬಿಐ ಕುಣಿಕೆಯಲ್ಲಿ ಸಿಲುಕಿರುವ ಯಡಿಯೂರಪ್ಪ ಅಂತಹವರನ್ನು ಬಳಸಿಕೊಂಡು ಪಕ್ಷದ ವಿರುದ್ಧ ಹಿಂಬಾಗಿಲ ಯುದ್ಧ ಸಾರಿರುವ ಕಾಂಗ್ರೆಸ್ ಎಂದಿಗೂ ಯಶಸ್ವಿಯಾಗುವುದಿಲ್ಲ. ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಕಾಂಗ್ರೆಸ್ ಬಗೆಗಿನ ಆರೋಪಪಟ್ಟಿ, ಪಕ್ಷದ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದೆ ಇಡುತ್ತೇವೆ ಎಂದು ಸವಾಲು ಹಾಕಿದರು.

ಉಪ ಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ ತಮ್ಮ ಮನೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಪಕ್ಕದ ಮನೆ ಕಡೆಗೆ ಕೈ ತೋರಿಸುವ ಚಾಳಿ ಕಾಂಗ್ರೆಸ್‌ಗೆ ಇದೆ. ತಾವು ಆಳ್ವಿಕೆ ನಡೆಸುತ್ತಿರುವ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರೂ, ನಮ್ಮೆಡೆ ಕೈ ತೋರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು.

ಸಂಸದ ಡಿ.ಬಿ.ಚಂದ್ರೇಗೌಡ ಮಾತನಾಡಿ ಸರ್ಕಾರವನ್ನು ಯಾರೂ ಉರುಳಿಸಲು ಸಾಧ್ಯವಿಲ್ಲ ಎಂಬುದಕ್ಕೆ ಇಲ್ಲಿ ನೆರೆದಿರುವ ಕಾರ್ಯಕರ್ತರ ಸಮೂಹವೇ ಸಾಕ್ಷಿ. ಕಾವೇರಿ ನದಿ ನೀರಿನ ಹಂಚಿಕೆ ವಿಚಾರವಾಗಿ ಅಧಿಸೂಚನೆ ಹೊರಡಿಸಲು ಅವಕಾಶ ನೀಡಬಾರದು. ಇದರಿಂದ ಕರ್ನಾಟಕಕ್ಕೆ ಅನ್ಯಾಯವಾಗಲಿದೆ ಎಂದು ಹೇಳಿದರು.

ಸಚಿವ ಸುರೇಶಕುಮಾರ್, ಸಂಸದ ಪಿ.ಸಿ.ಮೋಹನ್, ಶಾಸಕರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಡಾ.ಸಿ.ಎನ್.ಅಶ್ವತ್ಥನಾರಾಯಣ, ರವಿ ಸುಬ್ರಹ್ಮಣ್ಯ, ರಾಮಚಂದ್ರೇಗೌಡ, ಬಿಬಿಎಂಪಿ ಮೇಯರ್ ವೆಂಕಟೇಶಮೂರ್ತಿ, ಉಪ ಮೇಯರ್ ಎಲ್.ಶ್ರೀನಿವಾಸ, ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಪೂರ್ಣಿಮಾ ಪ್ರಕಾಶ್, ನಗರ ಘಟಕದ ಅಧ್ಯಕ್ಷ ಸುಬ್ಬನರಸಿಂಹ ಹಾಗೂ ಇತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT