ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಕಲಾವಿದರ ನೆರವಿಗೆ ಹೊಸ ಯೋಜನೆ

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕಲಾವಿದರಿಗೆ ಆರೋಗ್ಯ ಸಮಸ್ಯೆ ಬಾಧಿಸಿದಾಗ ಚಿಕಿತ್ಸೆ ಪಡೆಯಲು, ಔಷಧಿ ಪಡೆಯಲು ದುಡ್ಡಿರುವುದಿಲ್ಲ. ಅಂಥ ಕಲಾವಿದರನ್ನು ಗುರುತಿಸಿ ಅವರ ಚಿಕಿತ್ಸೆಗೆ ನೆರವಾಗಲು ಸರ್ಕಾರ ಯೋಜನೆ ಹಾಕಿಕೊಳ್ಳಲಿದೆ. ಈ ಕುರಿತಂತೆ ಮುಖ್ಯಮಂತ್ರಿ ಸದಾನಂದಗೌಡ ಅವರೊಂದಿಗೆ ಚರ್ಚೆ ನಡೆಸಲಿದ್ದೇನೆ~ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಎಂ.ಕಾರಜೋಳ ತಿಳಿಸಿದರು.

ಕರ್ನಾಟಕ ನಾಟಕ ಅಕಾಡೆಮಿಯ ಸುವರ್ಣ ಮಹೋತ್ಸವದ ಅಂಗವಾಗಿ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ, ಅಕಾಡೆಮಿ ಹೊರತಂದ ನಾಲ್ಕು ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
`ಈಗಾಗಲೇ ಕಲಾವಿದರಿಗೆ ನೀಡಲಾಗುತ್ತಿದ್ದ ಮಾಸಾಶನ ಪ್ರಮಾಣವನ್ನು 500 ರೂಪಾಯಿಯಿಂದ 1 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಆದರೂ ಹಲವಾರು ಕಲಾವಿದರಿಗೆ ಎರಡು ಹೊತ್ತಿನ ಊಟಕ್ಕೂ ಗತಿಯಿಲ್ಲ.

ವೃದ್ಧಾಪ್ಯದಿಂದಾಗಿ ಹಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಅವರ ನೆರವಿಗೆ ಧಾವಿಸಲು ಸರ್ಕಾರ ಸಿದ್ಧವಿದೆ~ ಎಂದರು. ನಾಟಕ ಅಕಾಡೆಮಿಯು ಹಮ್ಮಿಕೊಂಡ ಹಲವು ಚಟುವಟಿಕೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, `ರಂಗಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಅಕಾಡೆಮಿ ತನ್ನನ್ನು ತೊಡಗಿಸಿಕೊಂಡಿದೆ. ಅಕಾಡೆಮಿಯ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ವಾರ್ಷಿಕ ಅನುದಾನವನ್ನು ರೂ 40 ಲಕ್ಷಕ್ಕೆ ಏರಿಸಿದೆ~ ಎಂದರು.
 
 ಮಕ್ಕಳ ಸಾಹಿತಿ ಡಾ.ಗಜಾನನ ಶರ್ಮ ಮಾತನಾಡಿ, `ಒಟ್ಟು ಮಕ್ಕಳ ಸಂಖ್ಯೆಗೆ ಹೋಲಿಸಿದರೆ ಅವರಿಗೆ ಸಂಬಂಧಿಸಿದ ಸಾಹಿತ್ಯ, ನಾಟಕಗಳು ಬಂದದ್ದು ಕಡಿಮೆಯಾಗಿವೆ~ ಎಂದು ವಿಷಾದಿಸಿದರು.ಕಾರ್ಯಕ್ರಮದಲ್ಲಿ ಮುದೇನೂರು ಸಂಗಣ್ಣ, ಮಕ್ಕಳ ರಂಗಭೂಮಿ, ಬೆಳಗಾವಿ ಜಿಲ್ಲಾ ರಂಗ ಮಾಹಿತಿ ಮತ್ತು ಇಂಗ್ಲಿಷ್ ಕೃತಿ The Dramatic History of the World ಎಂಬ ಕೃತಿಗಳನ್ನು ಸಚಿವರು ಬಿಡುಗಡೆ ಮಾಡಿದರು.
 
ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ರಾಜಾರಾಂ, ರಿಜಿಸ್ಟ್ರಾರ್ ಟಿ.ಜಿ.ನರಸಿಂಹಮೂರ್ತಿ, ವಕೀಲ ಕೊಲಾಚಲಂ ಸುಧಾಕರ್ ಸೇರಿದಂತೆ ಅಣೆಕರು ಉಪಸ್ಥಿತರಿದ್ದರು.
 
 ನಂತರ ಖ್ಯಾತ ರಷ್ಯನ್ ನಾಟಕಕಾರ ಆ್ಯಂಟನ್ ಚೆಕಾವ್ ಅವರ ನಾಟಕ ಆಧಾರಿತ `ಪಂಥ~ ಏಕವ್ಯಕ್ತಿ ನಾಟಕವನ್ನು ನಗರದ ಕಲಾಮೈತ್ರಿ ಸಾಂಸ್ಕೃತಿಕ ವೇದಿಕೆಯ ಕಲಾವಿದ ಚೆಸ್ವಾ ಅಭಿನಯಿಸಿದರು.

`ಅಕ್ಟೋಬರ್‌ನಲ್ಲಿ ಉದ್ಘಾಟನೆ~

ಕಳೆದ ಐದು ವರ್ಷಗಳಿಂದ ನಗರದ ಮಲ್ಲತ್ತಹಳ್ಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ `ಸುವರ್ಣ ಸಾಂಸ್ಕೃತಿಕ ಸಮುಚ್ಚಯ~ವನ್ನು ಅಕ್ಟೋಬರ್ ತಿಂಗಳಲ್ಲಿ ಉದ್ಘಾಟಿಸಲಾಗುವುದು ಎಂದು ಸಚಿವ ಗೋವಿಂದ ಎಂ.ಕಾರಜೋಳ ತಿಳಿಸಿದರು.                

 ನಾಟಕ ಅಕಾಡೆಮಿಯ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಸಮುಚ್ಚಯ ನಿರ್ಮಾಣ ಅಂತಿಮ ಹಂತದಲ್ಲಿದ್ದು, ಕೆಲ ಸಣ್ಣ-ಪುಟ್ಟ ಕೆಲಸಗಳಷ್ಟೇ ಬಾಕಿ ಉಳಿದಿದೆ. ಇಲಾಖೆಯಿಂದ ಎಲ್ಲ ಹಣವನ್ನೂ ಬಿಡುಗಡೆ ಮಾಡಲಾಗಿದೆ. ಒಂದು ವೇಳೆ ಬಾಕಿ ಉಳಿದಿದ್ದರೂ ಪ್ರಗತಿ ಪರಿಶೀಲನೆ ಮಾಡಿ ಶೀಘ್ರವೇ ಹಣ ಬಿಡುಗಡೆ ಮಾಡಗುವುದು~ ಎಂದರು.                                                     

2006ರಿಂದ ಈ ಕಾಮಗಾರಿ ನಡೆಯುತ್ತಿದ್ದರೂ ಇನ್ನೂ ಪೂರ್ಣವಾಗದ ಬಗ್ಗೆ    `ಪ್ರಜಾವಾಣಿ~ಯು ಇತ್ತೀಚೆಗೆ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಆ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದ ಇಲಾಖೆಯ ಆಯುಕ್ತ ಮನು ಬಳಿಗಾರ್ ಅವರು, `ಸಮುಚ್ಛಯ ಸೆಪ್ಟೆಂಬರ್‌ನಲ್ಲಿ ಉದ್ಘಾಟನೆಯಾಗಲಿದೆ~ ಎಂದು ಹೇಳಿದ್ದರು. ಈ ಬಗ್ಗೆ ಸಚಿವರ ಗಮನ ಸೆಳೆದಾಗ, `ಈ ತಿಂಗಳು ಉದ್ಘಾಟನೆ ಆಗುವುದು ಅನುಮಾನ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT