ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಬಾದಾಮಿಗೆ ವರುಣನ ಅಡಚಣೆ:ಕೈ ಕೊಟ್ಟ ಹಿಂಗಾರು; ರೈತ ಕಂಗಾಲು

Last Updated 17 ಅಕ್ಟೋಬರ್ 2012, 10:00 IST
ಅಕ್ಷರ ಗಾತ್ರ

ಮೊಳಕಾಲ್ಮುರು: `ಬಡವರ ಬಾದಾಮಿ~ ಎಂದು ಹೆಸರು ಪಡೆದಿರುವ ಶೇಂಗಾ ಬೆಳೆದಿರುವ ತಾಲ್ಲೂಕಿನ ರೈತರು ಶೇಂಗಾ ಬಿತ್ತನೆಗಾಗಿ ಹಾಕಿರುವ ಬಂಡವಾಳವನ್ನು ಪೂರ್ಣ ನಷ್ಟ ಮಾಡಿಕೊಳ್ಳುವ ಲಕ್ಷಣಗಳು ವ್ಯಾಪಕವಾಗಿ ಗೋಚರಿಸುತ್ತಿವೆ.

ಪೂರ್ಣ ಮಳೆಯಾಶ್ರಿತ ಪ್ರದೇಶವಾಗಿರುವ ಈ ತಾಲ್ಲೂಕಿನಲ್ಲಿ ಮಳೆಯಾಶ್ರಿತ ಬಿತ್ತನೆಭೂಮಿಯ ಪ್ರಮುಖ ವಾಣಿಜ್ಯ ಬೆಳೆಯಾದ ಶೇಂಗಾವನ್ನು 22 ಸಾವಿರ ಹೆಕ್ಟೇರ್ ಗುರಿಗೆ 17,500 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಮೂಲಕ ಶೇ 70 ಗುರಿ ಸಾಧಿಸಲಾಗಿದೆ. ಹಿಂದೆಂದೂ ಕಾಣದಷ್ಟು ದುಬಾರಿ (ಪ್ರತಿ ಕೆಜಿಗೆ ರೂ 75-80 ) ದರದಲ್ಲಿ ಬಿತ್ತನೆಶೇಂಗಾ ಬೀಜ ಖರೀದಿ ಮಾಡಿ ಬಿತ್ತನೆ ಮಾಡಿರುವುದು ನಷ್ಟಕ್ಕೆ ಪ್ರಮುಖ ಅಂಶ.

ಕಳೆದ 15-20 ದಿನಗಳಿಂದ ವರುಣ ಪೂರ್ಣ ಪ್ರಮಾಣದಲ್ಲಿ ಕಾಣೆಯಾಗಿರುವ ಪರಿಣಾಮ ಎರಡು ಹಂತದಲ್ಲಿ ಬಿತ್ತನೆಯಾಗಿರುವ ಶೇಂಗಾ ಪೈಕಿ ಹೂಡು (ಹೂವು) ಇಳಿದ ಗಿಡಗಳಲ್ಲಿ ಕಾಯಿ ಕಟ್ಟಲು ಹಾಗೂ ಕಾಯಿಕಟ್ಟುತ್ತಿರುವ ಗಿಡಗಳಲ್ಲಿ ಕಾಯಿ ಬಲಿಯಲು ಹದ ಹಸಿ ಕೊರತೆಯಿಂದಾಗಿ ಮತ್ತು ಹೆಚ್ಚಿರುವ ಬಿಸಿಲಿನಿಂದಾಗಿ ಗಿಡಗಳು ಬತ್ತುತ್ತಿವೆ ಎಂದು ರೈತರು ಹೇಳುತ್ತಾರೆ.

ಕೃಷಿ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಮಹಮದ್ ಒಬೇದುಲ್ಲಾ ಮಾತನಾಡಿ, ತಾಲ್ಲೂಕಿನಾದ್ಯಂತ ಶೇಂಗಾ ಮಳೆ ಕೊರತೆ ಎದುರಿಸುತ್ತಿದೆ. ತಕ್ಷಣವೇ ಮಳೆ ಬೇಕಾಗಿದೆ. ಈಗ ಹದ ಮಳೆ ಬಿದ್ದಲ್ಲಿ ಶೇ 50ರಷ್ಟು ಇಳುವರಿ ನಿರೀಕ್ಷಿಸಬಹುದಾಗಿದೆ. ಆದರೆ ಕೊಂಡ್ಲಹಳ್ಳಿ, ಬಿ.ಜಿ. ಕೆರೆ, ಸೂರಮ್ಮನಹಳ್ಳಿ, ರಾಂಪುರ ಸುತ್ತಮುತ್ತ ಮಳೆ ಬಂದರೂ ಇದು ಕಷ್ಟಸಾಧ್ಯ ಎಂಬ ಸ್ಥಿತಿಯಿದೆ. ಕಳೆದ ವರ್ಷದಂತೆ ಈ ವರ್ಷವೂ ಅತ್ಯಗತ್ಯ ಸಮಯದಲ್ಲಿ ಮಳೆ ಕೈಕೊಟ್ಟಿದೆ ಎಂದರು.

ವಾಡಿಕೆ ಪ್ರಕಾರ ಸೆಪ್ಟಂಬರ್ ತಿಂಗಳಿನಲ್ಲಿ ತಾಲ್ಲೂಕಿನಲ್ಲಿ 8.6 ಸೆಂ.ಮೀ ಮಳೆ ಬರಬೇಕಿದ್ದು 5.3 ಸೆಂ.ಮೀ ಮಳೆ ಬಿದ್ದಿದೆ. ಅಕ್ಟೋಬರ್ ತಿಂಗಳಿನಲ್ಲಿ 9.6 ಸೆಂ.ಮೀ ಮಳೆ ಬೀಳಬೇಕಿದ್ದು, ಕೇವಲ 1.5 ಸೆಂ. ಮೀ ಮಳೆ ಬಂದಿದೆ. ಕಂಬಳಿಹುಳ  ಬಾಧೆಗೆ ಇಲಾಖೆ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಹಿರಿಯ ರೈತರಾದ ನಾಗರಾಜಪ್ಪ, ಮಂಜಣ್ಣ ಪ್ರಕಾರ ಈಗ ಮಳೆ ಬಂದರೂ ಬೆಳೆಯಾಗಲು ಸಾಧ್ಯವಿಲ್ಲ. ಮಳೆ ಮತ್ತು ಬೆಳೆ ಆಗುವ ಸಮಯ ಮುಗಿದ ಅಧ್ಯಾಯ ಎನ್ನುತ್ತಾರೆ. ಒಟ್ಟಿನಲ್ಲಿ ತಾಲ್ಲೂಕಿನ ಗ್ರಾಮಗಳಲ್ಲಿ ನೀರಸ ಮೌನ ಮನೆ ಮಾಡುತ್ತಿರುವುದು ಮಾತ್ರ ಕಟುಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT