ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಮಕ್ಕಳ ದಾಸೋಹ

Last Updated 22 ಜುಲೈ 2013, 19:59 IST
ಅಕ್ಷರ ಗಾತ್ರ

ಯಾವುದೊಂದು ಸಂಸ್ಥೆ, ಅದರಲ್ಲೂ ಶೈಕ್ಷಣಿಕ ರಂಗದಲ್ಲಿಯ ದತ್ತಿ ಸಂಘಟನೆಯೊಂದು ಯಶಸ್ವಿ ನೂರು ವರ್ಷಗಳನ್ನು ಪೂರೈಸುವುದು ಹುಡುಗಾಟವಲ್ಲ. ಸರ್ಕಾರದ ನೆರವು ಅಪೇಕ್ಷಿಸದೇ ವಿವಾದವೂ ಇಲ್ಲದೇ ಶತಮಾನ ಪೂರೈಸಿದೆ ಬಿ.ಕೆ. ಮರಿಯಪ್ಪ ವಸತಿಗೃಹ.

ಇದರ ಪಯಣ ಆರಂಭವಾಗಿದ್ದು 1914ರಿಂದ. ವ್ಯಾಪಾರಿಯಾಗಿದ್ದ ಬಿ.ಕೆ. ಮರಿಯಪ್ಪನವರು ತಮ್ಮ 35ನೇ ವರ್ಷದಲ್ಲೇ ಇಂಥದ್ದೊಂದು ಉದಾರ ಕೆಲಸಕ್ಕೆ ಭಾರಿ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದು ಮುಂದೆ ನೂರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿಯಾಯಿತು. ಇದರ ನಿರ್ಮಾಣಕ್ಕೆ ಆ ಕಾಲದಲ್ಲಿ ಒಂದೂವರೆ ಲಕ್ಷ ರೂಪಾಯಿ ಬೆಲೆಬಾಳುವ ಜಾಗವನ್ನು ನೀಡಿದರು.

76 ಸಾವಿರ ರೂಪಾಯಿ ವೆಚ್ಚದಲ್ಲಿ ಇದರ ನಿರ್ಮಾಣವಾಯಿತು. ಬಡ ವಿದ್ಯಾರ್ಥಿಗಳ ಪರ ಇಂತಹ ದಿಟ್ಟ ನಿರ್ಧಾರ ತೆಗೆದುಕೊಂಡ ವಾರದೊಳಗೇ ಮರಿಯಪ್ಪ ಈ ಲೋಕ ಬಿಟ್ಟು ಹೋದರು! ಮೊದಲು 45 ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ ಹಾಗೂ ವಸತಿ ನೀಡಲಾಗಿತ್ತು. ಸಮುದಾಯ ಆಧಾರಿತ ವಸತಿಗೃಹಗಳು ತೀರಾ ವಿರಳ ಎನ್ನುವ ಕಾಲದಲ್ಲಿ ಉದಯಿಸಿದ ಈ ವಸತಿಗೃಹ ಎಲ್ಲರ ಗಮನಸೆಳೆದದ್ದು ಸಹಜ.

ಮರಿಯಪ್ಪ ಅವರು ನಗರ್ತ-ಲಿಂಗಾಯತ ಸಮುದಾಯಕ್ಕೆ ಸೇರಿದ್ದರೂ ಇಲ್ಲಿ ಎಲ್ಲರಿಗೂ ಉಚಿತ ಊಟ, ವಸತಿಗೆ ಅವಕಾಶ ಕಲ್ಪಿಸಿದ್ದರು. 1921ರಲ್ಲಿ ಕಾರ್ಯಾರಂಭ ಮಾಡಿದ ಹಾಸ್ಟೆಲ್‌ನಲ್ಲಿ ಈತನಕ ಅಧ್ಯಯನ ಕೈಗೊಂಡವರ ಸಂಖ್ಯೆ ನೂರಾರು ಸಂಖ್ಯೆಯಿಂದ ಸಾವಿರಕ್ಕೇರಿದೆ.

`ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ಎಚ್. ನರಸಿಂಹಯ್ಯ, ಕೇಂದ್ರ ಜಲ ಆಯೋಗದ ಮಾಜಿ ಅಧ್ಯಕ್ಷ ವೈ.ಜಿ. ಕೃಷ್ಣಮೂರ್ತಿ, ರಾಜಸ್ತಾನ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಅಡಿವೆಪ್ಪ, ಯುನೆಸ್ಕೊದಲ್ಲಿ ಕಾರ್ಯನಿರ್ವಹಿಸಿದ ಟಿ.ಆರ್. ರಾಮಣ್ಣ ಸೇರಿದಂತೆ ಹಲವು ಖ್ಯಾತನಾಮರು ಮರಿಯಪ್ಪ ಹಾಸ್ಟೆಲ್‌ನ ಹಳೆಯ ವಿದ್ಯಾರ್ಥಿಗಳು.

ನಮ್ಮಲ್ಲಿ ಓದಿದವರಲ್ಲಿ ಬಹುತೇಕರು ಡಾಕ್ಟರ್ ಇಲ್ಲವೆ ಎಂಜಿನಿಯರ್‌ಗಳಾಗಿದ್ದು ಹಲವಾರು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳ ಪೈಕಿ ಒಬ್ಬರು ಐಎಎಸ್ ಅಧಿಕಾರಿಯೂ ಆಗಿದ್ದಾರೆ' ಎನ್ನುತ್ತಾರೆ ಇಲ್ಲಿಯ ವ್ಯವಸ್ಥಾಪಕ ಟ್ರಸ್ಟಿ ಎನ್. ಪುಟ್ಟರುದ್ರ.

ಇದೇ ವಸತಿಗೃಹದ ವಿದ್ಯಾರ್ಥಿಯೂ ಆಗಿದ್ದ 87 ವರ್ಷದ ಪುಟ್ಟರುದ್ರ ಕೆಇಬಿಯ ನಿವೃತ್ತ ಅಧೀಕ್ಷಕ ಎಂಜಿನಿಯರ್. ನಿವೃತ್ತಿ ಜೀವನವನ್ನು ಹಾಯಾಗಿ ಕಳೆಯಬೇಕಾದ ಈ ವಯಸ್ಸಿನಲ್ಲೂ ಹಾಸ್ಟೆಲ್‌ನ ಕೆಲಸವನ್ನು ಉತ್ಸುಕರಾಗಿ ನಿರ್ವಹಿಸುತ್ತಿದ್ದಾರೆ.
ಸಂಸ್ಥೆಯ ಬೆಳ್ಳಿಹಬ್ಬ ಆಚರಿಸಲು 1946ರಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ಆರಂಭಿಸಲಾಯಿತು.

ವಿದ್ಯಾರ್ಥಿನಿಯರಿಗೂ ಉಚಿತ ವಸತಿ, ಊಟ ನೀಡುವ ಸಂಸ್ಥೆಗಳ ತೀವ್ರ ಕೊರತೆ ಇದ್ದ ಆ ಕಾಲದಲ್ಲಿ ಈ ಉದ್ದೇಶಕ್ಕಾಗಿ ಸಂಸ್ಥೆಯ ಟ್ರಸ್ಟಿಗಳು ಸೇರಿಕೊಂಡು ಕಾರ್ಯಪ್ರವೃತ್ತರಾದರೂ ಈ ಕೆಲಸದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲು ಆಗಲಿಲ್ಲ. ಆದಾಗ್ಯೂ ಛಲ ಬಿಡದ ಸಂಸ್ಥೆಯ ಆಡಳಿತ ಮಂಡಳಿ ಸಿಬ್ಬಂದಿ ಪಕ್ಕದಲ್ಲೆ ಬಾಡಿಗೆ ಕಟ್ಟಡದಲ್ಲಿ 9 ವಿದ್ಯಾರ್ಥಿನಿಯರಿಗೆ ಈ ವ್ಯವಸ್ಥೆ ಕಲ್ಪಿಸಿದ್ದು ಸಾಧನೆ.

ಇವರಿಗೆ ಬೆಂಗಾವಲಾಗಿ ನಿಂತವರು ಹಾಸ್ಟೆಲ್‌ನ ಹಳೆಯ ವಿದ್ಯಾರ್ಥಿಯೂ ಆದ ಇನ್ಫೋಸಿಸ್‌ನ ಸಂಸ್ಥಾಪಕ ನಿರ್ದೇಶಕ ಕೆ. ದಿನೇಶ್. ಸುಮಾರು ಒಂದು ಕೋಟಿ ರೂಪಾಯಿ ವೆಚ್ಚವನ್ನು ದಿನೇಶ್ ಭರಿಸಿದ್ದಾರೆ. ಇಲ್ಲೆಗ 45 ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ.

ವೃದ್ಧರಿಗೆ ಸೂರು
ಶತಮಾನೋತ್ಸವ ವರ್ಷವನ್ನು ಅರ್ಥಪೂರ್ಣವಾಗಿ ಆಚರಿಸುವಂತಾಗಲು ವೃದ್ಧರಿಗೆ ಸೂರು ಕಲ್ಪಿಸುವ ವ್ಯವಸ್ಥೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸಂಸ್ಥೆಯ ಟ್ರಸ್ಟಿಗಳ ಆಶಯ. ಹಳೆಯ ವಿದ್ಯಾರ್ಥಿ ಡಾ. ರಾಮಯ್ಯ ಅವರು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಜಾಲ ಎಂಬಲ್ಲಿ ಸುಮಾರು ಅರ್ಧ ಎಕರೆ ಜಮೀನು ನೀಡಿದ್ದು ಇದೇ ಜಾಗದಲ್ಲಿ ರೂ. 1.5 ಕೋಟಿ ವೆಚ್ಚದಲ್ಲಿ ವೃದ್ಧಾಶ್ರಮ (ಆರಂಭದಲ್ಲಿ 20 ಜನರಿಗೆ ಅವಕಾಶ) ಆರಂಭಿಸುವ ಉದ್ದೇಶ ಹೊಂದಲಾಗಿದ್ದು, ಕಾಮಗಾರಿಯೂ ಶೀಘ್ರ ಆರಂಭವಾಗುವ ನಿರೀಕ್ಷೆಯೂ ಇದೆ ಎನ್ನುತ್ತಾರೆ ಪುಟ್ಟರುದ್ರ.

ಈ ವಸತಿಗೃಹದಲ್ಲಿ ರಾಜ್ಯದ ಮಾತ್ರವಲ್ಲದೇ ಆಂಧ್ರ, ತಮಿಳುನಾಡುಗಳ ವಿದ್ಯಾರ್ಥಿಗಳೂ ಇದ್ದು ಅವರವರ ಆರ್ಥಿಕ ಸ್ಥಿತಿ ಹಾಗೂ ಪಡೆದ ಅಂಕಗಳ ಆಧಾರದ ಮೇಲೆ ಅರ್ಹರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ನಿಜವಾದ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವುದೇ ಇದರ ಉದ್ದೇಶ.

ಇಲ್ಲಿ ನೀಡುವ ಊಟ ಮನೆ ಊಟ ನೆನಪಿಸುವಂತಿದ್ದು, ಹಬ್ಬಹರಿದಿನಗಳಲ್ಲಿ ವಿಶೇಷ ಸಿಹಿ ತಿಂಡಿ ನೀಡಲಾಗುತ್ತದೆ. ಉತ್ತಮ ಗ್ರಂಥಾಲಯವೂ ಇಲ್ಲಿದ್ದು ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆಯಂತಹ ಹಲವು ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ. ಶತಮಾನೋತ್ಸವ ಕಾರ್ಯಕ್ರಮಗಳಿಗೆ ಇತ್ತೀಚೆಗೆ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅವರು ಚಾಲನೆ ನೀಡಿ ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದ್ದಾರೆ.

ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ವಸತಿಗೃಹ ಎಂದರೆ ಮೂಗು ಮುರಿಯುವ ಮಂದಿಗೆ ಬೆಂಗಳೂರಿನ ಮರಿಯಪ್ಪ ಹಾಸ್ಟೆಲ್ ಅಪವಾದವೇ ಸರಿ. ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದ ನೂರಾರು ಜನರಿಗೆ ಇದು ಸ್ವಂತ ಮನೆಯಷ್ಟೆ ಆಶ್ರಯ, ಮಾರ್ಗದರ್ಶನ ನೀಡಿದೆ.

ನೂರಾರು ವಿದ್ಯಾರ್ಥಿಗಳಿಗೆ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾದ ರಾಜ್ಯದ ಅಪರೂಪದ ಹಳೆಯ ಹಾಸ್ಟೆಲ್‌ಗಳಲ್ಲಿ ಒಂದೆನೆಸಿದ ಈ ಹಾಸ್ಟೆಲ್ ಸಾಗಿಬಂದ ದಾರಿಯೇ ರೋಚಕ. ಇದೀಗ ಈ ಶಿಕ್ಷಣ ದಾಸೋಹ ಕೇಂದ್ರಕ್ಕೆ ನೂರರ ಸಂಭ್ರಮ. ಈ ವಸತಿ ಗೃಹದಲ್ಲಿ ಮೊದಲು ಗಮನಸೆಳೆಯುವುದು ಓದು ಬರಹಕ್ಕೆ ಹೇಳಿಮಾಡಿಸಿದಂತಿರುವ ಅಲ್ಲಿಯ ಪ್ರಶಾಂತ ಪರಿಸರ.
-ಮುರಳೀಧರ ಬಿ. ಕುಲಕರ್ಣಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT