ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಲ್ಲಿ ಸುಧಾರಣಾ ಕ್ರಮ

Last Updated 16 ಫೆಬ್ರುವರಿ 2011, 17:05 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಹಾರ ವಸ್ತುಗಳ ಭಾರಿ ಬೆಲೆ ಏರಿಕೆ ಮತ್ತು ನಿಧಾನಗತಿಯ ಸುಧಾರಣಾ ಕ್ರಮಗಳಿಂದಾಗಿ ವಿರೋಧಿಗಳಿಂದ ತೀವ್ರ ಟೀಕೆಗೆ ಒಳಗಾಗಿರುವ ಪ್ರಧಾನಿ ಮನಮೋಹನ್ ಸಿಂಗ್, ‘ಯುಪಿಎ ತನ್ನ ಆರ್ಥಿಕ ಕಾರ್ಯಕ್ರಮಗಳನ್ನು ಕೈಬಿಟ್ಟಿಲ್ಲ ಮತ್ತು ಮುಂಬರುವ ಬಜೆಟ್‌ನಲ್ಲಿ ಸ್ಪಷ್ಟ ಕ್ರಮಗಳನ್ನು ಕೈಗೊಳ್ಳಲಿದೆ’ ಎಂದು ಭರವಸೆ ನೀಡಿದ್ದಾರೆ.

ಜನವರಿಯಲ್ಲಿ ಶೇ 8.23ರಷ್ಟಿದ್ದ ಹಣದುಬ್ಬರ ಪ್ರಮಾಣವನ್ನು ಮಾರ್ಚ್ ಅಂತ್ಯದ ವೇಳೆಗೆ ಶೇ 7ರೊಳಗೆ ತರುವ ವಿಶ್ವಾಸ ವ್ಯಕ್ತಪಡಿಸಿದ ಅವರು, ‘ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 8.5ರಷ್ಟಿರುವ ಬೆಲೆ ಏರಿಕೆ ಪ್ರಮಾಣವನ್ನು ಅಭಿವೃದ್ಧಿಗೆ ಹಾನಿಯಾಗದಂತೆ ನಿಯಂತ್ರಣ ಮಾಡಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ನಡೆಸಿದೆ’ ಎಂದೂ ತಿಳಿಸಿದರು.

‘ಕಚ್ಚಾ ತೈಲ ಮತ್ತು ಆಹಾರ ವಸ್ತುಗಳ ಬೆಲೆ ಏರಿಕೆಗೆ ಜಾಗತಿಕ ಅಂಶಗಳು ಪ್ರಮುಖ ಕಾರಣವಾಗಿದ್ದು ಇವುಗಳ ನಿಯಂತ್ರಣ ಕೇವಲ ಸರ್ಕಾರದ ಕೈಯಲ್ಲಿಲ್ಲ’ ಎಂದ ಅವರು, ‘ಎನ್‌ಆರ್‌ಇಜಿಎ ತರಹದ ಕಾರ್ಯಕ್ರಮಗಳ ಮೂಲಕ ಬಡವರನ್ನು ವಿಂಗಡಿಸಲು ಮತ್ತು ಸರ್ಕಾರಿ ಪಡಿತರ ಅಂಗಡಿಗಳಲ್ಲಿ ಬೆಲೆ ನಿಯಂತ್ರಣದೊಂದಿಗೆ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡುವ ಪ್ರಯತ್ನಗಳು ಸಾಗಿವೆ’ ಎಂದು ಹೇಳಿದರು.

‘ನಾವು ಕೇವಲ ಹಣದುಬ್ಬರವನ್ನು ನಿಯಂತ್ರಿಸಲು ಹೋದರೆ, ಅದು ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ದೇಶ ಮತ್ತು ಅಭಿವೃದ್ಧಿಗೆ ಯಾವುದೇ ತೊಂದರೆ ಆಗದಂತೆ ಹಣದುಬ್ಬರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ’ ಎಂದರು.

ಆರ್ಥಿಕ ಸುಧಾರಣೆಯನ್ನು ಕೈಬಿಟ್ಟಿರುವುದಾಗಿ ಕೇಳಿ ಬರುತ್ತಿರುವ ಟೀಕೆಗಳನ್ನು ತಳ್ಳಿಹಾಕಿದ ಅವರು, ‘ಸರಕು ಮತ್ತು ಸೇವಾ ತೆರಿಗೆ ಮೇಲೆ ಕ್ರಾಂತಿಕಾರಕ ಬದಲಾವಣೆ ತರಲು ವಿರೋಧ ಪಕ್ಷಗಳು ಸಹಕರಿಸುತ್ತಿಲ್ಲ’ ಎಂದು ದೂರಿದರು. ‘ಮುಖ್ಯವಾಗಿ ಪ್ರತಿಪಕ್ಷ ಬಿಜೆಪಿ ದ್ವೇಷದ ಮನೋಭಾವ ತೋರುತ್ತಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT