ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಬಾಲೆಗೆ ಚರ್ಮವ್ಯಾಧಿ: ಅತಂತ್ರವಾದ ಬದುಕು

Last Updated 17 ಫೆಬ್ರುವರಿ 2011, 8:50 IST
ಅಕ್ಷರ ಗಾತ್ರ

ಬಂಗಾರಪೇಟೆ: ಚರ್ಮವ್ಯಾಧಿಯಿಂದ ಬಳಲುತ್ತಿರುವ ಅಸಹಾಯಕ ಬಡ ಬಾಲಕಿಯೊಬ್ಬಳು ಚಿಕಿತ್ಸೆಗೆ ಹಣವಿಲ್ಲದೇ ನರಳುತ್ತಿರುವ ಕರುಣಾಜನಕ ಪ್ರಕರಣ ಇಲ್ಲಿದೆ.ಮಗಳನ್ನು ಆಸ್ಪತ್ರೆಗೆ ಸೇರಿಸಿದ ಅವಳ ತಾಯಿ ವೈದ್ಯಕೀಯ ಚಿಕಿತ್ಸೆ ಭರಿಸಲು ಹಣಕ್ಕಾಗಿ ಕೂಲಿ ಕೆಲಸ ಮಾಡಬೇಕಿದೆ. ಸಂಜೆವರೆಗೂ ಕೂಲಿ ಮಾಡಿ, ಬರುವ ಹಣದಲ್ಲಿ ಊಟ, ಔಷಧಿ ಖರೀದಿ ಮಾಡಬೇಕಾದ ದುರ್ಗತಿ ಎದುರಾಗಿದೆ. ಬಾಲಕಿಯನ್ನು ನೋಡಿಕೊಳ್ಳಲು ಇರುವ ಆಕೆಯ ತಮ್ಮನಿಗೆ ಇನ್ನೂ 3 ವರ್ಷ ವಯಸ್ಸು. ಅವನಿಗೆ ಚಳಿ ಜ್ವರ ಬಾಧಿಸುತ್ತಿದೆ. ಈ ಮಕ್ಕಳನ್ನು ತಂದೆ ತೊರೆದು ಹೋಗಿ ವರ್ಷ ಕಳೆದಿದೆ. ಇಡೀ ಕುಟುಂಬವೇ ಅಸಹಾಯಕರಾಗಿ ದಾನಿಗಳ ಹಾದಿ ನೋಡುತ್ತಿದ್ದಾರೆ.

ಪಟ್ಟಣದ ಸಿರಹೀಮ್ ಕಾಂಪೌಂಡ್ ನಿವಾಸಿ ರತ್ನಮ್ಮನವರ ಮಗಳು ಪ್ರಿಯಾಂಕಗೆ (8) ಹುಟ್ಟಿದಾಗಿನಿಂದಲೂ ಚರ್ಮವ್ಯಾಧಿ ಇದೆ. ಕೂಲಿ ಮಾಡಿ ಅಂದಿನ ದಿನ ತಳ್ಳುವ ಕುಟುಂಬಕ್ಕೆ ಚಿಕಿತ್ಸೆ ಕೊಡಿಸುವಷ್ಟು ಆರ್ಥಿಕ ಚೈತನ್ಯವಿಲ್ಲ. ಆಸ್ಪತ್ರೆಗೆ ಹೋಗಿ ವೈದ್ಯರು ಹೇಳುವ ಚಿಕಿತ್ಸೆ ಕೊಡಿಸುವಷ್ಟು ತಿಳುವಳಿಕೆಯೂ ಇಲ್ಲ. ಆಸ್ಪತ್ರೆಯ ಹೊರರೋಗಿಗಳ ಚೀಟಿ ಮಾಡಿಸುವಷ್ಟೂ ವ್ಯವಹಾರ ಜ್ಞಾನವಿಲ್ಲದ ಅವರು ಹರಕೆಗೆ ಮೊರೆ ಹೋಗಿದ್ದರು. ಪರಿಣಾಮವಾಗಿ ಬಾಲಕಿಗೆ ಚರ್ಮವ್ಯಾಧಿ ಶರೀರ ಪೂರಾ ವ್ಯಾಪಿಸಿ, ಕೀವಿನ ನಡುವೆ ಬದುಕುವ ದುಃಸ್ಥಿತಿಗೆ ತಲುಪಿದ್ದಳು.

ವಿಷಯ ತಿಳಿದ ಬಂಗಾರಪೇಟೆ ತಾಲ್ಲೂಕು ಅಭಿವೃದ್ಧಿ ಸಮಿತಿಯ ಸಂಚಾಲಕ ಆಜಂ ಷರೀಫ್ ಬಾಲಕಿಯ ಮನೆಗೆ ಹೋಗಿ ಪ್ರಿಯಾಂಕಳನ್ನು ನಗರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಸೇರಿಸಿದರು. ಕೀವು ತುಂಬಿದ ವ್ರಣಗಳೇ ಮೈಯೆಲ್ಲಾ ಹಬ್ಬಿರುವ ಪ್ರಿಯಾಂಕ ಸದ್ಯ ತಾಯಿಯ ಹಾದಿ ಕಾಯುತ್ತಾ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದಾಳೆ. ಅವಳಿಗೆ ಆಸರೆಯಾಗಿ ಪುಟ್ಟ ತಮ್ಮ ಜೊತೆಗಿದ್ದಾನೆ. ಒಂದೂವರೆ ವರ್ಷದ ಇನ್ನೊಬ್ಬ ತಮ್ಮ, ಹಸುಕಂದ ತಾಯಿಯ ಬಳಿ ಇರುತ್ತಾನೆ. ಆಸ್ಪತ್ರೆಯಲ್ಲಿರುವ ಅಕ್ಕಪಕ್ಕದ ರೋಗಿಗಳು, ಅವರ ಸಂಬಂಧಿಕರೇ ಮಕ್ಕಳ ಊಟ, ತಿಂಡಿ ವ್ಯವಸ್ಥೆ ಮಾಡುತ್ತಿದ್ದಾರೆ. ಮರುಗಿದವರು ನೀಡುವ ಪುಡಿಗಾಸು ಕಾಪಾಡುತ್ತಿದೆ.

ಬಂಗಾರಪೇಟೆ ತಾಲ್ಲೂಕು ಅಭಿವೃದ್ಧಿ ಸಮಿತಿಯ ಕಾರ್ಯಕರ್ತರ ಮನವಿ ಮೇರೆಗೆ, ಬಾಲಕಿಯ ಪೂರ್ಣ ಚಿಕಿತ್ಸೆ ಖರ್ಚನ್ನು ಭರಿಸಿ ಊಟದ ವ್ಯವಸ್ಥೆಯನ್ನು ಉಚಿತವಾಗಿ ನೀಡುವುದಾಗಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಲಕ್ಷ್ಮಯ್ಯ ಭರವಸೆ ನೀಡಿದ್ದಾರೆ.

ಬಾಲಕಿಗೆ ನೆರವು: ಚರ್ಮವ್ಯಾಧಿಯಿಂದ ಬಳಲುತ್ತಿದ್ದು ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಪ್ರಿಯಾಂಕಳನ್ನು ಆಸ್ಪತ್ರೆಗೆ ಸೇರಿಸಿದ ನಂತರ ಬಂಗಾರಪೇಟೆ ತಾಲ್ಲೂಕು ಅಭಿವೃದ್ಧಿಸಮಿತಿ ಸದಸ್ಯರು ಪಟ್ಟಣದ, ನಗರದ ಬಹಳಷ್ಟು ಗಣ್ಯರನ್ನು ಸಂಪರ್ಕಿಸಿ ಬಡರೋಗಿಯ ಚಿಕಿತ್ಸೆಗೆ ನೆರವು ನೀಡಲು ಕೋರಿದ್ದರು. ಅವರ ಮನವಿಗೆ ಪ್ರಥಮವಾಗಿ ಸ್ಪಂದಿಸಿದ ಟಿಪ್ಪು ಸೆಕ್ಯೂಲಾರ್ ಸೇನೆಯ ಏಜಾಜ್‌ಖಾನ್ ಆಸ್ಪತ್ರೆಗೆ ಇತ್ತೀಚೆಗೆ ಬಂದು ನೆರವು ನೀಡಿದರು.

ಸಮಿತಿ ಹಾಗೂ ಟಿ.ಎಸ್.ಎಸ್. ಕಾರ್ಯಕರ್ತರಾದ ಆಜಂ ಷರೀಫ್, ಮಹಮದ್ ತಾಹೇರ್, ಎಂ.ಎನ್.ಭಾರದ್ವಾಜ್, ನಾಗರತ್ನ, ಭಾರತಿ, ಆನಂದ್, ನಾಗರಾಜ್, ರಮೇಶ್, ಶ್ರೀನಿವಾಸ್, ವೆಂಕಟೇಶ್, ಲಯನ್ ಆದಿಲ್ ಪಾಷ, ಕೇಂದ್ರ ರೈಲ್ವೇ ಸಲಹಾ ಸಮಿತಿ ಸದಸ್ಯ ಡಿ.ಕಿಶೋರ್‌ಕುಮಾರ್, ಅಪ್ಸರ್, ಅಜ್ಮತ್, ರಾಜನ್, ಸ್ಟ್ಯಾನ್ಲಿ, ಮಾಣಿಕ್ಯಂ, ಚಾಂದ್, ಶಾಂತಿನಗರ ಕಿಟ್ಟಣ್ಣ, ಮೌಲಾನ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT