ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನಕ್ಕಿಂತ ಆತಂಕವಾದವೇ ದೊಡ್ಡ ಶತ್ರು: ಮೋದಿ

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕೊಲ್ಲಂ: ‘ದಿನೇ ದಿನೇ ಆತಂಕವಾದಿಗಳ ಆರ್ಭಟ ಹೆಚ್ಚುತ್ತಿದ್ದು, ದೇಶಕ್ಕೆ ಬಡತನಕ್ಕಿಂತ ಆತಂಕವಾದವೇ ದೊಡ್ಡ ಶತ್ರು’ ಎಂದು ಗುಜರಾತ್ ಮುಖ್ಯ­ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯ­ಪಟ್ಟರು.

ಮಾತಾ ಅಮೃತಾನಂದಮಯಿ 60ನೇ ಹುಟ್ಟುಹಬ್ಬದ ಪ್ರಯುಕ್ತ  ಇಲ್ಲಿನ ಅಮೃತಪುರಿ ಮಠದಲ್ಲಿ ನಡೆದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪಾಕಿಸ್ತಾನದ ಪೆಶಾವರದಲ್ಲಿ ಪ್ರಾರ್ಥನೆ ನಡೆಯುತ್ತಿದ್ದ ಸಂದರ್ಭ­ದಲ್ಲಿಯೇ ಚರ್ಚ್ ಮೇಲೆ ಆಂತಕವಾದಿ­ಗಳಿಂದ ದಾಳಿ ನಡೆದಿದೆ. ಉಗ್ರರ ಉಪಟಳದಿಂದ ಜಮ್ಮು ಕಾಶ್ಮೀರ ಹೊತ್ತಿ ಉರಿಯುತ್ತಿದೆ. ಆತಂಕವಾದ­ವನ್ನು ಸಂಪೂರ್ಣ ಹತ್ತಿಕ್ಕುವಂತಹ ರಾಜನೀತಿ­ಯನ್ನು ಬೆಳೆಸುವ ಅಗತ್ಯವಿದೆ’ ಎಂದರು.

‘ಎಲ್ಲೆಡೆ ಅಶಾಂತಿ, ಹಿಂಸೆಯೇ ತಾಂಡವಾಡುತ್ತಿದೆ. ಆದರೆ, ‘ಅಮ್ಮ’ ನ ಮಠದಲ್ಲಿ ಶಾಂತಿ ನೆಲೆಸಿದೆ. ಮಾನವ ಸೇವೆಯೇ ಮಾಧವ ಸೇವೆ ಎಂಬ ತತ್ವದ ಮೇಲೆ ‘ಅಮ್ಮ’ ಜನರಿಗೆ ನೆರವಾ­ಗುತ್ತಿದ್ದಾರೆ. ಭಾರತದ ಅಧ್ಯಾತ್ಮವೂ ಜಗತ್ತಿಗೆ ಹೊಸ ದಿಕ್ಕು ತೋರಿಸಬಲ್ಲ ಶಕ್ತಿಯನ್ನು ಪಡೆದಿದೆ. ಸರಳ ಭಾಷೆಯಲ್ಲಿ ಅಧ್ಯಾತ್ಮವನ್ನು ಪ್ರಚುರ ಪಡಿಸುತ್ತಿ­ರುವುದು  ನಿಜಕ್ಕೂ ದೊಡ್ಡ ಸಂಗತಿ’ ಎಂದು ಶ್ಲಾಘಿಸಿದರು.

ಸ್ವರ್ಗ ಬೇಡ : ನನಗೆ ಸ್ವರ್ಗ ಬೇಡ. ಮರು  ಹುಟ್ಟು ಕೂಡ  ಬೇಡ. ಜನರ ಕಣ್ಣೀರನ್ನು ಒರೆಸಬೇಕು. ಅವರ ಸಂಕಷ್ಟಗಳನ್ನು ಪರಿಹರಿಸುವ ಶಕ್ತಿಯನ್ನು ‘ಅಮ್ಮ’ ದಯಪಾಲಿಸಬೇಕು ಎಂದು ಮನವಿ ಮಾಡಿದ ಅವರು, ‘ಒಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಅಧ್ಯಾತ್ಮ ಗುರುವಾಗಿ  ಮಾಡುತ್ತಿ­ರು­ವುದು ಸಂತಸ ತಂದಿದೆ. ಕೇರಳದ ಮಠದ ಭೇಟಿಯಿಂದಾಗಿ ನನ್ನಲ್ಲಿ ವಿಶೇಷ ಶಕ್ತಿ ಬಂದಿದೆ’ ಎಂದರು.

ಮಲಯಾಳದಲ್ಲಿ ಮೋದಿ:ಭಾಷಣದ ಆರಂಭದಲ್ಲಿಯೇ ಮೋದಿ ಮಲಯಾಳ­ದಲ್ಲಿ ಮಾತನಾಡುವ ಮೂಲಕ  ಜನರಲ್ಲಿ  ಉತ್ಸಾಹ ತುಂಬಿದರು. ಅಮೃತಾನಂದಮಯಿ ಎಂಜಿನಿಯರಿಂಗ್ ಕಾಲೇಜು ವತಿಯಿಂದ ಅಶಕ್ತರ ಭದ್ರತೆ­ಗಾಗಿ ತಯಾರಾದ ‘ಅಮೃತ­ಮಿತ್ರ’ ಸಾಧನ ಬಿಡುಗಡೆ ಮಾಡಲಾಯಿತು.

ಕರ್ನಾಟಕದ ನಕ್ಸಲ್ ಪೀಡಿತ ಪ್ರದೇಶ ದತ್ತು!
ಮಾತಾ ಅಮೃತಾನಂದಮಯಿ 60ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅಮೃತಪುರಿ ಮಠಕ್ಕೆ ದೇಶ-ವಿದೇಶ ಸೇರಿದಂತೆ ನಾನಾ ಭಾಗಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು. ಅಪ್ಪುಗೆ ಮೂಲಕವೇ ಜನರ  ನೋವುಗಳಿಗೆ ಸ್ಪಂದಿಸುವ ‘ಅಮ್ಮ’  ಹುಟ್ಟುಹಬ್ಬದ ದಿನವೂ ಕೂಡ ಲಕ್ಷಾಂತರ ಅಭಿಮಾನಿಗಳನ್ನು ಅಪ್ಪುಗೆಯಿಂದಲೇ ಆದರಿಸಿದರು.

ಇದೇ ಸಂದರ್ಭದಲ್ಲಿ ‘ಪ್ರಜಾವಾಣಿ’­ಯೊಂದಿಗೆ ಮಾತನಾಡಿದ ಅಮೃತಾ­ನಂದ­­ಮಯಿ, ‘ಶಿಕ್ಷಣ, ಆರೋಗ್ಯ ವ್ಯವಸ್ಥೆಯಲ್ಲಿ ಗಣನೀಯ ಪ್ರಗತಿ ಸಾಧಿಸಲು ಸದ್ಯದಲ್ಲಿಯೇ 101 ಗ್ರಾಮಗಳನ್ನು ದತ್ತು ಪಡೆದುಕೊಳ್ಳುವ ಬಗ್ಗೆ ಮಠ ಚಿತ್ತ ಹರಿಸಿದೆ’ ಎಂದು ತಿಳಿಸಿದರು.
‘ಎಲ್ಲ ರಾಜ್ಯದ ಹಿಂದುಳಿದ ಗ್ರಾಮಗಳಿಗೆ ಆದ್ಯತೆ ನೀಡಲಾಗುವುದು. ಶಿಕ್ಷಣ, ಆರೋಗ್ಯ, ವಸತಿ, ಕುಡಿಯುವ ನೀರು, ನೈರ್ಮಲ್ಯ  ಇವುಗಳ ಬೆಳೆವಣಿ­ಗೆಗೆ ಶ್ರಮಿಸಲಾಗುವುದು. ಗ್ರಾಮಗಳ ಆಯ್ಕೆ ಪ್ರಕ್ರಿಯೆ  ನಡೆದಿದ್ದು, ಯೋಜನೆಯ ಒಟ್ಟು ರೂಪು ರೇಷೆ­ಯನ್ನು ಸಹ ಸಿದ್ಧಪಡಿಸಲಾಗುತ್ತಿದೆ' ಎಂದು ತಿಳಿಸಿದರು.

‘ಮೂರು ವರ್ಷಗಳ ಹಿಂದೆ ಪ್ರವಾಹ ಪೀಡಿತಕ್ಕೆ ಒಳಗಾಗಿದ್ದ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ವಸತಿ ನಿರ್ಮಾಣ ಯೋಜನೆಯೂ ಪೂರ್ಣಗೊಂಡಿದ್ದು ಫಲಾನು­ಭವಿಗಳಿಗೆ ವಸತಿಯನ್ನು ಹಂಚಲಾಗಿದೆ. ಇದಲ್ಲದೇ ಈ ಬಾರಿ ವಿಶೇಷ ಯೋಜನೆಯಲ್ಲಿ ಕರ್ನಾಟಕದ ನಕ್ಸಲ್ ಪೀಡಿತ ಪ್ರದೇಶಗಳನ್ನು ದತ್ತು ತೆಗೆದುಕೊಳ್ಳಲು ಚಿಂತನೆ  ನಡೆಸ­ಲಾಗಿದೆ' ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT