ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್: ಹಾಲಿ ಯೋಜನೆಗೆ ಬಿಡಿಗಾಸು

Last Updated 26 ಫೆಬ್ರುವರಿ 2011, 17:20 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ರೈಲ್ವೆ ಬಜೆಟ್ ಕರ್ನಾಟಕವನ್ನು ಕಡೆಗಣಿಸಿಲ್ಲವಾದರೂ ಹೊಸ ಮಾರ್ಗಗಳು ಹಾಗೂ ಪ್ರಗತಿಯಲ್ಲಿರುವ ಯೋಜನೆಗಳಿಗೆ ಸಿಕ್ಕಿರುವ ಅನುದಾನದ ಪ್ರಮಾಣ ನಿರಾಸೆ ಹುಟ್ಟಿಸಿದೆ. ಸೀಮಿತ ಸಂಪನ್ಮೂಲದಲ್ಲಿ ಎಲ್ಲರನ್ನೂ ಸಂತೃಪ್ತಿಪಡಿಸಲು ರೈಲ್ವೆ ಸಚಿವಾಲಯ ಕಸರತ್ತು ಮಾಡಿದೆ.

ಮಧ್ಯ ಕರ್ನಾಟಕದ ಮಹತ್ವದ ಯೋಜನೆಯಾದ 200ಕಿ.ಮೀ ಉದ್ದದ ತುಮಕೂರು- ದಾವಣಗೆರೆ ಯೋಜನಾ ವೆಚ್ಚ 913ಕೋಟಿ. ಬಜೆಟ್‌ನಲ್ಲಿ ಇಟ್ಟಿರುವುದು ಕೇವಲ ಒಂದು ಕೋಟಿ. ಭದ್ರಾ ಮೇಲ್ದಂಡೆ ಯೋಜನೆಯಂತೆ ತುಮಕೂರು- ದಾವಣಗೆರೆ ಮಾರ್ಗವು ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಯ ಜನರ ಬಹು ವರ್ಷಗಳ ಕನಸು.

ಸಿ.ಕೆ.ಜಾಫರ್ ಷರೀಫ್ ಕಾಲದಿಂದ ಬೇಡಿಕೆ ಇದೆ. ಅಲ್ಲದೆ, ಉತ್ತರ ಕರ್ನಾಟಕ ಮತ್ತು ಬೆಂಗಳೂರು ಅಂತರ 80 ಕಿ.ಮೀ. ಕಡಿಮೆಯಾಗಲಿದೆ. ಪ್ರಯಾಣದ ಅವಧಿ ಮೂರು ಗಂಟೆ ತಗ್ಗಲಿದೆ. ಈಗ ದಾವಣಗೆರೆಯಿಂದ ಕಡೂರು, ಬೀರೂರು ಮೂಲಕ ಹಾದು ರಾಜಧಾನಿಗೆ ಹೋಗಬೇಕು. ಇದು ಬಳಸು ಹಾದಿ.

ಇದಕ್ಕೆ ಪೂರಕವಾಗಿರುವ 563ಕೋಟಿ ವೆಚ್ಚದ 79 ಕಿ.ಮೀ ದೂರದ ಶಿವಮೊಗ್ಗ- ಹರಿಹರ ಮಾರ್ಗಕ್ಕೂ ಬಜೆಟ್‌ನಲ್ಲಿ ಕೊಟ್ಟಿರುವುದು ಒಂದು ಕೋಟಿ ರೂಪಾಯಿ ಮಾತ್ರ. ಈ ಮಾರ್ಗ ಮಲೆನಾಡಿಗರ ಬದುಕನ್ನು ಸಮೃದ್ಧಗೊಳಿಸಲಿದೆ.

ವ್ಯಾಪಾರ- ವಹಿವಾಟು ಹೆಚ್ಚಲಿದೆ. ಬಜೆಟ್‌ನಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ ಹೆಚ್ಚು ಹಣ ನಿಗದಿಯಾಗದಿದ್ದರೂ ಪರವಾಗಿಲ್ಲ. ಹೊಸ ರೈಲು, ಹೊಸ ಮಾರ್ಗ ಪ್ರಕಟಣೆ ಆಗಿರುವುದೇ ಸಮಾಧಾನದ ಸಂಗತಿ. ಪ್ರತಿ ಯೋಜನೆ ಪ್ರಕಟಣೆಗೆ ಮುನ್ನ ಯೋಜನಾ ಆಯೋಗದ ಅನುಮೋದನೆ ಬೇಕು. ಇದು ಸುಲಭದ ಮಾತಲ್ಲ. ಒಮ್ಮೆ ಒಪ್ಪಿಗೆ ಸಿಕ್ಕರೆ ಯೋಜನೆ ನಿಲ್ಲುವುದಿಲ್ಲ. ನಿಧಾನವಾದರೂ ಅನುಷ್ಠಾನ ಗ್ಯಾರಂಟಿ. ಅಷ್ಟರ ಮಟ್ಟಿಗೆ ಇದು ಸಮಾಧಾನದ ಬಜೆಟ್.

ಕೊಟ್ಟೂರು- ಹರಿಹರ ಮಾರ್ಗಕ್ಕೆ ಈ ಸಲ ಯಾವ ಅನುದಾನವನ್ನೂ ಕೊಟ್ಟಿಲ್ಲ. 201.48 ಕೋಟಿ ರೂಪಾಯಿ ಮೊತ್ತದ ಯೋಜನೆ ಇದು. ಇದುವರೆಗೆ ಮಾಡಿರುವ ವೆಚ್ಚ 154.11ಕೋಟಿ. 47.37 ಕೋಟಿ ವೆಚ್ಚ ಮಾಡಬೇಕು. ಬಾಗಲಕೋಟೆ- ಕುಡಚಿ ಮಾರ್ಗಕ್ಕೆ 20ಲಕ್ಷ ಕೊಡಲಾಗಿದೆ. ಹೋದ ವರ್ಷದ ನಿಗದಿ ಬರೀ ನಾಲ್ಕು ಲಕ್ಷ. ತಕ್ಷಣ ಕೆಲಸ ಆರಂಭಿಸಲು ರೈಲ್ವೆ ಸಿದ್ಧವಿದೆ. ಆದರೆ, ರಾಜ್ಯ ಸರ್ಕಾರವೇ ಭೂಮಿ ಕೊಟ್ಟಿಲ್ಲವಂತೆ!

ಎಲ್ಲ ಯೋಜನೆಗಳಿಗೂ ಹಣ ಸಿಕ್ಕಿಲ್ಲ ಎಂದು ಹೇಳಲಾಗದು. ಪ್ರಗತಿಯಲ್ಲಿರುವ ಕೆಲ ಮಾರ್ಗಗಳಿಗೆ ಹೆಚ್ಚು ಹಣ ಒದಗಿಸಲಾಗಿದೆ. ಕಳೆದ ವರ್ಷ ರಾಜ್ಯದ ಯೋಜನೆಗಳಿಗೆ ನಿಗದಿ ಮಾಡಿದ್ದ ಹಣ 550 ಕೋಟಿ. ಈ ಬಜೆಟ್‌ನಲ್ಲಿ ಎರಡು ಪಟ್ಟು ಹೆಚ್ಚಿಸಲಾಗಿದೆ.

ಹೊಸ ಮಾರ್ಗಗಳಿಗೆ ನೂರು ಕೋಟಿಗೂ ಹೆಚ್ಚು ಅನುದಾನ ಕಡಿತಗೊಳಿಸಲಾಗಿದೆ. (ಕಳೆದ ವರ್ಷ 306.10 ಕೋಟಿ. ಈಗ 198 ಕೋಟಿ). ಗೇಜ್ ಪರಿವರ್ತನೆಗೂ (ಕಳೆದ ವರ್ಷ 86 ಕೋಟಿ. ಈ ವರ್ಷ 39 ಕೋಟಿ) ಅರ್ಧಕ್ಕಿಂತ ಹೆಚ್ಚು ಹಣ ಖೋತಾ ಆಗಿದೆ. ಜೋಡಿ ಮಾರ್ಗ ನಿರ್ಮಾಣಕ್ಕೆ ಮಾತ್ರ ನಾಲ್ಕು ಪಟ್ಟು ಹೆಚ್ಚು ಹಣ ಒದಗಿಸಲಾಗಿದೆ. (ಕಳೆದ ವರ್ಷ ಇಟ್ಟಿದ್ದು 138 ಕೋಟಿ. ಹೊಸ ಮುಂಗಡ ಪತ್ರದಲ್ಲಿ 572.5ಕೋಟಿ).

ಈ ಸಲ ಕನ್ನಡಿಗರು ಪರವಾಗಿಲ್ಲ ಎನ್ನುವಷ್ಟರ ಮಟ್ಟಿಗೆ ಹೊಸ ರೈಲುಗಳು, ಮಾರ್ಗಗಳು ದಕ್ಕಿದ್ದರೆ ಅದಕ್ಕೆ ರಾಜ್ಯದವರೇ ಆದ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರ ಏಕಾಂಗಿ ಪರಿಶ್ರಮ ಕಾರಣ. ಇದು ಹೊಗಳಿಕೆಯೂ ಅಲ್ಲ. ಉತ್ಪ್ರೇಕ್ಷೆಯೂ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT