ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಲ್ಲಿ ಆದ್ಯತೆ: ಮುಖ್ಯಮಂತ್ರಿಗೆ ಮನವಿ

Last Updated 16 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್ ಸಿಬ್ಬಂದಿಗೆ ಅಗತ್ಯವಿರುವ 60 ಸಾವಿರ ವಸತಿ ಗೃಹಗಳನ್ನು ನಿರ್ಮಿಸಿಕೊಡಲು ಈ ಬಾರಿಯ ಬಜೆಟ್‌ನಲ್ಲಿ ಒತ್ತು ನೀಡುವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಮನವಿ ಮಾಡಲಾಗಿದೆ ಎಂದು ಗೃಹ ಸಚಿವ ಆರ್. ಅಶೋಕ ಸೋಮವಾರ ಇಲ್ಲಿ ಹೇಳಿದರು.

ಪೊಲೀಸ್ ವಸತಿ ನಿಗಮದ ಮೂಲಕ ಇದುವರೆಗೆ ಸುಮಾರು 40 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಇನ್ನೂ 60 ಸಾವಿರ ಸಿಬ್ಬಂದಿಗೆ ವಸತಿ ಸೌಲಭ್ಯವಿಲ್ಲ. ಕೇವಲ 15 ದಿನಗಳಲ್ಲಿ ಮನೆಗಳನ್ನು ನಿರ್ಮಿಸಲು ಅನುವಾಗಿಸುವ ಆಸ್ಟ್ರೇಲಿಯಾ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವಸತಿ ಇಲ್ಲದ ಸಿಬ್ಬಂದಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

`ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡು ರಾಜಾಜಿನಗರ, ಶಾಂತಿನಗರದಲ್ಲಿ ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗೆ ಗುಂಪು ಮನೆಗಳನ್ನು ನಿರ್ಮಿಸಲಾಗಿದೆ. ಇನ್ನೂ 50 ಮನೆಗಳನ್ನು ಇದೇ ರೀತಿ ನಿರ್ಮಿಸುತ್ತೇವೆ. ಅವುಗಳ ಸಾಧಕ-ಬಾಧಕಗಳನ್ನು ನೋಡಿಕೊಂಡು ರಾಜ್ಯದ ಎಲ್ಲ ಕಡೆಗೂ ಇದನ್ನು ವಿಸ್ತರಿಸಲಾಗುವುದು~ ಎಂದರು.

650 ಚದರ ಅಡಿ ಮನೆ ನಿರ್ಮಾಣಕ್ಕೆ ಹತ್ತು ಲಕ್ಷ ರೂಪಾಯಿ ವೆಚ್ಚವಾಗಲಿದ್ದು, 40 ವರ್ಷ ಬಾಳಿಕೆ ಬರಲಿದೆ. ಸ್ಟೀಲ್ ಮತ್ತು ಥರ್ಮೋಕೋಲ್ ಅಳವಡಿಸಿ ಮನೆಗಳನ್ನು ನಿರ್ಮಿಸುವುದರಿಂದ ಕಲ್ಲು, ಮರಳು, ಜಲ್ಲಿ, ಮರ ಇತ್ಯಾದಿಗಳ ಅಗತ್ಯವಿಲ್ಲ. ಉಷ್ಣಾಂಶವು ಸಾಮಾನ್ಯಕ್ಕಿಂತ ಮೂರು ಡಿಗ್ರಿ ಕಡಿಮೆ ಇರುತ್ತದೆ ಎಂದು ಅವರು ಹೇಳಿದರು.
ಹಾಲಿ ಇರುವ ಪೊಲೀಸ್ ವಸತಿ ಗೃಹಗಳು ಹಾಳಾಗಿದ್ದು, ಅವುಗಳ ದುರಸ್ತಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಂಪ್ಯೂಟರೀಕರಣ: ಅಗ್ನಿಶಾಮಕ ಇಲಾಖೆಯನ್ನು ಕಂಪ್ಯೂಟರೀಕರಣಗೊಳಿಸಲಾಗುತ್ತಿದ್ದು, ಇದರಿಂದಾಗಿ ಕಟ್ಟಡಗಳಿಗೆ ತ್ವರಿತವಾಗಿ ನೀರಾಕ್ಷೇಪಣಾ ಪತ್ರಗಳನ್ನು ನೀಡಲು ಸಾಧ್ಯವಾಗಲಿದೆ. ಈ ಸಂಬಂಧ ಕಿಯೊನಿಕ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಸುಲಭವಾಗಿ ಸೇವೆಗಳು ಲಭ್ಯವಾಗಲಿವೆ ಎಂದು ಅವರು ಹೇಳಿದರು.

ಶಿಸ್ತುಕ್ರಮ: ಅಶಿಸ್ತು, ಕರ್ತವ್ಯ ಪಾಲನೆಯಲ್ಲಿ ವಿಫಲರಾಗಿರುವ ನಾಲ್ಕು ಜನ ಡಿಪೊ ವ್ಯವಸ್ಥಾಪಕರ ವಿರುದ್ಧ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಕ್ರಮ ಕೈಗೊಳ್ಳಲಿದ್ದಾರೆ. ಬಸ್‌ಗಳ ನಿರ್ವಹಣೆ ಮತ್ತು ದುರಸ್ತಿಗೆ ಒತ್ತು ನೀಡಲಾಗಿದ್ದು, ಮೂರು ವರ್ಷಗಳಲ್ಲಿ 25 ಸಾವಿರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಸಾರಿಗೆ ಸಚಿವರೂ ಆದ ಅಶೋಕ ತಿಳಿಸಿದರು.

ಕೇಂದ್ರವೇ ಬಗೆಹರಿಸಬೇಕು: ಲಾರಿಗಳ ಮುಷ್ಕರದಿಂದ ಇಂಧನ ಸಾಗಾಣಿಕೆಗೆ ಆಗಿರುವ ತೊಂದರೆಯನ್ನು ಕೇಂದ್ರ ಸರ್ಕಾರವೇ ನಿವಾರಿಸಬೇಕು. ಈ ವಿಷಯ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಲಾರಿ ಮಾಲೀಕರೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸಬೇಕಾದ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT