ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಲ್ಲಿ ಜಿಲ್ಲೆಗೆ ಆದ್ಯತೆ: ಆಗ್ರಹ

Last Updated 19 ಜನವರಿ 2011, 20:25 IST
ಅಕ್ಷರ ಗಾತ್ರ

ಕೋಲಾರ: ಶಾಶ್ವತ ಕುಡಿಯುವ ನೀರು ಯೋಜನೆ, ನೀರಾವರಿ ಯೋಜನೆ, ಕಡ್ಡಾಯ ಹನಿ ನೀರಾವರಿ ಅಳವಡಿಕೆಗೆ ರೈತರಿಗೆ ಶೇ.100ರಷ್ಟು ರಿಯಾಯಿತಿ, ಮಾವು ಮತ್ತು ಟೊಮೊಟೊ ಸಂಸ್ಕರಣಾ ಘಟಕಗಳ ಸ್ಥಾಪನೆ, ಅಂತರಗಂಗೆ ವಿಶ್ವ ವಿದ್ಯಾಲಯ, ರೇಷ್ಮೆ ವಿಶ್ವ ವಿದ್ಯಾಲಯ ಸೇರಿದಂತೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಗೆ ಪ್ರಮುಖ ಆದ್ಯತೆ ಸಿಗಬೇಕು ಎಂದು ಜಿಲ್ಲೆಯ ಎಲ್ಲ ಜನ ಪ್ರತಿನಿಧಿಗಳು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಬುಧವಾರ ನಡೆದ ಜಿಲ್ಲೆಯ ಜನ ಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಒಗ್ಗಟ್ಟಿನ ದನಿ ಕೇಳಿಬಂತು.

ಕುಡಿಯುವ ನೀರಿನ ಹಾಹಾಕಾರಕ್ಕೆ ಸೂಕ್ತ ಪರಿಹಾರ ಸಿಗಬೇಕು. ಪ್ರಗತಿಯಲ್ಲಿರುವ ಯರಗೋಳು ಯೋಜನೆಗೆ ಅಡತಡೆ ಇರುವ ಅರಣ್ಯ ಪ್ರದೇಶ ವಶಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಮುಖಂಡರು ಆಗ್ರಹಿಸಿದರು.

ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಮಾತನಾಡಿ, ಯರಗೋಳು ಯೋಜನೆಗೆ ಸಂಬಂಧಿಸಿದ ಗೊಂದಲ ನಿವಾರಣೆಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ವಾರಾಂತ್ಯದಲ್ಲಿ ಫಲಶೃತಿ ಸಿಗಲಿದೆ. ಯಾವುದೇ ಕಾರಣಕ್ಕೂ ಯೋಜನೆ ವಿಳಂಬ ಮಾಡುವುದಿಲ್ಲ ಎಂದರು.  

ಜಿಲ್ಲೆಯಲ್ಲಿ ಹನಿ ನೀರಾವರಿ ಪದ್ಧತಿಯನ್ನು ಕಡ್ಡಾಯವಾಗಿ ಅಳವಡಿಸಲು ರೈತರಿಗೆ ಶೇ. 100ರ ಸಬ್ಸಿಡಿ ಅಗತ್ಯ. ಮಾವು ಸಂಸ್ಕರಣ ಘಟಕ ಹಾಗೂ ಟೊಮೆಟೊ ಸಂಸ್ಕರಣ ಘಟಕ ಸ್ಥಾಪನೆ ಬಗ್ಗೆ ಬಹು ದಿನಗಳ ಬೇಡಿಕೆ ಇದೆ. ಈ ಸಂಬಂಧ ಹಿಂದೆ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ್ದರು. ಈ ವಿಷಯ ಈಗಿನ ಬಜೆಟ್‌ನಲ್ಲಿ ವ್ಯಕ್ತವಾಗಬೇಕು ಎಂದು ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಸಲಹೆ ನೀಡಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಮಾದರಿಯಲ್ಲಿ ಮಾವು ಬೆಳೆಗಾರರ ಸಹಕಾರ ಸಂಘ ರಚಿಸುವ ಮೂಲಕ ಸಂಸ್ಕರಣ ಘಟಕ ಸ್ಥಾಪಿಸಲು ಅವಕಾಶವಿದೆ ಎಂಬ ಅವರ ಸಲಹೆಯನ್ನು ಶಾಸಕ ವೈ. ಎ. ನಾರಾಯಣಸ್ವಾಮಿ ಬೆಂಬಲಿಸಿದರು. 

ಕೋಲಾರಮ್ಮ ಕೆರೆ ಜಿಲ್ಲೆಯಲ್ಲಿ ದೊಡ್ಡಕೆರೆ. ಅಲ್ಲಿ ನಡೆದಿರುವ ಒತ್ತುವರಿ ಕೂಡಲೇ ತೆರವಾಗಬೇಕು ಜಿಲ್ಲೆಯಲ್ಲಿ ಕುಡಿಯುವ ನೀರಿನ ತಾತ್ಕಾಲಿಕ ಸಮಸ್ಯೆ ಬಗೆಹರಿಸಲು ಹಾಗೂ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಕೊರೆದಿರುವ ಬಾಕಿ ಬಾಬ್ತುಗಳನ್ನು ಗುತ್ತಿಗೆದಾರರಿಗೆ ತಕ್ಷಣವೆ ಬಿಡುಗಡೆಗೊಳಿಸಬೇಕು. ತಕ್ಷಣ 10 ಕೋಟಿ ರೂ. ವಿಶೇಷ ಅನುದಾನ ಒದಗಿಸಬೇಕು ಎಂದು ಶಾಸಕ ವರ್ತೂರು ಪ್ರಕಾಶ್ ಹೇಳಿದರು. 

ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜಿಸುವ ಹಿನ್ನೆಲೆಯಲ್ಲಿ ಕೋಲಾರಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಅಂತರಗಂಗೆ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು. ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗೆ ಅನುಕೂಲವಾಗುವಂತೆ ರೇಷ್ಮೆ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ಒಲವು ತೋರಬೇಕು ಎಂದು ಶಾಸಕ ವಿ. ಆರ್. ಸುದರ್ಶನ್ ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀನಿವಾಸಾಚಾರಿ, ಶಾಸಕರಾದ ಅಮರೇಶ್, ಡಿ.ಎಸ್. ವೀರಯ್ಯ, ಎಸ್.ಆರ್. ಲೀಲಾ, ಉಗ್ರಾಣ ನಿಗಮದ ಅಧ್ಯಕ್ಷ  ಅಧ್ಯಕ್ಷ ಎಂ. ನಾರಾಯಣಸ್ವಾಮಿ,  ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷ ವೆಂಕಟಮುನಿಯಪ್ಪ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯದರ್ಶಿ ಎನ್.ಶಾಂತಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಸಭೆಯಲ್ಲಿದ್ದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT