ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನದ ನೆರಳಲ್ಲಿ ಬಲಿಷ್ಠ ಸ್ನಾಯುಗಳ ಯುವಕ

Last Updated 8 ಮಾರ್ಚ್ 2011, 5:10 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮೂಗಿನ ತೊಂದರೆಯ ಪರಿಹಾರಕ್ಕೆಂದು ವ್ಯಾಯಾಮ ಶಾಲೆಯ ಒಳಹೊಕ್ಕ ಬಾಲಕ ಇಂದು ‘ಬಲಿಷ್ಠ ಸ್ನಾಯುಗಳ ಯುವಕ’ ಎಂಬ ಬಿರುದಿಗೆ ಪಾತ್ರನಾಗಿದ್ದಾನೆ. ಭಾಗವಹಿಸಿದ ಎಲ್ಲ ಸ್ಪರ್ಧೆಗಳಲ್ಲಿ ಒಂದಾದರೂ ಬಹುಮಾನ ಗೆಲ್ಲುವ ಮೂಲಕ ರಾಜ್ಯದ ದೇಹದಾರ್ಢ್ಯ ಸ್ಪರ್ಧಾಳುಗಳಲ್ಲಿ ತನ್ನ ಅಸ್ತಿತ್ವವನ್ನು ಪದೇ ಪದೇ ಸಾಬೀತುಪಡಿಸಿದ್ದಾನೆ.ನಿವೃತ್ತ ಸೈನಿಕ ಹಾಗೂ ದಲಿತ ನಾಯಕ ಎಚ್.ಸಿ.ರಾಜಣ್ಣ ಅವರು ಪುತ್ರ ಅರುಣ್ ಕುಮಾರ್ ಇಂದು ದೇಶ ಗಮನಿಸುವ ದೇಹದಾರ್ಢ್ಯಪಟುವಾಗಿ ಬೆಳಿದಿದ್ದಾರೆ. ಅಖಿಲ ಭಾರತ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ನಂತರ ‘ಭರತ್ ಕುಮಾರ್’ ಎಂಬ ಬಿರುದು ಅವರನ್ನು ಹುಡುಕಿಕೊಂಡು ಬಂದಿದೆ.

ಮೈಲಿಗಲ್ಲುಗಳು: ತನ್ನ 20ನೇ ವಯೋಮಾನದಿಂದ ನಗರದ ವಿವಿಧ ವ್ಯಾಯಾಮ ಶಾಲೆಗಳಲ್ಲಿ ಕಠಿಣ ಸಾಧನೆ ಪ್ರಾರಂಭಿಸಿದ ಅರುಣ್ ಕುಮಾರ್ ಅವರು 2007ರಲ್ಲಿ ‘ಮಿ.ಮೈಸೂರ್’ ಆಗಿ ಹೊರಹೊಮ್ಮಿದರು. ನಂತರ ಮೈಸೂರು ಪೊಲೀಸ್ ಆಯುಕ್ತರ ಕಪ್, ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯಗಳ ದೇಹದಾರ್ಢ್ಯ ಸ್ಪರ್ಧೆ ಮತ್ತು ದಸರ ಸ್ಪರ್ಧೆಯಲ್ಲಿ ಕಂಚಿನ ಪದಕ ಒಲಿಯಿತು.

2008ರಲ್ಲಿ ಕರ್ನಾಟಕ ಕುಮಾರ್ ಪ್ರಶಸ್ತಿಯ ಮೂಲಕ ಸ್ವರ್ಣ ಪದಕವನ್ನು ಗೆದ್ದ ಅರುಣ್‌ಕುಮಾರ್ ಅದೇ ವರ್ಷ ‘ಮಿ.ಕರ್ನಾಟಕ’ದ ಸಾಧನೆ ಮಾಡಿದರು. 2010ರಲ್ಲಿ ‘ಮಿ.ಸಾಗರ್’ ‘ಮಿ.ಕುವೆಂಪು’ ವಿವಿ ಪ್ರಶಸ್ತಿ, ಅದೇ ವರ್ಷ ನಡೆದ ಅಂತರ ವಿವಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬೆಳ್ಳಿ ಪದಕದ ಸಾಧನೆಯನ್ನು ಅರುಣ್ ಮಾಡಿದರು.ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ‘ಭರತ್‌ಕುಮಾರ್’ ಸ್ಪರ್ಧೆ’ಯಲ್ಲಿಯೂ ಅರುಣ್ ತಮ್ಮ ಬಲಿಷ್ಠ ಸ್ನಾಯುಗಳ ಮೂಲಕ ಎಲ್ಲ ಗಮನ ಸೆಳೆದರು. ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಹೆಮ್ಮೆ ತಂದರು.
ಪರಿಶ್ರಮಿಗೆ ನೂರೆಂಟು ಚಿಂತೆ: ನಿಮ್ಮ ಯಶಸ್ಸಿನ ಗುಟ್ಟೇನು? ಎಂದು ಅರುಣ್ ಕುಮಾರ್ ಅವರನ್ನು ಪ್ರಶ್ನಿಸಿದರೆ ಸಿಗುವ ಒಂದೇ ಉತ್ತರ, ‘ಪರಿಶ್ರಮ’. ಪ್ರತಿದಿನ ನಿಯಮಿತ ವ್ಯಾಯಾಮ ಮಾಡುವ ಅರುಣ್‌ಕುಮಾರ್ ಸಮತೋಲನ ಆಹಾರದ ಅಗತ್ಯವನ್ನು ಒತ್ತಿ ಹೇಳುತ್ತಾರೆ.

ಪ್ರತಿದಿನ ಒಂದು ಕೆಜಿ ಕೋಳಿಮಾಂಸ, 30 ಮೊಟ್ಟೆಗಳು, 15 ಚಪಾತಿ, ಹಣ್ಣು ಮತ್ತು ತರಕಾರಿ, ಸಾಕಷ್ಟು ಗಿಣ್ಣನ್ನು ಅರುಣ್‌ಕುಮಾರ್ ಸೇವಿಸುತ್ತಾರೆ. ‘ನಾವು ವ್ಯಾಯಾಮಕ್ಕೆ ತಕ್ಕಂತೆ ಆಹಾರ ಸೇವಿಸಬೇಕು. ಸಾಕಷ್ಟು ಪ್ರೋಟೀನ್ ಸಿಗದಿದ್ದರೆ ದೇಹ ವ್ಯಾಯಾಮದ ಶ್ರಮ ತಡೆಯುವುದಿಲ್ಲ’ ಎನ್ನುವುದು ಅರುಣ್ ಹೇಳುವ ಅನುಭವದ ಮಾತು.ಪೌಷ್ಠಿಕಾಂಶಯುಕ್ತ ಆಹಾರ ಸೇವನೆಗಾಗಿ ತಿಂಗಳಿಗೆ ಕನಿಷ್ಠ 20 ಸಾವಿರ ರೂ ಖರ್ಚಾಗುತ್ತದೆ. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಹತ್ತಿರ ಹತ್ತಿರ ಒಂದು ಲಕ್ಷ ರೂವರೆಗೆ ಖರ್ಚು ಬರುತ್ತದೆ. ಆದರೆ ಸ್ಪರ್ಧೆಗಳ ಬಹುಮಾನದ ಮೊತ್ತ ಮಾತ್ರ 25 ಸಾವಿರ ರೂ ದಾಟುವುದಿಲ್ಲ.

‘ನನ್ನ ತಂದೆ ರಾಜಣ್ಣ ಎಷ್ಟೋ ಸಲ ಸಾಲ ಮಾಡಿ ನನಗೆ ಆಹಾರ ಒದಗಿಸಿದ್ದಾರೆ. ಬೆಂಗಳೂರಿನ ಜಿಂ ವರ್ಲ್ಡ್ ತರಬೇತುದಾರ ಎ.ಎಸ್.ನಾಗೇಶ್ ಅವರು ನನಗೆ ಬೆನ್ನುಲುಬಾಗಿ ನಿಂತು ಮಾರ್ಗದರ್ಶನ ಮಾಡುತ್ತಿದ್ದಾರೆ. ಆದರೆ ಸೂಕ್ತ ಬೆಂಬಲ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಈ ಕಲೆಯನ್ನು ಉಳಿಸಿಕೊಳ್ಳುವುದು ಕಷ್ಟ’ ಎನ್ನುತ್ತಾರೆ ಅರುಣ್.
ಸರ್ಕಾರದ ಬೆಂಬಲ ಬೇಕು: ರಾಜ್ಯಶಾಸ್ತ್ರದಲ್ಲಿ ಎಂಎ ಪದವಿ ಪಡೆದಿರುವ ಅರುಣ್‌ಗೆ ಮುಂದಿನ ದಿನಗಳಲ್ಲಿ ಏಷ್ಯಾ ಪೆಸಿಫಿಕ್ ಸೇರಿದಂತೆ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಹುಮ್ಮಸ್ಸಿದೆ. ಆದರೆ ಆರ್ಥಿಕ ಮುಗ್ಗಟ್ಟು ಅವಕಾಶ ಮಾಡಿಕೊಡುತ್ತಿಲ್ಲ.

ಗೋವಾ, ಕೇರಳ, ಪಂಜಾಬ್ ರಾಜ್ಯಗಳ ಯುವಕರು ರಾಷ್ಟ್ರಮಟ್ಟದ (ಅಂತರ ವಿವಿ) ಸ್ಪರ್ಧೆಗಳಲ್ಲಿ ಕಂಚು ಗೆದ್ದರೂ ಅಲ್ಲಿನ ಸರ್ಕಾರಗಳು ಉದ್ಯೋಗ ನೀಡಿ ಪ್ರೋತ್ಸಾಹಿಸುತ್ತವೆ. ನಾನು ಚಿನ್ನ ಗೆದ್ದರೂ ಕೇಳುವವರೇ ಇಲ್ಲ’ ಎಂದು ಅರುಣ್ ವಿಷಾದ ವ್ಯಕ್ತಪಡಿಸುತ್ತಾರೆ.ಜಿಲ್ಲಾಡಳಿತ, ಕನ್ನಡಪರ ಸಂಘಟನೆಗಳು, ಲಯನ್ಸ್- ಲಯನೆಸ್- ರೋಟರಿ ಸಂಸ್ಥೆಗಳು, ಎಬಿಸಿ- ಮುದ್ರೆಮನೆ ಇತ್ಯಾದಿ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ದಾನಿಗಳ ಬೆಂಬಲ ಸಿಕ್ಕರೆ ಅರುಣ್ ಕುಮಾರ್ ಇನ್ನಷ್ಟು ಸಾಧನೆ ಮಾಡುವುದರಲ್ಲಿ ಸಂದೇಹವಿಲ್ಲ.
(ಅರುಣ್‌ಕುಮಾರ್ ಅವರ ತಂದೆ ರಾಜಪ್ಪ ಅವರು ಮೊಬೈಲ್ ಸಂಖ್ಯೆ- 9845829778)

‘ಬಾಡಿ ಬಿಲ್ಡಿಂಗ್ ಒಂದು ಕಲೆ’
ಬಾಕ್ಸರ್ ಮತ್ತು ಬಾಡಿ ಬಿಲ್ಡರ್‌ಗೆ ಸಾಕಷ್ಟು ವ್ಯತ್ಯಾಸವಿದೆ. ಬಾಕ್ಸಿಂಗ್ ಒಂದು ಕ್ರೀಡೆ. ಬಾಡಿ ಬಿಲ್ಡಿಂಗ್ ಒಂದು ಕಲೆ. ತನ್ನ ದೇಹವನ್ನು ಎಷ್ಟು ಚೆನ್ನಾಗಿ ರೂಪಿಸಿಕೊಂಡು, ಎಷ್ಟು ಚೆನ್ನಾಗಿ ಪ್ರದರ್ಶಿಸಲು ಸಾಧ್ಯ ಎಂದು ಸೌಂದರ್ಯಾತ್ಮಕ ದೃಷ್ಟಿಯಲ್ಲಿ ಆದರಂತೆ ಪ್ಲಾನ್ ಮಾಡಿಕೊಂಡು ಬಾಡಿ ಬಿಲ್ಡರ್ ಜೀವಿಸುತ್ತಾನೆ. ಚಿತ್ರ ಕಲಾವಿದರು ಬಟ್ಟೆಯ ಕ್ಯಾನ್ವಾಸ್ ಮೇಲೆ ಚಿತ್ರ ಬಿಡಿಸಿದರೆ, ಬಾಡಿ ಬಿಲ್ಡರ್‌ಗಳು ತಮ್ಮ ದೇಹವನ್ನೇ ಕ್ಯಾನ್ವಾಸ್ ಮಾಡಿಕೊಂಡು ಕಲಾಕೃತಿ ರಚಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT