ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನದ ಬೇಗೆಯಲ್ಲಿ ಅಂಗವಿಕಲ ಕುಟುಂಬ

Last Updated 28 ಮೇ 2012, 10:35 IST
ಅಕ್ಷರ ಗಾತ್ರ

ಯಾದಗಿರಿ: ಇಡೀ ಕುಟುಂಬವೇ ಅಂಗವಿಕಲತೆಯಿಂದ ಬಳಲುತ್ತಿದೆ. ತುತ್ತಿನ ಚೀಲ ತುಂಬಲು ಆಸ್ತಿಯೂ ಇಲ್ಲ. ಸರ್ಕಾರದ ಸಹಾಯ ಹಸ್ತವೂ ಸಿಗುತ್ತಿಲ್ಲ. ಅಂಧಕಾರದ ಬದುಕಿನಲ್ಲಿ ಈ ಕುಟುಂಬ ಬೆಂದು ಹೋಗಿದೆ.

ತಾಲ್ಲೂಕಿನ ಮುಷ್ಟೂರು ಗ್ರಾಮದ ನಿವಾಸಿ ದೇವಪ್ಪ ಎಂಬವವರ ಕುಟುಂಬದ ಸ್ಥಿತಿ ಇದು. ದೇವಪ್ಪ ಅವರ ಮನೆಯಲ್ಲಿ ಹೆಂಡತಿ, ಮಗಳು ಹಾಗೂ ಒಬ್ಬ ಮಗ ಇದ್ದಾರೆ. ಹೆಂಡತಿ ಮರೆಮ್ಮಳ ಕಾಲು ಸರಿಯಾಗಿಲ್ಲ.

ನಡೆದಾಡುವುದಕ್ಕೂ ಆಗುವುದಿಲ್ಲ. ಇನ್ನು 11 ವರ್ಷದ ಮಗಳು ಕೆಂಚಮ್ಮಳಿಗೆ ಮಾತನಾಡಲು ಬರುವುದಿಲ್ಲ. ಇಂತಹ ಕುಟುಂಬಕ್ಕೆ 16 ವರ್ಷದ ಮಗನೇ ಆಧಾರವಾಗಿದ್ದಾನೆ.

ನಿತ್ಯವೂ ಮಗ ಯಾದಗಿರಿಗೆ ತೆರಳಿ ಕೆಲಸ ಮಾಡಿ, ಕೂಲಿ ಹಣ ತಂದಾಗಲೇ ಈ ಕುಟುಂಬದ ಜೀವನ ನಡೆಯುತ್ತದೆ. ಇಲ್ಲವಾದಲ್ಲಿ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂದು ಕುಟುಂಬದ ಸದಸ್ಯರು ನೊಂದು ನುಡಿಯುತ್ತಾರೆ.

ಅಂಗವಿಕಲತೆಯಿಂದ ಬಳಲುತ್ತಿದ್ದರೂ ಮರೆಮ್ಮ, ಅಷ್ಟಿಷ್ಟು ಕೆಲಸ ಮಾಡಿ, ಅಲ್ಪ ಹಣ ಸಂಪಾದಿಸುತ್ತಾರೆ. ಮಗನ ದುಡಿವೆು, ತಮ್ಮ ಸಂಪಾದನೆಯಿಂದ ಬದುಕಿನ ಬಂಡಿಯನ್ನು ಹೇಗೋ ಸಾಗಿಸುತ್ತಿದ್ದಾರೆ. ದೇವಪ್ಪನ ತಾಯಿ ಕೂಡ 80 ರ ಇಳಿ ವಯಸ್ಸಿನಲ್ಲಿಯೂ ಅವರಿವರ ಮನೆಯಲ್ಲಿ ದುಡಿಯುತ್ತಾರೆ.

ಕಳೆದ 20 ವರ್ಷಗಳಿಂದ ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ದೇವಪ್ಪ ಪ್ರತಿಯೊಂದಕ್ಕೂ ಕಾರ್ಯಕ್ಕೂ ಇನ್ನೊಬ್ಬರನ್ನು ಅವಲಂಬಿಸಬೇಕಾಗಿದೆ. ನಿತ್ಯ ಶೌಚಲಾಯ, ಸ್ನಾನ, ಊಟ ಹೀಗೆ ಎಲ್ಲದಕ್ಕೂ ಕೈ ಹಿಡಿಯಲೇಬೇಕು.
 
ಈ ಎಲ್ಲಾ ಜವಾಬ್ದಾರಿ ಹೆಂಡತಿ ಮರೆಮ್ಮ ಅವರದ್ದು “ಏನ್ ಮಾಡುದ್ರಿ. ನನ್ನ ಗಂಡಗ ಮೊದ್ಲ ಒಂದು ಕಣ್ಣ ಕಾಣುತ್ತಿದ್ದಿಲ್ಲ. ನನ್ನ ಕಾಲು ಸರಿ ಇರಾಕಿಲ್ಲ. ತಿಳಿಲಾರ್ದ್‌ ವಯಸ್ಸಿನ್ಯಾಗ ಈವನ್ನ (ದೇವಪ್ಪ) ಗಂಟ್ ಹಾಕಿದ್ರು. ಕೊಟ್ ಹೆಣ್ಣು ಕುಲಕ್ಕ ಹೊರರ ಅನ್ನು ಹಂಗ ನಾ ಜೀವನ ಮಾಡ್ಲಾಕ ಬೇಕು ಎನ್ನುತ್ತಾರೆ ಮರೆಮ್ಮ.

“50 ರಿಂದ 60 ಸರ್ತಿ ಯಾದಗಿರಿಯ ತಹಸೀಲ್ ಕಚೇರಿಗೆ ಹೋಗಿ ಬಂದೇನ್ರಿ. ಸಾಹೇಬ್ರ ಕೈ ಕಾಲು ಹಿಡದ್ರು ಏನು ಕೆಲಸ ಆಗ್ಲಿಲ್ಲ. ಕೇಳಿದ್ರ ಇಂದ ಬರತೈತಿ, ನಾಳಿಗ ಬರತೈತಿ ಅಂತ ಹಾರಿಕೆ ಉತ್ತರ ಕೊಟ್ಟಗೊಂತ ಹೊಂಟಾರ. ಹಿಂಗಾದ್ರ ನಮ್ಮಂಧಾವ್ರ ಗತಿ ಏನ್ರಿ ಯಪ್ಪಾ” ಎಂದು ದೇವಪ್ಪ ತಮ್ಮ ನೋವನ್ನು ಹೊರಹಾಕುತ್ತಾರೆ.

ಅವಿಭಜಿತ ಗುಲ್ಬರ್ಗ ಜಿಲ್ಲಾ ವೈದ್ಯಾಧಿಕಾರಿಗಳು ಕಳೆದ 5 ವರ್ಷದ ಹಿಂದೆ (2007ರಲ್ಲಿ) ದೇವಪ್ಪ ಅವರಿಗೆ ಎರಡು ಕಣ್ಣುಗಳಲ್ಲಿ ದೋಷವಿದ್ದು ಶೇ. 100 ದೃಷ್ಟಿ ಹೀನತೆಯಿಂದ ಬಳುತ್ತಿರುವುದಾಗಿ ತಿಳಿಸಿದ್ದು, ವಿಕಲಾಂಗ ಎಂದು ದೃಢೀಕರಣ ಪ್ರಮಾಣಪತ್ರವನ್ನೂ ನೀಡಲಾಗಿದೆ. ಈ ಪ್ರಮಾಣಪತ್ರ ಹಿಡಿದು ಎಲ್ಲ ಇಲಾಖೆ ಅಲೆದಾಡಿರುವ ದೇವಪ್ಪ ಹಾಗೂ ಅವರ ಕುಟುಂಬಕ್ಕೆ ಸಹಾಯಹಸ್ತ ಮಾತ್ರ ಸಿಗದೇ ಇರುವುದಕ್ಕೆ ಗ್ರಾಮದ ಜನರು ಬೇಸರ ವ್ಯಕ್ತಪಡಿಸುತ್ತಾರೆ.

ಮೊದಲೇ ಬಡತನದಿಂದ ಬಳಲುತ್ತಿರುವ ಈ ಕುಟುಂಬಕ್ಕೆ ಅಂಗವಿಕಲತೆ ಮತ್ತೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅಂಗವಿಕಲರ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಈ ಕುಟುಂಬದತ್ತ ಗಮನ ನೀಡಬೇಕಾಗಿದೆ ಎಂಬುದು ಗ್ರಾಮದ ಜನರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT