ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ಮಕ್ಕಳಿಗೆ ಹಿಂಸೆ- ಪ್ರಕರಣ ಬೆಳಕಿಗೆ

Last Updated 17 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯು ಅನುಷ್ಠಾನಗೊಂಡಿದ್ದರೂ, ನಗರದ ಕೆಲವು ಖಾಸಗಿ ಶಾಲೆಗಳಲ್ಲಿ ಕಾಯ್ದೆಯ ಅನುಸಾರ ದಾಖಲಾಗಿರುವ ಬಡ ಮಕ್ಕಳಿಗೆ ವಿವಿಧ ರೀತಿಯ ಹಿಂಸೆ ನೀಡಿರುವ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ.

ನಂದಿನಿ ಬಡಾವಣೆಯಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯು ಬಡ ಮಕ್ಕಳನ್ನು ಖಾಸಗಿ ಶಾಲೆಯ ಮಕ್ಕಳ ನಡುವೆ ಗುರುತಿಸುವ ಸಲುವಾಗಿಯೇ ಒಂದನೇ ತರಗತಿಗೆ ದಾಖಲಾಗಿದ್ದ ಮೂರು ಮಂದಿ ವಿದ್ಯಾರ್ಥಿಗಳ ಮುಂದಲೆಯಲ್ಲಿದ್ದ ಕೂದಲನ್ನು ಕತ್ತರಿಸಿ ಅಮಾನವೀಯತೆಯನ್ನು ಮೆರೆದಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಾಹಿತಿ ಬಿ.ಟಿ.ಲಲಿತಾನಾಯಕ್ ಅವರು, `ಮಕ್ಕಳಿಗೆ ಮಾನವೀಯತೆಯನ್ನು ಕಲಿಸಬೇಕಾದ ಶಿಕ್ಷಣ ಸಂಸ್ಥೆಯೇ ಇಂತಹದ್ದೊಂದು ನೀಚ ಕೆಲಸಕ್ಕೆ ಕೈ ಹಾಕುತ್ತದೆ ಎಂದರೆ ಈ ಸಂಸ್ಥೆಯ ಮನಸ್ಥಿತಿ ಎಂತಹದ್ದು ಎಂಬುದು ತಿಳಿಯುತ್ತದೆ~  ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಹಾಜರಾತಿ ಪುಸ್ತಕದಲ್ಲಿ ಈ ಮಕ್ಕಳ ಹೆಸರುಗಳು ದಾಖಲಾಗಿಲ್ಲ. ಇಂತಹ ಮಕ್ಕಳ ಪುಸ್ತಕಗಳು ಮತ್ತು ಬ್ಯಾಗುಗಳನ್ನು ಪ್ರತ್ಯೇಕವಾಗಿ ಇಡಲಾಗುತ್ತಿದೆ. ಅವರನ್ನು ಚಿಕ್ಕ ಮಕ್ಕಳು ಎಂದು ನೋಡದೆ ಅವರನ್ನು ಶೋಷಿಸಲಾಗುತ್ತಿದೆ.  ಶಾಲೆಗೆ ಬರುವ ಮಕ್ಕಳ ಊಟದ ಡಬ್ಬಿಗಳನ್ನು ಪರೀಕ್ಷಿಸಿ ಒಳಗೆ ಬಿಡುತ್ತಾರೆ.

ಯಾರಾದರೂ ಮೊಟ್ಟೆಯಿಂದ ತಯಾರು ಮಾಡಿರುವ ಊಟ ತಂದಿದ್ದರೆ, ಅಂತಹ ಮಕ್ಕಳನ್ನು ಶಾಲೆಗೆ ಸೇರಿಸದೆ, ಮನೆಗೆ ಕಳುಹಿಸುತ್ತಿದ್ದಾರೆ. ಅವರ ಇಷ್ಟವಾದ ಊಟವನ್ನು ಮಾಡುವುದು ಅವರ ಹಕ್ಕು. ಅದನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ~ ಎಂದು ಕಿಡಿಕಾರಿದರು.

`ಶಾಲೆಗೆ ದಾಖಲಾಗಿರುವ ಈ ಬಡಮಕ್ಕಳಿಗೆ ಸಮವಸ್ತ್ರ, ಪುಸ್ತಕ, ತರಗತಿ ಕೆಲಸಗಳನ್ನು ನೀಡದೇ ತಾರತಮ್ಯ ಮಾಡಲಾಗುತ್ತಿದೆ. ಮಕ್ಕಳನ್ನು ತರಗತಿಯ ಕೊನೆಯ ಸಾಲಿನಲ್ಲಿ ಕೂರಿಸಲಾಗುತ್ತಿದೆ. ಇನ್ನು ಕೆಲವು ಶಾಲೆಗಳಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾದ ಮಕ್ಕಳನ್ನು  ಬೆಳಗಿನ ಪ್ರಾರ್ಥನಾ ಸಮಯದಲ್ಲಿ  ಪ್ರತ್ಯೇಕವಾಗಿ ನಿಲ್ಲಿಸಲಾಗುತ್ತಿರುವುದು ಗಮನಕ್ಕೆ ಬಂದಿದೆ. ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿದಿರುವ ಕುಸ್ಮಾ ಸಂಘಟನೆಯು ಈ ಕೃತ್ಯದ ಬಗ್ಗೆ ಯಾವ ಪ್ರತಿಕ್ರಿಯೆ ನೀಡುತ್ತದೆ~ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT