ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಮಕ್ಕಳ ಓದಿಗೆ ಸೆಲೆಬ್ರಿಟಿ ರ್ಯಾಂಪ್

Last Updated 25 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನಟ ನಟಿಯರು ಎಲ್ಲೇ ಹೋದರೂ ಆಕರ್ಷಣೆಯ ಕೇಂದ್ರ ಬಿಂದುಗಳು. ಎಲ್ಲರ ಕಣ್ಣೂ ಅವರತ್ತಲೇ. ಹೀಗಾಗಿಯೇ ಅವರು ಸೆಲೆಬ್ರಿಟಿಗಳು.ಎಂತಹವರೂ ಥಟ್ಟಂತ ಗುರುತಿಸಬಲ್ಲ ಅವರ ವ್ಯಕ್ತಿತ್ವದ ಸೆಳೆತವನ್ನು ಸಮಾಜದ ಒಳಿತಿಗಾಗಿ ಬಳಸಿದರೆ? ಇಂತಹದೊಂದು ಉಪಾಯ ಹೊಳೆದದ್ದು ಫ್ಯಾಷನ್ ಗುರು ಪ್ರಸಾದ್ ಬಿಡ್ಡಪ್ಪ ಅವರಿಗೆ. ಅವರ ಪರಿಕಲ್ಪನೆ ಸಾಕಾರ ರೂಪವಾಗಿ ಈಗ ಇಂತಹ ಸೆಲೆಬ್ರಿಟಿಯೊಬ್ಬರು ನಡೆಯುವ ಸುಮಾರು 30 ಹೆಜ್ಜೆಯಿಂದ ಬಡ ಕುಟುಂಬಗಳ ನೂರು ಮಕ್ಕಳು ಇಡೀ ವರ್ಷ ಶಾಲೆಯ ವಿದ್ಯಾಭ್ಯಾಸ ಪೂರೈಸಲು ಸಾಧ್ಯವಾಗಲಿದೆ!
 
ಈ ಕಾರ್ಯದಲ್ಲಿ ಬಿಡ್ಡಪ್ಪ ಜತೆ ನಟಿ ರಾಗಿಣಿ ದ್ವಿವೇದಿ ಕೈ ಜೋಡಿಸಲಿದ್ದಾರೆ. ಇದನ್ನು ಪ್ರಕಟಿಸಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಬಣ್ಣದ ಹೂಗಳಿರುವ ಬಿಳಿ ಮಿನಿ ಧರಿಸಿ ನಡೆದು ಬರುತ್ತಿದ್ದರೆ ಎಲ್ಲರ ಕಣ್ಣೂ ಸಹಜವಾಗೇ ಅವರತ್ತ ತಿರುಗಿತ್ತು.  ಪುಟ್ಟ ಶಾಲೆಯಲ್ಲಿರಬೇಕಾದ ಮಕ್ಕಳು ಮನೆಗೆಲಸದಲ್ಲಿ, ಕೂಲಿ ಕೆಲಸದಲ್ಲಿ ನಿರತರಾಗಿರುತ್ತಾರೆ. ಮಗುವೊಂದು ಶಾಲೆಗೆ ಹೋದರೆ ಇಡೀ ಕುಟುಂಬವೇ ಮುಂದೆ ಬರುತ್ತದೆ. ಬಡತನ- ಸಿರಿತನದ ಅಂತರ ಅಳಿಸಲು ಶಿಕ್ಷಣ ಪ್ರಬಲ ಅಸ್ತ್ರ ಎಂದರು ಬಿಡ್ಡಪ್ಪ.

ಇದಕ್ಕೆ ದನಿಗೂಡಿಸಿದ ಪ್ರೆಸ್ಟೀಜ್ ಸಮೂಹದ ಕಾರ್ಪೊರೇಟ್ ಸಂವಹನದ ನಿರ್ದೇಶಕಿ ಉಜ್ಮಾ ಇರ್ಫಾನ್,  ಮಕ್ಕಳಲ್ಲಿ ಮೊಳೆತ ಮಹಾತ್ವಾಕಾಂಕ್ಷೆ, ಕನಸುಗಳನ್ನು ಚಿವುಟದೇ ನೀರೆರೆಯುವಂತಹ ಕೆಲಸ ಸರ್ಕಾರ, ಸಂಘ ಸಂಸ್ಥೆಗಳದು ಎಂದು ಸುಮ್ಮನಿರಬಾರದು. ಮನೆ ಮನೆಯಲ್ಲೂ, ವ್ಯಕ್ತಿ ಮಟ್ಟದಲ್ಲೂ ಇದು ಆರಂಭವಾಗಬೇಕು. ಸಮಾಜದಿಂದ ಪಡೆದ ತನ್ನ ಪಾಲಿನಲ್ಲಿ ಸ್ವಲ್ಪವನ್ನಾದರೂ ಸಮಾಜಕ್ಕೆ ಮರಳಿಸುವತ್ತ ಚಿಕ್ಕ ವಯಸ್ಸಿನಿಂದಲೇ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದರು. ದೇಣಿಗೆಗಳ ಮೂಲಕ 22 ರಾಜ್ಯಗಳಾದ್ಯಂತ ಒಟ್ಟಾರೆ 25 ಸಾವಿರ ಮಕ್ಕಳನ್ನು ಹೀಗೆ ಓದಿಸುವ ಯೋಜನೆ ಇದೆ ಎಂದವರು ಸ್ಮೈಲ್ ಫೌಂಡೇಷನ್‌ನ ಮ್ಯಾನೇಜರ್ ತುಹಿನಾ ನಾಯರ್.            

 ಹೆಜ್ಜೆ ಹಾಕಿದರೆ ಹಣ

ಪ್ರೆಸ್ಟೀಜ್ ಸಮೂಹ, ‘ಸ್ಮೈಲ್’ ಮತ್ತು ಪ್ರಸಾದ್ ಬಿಡ್ಡಪ್ಪ ಸಹಯೋಗದಲ್ಲಿ ಮಾರ್ಚ್ 4ರಂದು ರಾಯಲ್ ಗಾರ್ಡೇನಿಯದಲ್ಲಿ ‘ರ್ಯಾಂಪ್ ಫಾರ್ ಚಾಂಪ್ಸ್’ ಫ್ಯಾಷನ್ ಶೊ ಆಯೋಜಿಸಿವೆ. ಸೆಲೆಬ್ರಿಟಿಗಳು ರ್ಯಾಂಪ್ ಮೇಲೆ ಹಾಕುವ ಹೆಜ್ಜೆಗಳಿಗೆ ಕಾರ್ಪೊರೇಟ್ ಸಂಸ್ಥೆಗಳು ರೂ 2.75 ಲಕ್ಷ ನೀಡಲಿವೆ! ನೂರು ಮಕ್ಕಳು ವರ್ಷವಿಡೀ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಲು ಇಷ್ಟು ಹಣ ಬೇಕು ಎಂಬ ಲೆಕ್ಕಾಚಾರ ಇದಕ್ಕಾಗಿ ಶ್ರಮಿಸುತ್ತಿರುವ ‘ಸ್ಮೈಲ್’ ಸಂಸ್ಥೆಯದು.
 ರಾಬಿನ್ ಉತ್ತಪ್ಪ, ಪ್ರಿಯಾಂಕಾ ಉಪೇಂದ್ರ, ರಮೇಶ್ ಅರವಿಂದ್, ಗೀತಾಂಜಲಿ ಮತ್ತು ವಿಕ್ರಂ ಕಿರ್ಲೋಸ್ಕರ್, ಅರುಂಧತಿ ನಾಗ್,  ರ್ಯಾಂಪ್ ಮೇಲೆ ಸಾಗಲಿದ್ದಾರೆ ಅದೂ ‘ಸ್ಮೈಲ್’ ಓದಿಸುವ ಮಕ್ಕಳೊಂದಿಗೆ. ಇನ್ನೂ ಅನೇಕ ಸೆಲೆಬ್ರಿಟಿಗಳು ಕಾದು ನಿಂತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT