ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಮಕ್ಕಳ ಆಶಾಕಿರಣ ‘ಸರ್ವೋದಯ’

Last Updated 4 ಡಿಸೆಂಬರ್ 2013, 8:54 IST
ಅಕ್ಷರ ಗಾತ್ರ

ಯರಗೋಳ (ಯಾದಗಿರಿ ತಾಲ್ಲೂಕು): ಪದವಿ ಪಡೆದು ಸರ್ಕಾರಿ ಕೆಲಸದ ಕನಸು ಕಾಣುತ್ತಾ ನಿರುದ್ಯೋಗಿಗಳಾಗಿ ಮನೆಯಲ್ಲಿ ಕೂರುವು­ದಕ್ಕಿಂತಲೂ ತಾವೇ ಏನಾದರೂ ಮಾಡಬೇಕು ಎಂದು ಯೋಚಿಸಿತು 15 ಜನ ವಿದ್ಯಾವಂತ ಯುವಕರ ಬಳಗ. ಆಗ ಅವರ ಮನಸ್ಸಿಗೆ ಥಟ್ಟನೆ ಹೊಳೆದದ್ದು ಶಾಲೆ ತೆರೆಯುವುದು.

ಈ ಯುವಕರ ತಂಡ 2003–04ನೇ ಸಾಲಿನಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿತು. ಆ ಸಂಸ್ಥೆಯೇ ಯಾದಗಿರಿ ಜಿಲ್ಲೆಯ ಯರಗೋಳ ಗ್ರಾಮದ ‘ಸರ್ವೋದಯ ಶಿಕ್ಷಣ ಸಂಸ್ಥೆ’. 2004–05ನೇ ಶೈಕ್ಷಣಿಕ ವರ್ಷದಲ್ಲಿ ಎಲ್‌ಕೆಜಿ, ಯುಕೆಜಿ ಮತ್ತು ಒಂದನೇ ತರಗತಿ ಆರಂಭ­ವಾಯಿತು.

ಹೆಚ್ಚಿನ ಹಣ ಖರ್ಚು ಮಾಡಿ ನಗರಗಳಲ್ಲಿ ಓದಿಸುವಂಥಹ ಶಕ್ತಿ ಗ್ರಾಮೀಣ ಬಡ ಜನರಿಗೆ ಇರುವುದಿಲ್ಲ. ಆದರೆ, ಪಟ್ಟಣದಲ್ಲಿ ಸಿಗುವಂಥಹ ಶಿಕ್ಷಣವನ್ನು ಸರ್ವೋದಯ ಶಾಲೆಯಲ್ಲಿ ಕೊಡ­ಲಾಗುತ್ತದೆ. ನಗರದಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳೊಂದಿಗೆ ಇಲ್ಲಿನ ವಿದ್ಯಾರ್ಥಿಗಳು ಸ್ಪರ್ಧೆ ಮಾಡುತ್ತಾರೆ. ಶಾಲೆಯ ಮಕ್ಕಳು ನವೋದಯ ಶಾಲೆಗೆ ಆಯ್ಕೆಯಾಗಿರುವುದೇ ಇದಕ್ಕೆ ನಿದರ್ಶನ.

ಶುಲ್ಕವು ಕೂಡ ಕಡಿಮೆ­ಯಾಗಿರುವುದರಿಂದ ಇದು ಬಡ ಮಕ್ಕಳ ಆಶಾಕಿರಣ ಎಂದು ಪೋಷಕರ ಹೇಳುತ್ತಾರೆ.

ಅನಾಥ ಮಕ್ಕಳಿಗೆ ಉಚಿತ
ತಂದೆ–ತಾಯಿ ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಸಮವಸ್ತ್ರ ನೀಡಲಾ­ಗುತ್ತಿದೆ. ಗ್ರಾಮದ ಸುತ್ತಲಿನ ಯಾಗಾಪುರ, ಯಾಗಾಪುರ ತಾಂಡಾ, ಅಲ್ಲಿಪುರ ತಾಂಡಾ, ತಾನುನಾಯಕ ತಾಂಡಾ, ತವರು ನಾಯಕ ತಾಂಡಾ, ಖೇಮುನಾಯಕ ತಾಂಡಾ, ಬೆಳಗೇರಿ ಗ್ರಾಮದ ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡಲು ಬರುತ್ತಾರೆ. ಇವುಗಳಲ್ಲಿ ಯಾದಗಿರಿಯಿಂದ ವಿದ್ಯಾರ್ಥಿಗಳು ಇಲ್ಲಿ ಕಲಿಯಲು ಬರುತ್ತಿರು­ವುದು ವಿಶೇಷ.

ಶಾಲೆಯಲ್ಲಿ ಮಕ್ಕಳು ಪಾಠದ ಜೊತೆಗೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿ­ಸುತ್ತಾರೆ. ಉತ್ತಮ ಪರಿಸರ ಮತ್ತು ಆಟದ ಮೈದಾನ ಇರುವುದರಿಂದ ಆಸಕ್ತಿಯಿಂದ ಕಲಿಯು­ತ್ತಾರೆ. ಪ್ರತಿಭಾ ಕಾರಂಜಿ ಮತ್ತು ವಿವಿಧ ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸರ್ವೋದಯ ಶಿಕ್ಷಣ ಸಂಸ್ಥೆಯಡಿ ಪೂರ್ವ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆ ನಡೆಯುತ್ತಿದ್ದು, 20 ಜನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಸ್ಥೆಯಲ್ಲಿ 425 ಮಕ್ಕಳ ದಾಖಲಾತಿ ಇದ್ದು, ಅದರಲ್ಲಿ 416 ವಿದ್ಯಾರ್ಥಿಗಳು ಹಾಜರಾಗುತ್ತಾರೆ. ಒಂದು ದಿನ ವಿದ್ಯಾರ್ಥಿ ಶಾಲೆಗೆ ಹಾಜರಾಗದಿದ್ದರೂ ‘ನಿಮ್ಮ ಮಗ ಯಾಕೆ ಶಾಲೆಗೆ ಬಂದಿಲ್ಲ?’ ಎಂದು ಶಿಕ್ಷಕರು ಪಾಲಕರ ಮನೆಗೆ ತೆರಳಿ ವಿಚಾರಿಸುತ್ತಾರೆ!

‘ಗ್ರಾಮೀಣ ಭಾಗದಲ್ಲಿ ಇಂದಿಗೂ ಶಿಕ್ಷಣ ಮಟ್ಟ ಕಡಿಮೆ ಇದೆ. ನಾವು ಓದುವಾಗ ಪಟ್ಟ ಕಷ್ಟವನ್ನು ನಮ್ಮ ಮಕ್ಕಳು ಪಡಬಾರದು ಎಂದು 15 ಗೆಳೆಯರು ಸೇರಿ ಸರ್ವೋದಯ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದೇವೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಶಾಲೆಯ ಮುಖ್ಯಗುರು ಇಫ್ತೆಖಾರ್ ಅಲಿ ಜೆ.ಇನಾಂದಾರ.

‘ಬೇರೆ ಶಿಕ್ಷಣ ಸಂಸ್ಥೆಗಳಿಗಿಂತಲೂ ಇಲ್ಲಿ ನಾವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬಹುದು. ನಮ್ಮ ಊರಿನ ಮತ್ತು ಸುತ್ತ–ಮುತ್ತಲಿನ ಗ್ರಾಮದ ಮಕ್ಕಳೇ ಆಗಿದ್ದರಿಂದ ಹೆಚ್ಚಿನ ಕಾಳಜಿ ತೆಗೆದುಕೊಂಡು ಕೆಲಸ ಮಾಡಬಹುದು’ ಎನ್ನುತ್ತಾರೆ ಆಡಳಿತ ಮಂಡಳಿ ಸದಸ್ಯ ಮತ್ತು ಸಮಾಜ ವಿಜ್ಞಾನ ಶಿಕ್ಷಕರೂ ಆಗಿರುವ ಬಸಪ್ಪ ಎನ್‌. ಚಾಮನಾಳ.

‘ಸಂಸ್ಥೆಯಲ್ಲಿ ಶಿಕ್ಷಕರಿಗೆ ಹೆಚ್ಚಿನ ಗೌರವವಿದೆ. ಇಲ್ಲಿ ಕಾರ್ಯ ನಿರ್ವಹಿಸಲು ಹರ್ಷವೆನಿಸುತ್ತದೆ’ ಎನ್ನುತ್ತಾರೆ ಸಹಶಿಕ್ಷಕ ಸಣಮೀರ ಎಸ್. ಹಿರಿಬಾನರ.

‘ಸಮಾನ ಶಿಕ್ಷಣ’
‘ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯಂತೆ ನಮ್ಮ ಸಂಸ್ಥೆಯನ್ನು ಬೆಳೆಸುವ ಗುರಿಯಿದೆ. ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರವೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಾಗುವುದು. ಅಲ್ಲದೇ ಹೆಣ್ಣು ಮಕ್ಕಳಿಗೆ ವಿವಿಧ ತರಬೇತಿ ನೀಡಲಾಗುವುದು.
–ಸಾಯಬಣ್ಣ ಟಿ.ಬಸವಂತಪುರ, ಸಂಸ್ಥೆ ಅಧ್ಯಕ್ಷ

‘ಮೌಲ್ಯಾಧರಿತ ಶಿಕ್ಷಣದ ಗುರಿ’
‘ಗುಣಾತ್ಮಕ, ಮೌಲ್ಯಾಧರಿತ ಶಿಕ್ಷಣವನ್ನು ಮಕ್ಕಳಿಗೆ ನೀಡುವುದರ ಜೊತೆಗೆ ಮಾದರಿ ಶಾಲೆ ಮಾಡಬೇಕೆನ್ನುವ ಆಸೆ. ಪ್ರತಿ ಮಕ್ಕಳ ಮೇಲೆ ಗಮನಹರಿಸಿ, ಅವರ ಮನೋಭಾವನೆಯಂತೆ ಶಿಕ್ಷಣ ನೀಡಲಾಗುತ್ತಿದೆ’.
–ಇಫ್ತೆಖಾರ್ ಅಲಿ ಜೆ.ಇನಾಂದಾರ, ಮುಖ್ಯಗುರು

‘ಸರ್ಕಾರ ಅನುದಾನ ನೀಡಲಿ’

‘ಸರ್ವೋದಯ ಶಿಕ್ಷಣ ಸಂಸ್ಥೆಯಿಂದ ನನ್ನ ಮಗ ಕ್ವಿಜ್‌ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದ. ಈಗ ನವೋದಯ ಶಾಲೆಗೆ ಆಯ್ಕೆಯಾಗಿದ್ದಾನೆ. ಶಾಲೆಯಲ್ಲಿ ಮಕ್ಕಳು ಆಟ–ಪಾಠ ಎರಡು ಕಲಿಯುತ್ತವೆ. ಗ್ರಾಮೀಣ ಮಟ್ಟದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆಗೆ ಸರ್ಕಾರ ಅನುದಾನ ನೀಡಿ, ಪ್ರೋತ್ಸಾಹಿಸಬೇಕು’.
–ಸಾಬಣ್ಣ ಕೋಲ್ಕರ್‌, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT