ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಫ್ರಿಡ್ಜ್ಗಳಿಗೆ ಹೆಚ್ಚಿನ ಬೇಡಿಕೆ

Last Updated 28 ಫೆಬ್ರುವರಿ 2011, 8:10 IST
ಅಕ್ಷರ ಗಾತ್ರ

ಯಾದಗಿರಿ: ಶಿವರಾತ್ರಿ ಬರುತ್ತಿರುವಂತೆಯೇ ಶಿವ ಶಿವ ಎನ್ನುವಷ್ಟು ಬಿಸಿಲು. ಮನೆ ಬಿಟ್ಟು ಹೊರಬರುವುದೇ ಅಪರೂಪವಾಗುತ್ತದೆ. ಅದ ರಲ್ಲಿ ಈ ಭಾಗದಲ್ಲಿ ಬಿಸಿಲಿನ ಪ್ರಖರತೆ ತುಸು ಹೆಚ್ಚಾಗಿಯೇ ಇರುವುದರಿಂದ ದಾಹವೂ ವಿಪರೀತ. ನಳದ ನೀರೂ ಬಿಸಿಯಾಗುತ್ತವೆ. ಹಾಗಾಗಿ ದಾಹ ತಣಿಯುವುದೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಹಣವಿದ್ದವರೂ ಏರ್ ಕೂಲರ್, ಫ್ರಿಡ್ಜ್‌ಗಳನ್ನು ತಂದು ತಂಪಾದ ಗಾಳಿ, ನೀರು ಸೇವನೆ ಮಾಡಿ ನೆಮ್ಮದಿ ಪಡೆಯಬಹುದು. ಆದರೆ ಬಡವರು ಏನು ಮಾಡುವುದು? ಅದಕ್ಕಾಗಿಯೇ ಈಗ ಯಾದಗಿರಿಯ ಮಾರುಕಟ್ಟೆಯಲ್ಲಿ ಬಡವರ ಫ್ರಿಡ್ಜ್ ಎಂದೇ ಕರೆಯಲಾಗುವ ಗಡಿಗೆಗಳ ಮಾರಾಟವೂ ಗರಿಗೆದರಿದೆ.

ಈ ಗಡಿಗೆಗಳಲ್ಲಿನ ತಂಪಾದ ನೀರು ಕುಡಿಯುವುದೇ ಒಂದು ರೀತಿಯ ಆನಂದ. ವಿದ್ಯುತ್ ಇರಲಿ, ಬಿಡಲಿ. ಈ ಗಡಿಗೆಗಳಲ್ಲಿನ ನೀರು ಮಾತ್ರ ತಂಪಾಗಿಸುತ್ತದೆ. ತಣ್ಣನೆಯ ಅನುಭವ ಬಿಸಿಲಿನಲ್ಲಿಯೂ ಮೈಮನಗಳನ್ನು ಅರಳಿಸುತ್ತದೆ. ಅದರಲ್ಲಿಯೂ ಈ ಕರಿಗಡಿಗೆಗಳಲ್ಲಿನ ನೀರು ರುಚಿಯಾಗಿಯೂ ಇರುವುದು ಇನ್ನೊಂದು ವಿಶೇಷ. ಕರಿಗಡಿಗೆ ಅಥವಾ ಹೂಜಿಗಳಲ್ಲಿನ ನೀರು ಬಿಸಿಲು ಏರಿದಷ್ಟು ತಂಪಾಗುತ್ತಲೇ ಹೋಗುತ್ತದೆ. ಹೀಗಾಗಿ ಯಾವುದೇ ವೆಚ್ಚವಿಲ್ಲದೇ ಶುದ್ಧವಾದ ನೀರು ಕುಡಿಯುವ ಭಾಗ್ಯ ದೊರೆಯುತ್ತದೆ.

ಇದರಿಂದಾಗಿ ವಿಪರೀತ ಬಿಸಿಲಿನ ಪ್ರದೇಶವಾದ ಯಾದಗಿರಿಯಲ್ಲಿ ಈ ಕರಿಗಡಿಗೆಗಳು ಹಾಗೂ ಹೂಜಿಗಳ ಮಾರಾಟವೂ ಭರಾಟೆಯಿಂದ ನಡೆ ಯುತ್ತಿದೆ. ಕೆಲವರು ಹಳ್ಳಿಗಳಿಂದ ತಂದು ಇವುಗಳನ್ನು ಮಾರಾಟ ಮಾಡು ತ್ತಿದ್ದರೆ, ನಗರದ ಕುಂಬಾರ ಓಣಿಯಲ್ಲಿ ಸಿದ್ಧವಾಗುವ ಗಡಿಗೆಗಳು ಮಾರಾಟಕ್ಕೆ ಲಭ್ಯವಾಗಿವೆ.

ದಿನದಿಂದ ದಿನಕ್ಕೆ ಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಮೊದಲು ರೂ.30 ಕ್ಕೆ ಒಂದರಂತೆ ಮಾರಾಟವಾಗುತ್ತಿದ್ದ ಕರಿಗಡಿಗೆಗಳು, ಇದೀಗ ರೂ.50 ರವರೆಗೆ ಮಾರಾಟ ಆಗುತ್ತಿವೆ. ನಿತ್ಯವೂ ಒಬ್ಬ ಕುಂಬಾರರು 10-15 ಗಡಿಗೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಬಿಸಿಲು ಏರುತ್ತಿರುವಂತೆ ತಂಪು ನೀಡುವ ಗಡಿಗೆಗಳಿಗೂ ಬೇಡಿಕೆ ಹೆಚ್ಚುತ್ತಲೇ ಸಾಗಿದೆ. ನಗರದ ಚಿತ್ತಾಪುರ ರಸ್ತೆ, ಚರ್ಚ್ ಹಾಲ್ ಬಳಿ, ಕುಂಬಾರ ಓಣಿ, ಗಾಂಧಿ ವೃತ್ತದ ಬಳಿ ಕರಿಗಡಿಗೆಗಳ ಮಾರಾಟ ಜೋರಾಗಿ ನಡೆದಿದೆ.

ಆಕರ್ಷಕ ಕರಿಗಡಿಗೆ: ಕರಿಗಡಿಗೆ ಎಂದಾಕ್ಷಣ ಕೇವಲ ಕಪ್ಪು ಬಣ್ಣದ ಗಡಿಗೆಗಳು ಮಾತ್ರ ಸಿಗುತ್ತವೆ ಎಂದು ಭಾವಿಸಬೇಕಿಲ್ಲ. ವಿವಿಧ ಬಣ್ಣದ ನಾನಾ ಆಕಾರದ ಗಡಿಗೆಗಳು ಸಿಗುತ್ತವೆ. ಕೆಲವು ಹೂಜಿಯಂತೆ ಸಣ್ಣದಾಗಿದ್ದರೂ, ಸುಂದರವಾಗಿ ಕಾಣುತ್ತವೆ. ಸುಲಭವಾಗಿ ನೀರು ಬಾಗಿಸಿಕೊಳ್ಳಲು ಅನುಕೂಲವಾಗುವಂತೆ ಕಿರಿದಾದ ರಂಧ್ರವಿರುವ ಗಡಿಗೆಗಳು ಸಿಗುತ್ತವೆ.

ಹೀಗಾಗಿ ಗ್ರಾಹಕರು ತಮಗೆ ಸುಂದರ ಎನಿಸುವ ಗಡಿಗೆಗಳನ್ನು ಖರೀದಿ ಮಾಡುವುದು ಸುಲಭವಾ ಗಿದೆ. ಕೇವಲ ಬಡವರಷ್ಟೇ ಅಲ್ಲ, ಹಣ ವಿದ್ದವರೂ ಈ ಗಡಿಗೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಬೇಸಿಗೆ ಬಂತೆಂದರೆ ವಿದ್ಯುತ್ ಸಮಸ್ಯೆ ತೀವ್ರ ವಾಗಿ ಕಾಡುತ್ತದೆ. ವಿದ್ಯುತ್ ಇಲ್ಲದಿದ್ದ ಮೇಲೆ ಫ್ರಿಡ್ಜ್‌ಗಳು ಇದ್ದೂ ಇಲ್ಲಂ ದಂತಾಗುತ್ತವೆ. ಹೀಗಾಗಿ ಕರಿಗಡಿಗೆ ಗಳನ್ನೇ ಅವಲಂಬಿಸುವುದು ಅನಿವಾರ್ಯ ಎನ್ನುತ್ತಾರೆ ಶಿವಶರಣ.

“ನೋಡ್ರಿ ನಮಗಂತೂ ದೊಡ್ಡ ಪೆಟ್ಟಗಿ ತೊಗೊಳ್ಯಾಕ ಆಗುದುಲ್ಲ. 50-60 ಕೊಟ್ಟ ದೊಡ್ಡ ಗಡಿಗಿನ ತೊಗೋತೇವ್ರಿ. ಇದ್ರಾಗಿನ ನೀರೂ ತಂಪಾಗಿ ಇರ್ತಾವ. ಕುಡ್ಯಾಕು ಭಾಳ ಛೋಲೋ ಅನಸತೈತಿ. ಹಿಂಗಾಗಿ ನಾವು ಕರಿಗಡಿಗಿನ ತೊಗೊಳ್ಳತೇವಿ ನೋಡ್ರಿ” ಎನ್ನುತ್ತಾರೆ ಗಡಿಗೆ ಖರೀದಿಗೆ ಬಂದಿದ್ದ ಹನುಮವ್ವ. ಬಡವರ ಪಾಲಿಗಷ್ಟೇ ಅಲ್ಲ, ಎಲ್ಲ ವರ್ಗದ ಜನರಿಗೂ ಬೇಸಿಗೆಯ ಧಗೆ ನಿವಾರಿಸಿಕೊಳ್ಳುವ ಸಾಧನವಾಗಿರುವ ಕರಿಗಡಿಗೆಗಳಿಗೆ ಇದೀಗ ಶುಕ್ರದೆಸೆ ಒದಗಿ ಬಂದಿದೆ. ಈ ಬಾರಿಯ ಬೇಸಿಗೆ ಯನ್ನು ಕಳೆಯುವ ತಯಾರಿಯೂ ಭರದಿಂದಲೇ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT