ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಕಾರ್‌ಗೆ ಪ್ರೊಮೋಷನ್! ಬರಲಿದೆ ಲಕ್ಷುರಿ ಟಾಟಾ ನ್ಯಾನೊ

Last Updated 4 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

2008ರ ಜನವರಿಯಲ್ಲಿ ನವದೆಹಲಿಯ ಪ್ರಗತಿ ಮೈದಾನದಲ್ಲಿ ಟಾಟಾ ನ್ಯಾನೊ ಕಾರ್ ಬಿಡುಗಡೆಯಾದಾಗ ಇಡೀ ಪ್ರಪಂಚವೇ ಬೆರಗುಗಣ್ಣುಗಳಿಂದ ನೋಡಿತ್ತು. ಅಬ್ಬಾ..! ೧ ಲಕ್ಷ ರೂಪಾಯಿಯ ಕಾರ್ ಅಂತೆ. ಇದು ಬಡವರ ಕಾರ್ ಅಂತೆ. ಬೈಕ್, ಸ್ಕೂಟರ್ ಕೊಳ್ಳುವವರು ಇನ್ನು ಮುಂದೆ ಕಾರ್ ಕೊಳ್ಳಬಹುದಂತೆ! ಹೀಗೆಲ್ಲಾ ಉದ್ಘಾರಗಳು ಹೊಮ್ಮಿದ್ದವು.

ರತನ್ ಟಾಟಾ ಅವರ ಕನಸಿನ ಕೂಸಾಗಿದ್ದ ಈ ಕಾರ್ ಬಡವರಿಗೆ ತಲುಪಲೇ ಇಲ್ಲ. ಈ ಕಾರ್ ಫುಲ್ ಫ್ಲಾಪ್ ಆಗಿದೆ ಎಂದು ಸ್ವತಃ ರತನ್ ಟಾಟಾ ಅವರೇ ಒಪ್ಪಿಕೊಂಡಿದ್ದಾರೆ.

ಕಾರ್ ಎಂದರೆ ಭಾರತೀಯರಿಗೆ ಪ್ರತಿಷ್ಠೆಯ ವಿಚಾರ. ಆದರೆ ಕಾರ್ ಕಂಪೆನಿಯೊಂದು ಕಾರ್ ಒಂದನ್ನು ಬಡವರ ಕಾರ್, ಬಡವರ ಕಾರ್ ಎಂದು ಪ್ರಚಾರ ಮಾಡಿದರೆ, ಕಾರ್ ಕೊಂಡ ಮಾಲೀಕನ ಪ್ರತಿಷ್ಠೆ ಏನಾಗಬೇಡ. ಬಡವರ ಕಾರ್ ಕೊಳ್ಳಲು ಈ ಪ್ರಚಾರ ಅಡ್ಡಗಾಲು ಹಾಕಿದಂತಾಗುತ್ತದೆ. ಹಾಗಾಗಿ ನ್ಯಾನೊ ಎಷ್ಟೇ ಉತ್ತಮ ಕಾರ್ ಆದರೂ ಅದನ್ನು ಕೊಳ್ಳಲು ಮಾತ್ರ ಗ್ರಾಹಕ ಹಿಂದೇಟು ಹಾಕಿದ.

ಸುಳ್ಳಾದ ನಿರೀಕ್ಷೆ!
ಟಾಟಾ ನ್ಯಾನೊ ಕಾರನ್ನು ಪರ್ಯಾಯ ಮಾರುತಿ- ೮೦೦ ಎಂದೇ ಪ್ರಚಾರ ಮಾಡಲಾಗಿತ್ತು. ಮಾಧ್ಯಮ ವರದಿಗಳೂ ಇದೇ ರೀತಿಯ ಪ್ರಚಾರ ಮಾಡಿದ್ದವು. ಮಾರುತಿ -೮೦೦ ಅಕ್ಷರಶಃ ಭಾರತದ ರಸ್ತೆಗಳನ್ನು ಕನಿಷ್ಠ ೨೦ ವರ್ಷಗಳ ಕಾಲ ಆಳಿತ್ತು, ಲೂಟಿ ಹೊಡೆದಿತ್ತು. ಆ ಸ್ಥಾನವನ್ನು ನ್ಯಾನೊ ತುಂಬುತ್ತದೆ ಎನ್ನುವುದು ಲೆಕ್ಕಾಚಾರ.

ಭಾರತದಲ್ಲಿ ಆಟೊ ರಿಕ್ಷಾಗಳೂ ಕಡಿಮೆಯಾಗುತ್ತವೆ, ಜನ ನ್ಯಾನೊಗಳಲ್ಲೇ ಸಂಚರಿಸುತ್ತಾರೆ, ಬೈಕ್, ಸ್ಕೂಟರ್‌ಗಳೂ ಕಡಿಮೆ ಆಗುತ್ತವೆ ಎಂಬೆಲ್ಲಾ ಅತಿರೇಕದ ಪ್ರಚಾರಗಳು ಹೊರಹೊಮ್ಮಿದ್ದವು. ಆದರೆ ಇವೆಲ್ಲಾ ನಿರೀಕ್ಷೆಗಳೂ ಸುಳ್ಳಾಗಿವೆ. ಮಾರುತಿ -೮೦೦ ಸ್ಥಾನವನ್ನು ತುಂಬುವುದಿರಲಿ, ಅದರ ಹತ್ತಿರಕ್ಕೂ ಮುಟ್ಟಲಾಗದೇ ಇದ್ದದ್ದು ದುರಂತ!

ಟಾಟಾ ಮೋಟಾರ್ಸ್‌ನ ಬೆನ್ನೆಲುಬು ರತನ್ ಟಾಟಾ ಈಗಷ್ಟೇ ಈ ಹೇಳಿಕೆಯನ್ನು ಕೊಟ್ಟಿದ್ದಾರೆ. ಟಾಟಾ ನ್ಯಾನೊ ಕಾರನ್ನು ಬಡವರ ಕಾರ್ ಎಂದು ಬೇರೆ ಯಾರೋ ಬೆಟ್ಟು ಮಾಡಿ ತೋರಿಸಲಿಲ್ಲ. ನಾವೇ ಇದಕ್ಕೆ ಆ ಹೆಸರಿಟ್ಟಿದ್ದು. ಆದರೆ ಅದೇ ನ್ಯಾನೊಗೆ ಮುಳುವಾಯಿತು.

ದ್ವಿಚಕ್ರ ವಾಹನ ಮಾಲೀಕರನ್ನು ದೃಷ್ಟಿಯಲ್ಲಿಟ್ಟುಕೊಂಡು, ಅವರನ್ನು ಸೆಳೆಯಲು ಕಾರ್ ಒಂದನ್ನು ನೀಡುವುದು ಉದ್ದೇಶವಾಗಿತ್ತು. ಅವರಿಗೆ ಬೇಕಾಗಿದ್ದದ್ದು, ಅವರ ಕೈಗೂ ಎಟುಕಬಲ್ಲ ಕಾರೇ ಹೊರತು, ಬಡವರ ಕಾರ್ ಅಲ್ಲ. ಕಾರ್ ಒಂದಕ್ಕೆ ನೀಡುವ ಪ್ರಚಾರ ಅದರ ಸೋಲಿಗೆ ಮುಳುವಾಗಬಹುದು ಎಂಬುದು ನಮಗೆ ಮನವರಿಕೆಯಾಗಿದೆ ಎಂದು ಹೇಳಿದ್ದಾರೆ.

ಅದಕ್ಕೇ ಈಗ ರತನ್ ಟಾಟಾ ನ್ಯಾನೊ ಕಾರನ್ನು ಹೊಸತಾಗಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ಅವರ ಪ್ರಕಾರ ಹೊಸ ನ್ಯಾನೊ ಇನ್ನು ಮುಂದೆ ಬಡವರ ಕಾರ್ ಆಗಿರುವುದಿಲ್ಲ. ಬದಲಿಗೆ ಉತ್ತಮ ಕಾರ್ ಆಗಿರುತ್ತದೆ. ಹಾಗೆಂದು ದುಬಾರಿ ಕಾರ್ ಸಹ ಆಗದು. ಆಧುನಿಕ ತಂತ್ರಜ್ಞಾನ, ವಿನ್ಯಾಸವನ್ನು ಒಳಗೊಂಡು ಹೊರಬರಲಿದೆ. ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನಿಲ್ಲುವ, ತನ್ನದೇ ಛಾಪು ಮೂಡಿಸುವಲ್ಲಿ ಇದು ಯಶಸ್ವಿಯಾಗಲಿದೆ ಎನ್ನುವುದು ರತನ್ ಲೆಕ್ಕಾಚಾರ.

ಟಾಟಾ ನ್ಯಾನೊ ಬಗ್ಗೆ ಭಾರತಕ್ಕಿಂತ ವಿದೇಶದಲ್ಲೇ ಹೆಚ್ಚು ಒಳ್ಳೆಯ ಅಭಿಪ್ರಾಯ ಇದೆಯಂತೆ! ಹಾಗಾಗಿ ವಿದೇಶಿ ಮಾರುಕಟ್ಟೆಯಲ್ಲಿ ಹೊಸ ನ್ಯಾನೊ ಅನ್ನು ಬಿಡುಗಡೆ ಮಾಡಿ, ನಂತರ ಈ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಾರಂತೆ. ಇಂಡೋನೇಷ್ಯಾ ಅಥವಾ ಯೂರೋಪ್‌ನ ಕೆಲವು ರಾಷ್ಟ್ರಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ. ಅಲ್ಲಿನ ಯಶಸ್ವಿ ಬಿಡುಗಡೆಯ ನಂತರ ಕಾರನ್ನು ಭಾರತದಲ್ಲಿ ಹೊರಬಿಡಲಾಗುವುದು ಎಂದು ರತನ್ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT