ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನ ಪಂಚಾಯತ್‌ ಕಿಟಕಿಯಲ್ಲಿ ಕಂಡದ್ದು...

Last Updated 7 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಲವು ಹೊಸತು­ಗಳಿಗೆ ಮುನ್ನುಡಿ ಬರೆದ ರಾಜ್ಯ. ಪಂಚಾ­ಯತ್ ರಾಜ್ ವ್ಯವಸ್ಥೆಗೆ ಸಂಬಂಧಿಸಿದ ದುಂಡು ಮೇಜಿನ ಸಭೆಗಳಲ್ಲಿ ಪದೇ ಪದೇ ಪ್ರಸ್ತಾಪವಾದ ಬಜೆಟ್‌ನಲ್ಲಿ ಪಂಚಾ­ಯತ್ ವಿಂಡೋ ವ್ಯವಸ್ಥೆ ಕೂಡಾ ಕರ್ನಾಟಕದಲ್ಲಿಯೇ ಜಾರಿಗೆ ಬಂತು. ಇದು ರಾಜ್ಯದ ಆಯವ್ಯಯ ಅಂದಾಜಿ­ನಲ್ಲಿ ಪಂಚಾಯತ ರಾಜ ಸಂಸ್ಥೆಗಳಿಗ ಒದಗಿಸಿದ ಪಾಲು ಎಷ್ಟು ಎಂದು ತೋರಿ­ಸುವ ವ್ಯವಸ್ಥೆ. ಪ್ರತಿ ರಾಜ್ಯದ ಅಯವ್ಯ­ಯ­­ದಲ್ಲಿ ಇಂಥದ್ದೊಂದು ವ್ಯವಸ್ಥೆ ಇರು­ವದು ಅಪೇಕ್ಷಣೀಯ, ಮತ್ತು  ಅಧಿಕಾರ ವಿಕೇಂದ್ರೀ­ಕರಣ ಪ್ರಯೋಗ ಕ್ರಿಯಾ­ಶೀಲ­ವಾಗಿ ಬೆಳೆಯಲು ಅದೊಂದು ಸಾಧನ.

ಧರ್ಮಸಿಂಗ್ ನೇತೃತ್ವದ ಸರ್ಕಾರ­ದಲ್ಲಿ ಹಣಕಾಸು ಮಂತ್ರಿ ಮತ್ತು ಉಪಮುಖ್ಯಮಂತ್ರಿ­ಯಾಗಿದ್ದ ಸಿದ್ದರಾ­ಮಯ್ಯ 2005-06 ಬಜೆಟ್ ಮಂಡಿ­ಸು­ವಾಗ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಪಂಚಾಯತ್ ವಿಂಡೋ ವ್ಯವಸ್ಥೆ­ಯನ್ನು ಅಳವಡಿಸಿಕೊಂಡು ಪಂಚಾ­ಯತ್ ರಾಜ್ ಚರಿತ್ರೆಯಲ್ಲಿ ಹೊಸ ಅಧ್ಯಾಯ ಬರೆದರು. ಯಡಿಯೂರಪ್ಪ­ನವರ ಕೃಷಿ ಬಜೆಟ್‌ಗೆ ಸಿಕ್ಕ ಪ್ರಚಾರ ಇದಕ್ಕೆ ಸಿಗದೇ ಹೋಯಿತು ಎಂಬುದೂ ನಿಜವೇ.  ಈ ಚರಿತ್ರಾರ್ಹ ಹೆಜ್ಜೆ­ಯನ್ನು ಹಾಕಲು ಅನುವು ಮಾಡಿಕೊಟ್ಟದ್ದು ಕರ್ನಾಟಕ  ಸರ್ಕಾರದ ಅಧಿಕಾರಿ ವರ್ಗ. 2003 ರಲ್ಲಿ ಪಂಚಾಯತ್ ರಾಜ್ ಕಾನೂನಿ­ನಲ್ಲಿ ಆಮೂಲಾಗ್ರ ಬದ­ಲಾವ­ಣೆಯ ಮೂಲಕ ನೀಡಲಾದ ಹೆಚ್ಚಿನ ಅಧಿ­ಕಾರವನ್ನು ಪಂಚಾ­ಯತ್ ರಾಜ್ ಸಂಸ್ಥೆಗಳಿಗೆ ವರ್ಗಾಯಿಸುವ ಪ್ರಕಿಯೆ­ಯಲ್ಲಿ ಪಂಚಾಯತ್ ವಿಂಡೋ ವ್ಯವಸ್ಥೆ ಜಾರಿಗೆ ಬಂತು. ತಮ್ಮದಲ್ಲದ ಸಾಧನೆಗೆ, ಯಾವ ಕೀರ್ತಿಯನ್ನು ಬಯಸದೆ ರಾಜಕೀಯ ಧುರೀಣತ್ವ ತನ್ನ ಪ್ರಾಮಾಣಿ­ಕ­ತೆಯನ್ನು ಪ್ರದರ್ಶಿಸಿತು. ಅಂದಿನಿಂದ ಇಂದಿನವರೆಗೆ ಈ ಹೊಸ ಪದ್ಧತಿ ಮುಂದುವರಿದಿದೆ.

ಪಂಚಾಯತ್ ವಿಂಡೋ ವ್ಯವಸ್ಥೆ ಬರುವದಕ್ಕಿಂತ ಮೊದಲು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಒದಗಿಸುವ ಸಂಪ­ನ್ಮೂಲದ ಲೆಕ್ಕಾಚಾರ ಗೊಂದಲ­ಮಯ­ವಾಗಿತ್ತು. ಎಲ್ಲ ಕಾರ್ಯಕ್ರಮಗಳು  ಕೇಂದ್ರ ವಲಯ, ರಾಜ್ಯ ವಲಯ ಮತ್ತು ಜಿಲ್ಲಾ ವಲಯಗಳೆಂದ ವರ್ಗೀಕರಣದ­ಲ್ಲಿಯೇ ಇರುತ್ತಿತ್ತು. ಕೇಂದ್ರ ಮತ್ತು ರಾಜ್ಯ­ವಲಯಗಳಲ್ಲಿನ ಕೆಲವು ಯೋಜನೆ­ಗಳನ್ನು ಜಿಲ್ಲಾ ವಲಯದ ಕಾರ್ಯ­ಕ್ರಮಗ­ಳೊಂದಿಗೆ ಜೋಡಿಸಿ, ಅವುಗಳನ್ನು ಮೂರು ಹಂತ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಂಚಲಾಗುತ್ತಿತ್ತು. ಇವೆ­ಲ್ಲವೂ ಬಜೆಟ್ ಜೊತೆಗೆ ಇರುವ ಸಂಬಂಧಿತ ದಾಖಲೆಗಳಲ್ಲಿ ಇರುತ್ತಿದ್ದವು.

ಈಗ  ಅಂತಹ ಗೊಂದಲಗಳಿಲ್ಲ. ಪಂಚಾ­ಯತ್ ರಾಜ್ ವ್ಯವಸ್ಥೆಗೆ ಒದಗಿ­ಸಲಾ­ಗಿರುವ ಸಂಪನ್ಮೂಲದ ಪ್ರಮಾಣ ವ್ಯವಸ್ಥಿತ­ಗಾಗಿ ಬಜೆಟ್ ದಾಖಲೆಯಲ್ಲೇ ದೊರೆಯುತ್ತದೆ.  ಎಲ್ಲ ಕಾರ್ಯಕ್ರಮಗ­ಳಲ್ಲಿ  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲನ್ನು ವಿಂಗಡಿಸಿ,  ಯೋಜನೆ ಮತ್ತು ಯೋಜನೇತರ ವೆಚ್ಚಗಳನ್ನು  ಮೂರು ಹಂತ ಪಂಚಾಯತ ರಾಜ್ ಸಂಸ್ಥೆಗಳಿಗ ವಹಿಸಿ­ಕೊಟ್ಟ ಜವಾಬ್ದಾರಿಯನ್ವಯ ಹಂಚ­ಲಾಗುತ್ತಿದೆ. ಈಗ ಒದಗಿಸ­ಲಾಗಿರುವ  ಮಾಹಿತಿ  ಈ ಕೆಳಗಿನಂತಿದೆ.

•ಪಂಚಾಯತ್ ರಾಜ್ ಸಂಸ್ಥೆ­­ಗಳಿಗೆ,   ಯೊಜನೆ ಮತ್ತು ಯೋಜ­ನೇ­ತರ ಲೆಕ್ಕದಲ್ಲಿ ಬರುವ ಹಣವನ್ನು ೪೦ ವಲಯಗಳ ಮೂಲಕ ಹಂಚ­ಲಾ­ಗು­ತ್ತಿದೆ. ಹೀಗೆ ಹಂಚುವಾಗ ಕೇಂದ್ರ ಮತ್ತು ರಾಜ್ಯ ಸರಕಾರದ ಪಾಲುಗಳನ್ನು ಪ್ರತ್ಯೇಕ­ವಾಗಿ ತೋರಿಸಲಾಗಿದೆ.
•ಪ್ರತಿ  ಜಿಲ್ಲೆಯಲ್ಲಿನ,  ಜಿಲ್ಲಾ ಪಂಚಾಯಿತಿ  ತಾಲೂಕು ಪಂಚಾ­ಯಿತಿ  ಮತ್ತು ಗ್ರಾಮ ಪಂಚಾಯಿತಿಗಳ ಯೋಜನೆಗಳ ಪಾಲು 
•ವಲಯವಾರು ಹಂಚುವಿ­ಕೆ­ಯಲ್ಲಿ ಪ್ರತಿ ಜಿಲ್ಲೆಗಳ ಪಾಲು. 
ಯೋಜನೇತರ ವೆಚ್ಚದ ಬಹುಪಾಲು ಪಂಚಾಯತ್ ರಾಜ್ ಸಂಸ್ಥೆಯಲ್ಲಿ ನಿಯೋಜಿ­ತ­ರಾದ ನೌಕರರ ಸಂಬಳ ಸಾರಿಗೆಗಳಿಗೆ ಹೋಗು­ವ­ದರಿಂದ ಅಭಿವೃದ್ಧಿ ದೃಷ್ಟಿ­ಯಿಂದ ­ಗಮ­ನ­ಹರಿ­ಸಬೇಕಾಗಿರುವುದು ಯೋಜನಾ ವೆಚ್ಚದ ಮೇಲೆಯೇ.

2014-15ರ ಬಜೆಟ್‌ನಲ್ಲಿ  ಪಂಚಾ­ಯತ್ ರಾಜ್  ಸಂಸ್ಥೆಗಳಿಗೆ ಯೋಜನಾ ವೆಚ್ಚಕ್ಕೆ ಒದಗಿ­ಸಿದ ಒಟ್ಟು ಹಣ ರೂ ೧೦,೪೮೦.೭೦ ಕೋಟಿ.  ಮೊದಲ ಬಾರಿಗೆ ಈ ಮೊತ್ತ  ಐದಂಕಿಯ ಕೋಟಿ­ಗಳಿಗೆ ಏರಿದೆ. ಕಳೆದ ಏಳು ವರ್ಷಗಳಲ್ಲಿ, ಮೂರು ಪಟ್ಟು ಏರಿಕೆಯಾಗಿದೆ. ಇದ­ರಲ್ಲಿ ಕೇಂದ್ರದ ಪಾಲು ಒಂದು ರೂಪಾಯಿ­ಯಲ್ಲಿ 8 ಪೈಸೆಯಷ್ಟು ಅಂದರೆ ರೂ ೮೦೪.೬೩ ಕೋಟಿ.  ರಾಜ್ಯದ  ೩೦ ಜಿಲ್ಲೆಗಳಲ್ಲಿ­ರುವ ಜಿಲ್ಲಾ ಪಂಚಾ­ಯಿತಿ, ತಾಲ್ಲೂಕು ಪಂಚಾಯಿಚಿ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿಯ ಸಲು­ವಾಗಿ ಒದಗಿ­ಸಾಗಿರುವ ಹಣ ಸರಾಸರಿ  ರೂ ೩೪೯.೩೩ ಕೋಟಿ. ಒಂದು ತಿಂಗಳಿಗೆ ಸುಮಾರು ರೂ ೨೭.೪೦ ಕೋಟಿ.

ನಲವತ್ತು ವಲಯಗಳಿಗೆ  ಹಂಚುವ  ಈ ಹಣದಲ್ಲಿ,  ಶೇ ೮೪ರಷ್ಟು ಹಣ ಬರೀ ೧೪ ವಲಯ­ಗಳಿಗೆ ಹೋಗುತ್ತದೆ. ಅದರ­ಲ್ಲಿ­ಯೂ ಅತಿ ಹೆಚ್ಚಿನ ಹಣ, ಸುಮಾರು ಶೇ ೩೦ರಷ್ಟು ಪ್ರಾಥಮಿಕ ಮತ್ತು ಮಾಧ್ಯ­ಮಿಕ ಶಿಕ್ಷಣ (ರೂ ೨೯೨೯ ಕೊಟಿ) ಹಾಗು ವಸತಿ (ರೂ  ೧೦೧೯.೯೮ ಕೋಟಿ) ಮೀಸಲಾಗಿದೆ.
ಪಂಚಾಯತ್ ರಾಜ್ ಸಂಸ್ಥೆಗಳಿಗೆ ಎರಡು ಶೀರ್ಷಿಕೆಗಳಿಗೆ ಕೊಡುವ (ರೂ ೮೪೩.೭೩ ಕೋಟಿ) ಅನುದಾನ ಬಿಟ್ಟರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಮತ್ತು ಪೌಷ್ಠಿಕ ಆಹಾರ ವಲಯ (ರೂ೧೪೩೬. ೩೯ ಕೊಟಿ), ಕುಟುಂಬ ಕಲ್ಯಾಣ (ರೂ೪೬೮.೦೨ ಕೋಟಿ), ಆರೋಗ್ಯ (ರೂ೧೦.೬೮ ಕೋಟಿ),  ಗ್ರಾಮೀಣ ನೀರು ಪೂರೈಕೆ(ರೂ೨೩೬.೫೨ ಕೋಟಿ), ಪರಿಶಿಷ್ಟ ವರ್ಗದ ಕಲ್ಯಾಣ (ರೂ೩೮೨.೫೮ ಕೋಟಿ), ಪರಿಶಿಷ್ಟ ಜಾತಿ ಕಲ್ಯಾಣ (ರೂ೧೨೯.೦೪ ಕೋಟಿ), ಹಿಂದುಳಿದ ವರ್ಗಗಳ ಕಲ್ಯಾಣ  (ರೂ೧೮೬.೬೩ ಕೋಟಿ), ಪಶು ಸಂಗೋಪನೆ (ರೂ೧೫೪.೫೮ ಕೋಟಿ), ಮತ್ತು ರಸ್ತೆ, ಸೇತುವೆ ಕಾಮಗಾರಿ (ರೂ ೧೫೯.೨೦ ಕೋಟಿ) ಗಳಿಗೆ ಹೋಗಿದೆ.  ಉಳಿದ  ಶೇ 16ರಷ್ಟು ಹಣವನ್ನು  ೨೬  ವಲಯಗಳಿಗೆ ಕೊಡಲಾಗಿದೆ.

ಈ ಯೋಜನಾ ಅನುದಾನದ ದೊಡ್ಡ ಪಾಲನ್ನು ಅಂದರೆ ರೂ 5166.61 ಕೋಟಿಗಳನ್ನು ಬಾಚಿಕೊಳ್ಳುವುದು ಜಿಲ್ಲಾ ಪಂಚಾಯಿತಿಗಳು (ಶೇ. ೪೯.೨೯%).  ತಾಲೂಕು ಪಂಚಾಯಿತಿ­ಗಳಿಗೆ  ರೂ ೩೩೬೨.೦೯ ಕೋಟಿ (೩೨.೦೮%) ಮತ್ತು ಗ್ರಾಮ  ಪಂಚಾಯಿತಿಗಳಿಗೆ ಅತಿ ಕಡಿಮೆ ಅಂದರೆ  ರೂ೧೯೮೨ ಕೋಟಿ (೧೮.೯೨%). ೪೦ ವಲ­ಯ­ಗಳಲ್ಲಿ ವಿಶೇಷ ಘಟಕ ಯೋಜನೆ,  ಪೌಷ್ಟಿಕ ಆಹಾರ, ಸಣ್ಣ ನೀರಾವರಿ,  ಗಿರಿಜನ ಉಪಯೋಜನೆ ಮತ್ತು ವಸತಿಗಳಂಥ ಐದು ವಲಯಗಳನ್ನು ಬಿಟ್ಟರೆ  ಉಳಿದೆಲ್ಲಾ ವಲಯಗಳಲ್ಲಿ  ಜಿಲ್ಲಾ ಪಂಚಾಯಿತಿಗಳಿಗೇ ಹೆಚ್ಚಿನ ಹಣ  ಸಿಗುತ್ತದೆ.  ತಾಲ್ಲೂಕು ಪಂಚಾಯಿತಿಗಳಿಗೆ ಹಣ ಸಿಗುವುದು ಕೇವಲ ೨೧ ವಲಯಗಳಲ್ಲಿ ಮಾತ್ರ. ಉಳಿದ  ೧೯ ವಲಯಗಳಲ್ಲಿ ಅವಕ್ಕೆ ಯಾವ ಪಾಲೂ ಇಲ್ಲ.  ಗ್ರಾಮ ಪಂಚಾಯಿತಿಗಳಿಗೆ  ಕೇವಲ ಎಂಟು ವಲಯಗಳಲ್ಲಷ್ಟೇ ಹಣ ಸಿಗುತ್ತದೆ.

2014-–15ರ ಬಜೆಟ್‌ನ ವಿವರಗಳನ್ನು ನೋಡಿದರೆ ಇದು ಅರ್ಥವಾಗುತ್ತದೆ.  ಕ್ರೀಡೆ, ಯುವಜನ ಸೇವೆ (ರೂ೧೩.೬೨ ಕೋಟಿ), ಗ್ರಾಮೀಣ ನೀರು ಪೂರೈಕೆ (ರೂ೧೬೧.೫೨ ಕೋಟಿ); ಪ್ರದೇಶಾಭಿವೃದ್ಧಿ ಮತ್ತು  ಇತರೇ ಗ್ರಾಮೀಣ ಕಾರ್ಯಕ್ರಮಗಳು,( ರೂ೪೦.೫೦ ಕೋಟಿ); ಗ್ರಾಮೀಣ ಇಂಧನ (ರೂ೪.೩೦ ಕೋಟಿ); ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುದಾನ (ರೂ೫೯೧.೩೦ ಕೋಟಿ); ಸಣ್ಣ ನೀರಾವರಿ (ರೂ೭೬  ಲಕ್ಷ); ವಸತಿ  (ರೂ೧೦೧೯.೯೮ ಕೊಟಿ),  ಮತ್ತು ಜಲಾನಯನ ಅಭಿವೃದ್ದಿ  (ರೂ ೧೫೦ ಕೋಟಿ).   ವಸತಿ ಕಾರ್ಯಕ್ರಮದ ಶೀರ್ಷಿಕೆಯಲ್ಲಿ ಒದಗಿಸುವ ಸಂಪನ್ಮೂಲ ಸಂಪೂರ್ಣವಾಗಿ ಗ್ರಾಮ ಪಂಚಾಯಿತಿಗಳಿಗೆ ಮಾತ್ರ ಸಿಗುತ್ತದೆಯೇ ಹೊರತು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಸಿಗುವದಿಲ್ಲ.  ಹಾಗೆಯೇ  ಪ್ರಾಥಮಿಕ ಮತ್ತು ಮಾದ್ಯಮಿಕ ಶಿಕ್ಷಣ, ಜನಾರೋಗ್ಯ, ಗ್ರಾಮೀಣ ಆರೋಗ್ಯ ಸೇವೆ, ಗ್ರಾಮೀಣ ಉದ್ಯೋಗ ಯೋಜನೆ ಮೊದಲಾದ  ೩೨ ವಲಯಗಳಲ್ಲಿ, ಗ್ರಾಮ ಪಂಚಾ­ಯಿತಿ­ಗಳಿಗೆ  ಒಂದು ಪೈಸೆಯನ್ನೂ ಒದ­ಗಿ­ಸಲಾಗಿಲ್ಲವೆಂಬುದು  ಗಮನಾರ್ಹ.

ರಾಜ್ಯದ ಬಜೆಟ್‌ನಲ್ಲಿ ಪಂಚಾಯತ್ ಕಿಟಕಿ ತೆರೆದು ಒಂಬತ್ತು ವರ್ಷಗಳಾಗಿವೆ. ಪಂಚಾಯತ್ ರಾಜ್ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಒದಗಿಸಲಾಗುತ್ತಿರುವ ಸಂಪನ್ಮೂಲವೂ ಹೆಚ್ಚಾಗುತ್ತಿದೆ. ಆದರೆ ಇದಕ್ಕಾಗಿ ಬಳಸಿರುವ ಮಾನದಂಡ, ಅದನ್ನು ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳ ನಡುವೆ ಹಂಚುವ ಕ್ರಮ ಇತ್ಯಾದಿಗಳ ಬಗ್ಗೆ ಇನ್ನೂ ಅನೇಕ ಗೊಂದಲಗಳು ನಿವಾರಣೆಯಾಗಬೇಕಾಗಿದೆ.

ಪಂಚಾಯಿತಿಗಳಿಗೆ ಕೊಟ್ಟಿರುವ ಹಣ, ಮತ್ತು ಅದಕ್ಕಾಗಿ ಯೋಜಿತ ಕಾರ್ಯಕ್ರಮಗಳು ಗ್ರಾಮೀಣ ಜನರ ಬೇಕು ಬೇಡಿಕೆ ಮತ್ತು ಆಶೋತ್ತರಗನ್ನು ಪ್ರತಿಬಿಂಬಿಸುವಂತಹ  ಜನರ ಯೋಜನೆಗಳಾಗುತ್ತಿದೆಯೆ?  ಇದಕ್ಕೆ  ಉತ್ತರ ಕೊಡುವದು ಕಷ್ಟಕರವೇ. ಏಕೆಂದರೆ ಅಂತಹ ಯಾವ ಪ್ರಕ್ರಿಯೆಯೂ  ಸರಕಾರವು ತನ್ನ ವಾರ್ಷಿಕ ಯೋಜನೆ ತಯಾರಿಸುವಲ್ಲಿ ಕಾಣಿಸುತ್ತಿಲ್ಲ. ಈಗಿರುವ ಕಾನೂನಿನಲ್ಲ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಭಿಪ್ರಾಯವನ್ನು ಆಧಾರವಾಗಿಟ್ಟುಕೊಂಡು  ಸಮಗ್ರ ಯೋಜನೆ ತಯಾರಿಸಲು ಜಿಲ್ಲಾ ಯೋಜನಾ ಸಮಿತಿಗಳನ್ನು ಸರಕಾರವು ರಚಿಸಬೇಕೆಂದಿದೆ. ಇದು ಕಾರ್ಯಗತವಾಗಿಯೇ ಇಲ್ಲ. ಅಥವಾ ಪಂಚಾಯತ್ ರಾಜ್ ಸಂಸ್ಥೆಗಳ ಅಭಿಪ್ರಾಯವನ್ನು ಪತ್ಯೇಕವಾಗಿ ಸಂಗ್ರಹಿಸಿ ಅದನ್ನು ತನ್ನ ವಾರ್ಷಿಕ ಯೋಜನೆಯಲ್ಲಿ ಅಳವಡಿಸುವ ಯಾವ ಬದಲಿ ವ್ಯವಸ್ಥೆಯನ್ನೂ ಮಾಡಿಲ್ಲ.

ಹಿಂದಿನ ದಿನಗಳಂತೆ ಇದು ಅಧಿಕಾರಿಗಳು ತಯಾರಿಸಿದ ಯೋಜನೆಯೇ ಹೊರತು ಜನರ ಯೋಜನೆಯಲ್ಲ. ಇದರ ಸಾಧ್ಯತೆ ಬಾಧ್ಯತೆಗಳ ಬಗ್ಗೆ ಯಾವ ವೇದಿಕೆಯಲ್ಲಿಯೂ ಚರ್ಚೆಯಾಗುವದಿಲ್ಲ. ಪಂಚಾಯತ್ ರಾಜ್ ಸಂಸ್ಥೆಗಳು ಇದರ ಬಗ್ಗೆ ಯಾವ ಅಬಿಪ್ರಾಯವನ್ನೂ ವ್ಯಕ್ತ ಪಡಿಸುವಂತಿಲ್ಲ.  ಅಧಿಕಾರಿಗಳು ಸೂಚಿಸಿದ ಕಾರ್ಯಕ್ರಮ­ಗಳನ್ನು  ಪಂಚಾಯತ್ ರಾಜ್ ಸಂಸ್ಥೆಗಳು ಚಾಚೂ ತಪ್ಪದೇ ಅನುಷ್ಠಾನ ಮಾಡಬೇಕೇ ಹೊರತು, ಅದರಲ್ಲಿ ಸ್ಥಳೀಯ ಬೇಡಿಕೆಗಳಿಗೆ ಅನುಕೂಲವಾಗುವಂತೆ ಯಾವ ಬದಲಾವಣೆಯನ್ನು ಮಾಡಿಕೊಳ್ಳುವ ಅವಕಾಶವಿಲ್ಲ. ಪೂರ್ವ ನಿರ್ಧಾರಿತ ಕಾರ್ಯಕ್ರಮಗಳ ಜೊತೆ ಹಣ ಬರುತ್ತದೆಯೇ ಹೊರತು ಪಂಚಾಯತ್ ರಾಜ್ ಸಂಸ್ಥೆಗಳು ತಮ್ಮ ಬೇಡಿಕೆಗಳಂತೆ ಕಾರ್ಯಕ್ರಮ ರೂಪಿಸಲು  ಹಣ ಬರುವದಿಲ್ಲ. 

ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣವನ್ನು ಯಾವ ಮಾನದಂಡದ ಆಧಾರದ ಮೇಲೆ ಕೊಡಲಾಗುತ್ತಿದೆ ಎನ್ನುವದು ಗೊತ್ತಾಗುವದಿಲ್ಲ. ಮಾನದಂಡ ರೂಪಿಸಿ ಅದರಂತೆ ಹಣವನ್ನು ಕೊಡಬೇಕೆನ್ನುವ ರಾಜ್ಯ ಹಣಕಾಸು ಆಯೋಗದ ಶಿಫಾರಸು­ಗಳನ್ನುಜಾರಿಗೆ ತರುವಲ್ಲಿ ಸರ್ಕಾರ ತಳೆದಿರುವ ವಿಳಂಬ ಧೋರಣೆ ಎಲ್ಲವನ್ನೂ ಅಸ್ಪಷ್ಟ­­ವಾಗಿಸುವಲ್ಲಿ ಮುಖ್ಯ ಪಾತ್ರವಹಿಸಿವೆ. ಇಲ್ಲಿಯ ತನಕ ಮೂರು ಹಣಕಾಸು ಆಯೋಗಗಳು  ತಮ್ಮ ವರದಿಗಳನ್ನು  ಕೊಟ್ಟಿವೆ.  ಆಯೋಗದ ಶಿಫಾರಸುಗಳನ್ನು ಸರ್ಕಾರ ಎಷ್ಟರ ಮಟ್ಟಿಗೆ ಒಪ್ಪಿ ಜಾರಿಗೊಳಿಸಿದೆ ಎನ್ನುವ ಮಾಹಿತಿ ಯಾರ ಬಳಿಯೂ ಇಲ್ಲ. ಸರ್ಕಾರದ ಬಳಿಯೂ ಈ ಮಾಹಿತಿ ಇರುವಂತೆ ಕಾಣಿಸುವುದಿಲ್ಲ. ಇದರಿಂದಾಗಿ  ಹಣಕಾಸು ಆಯೋಗವನ್ನು ರಚಿಸುಸುವುದರ ಹಿಂದಿನ ಮೂಲಭೂತ ಉದ್ದೇಶವನ್ನೇ ಸರ್ಕಾರ ಮೂಲೆಗೊತ್ತಿದೆ. 

ಪಂಚಾಯತ್ ರಾಜ್ ಸಂಸ್ಥೆಗಳಿಗೆ ನೀಡುವ ಸಂಪನ್ಮೂಲವನ್ನು ಯಾವ ಆಧಾರದ ಮೇಲೆ ಹಂಚಬೇಕು ಎನ್ನುವದಕ್ಕೆ ಬೇಕಾಗುವ ಮಾರ್ಗದರ್ಶಿ ಸೂತ್ರದ ಅಭಾವ ಎದ್ದು ಕಾಣುತ್ತಿದೆ.  ಇದನ್ನು  ಪಂಚಾಯತ ಸಂಸ್ಥೆಗಳಿಗೆ ಕೊಡಮಾಡಿರುವ ಜವಾಬ್ದಾರಿಯನ್ನು ಸೂಚಿಸುವ ಚಟುವಟಿಕೆ ನಕ್ಷೆಯಲ್ಲೇ ನೀಡಲಾಗಿದೆ

ಎಂದು ಸರ್ಕಾರ ಹೇಳುತ್ತದೆ. ಆದರೆ ವರ್ಷ ವರ್ಷಕ್ಕೂ ಶೇಕಡಾವಾರು ಪಾಲಿನಲ್ಲಿ ಏರಿಳಿತಗಳಿರುತ್ತವೆ. ಆದ್ದರಿಂದ ಚಟುವಟಿಕೆ ನಕ್ಷೆಗಳೂ ಸಂಪನ್ಮೂಲಕ್ಕೂ ಅರ್ಥಾರ್ಥ ಸಂಬಂಧವೇ ಇರುವುದಿಲ್ಲ.

ಈ ವರ್ಷದ ಬಜೆಟ್ ನಲ್ಲಿ   ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳಿಗೆ ತಲಾ  ಶೇ ೪೯.೨೯,  ೩೨.೨೮, ಹಾಗೂ ೧೮.೯೧ರಂತೆ ಸಂಪನ್ಮೂಲ ಒದಗಿಸಲಾಗಿದೆ.  ೨೦೦೮–-೦9ರಿಂದ ಈಚೆಗೆ ಜಿಲ್ಲಾ ಪಂಚಾಯಿತಿಗಳ ಪಾಲು, ಕ್ರಮೇಣ ಏರಿ,ಮುಂದಿನ ವರ್ಷಗಳಲ್ಲಿ  ಒಮ್ಮೆ  ಶೇ ೫೭.೨೭ಕ್ಕೆ  ತಲುಪಿ ಈಗ ಮತ್ತೆ  ಶೇ ೪೯.೨೯ಕ್ಕೆ  ಬಂದಿದೆ. ಇದರಂತೆ ತಾಲೂಕು ಪಂಚಾಯಿತಿಗಳ ಪಾಲು ಮೊದಲು ಕನಿಷ್ಟ ಮಟ್ಟದಲ್ಲಿದ್ದದ್ದು ( ೨೦೦೮–೦೯ರಲ್ಲಿ ಶೇ. -೨೧.೨೩) ಕ್ರಮೇಣ ಏರಿಕೆಯಾಗಿ  ಈಗ  ಶೇ.೩೨.೨೮ಕ್ಕೆ ಏರಿದೆ.  ಗ್ರಾಮ ಪಂಚಾಯತಿಗಳು ಪಾಲು ಕೆಳಕ್ಕೆ ಇಳಿಯುತ್ತಲೇ ಇದೆ.  ಒಂದು ಕಾಲಕ್ಕೆ ಶೇ೩೭.೨೩ರಷ್ಟಿದ್ದ ಗ್ರಾಮ ಪಂಚಾಯಿತಿಗಳ ಪಾಲು ಈಗ ಅದರ ಅರ್ಧಕ್ಕೆ ಬಂದು ನಿಂತಿದೆ.

ಸೋಜಿಗವೇನೆಂದರೆ, ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಜನರರೊಡನೆ ನಿರಂತರ ಸಂಪರ್ಕವಿರುಹಂತವೆಂದರೆ ಗ್ರಾಮ ಪಂಚಾಯಿತಿ. ಇಡೀ ಪಂಚಾಯತ್ ರಾಜ್ ವ್ಯವಸ್ಥೆಯು ಪರಿಣಾ­ಮ­ಕಾರಿಯಾಗಿದೆಯೋ ಇಲ್ಲವೋ  ಎಂದು ತಿಳಿಯುವದೂ  ಗಾಮ ಪಂಚಾಯಿತಿ ಮಟ್ಟದಲ್ಲಿ. ಆದರೆ ಅದಕ್ಕೆದೊರೆಯವ ಸಂಪನ್ಮೂಲದ ಪಾಲಿನಲ್ಲ ಮಾತ್ರ ನಿರಂತರ ಇಳಿಕೆ ಕಂಡುಬರುತ್ತಿದೆ. ಇದರ ಅರ್ಥ ವಿಕೇಂದ್ರೀಕರಣದ  ಪ್ರಯೋಗದಲ್ಲಿ ಎಲ್ಲಿಯೋ ಎಡವಟ್ಟಾಗಿದೆ ಎಂಬುದು ಸ್ಪಷ್ಟ. ಗ್ರಾಮೀಣರ  ಜನ ಜೀವನದೊಂದಿಗೆ  ಬೆಸೆದಿರುವ ಪ್ರಾಥಮಿಕ ಶಿಕ್ಷಣ , ಜನಾರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ರಸ್ತೆ ಸಂಪರ್ಕ, ಮೊದಲಾದ ವಲಯಗಳಲ್ಲಿ  ಗ್ರಾಮ ಪಂಚಾಯಿತಿಗಳಿಗೆ ಯಾವ ಪಾಲೂ ಸಿಗುವದಿಲ್ಲ. ಸಂಪನ್ಮೂಲದಲ್ಲಿ ಪಾಲಿಲ್ಲದ ವಲಯಗಳಿಗೆ ಸಂಬಂಧಿಸಿರುವ ಸಮಸ್ಯೆಗಳನ್ನು  ಗ್ರಾಮ ಪಂಚಾಯಿತಿಗಳು ಪರಿಹರಿಸಲು ಸಾಧ್ಯವೇ? ಅಥವಾ ಬೇರೆಯೇ ಹಂತದ ಸಂಸ್ಥೆಗಳು ಕಾರ್ಯಗತಗೊಳಿಸುತ್ತಿರುವ ಕಾರ್ಯಕ್ರಮಗಳಲ್ಲಿ ಯಾವ ತರಹದ ಮೇಲುಸ್ತುವಾರಿ ಗ್ರಾಮ ಪಂಚಾಯಯಿತಿಗಳಿಗೆ ಸಾಧ್ಯ?

ಇದಕ್ಕೆ ನಿದರ್ಶನ ಗ್ರಾಮೀಣ ಉದ್ಯೋಗ ಯೋಜನೆಯ ಅಂಗವಾಗಿ ಕೇಂದ್ರದಿಂದ ಬರುವ ಹಣ.  ಈ ಕಾರ್ಯಕ್ರಮ ಅನುಷ್ಠಾನ­ವಾಗ­ಬೇಕಾಗಿರುವದು  ಗ್ರಾಮೀಣ ಭಾಗದಲ್ಲಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ.  ಆದರೆ ಬರುತ್ತಿರುವ ಎಲ್ಲ ಹಣವನ್ನು ಜಿಲ್ಲಾ ಪಂಚಾಯಿತಿಗೆ ನೀಡಿ, ಗ್ರಾಮ ಮತ್ತು ತಾಲೂಕು ಪಂಚಾಯಿತಿಗಳಿಗೆ ಸೊನ್ನೆ ಸುತ್ತಲಾಗಿದೆ. ಅಧಿಕೃತ ಮಾಹಿತಿಯ ಪ್ರಕಾರ  ೨೦೦೭-–೦೮ ರಲ್ಲಿ, ಗ್ರಾಮ ಪಂಚಾಯಿತಿಗಳಿಗೆ ಇದರಲ್ಲಿ ಸಿಂಹ ಪಾಲು ಕೊಡಲಾಗಿತ್ತು. ಮುಂದಿನ ವರ್ಷದಿಂದ ಪಾಲು ನಿಂತದ್ದು ಇಲ್ಲಿಯ ತನಕ ಮುಂದುವರಿದಿದೆ.  ಇದು ಹೀಗೆ ಏಕೆ ಆಯಿತು ಎಂದು ಯಾರು ಈ ತನಕ ಕೇಳಿಲ್ಲ. ಇದು ವಿಕೇಂದ್ರಿಕರಣ ತತ್ವಕ್ಕೆ ವಿರುದ್ಧವಾಗಿರುವುದೆಂದು ಮೇಲ್ನೋಟಕ್ಕೆ ಕಾಣಿಸಿದರೂ, ಇದರ ಬಗ್ಗೆ ಶಾಸನ ಸಭೆಯಲ್ಲಿ ಎಂದೂ ಚರ್ಚೆಯೇ ಅಗಿಲ್ಲ.

ಇದರಿಂದ ಉದ್ಭವವಾಗುವ ಒಂದು ಪ್ರಶ್ನೆಯೆಂದರೆ ಚಟುವಟಿಕೆಯ ನಕ್ಷೆಯ ಪ್ರಕಾರ ಜವಾಬ್ದಾರಿಯನ್ನೂ ಹಣವನ್ನೂ  ಪಂಚಾಯತ್ ರಾಜ್ ಸಂಸ್ಥೆಗಳಿಗೆ ಕೊಡಲಾಗಿದೆಯೇ?  ಇದರ ಉತ್ತರ ಹೌದು ಅಥವಾ ಇಲ್ಲವೆಂದಾದರೆ,  ಚಟುವಟಿಕೆ ನಕ್ಷೆಯನ್ನು ತಯಾರಿಸುವಲ್ಲಿಯಾಗಲೀ ಅದನ್ನು ಅರ್ಥಪೂರ್ಣವಾಗಿ ಕಾರ್ಯಗತ ಮಾಡುವಲ್ಲಿ ದೋಷವಿದೆ ಎಂಬುದು ಸ್ಪಷ್ಟ.  ಯಾವ ರೀತಿಯಲ್ಲಿ ನೋಡಿದರೂ ಇದನ್ನು  ಪುನರ್ವಿಮರ್ಶಿಸುವ ಅಗತ್ಯವಿದೆ. ಅದರ ಬಗ್ಗೆ ಸರ್ಕಾರಕ್ಕೆ ಯಾವ ಕಾಳಜಿಯೂ ಇಲ್ಲ. ಪಂಚಾಯತ್ ರಾಜ್ ಸಂಸ್ಥೆಯ ಪ್ರತಿನಿಧಿಗಳು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮತ್ತೊಂದು ಮಹತ್ವದ ವಿಷಯವೆಂದರೆ ಒದಗಿಸಿದ ಹಣ ಎಷ್ಟರ ಮಟ್ಟಿಗೆ ಖರ್ಚಾಗಿದೆ. ಅದರ ಸದುಪಯೋಗವಾಗಿದೆಯೇ ಇಲ್ಲವೇ ಎನ್ನುವದನ್ನು ತಿಳಿಯುವ ಯಾವ ವ್ಯವಸ್ಥೆಯೂ ಕಾಣಿಸುತ್ತಿಲ್ಲ. ಹಣದ ಹೊಳೆಯೇ ಹರಿದು ಬರುತ್ತಿರುವಾಗ ಪಂಚಾಯತ್ ರಾಜ್ ಸಂಸ್ಥೆಗಳು ಅದನ್ನು ಉಪಯೋಗ ಎಷ್ಟರ ಮಟ್ಟಿಗೆ ಮಾಡಿಕೊಂಡು ಗಾಮೀಣಾ­ಭಿವೃದ್ಧಿಯಲ್ಲಿ ತಮ್ಮ ಸಕ್ರಿಯ ಪಾತ್ರ ವಹಿಸುತ್ತಿವೆ ಎನ್ನುವ ಪಾರದರ್ಶಕ ವ್ಯವಸ್ಥೆಮಾಡುವ ಅಗತ್ಯ ಎಂದಿಗಿಂತ ಇಂದು ಜಾಸ್ತಿಯಾಗಿದೆ. ಆದರೆ ಇದನ್ನು ಮಾಡುವವರು ಯಾರು?

(ಹಿರಿಯ ಪತ್ರಕರ್ತರಾಗಿರುವ ಲೇಖಕರು ಪಂಚಾಯತ್ ರಾಜ್ ಸಂಸ್ಥೆಗಳ ಕುರಿತು ಅಧ್ಯಯನ ನಡೆಸುತ್ತಿದ್ದಾರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT